More

    ಗಂಗೊಳ್ಳಿ ಜೆಟ್ಟಿ ದುರಸ್ತಿ ಕಾರ್ಯ ನನೆಗುದಿಗೆ

    ಗಂಗೊಳ್ಳಿ: ಎರಡು ವರ್ಷಗಳ ಹಿಂದೆ ಕುಸಿದು ಬಿದ್ದಿರುವ ಗಂಗೊಳ್ಳಿ ಮೀನುಗಾರಿಕಾ ಬಂದರಿನ ಜೆಟ್ಟಿ ಹಾಗೂ ಹರಾಜು ಪ್ರಾಂಗಣ ದುರಸ್ತಿ ಕಾರ್ಯ ನನೆಗುದಿಗೆ ಬಿದ್ದಿದ್ದು, ಜೆಟ್ಟಿ ಸಮೀಪದ ಚರಂಡಿಯ ಸ್ಲ್ಯಾಬ್ ಕುಸಿದು ಬೀಳಲಾರಂಭಿಸಿದೆ.
    ಗಂಗೊಳ್ಳಿ ಮೀನುಗಾರಿಕಾ ಬಂದರಿನ ದಕ್ಷಿಣ ದಿಕ್ಕಿನಲ್ಲಿ ಜೆಟ್ಟಿ ಹಾಗೂ ಹರಾಜು ಕೇಂದ್ರ ಕುಸಿದು ಬಿದ್ದು ಎರಡು ವರ್ಷಗಳೇ ಕಳೆದು ಹೋಗಿದೆ. ಹೀಗಾಗಿ ಈ ಪ್ರದೇಶದಲ್ಲಿ ಮೀನುಗಾರಿಕಾ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ. ಸುಮಾರು 402 ಮೀಟರ್ ಉದ್ದದ ಜೆಟ್ಟಿಯ ಅರ್ಧದಷ್ಟು ಭಾಗ ಕುಸಿತ ಕಂಡಿದ್ದು, ಇನ್ನುಳಿದ ಅರ್ಧ ಭಾಗದಲ್ಲಿ ಮೀನುಗಾರಿಕಾ ಚಟುವಟಿಕೆಗಳು ನಡೆಯುತ್ತಿದೆ. ಸದ್ಯ ಮೀನುಗಾರರು ಉಪಯೋಗಿಸುತ್ತಿರುವ ಜೆಟ್ಟಿ ಪ್ರದೇಶದಲ್ಲಿನ ಚರಂಡಿಯ ಸ್ಲ್ಯಾಬ್‌ಗಳು ಕುಸಿದು ಬೀಳಲಾರಂಭಿಸಿದೆ. ಕರೊನಾ ಲಾಕ್‌ಡೌನ್ ಬಳಿಕ ಮೀನುಗಾರಿಕೆ ಚೇತರಿಸಿಕೊಳ್ಳುತ್ತಿರುವಾಗಲೇ ಜೆಟ್ಟಿಯಲ್ಲಿ ಮತ್ತೆ ಕುಸಿತ ಕಾಣಲಾರಂಭಿಸಿದೆ. ಮೀನುಗಾರಿಕಾ ಚಟುವಟಿಕೆ ನಡೆಯುತ್ತಿರುವ ಪ್ರದೇಶದಲ್ಲಿ ಕೂಡ ಜೆಟ್ಟಿ ಸ್ಲ್ಯಾಬ್‌ಗಳು ಕುಸಿಯುತ್ತಿದ್ದರೆ, ಚರಂಡಿಯ ಮೇಲ್ಭಾಗದಲ್ಲಿ ಹಾಸಲಾದ ಸ್ಲ್ಯಾಬ್ ಕೂಡ ಒಂದೊಂದಾಗಿ ಬೀಳುತ್ತಿದೆ.

    ಪ್ರತಿನಿತ್ಯ ಸಾವಿರಾರು ಮಂದಿ ಮೀನುಗಾರರು ಹಾಗೂ ವ್ಯಾಪಾರಸ್ಥರು ಗಂಗೊಳ್ಳಿ ಮೀನುಗಾರಿಕಾ ಬಂದರಿಗೆ ಬರುತ್ತಿದ್ದಾರೆ. ಬಂದರು ವೀಕ್ಷಣೆಗೆ ಕೂಡ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಸದಾ ಜನಜಂಗುಳಿಯಿಂದ ಕೂಡಿರುವ ಈ ಪ್ರದೇಶದಲ್ಲಿ ಚರಂಡಿ ಸ್ಲ್ಯಾಬ್ ಕುಸಿಯುತ್ತಿರುವುದು ಮೀನುಗಾರರ ಕಳವಳಕ್ಕೆ ಕಾರಣವಾಗಿದೆ. ಇದರಿಂದ ಮೀನುಗಾರಿಕಾ ಚಟುವಟಿಕೆಗೆ ಬಹಳ ತೊಂದರೆಯಾಗುತ್ತಿದ್ದು, ಬಹಳ ಜಾಗರೂಕತೆಯಿಂದ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ವರ್ಷದ ಹಿಂದೆ ಬಂದರಿಗೆ ಬಂದಿದ್ದ ಪ್ರವಾಸಿಗರೊಬ್ಬರು ಸ್ಲ್ಯಾಬ್ ಕುಸಿದು ಚರಂಡಿಗೆ ಬಿದ್ದಿರುವ ಘಟನೆ ಕೂಡ ನಡೆದಿದೆ. ಮುಂದೆ ಇಂತಹ ಘಟನೆ ಮರುಕಳಿಸುವ ಮೊದಲೇ ಕುಸಿದು ಬಿದ್ದಿರುವ ಸ್ಲ್ಯಾಬ್‌ನ್ನು ದುರಸ್ತಿಗೊಳಿಸಬೇಕು ಎಂದು ಮೀನುಗಾರರು ಆಗ್ರಹಿಸಿದ್ದಾರೆ.

    ಕುಸಿದು ಬಿದ್ದಿರುವ ಜೆಟ್ಟಿ ದುರಸ್ತಿಗೆ ಸರ್ಕಾರ 12 ಕೋಟಿ ರೂ. ಮಂಜೂರು ಮಾಡಿದ್ದು, ಈ ಅಂದಾಜು ಪಟ್ಟಿಯಲ್ಲಿ ಚರಂಡಿ ದುರಸ್ತಿ ಕಾರ್ಯ ಕೂಡ ಸೇರಿದೆ. ಇದರ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ತಾಂತ್ರಿಕ ಅನುಮೋದನೆಗೆ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಆದಷ್ಟು ಶೀಘ್ರ ಕೆಲಸ ಆರಂಭವಾಗುವ ನಿರೀಕ್ಷೆ ಇದೆ.
    ಉದಯ ಕುಮಾರ್, ಬಂದರು ಮತ್ತು ಮೀನುಗಾರಿಕಾ ಇಲಾಖೆ ಎಕ್ಸಿಕ್ಯೂಟಿವ್ ಇಂಜಿನಿಯರ್

    ಒಂದು ಕಡೆ ಜೆಟ್ಟಿ ಕುಸಿದು ಬಿದ್ದಿದ್ದರೆ, ಮೀನುಗಾರಿಕಾ ಚಟುವಟಿಕೆ ನಡೆಯುತ್ತಿರುವ ಪ್ರದೇಶದ ಚರಂಡಿಯ ಸ್ಲ್ಯಾಬ್ ಕುಸಿದು ಬೀಳುತ್ತಿದೆ. ಇದರಿಂದ ಮೀನುಗಾರಿಕಾ ಚಟುವಟಿಕೆಗೆ ಬಹಳ ತೊಂದರೆಯಾಗುತ್ತಿದ್ದು, ಅಪಾಯವನ್ನು ಆಹ್ವಾನಿಸುತ್ತಿದೆ. ಆದ್ದರಿಂದ ತುರ್ತಾಗಿ ಕುಸಿದು ಬಿದ್ದಿರುವ ಚರಂಡಿ ಸ್ಲ್ಯಾಬ್‌ಗಳನ್ನು ಸರಿಪಡಿಸಬೇಕು.
    ರಾಮಪ್ಪ ಖಾರ್ವಿ, ಮೀನುಗಾರ ಮುಖಂಡ, ಗಂಗೊಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts