More

    ಗಾಂಜಾ ಮಾರಾಟ, ಸೇವನೆ ಆರೋಪ ಏಳು ಮಂದಿಯ ಬಂಧನ

    ಗುರುಪುರ: ಗಂಜಿಮಠದ ಬಿಗ್ ಬ್ಯಾಗ್ ಕಂಪನಿಯ ಹತ್ತಿರದ ಒಳ ರಸ್ತೆಯಲ್ಲಿ ಶನಿವಾರ ಸಂಜೆ ಮಾದಕ ವಸ್ತು ಗಾಂಜಾ ಮಾರಾಟಕ್ಕಾಗಿ ಗಿರಾಕಿಗಳಿಗಾಗಿ ಕಾಯುತ್ತಿದ್ದ ಒರಿಸ್ಸಾ ಮೂಲದ ಇಬ್ಬರು ಹಾಗೂ ಈ ಗ್ಯಾಂಗ್‌ನ ಗಿರಾಕಿಗಳಾದ ಉತ್ತರ ಭಾರತ ಮೂಲದ ಐವರನ್ನು ಮೂಡುಪೆರಾರ ಗ್ರಾಮದ ಮುಂಡೇವು ಮತ್ತು ಮಳಲಿ ಕ್ರಾಸ್ ಬಳಿ ಬಜ್ಪೆ ಪೊಲೀಸರು ಬಂಧಿಸಿದ್ದಾರೆ.

    ಸುಶಾಂತ್ ಬಿಸ್ವಾಲ್30) ಮತ್ತು ಸಂಗ್ರಾಮ್ ಕೆಶರಿ ಸ್ವಾಯ್ನಾ(30) ಬಂಧಿತ ಪ್ರಮುಖ ಆರೋಪಿಗಳಾಗಿದ್ದಾರೆ. ಗಂಜಿಮಠದ ಪ್ರದೇಶವೊಂದರಲ್ಲಿ ಗಾಂಜಾ ಮಾರಾಟದ ಗ್ಯಾಂಗ್ ಸಕ್ರಿಯವಾಗಿದೆ ಎಂಬ ಮಾಹಿತಿ ಪಡೆದ ಬಜ್ಪೆ ಪೊಲೀಸರು ನಿರ್ದಿಷ್ಟ ಪ್ರದೇಶಕ್ಕೆ ದಾಳಿ ನಡೆಸಿದರು. ಪೊಲೀಸರನ್ನು ಕಂಡ ಇಬ್ಬರು ಓಡಲೆತ್ನಿಸಿದಾಗ ಬೆನ್ನಟ್ಟಿ ಹಿಡಿಯಲಾಗಿದೆ. ಇವರು ಒರಿಸ್ಸಾದ ಗುಡ್ಡಗಾಡು ಪ್ರದೇಶದಿಂದ ಗಾಂಜಾ ಖರೀದಿಸಿ ಇಲ್ಲಿ ಮಾರಾಟ ಮಾಡುತ್ತಿದ್ದರು.

    ಆರೋಪಿಗಳಿಂದ 105 ಚಿಕ್ಕ ಪ್ಯಾಕೇಟ್‌ಗಳಲ್ಲಿ ತುಂಬಿಸಿಡಲಾಗಿದ್ದ 30,000 ರೂ. ಮೌಲ್ಯದ 1 ಕಿಲೋ 50 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಸ್ಥಳೀಯವಾಗಿ ಕೆಲಸ ಮಾಡುವ ಉತ್ತರ ಭಾರತದ ಕಾರ್ಮಿಕರಿಗೆ ಇವರು ಮಾದಕ ವಸ್ತು ಮಾರಾಟ ಮಾಡುತ್ತಿದ್ದರು ಎಂದು ಗೊತ್ತಾಗಿದೆ.
    ವಿಚಾರಣೆ ವೇಳೆ ಗಿರಾಕಿಗಳ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮೂಡುಪೆರಾರದ ಮುಂಡೇವು ಮತ್ತು ಮಳಲಿ ಕ್ರಾಸ್‌ನ ನಿರ್ದಿಷ್ಟ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಓರ್ವ ಸ್ಥಳೀಯ ವ್ಯಕ್ತಿಯ ಸಹಿತ ಉತ್ತರ ಭಾರತ ಮೂಲದ ಐದು ಮಂದಿಯನ್ನು ದಸ್ತಗಿರಿ ಮಾಡಿದ್ದಾರೆ.

    ಗಂಜಿಮಠ ನಾರ್ಲಪದವಿನ ಎನ್ ಇಬ್ರಾಹಿಂ ಅಲಿಯಾಸ್ ಉಂಞ(55), ಒರಿಸ್ಸಾ ಮೂಲದ ಗ್ಯಾನ್ ರಂಜನ್ ಮಲ್ಲಿಕ್(23), ಪ್ರಶಾಂತ್ ಕುಮಾರ್ ದಾಸ್(34), ಬಿಹಾರ ಮೂಲದ ರಾಜೀವ್ ಕುಮಾರ್(23) ಮತ್ತು ಮನೋಜ್ ಕುಮಾರ್ ದಾಸ್(34) ದಸ್ತಗಿರಿಯಾದ ಆರೋಪಿಗಳಾಗಿದ್ದಾರೆ. ಪೊಲೀಸ್ ಆಯುಕ್ತ ಶಶಿಕುಮಾರ್ ಮಾರ್ಗದರ್ಶನದಂತೆ ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಮಹೇಶ್ ಕುಮಾರ್ ಹಾಗೂ ಬಜ್ಪೆ ಪೊಲೀಸ್ ನಿರೀಕ್ಷಕ ಕೆ ಆರ್ ನಾಯ್ಕ ನೇತೃತ್ವದ ಪೊಲೀಸ್ ತಂಡ ಯಶಸ್ವಿ ಕಾರ್ಯಾಚರಣೆ ನಡೆಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts