More

    ಜೆಟ್ಟಿಗೆ ಡೀಸೆಲ್ ಬಂಕ್ ಅಡ್ಡಿ

    ಗಂಗೊಳ್ಳಿ: ಗಂಗೊಳ್ಳಿ ಮೀನುಗಾರಿಕಾ ಬಂದರಿನ ಜೆಟ್ಟಿಯ ಪುನರ್ ನಿರ್ಮಾಣ ಕಾಮಗಾರಿ ಸುಮಾರು 12 ಕೋಟಿ ರೂ. ವೆಚ್ಚದಲ್ಲಿ ಭರದಿಂದ ಸಾಗುತ್ತಿದೆ. ಆದರೆ ಜೆಟ್ಟಿಯಲ್ಲಿರುವ ಡೀಸೆಲ್ ಬಂಕ್ ವಿಸ್ತರಣಾ ಕಾಮಗಾರಿಗೆ ಅಡ್ಡಿಯಗಿ ಪರಿಣಮಿಸಿದೆ. ಈ ಡೀಸೆಲ್ ಬಂಕ್‌ನಿಂದಾಗಿ ಸುಮಾರು 50 ಮೀಟರ್ ಜೆಟ್ಟಿ ಕಾಮಗಾರಿ ಸ್ಥಗಿತಗೊಳ್ಳುವಂತಾಗಿದೆ.

    ಕಳೆದ ವರ್ಷ ಎಪ್ರಿಲ್‌ನಲ್ಲಿ ಪುನರ್ ನಿರ್ಮಾಣ ಕಾಮಗಾರಿ ಆರಂಭವಾಗಿ ಈ ವರೆಗೆ ಸುಮಾರು 200 ಮೀಟರ್ ಉದ್ದದ ಜೆಟ್ಟಿ ನಿರ್ಮಾಣವಾಗಿದೆ. ಇನ್ನುಳಿದ ಸುಮಾರು 200 ಮೀಟರ್ ಉದ್ದದ ಜೆಟ್ಟಿ ಪ್ರದೇಶದಲ್ಲಿ ಪಿಲ್ಲರ್ ಅಳವಡಿಕೆ ಕಾರ್ಯ ನಡೆಯುತ್ತಿದೆ. ಜೆಟ್ಟಿಯ ಉತ್ತರ ದಿಕ್ಕಿನಲ್ಲಿರುವ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮಕ್ಕೆ ಸೇರಿದ ಡೀಸೆಲ್ ಬಂಕ್‌ನ್ನು ತೆರವು ಮಾಡದಿ ರುವುದರಿಂದ ಈ ಪ್ರದೇಶದಲ್ಲಿ ಪಿಲ್ಲರ್ ಅಳವಡಿಕೆ ಕಾರ್ಯ ಸ್ಥಗಿತಗೊಂಡಿದೆ. ಹೀಗಾಗಿ ಸುಮಾರು 50 ಮೀಟರ್ ಉದ್ದದ ಜೆಟ್ಟಿ ಪುನರ್ ನಿರ್ಮಾಣ ಕಾರ್ಯಕ್ಕೆ ಬ್ರೇಕ್ ಬಿದ್ದಿದ್ದು, ಈ ಡೀಸೆಲ್ ಬಂಕನ್ನು ಸ್ಥಳಾಂತರಿಸಲು ಮೀನುಗಾರರು ಆಗ್ರಹಿಸಿದ್ದಾರೆ.

    ಡೀಸೆಲ್ ಬಂಕ್ ಸ್ಥಳಾಂತರಗೊಳಿಸಲು ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಸೂಕ್ತ ಸ್ಥಳ ಗುರುತಿಸುವಂತೆ ಮೀನುಗಾರಿಕಾ ಇಲಾಖೆಗೆ ಕೆಎಫ್‌ಡಿಸಿ ಜೂನ್ ತಿಂಗಳಿನಲ್ಲಿ ಮನವಿ ಮಾಡಿದೆ. ಆದರೆ ಮೀನುಗಾರಿಕಾ ಇಲಾಖೆ ನಿರ್ದೇಶಕರ ಕಚೇರಿಯಿಂದ ಡೀಸೆಲ್ ಬಂಕ್‌ಗೆ ಜಾಗವನ್ನು ಗುರುತಿಸಲು ಯಾವುದೇ ನಿರ್ದೇಶನ ಬಂದಿಲ್ಲ. ಹೀಗಾಗಿ ಸ್ಥಳಾಂತರ ಕಾರ್ಯಕ್ಕೆ ಹಿನ್ನಡೆಯಾಗಿದೆ. ಕೆಎಫ್‌ಡಿಸಿ ಮತ್ತು ಮೀನುಗಾರಿಕಾ ಇಲಾಖೆ ನಡುವಿನ ಹೊಂದಾಣಿಕೆ ಕೊರತೆಯಿಂದ ಮತ್ತು ಇಲಾಖೆಯ ವಿಳಂಬ ಧೋರಣೆಯಿಂದಾಗಿ ಜೆಟ್ಟಿ ಪುನರ್ ನಿರ್ಮಾಣ ಕಾರ್ಯಕ್ಕೆ ಹಿನ್ನಡೆಯಾಗುತ್ತಿದ್ದು, ಆದಷ್ಟು ಶೀಘ್ರ ಡೀಸೆಲ್ ಬಂಕ್‌ಗೆ ಸೂಕ್ತ ಜಾಗ ಗುರುತಿಸುವಂತೆ ಮೀನುಗಾರರರು ಮನವಿ ಮಾಡಿದ್ದಾರೆ.

    ಕುಸಿದ ಜೆಟ್ಟಿ: 2018ರ ಅ. 13ರಂದು ಕುಸಿದು ಬಿದ್ದ ಗಂಗೊಳ್ಳಿ ಮೀನುಗಾರಿಕಾ ಬಂದರಿನ ಜೆಟ್ಟಿ ಕಳೆದೆರಡು ವರ್ಷಗಳಿಂದ ಮೀನುಗಾರರ ಪ್ರಯೋಜನಕ್ಕೆ ಸಿಕ್ಕಿಲ್ಲ. ಎರಡನೇ ಹರಾಜು ಪ್ರಾಂಗಣದ ಜೆಟ್ಟಿಯ ಸ್ಲ್ಯಾಬ್ ಕುಸಿದು ಬರೋಬ್ಬರಿ ಎರಡು ವರ್ಷಗಳ ಬಳಿಕ ಜೆಟ್ಟಿ ಪುನರ್ ನಿರ್ಮಾಣ ಕಾರ್ಯ ಆರಂಭಗೊಂಡಿತ್ತು. 2021ರ ಫೆ.26ರಂದು ಜೆಟ್ಟಿ ಪುನರ್ ನಿರ್ಮಾಣ ಕಾಮಗಾರಿಗೆ ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಚಾಲನೆ ನೀಡಿದ್ದರು. ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಶಿಫಾರಸ್ಸಿನಂತೆ ಅಂದಿನ ಬಂದರು ಮತ್ತು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಮುತುವರ್ಜಿಯಲ್ಲಿ 12 ಕೋ.ರೂ. ಮಂಜೂರಾತಿಗೆ 2020ರ ಫೆ. 16 ರಂದು ನಡೆದ ರಾಜ್ಯ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿತ್ತು.

    ನಿತ್ಯ ಸಮಸ್ಯೆ: 300ಕ್ಕೂ ಅಧಿಕ ಪರ್ಸಿನ್ ಬೋಟುಗಳು, 600ಕ್ಕೂ ಮಿಕ್ಕಿ ಬೋಟು ಹಾಗೂ 500ಕ್ಕೂ ಅಧಿಕ ನಾಡದೋಣಿಗಳಿದ್ದು, ಸಾವಿರಾರು ಮೀನುಗಾರರು ಅವಲಂಬಿಸಿರುವ ಬಂದರು ಇದಾಗಿದೆ. ಜೆಟ್ಟಿ ಕುಸಿದಿರುವುದರಿಂದ ಮತ್ತು ಜೆಟ್ಟಿ ಪ್ರದೇಶದಲ್ಲಿ ತುಂಬಿರುವ ಹೂಳಿನಿಂದಾಗಿ ಬೋಟ್, ದೋಣಿಗಳನ್ನು ನಿಲ್ಲಿಸಲು ನಿತ್ಯ ಸಮಸ್ಯೆಯಾಗುತ್ತಿದೆ.

    ಡೀಸೆಲ್ ಬಂಕ್ ಸ್ಥಳಾಂತರಿಸುವ ಸಂಬಂಧ ಬಂದರು ಪ್ರದೇಶದಲ್ಲಿ ಸೂಕ್ತ ಜಾಗವನ್ನು ಗುರುತಿಸಿ ನೀಡುವಂತೆ ಮೀನುಗಾರಿಕೆ ಇಲಾಖೆಗೆ ಮನವಿ ಮಾಡಿಕೊಳ್ಳಲಾಗಿದೆ. ಮೀನುಗಾರಿಕೆ ಇಲಾಖೆ ಜಾಗ ಗುರುತಿಸಿ ನೀಡಿದರೆ ತಕ್ಷಣ ಡೀಸೆಲ್ ಬಂಕ್ ಸ್ಥಳಾಂತರಕ್ಕೆ ಕ್ರಮಕೈಗೊಳ್ಳಲಾಗುವುದು.
    -ರಮೇಶ ಖಾರ್ವಿ, ವ್ಯವಸ್ಥಾಪಕರು, ಕೆಎಫ್‌ಡಿಸಿ, ಗಂಗೊಳ್ಳಿ ಶಾಖೆ

    ಮೀನುಗಾರಿಕಾ ಬಂದರು ಪ್ರದೇಶದಲ್ಲಿರುವ ಡೀಸೆಲ್ ಬಂಕ್ ತೆರವು ಮಾಡದಿರುವುದರಿಂದ ಜೆಟ್ಟಿ ಕಾಮಗಾರಿ ಸ್ಥಗಿತಗೊಂಡಿದೆ. ಡೀಸೆಲ್ ಬಂಕ್ ಸ್ಥಳಾಂತರಿಸಿ ಜೆಟ್ಟಿ ಪುನರ್ ನಿರ್ಮಾಣ ಕಾಮಗಾರಿ ನಡೆಸಲು ಅನುಕೂಲ ಮಾಡಿಕೊಡಬೇಕು.
    – ಸದಾಶಿವ ಖಾರ್ವಿ, ಅಧ್ಯಕ್ಷರು, ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘ, ಗಂಗೊಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts