More

    ರುದ್ರಭೂಮಿ ಸಮೀಕ್ಷೆ ಮುಂದೂಡಿಕೆ; ಮೀಸಲಿದ್ದ ಎರಡು ಎಕರೆ ಜಾಗ ಒತ್ತುವರಿ ಸರ್ವೇ ಕಾರ್ಯಕ್ಕೆ ಗೊಂದಲ

    ಗಂಗಾವತಿ: ತಾಲೂಕಿನ ಆನೆಗೊಂದಿಯ ರುದ್ರಭೂಮಿ ಜಾಗ ಸರ್ವೇಯಲ್ಲಿ ಗೊಂದಲ ಶುರುವಾಗಿದ್ದು, ಇದಕ್ಕೆ ಕೆಲವರು ಸಹಕರಿಸದಿದ್ದರಿಂದ ಬುಧವಾರ ನಡೆಯಬೇಕಿದ್ದ ಸಮೀಕ್ಷೆ ಕಾರ್ಯ ಮುಂದೂಡಲಾಯಿತು.

    ಆನೆಗೊಂದಿಯಲ್ಲಿ ರುದ್ರಭೂಮಿಗಾಗಿ ನದಿ ತೀರದ ಸ.ನಂ.194ರಲ್ಲಿ 2 ಎಕರೆ ಭೂಮಿ ಮಂಜೂರಾಗಿದ್ದು, ಒತ್ತುವರಿ ಹಿನ್ನೆಲೆಯಲ್ಲಿ ಶವಸಂಸ್ಕಾರಕ್ಕೆ ತೊಂದರೆಯಾಗಿದೆ. ರುದ್ರಭೂಮಿಗಾಗಿ ಸೆ.12ರಂದು ಕಡೇಬಾಗಿಲು ಕ್ರಾಸ್ ಬಳಿ ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರು ವಾಹನಗಳ ಸಂಚಾರ ತಡೆ ನಡೆಸಿದ್ದರು. ಸ್ಮಶಾನ ಜಾಗೆ ಸರ್ವೇಗಾಗಿ ಕಂದಾಯ, ಸರ್ವೇ ಮತ್ತು ಗ್ರಾಪಂ ಸಿಬ್ಬಂದಿಯೊಂದಿಗೆ ಆಗಮಿಸಿದ್ದ ತಹಸೀಲ್ದಾರ್ ಯು.ನಾಗರಾಜ್ ನೇತೃತ್ವದ ಅಧಿಕಾರಿಗಳಿಗೆ ಹದ್ದುಬಸ್ತು ಗೊಂದಲವಾಗಿದ್ದು, ಮುಳ್ಳು ಕಂಟೆ ಬೆಳೆದಿದ್ದರಿಂದ ಅಡ್ಡಿಯಾಯಿತು.

    ಕೆಲವರು ಮನೆ, ತಿಪ್ಪೆಗುಂಡಿ ಮತ್ತು ಜಾನುವಾರು ಕಟ್ಟುವ ಕೊಟ್ಟಿಗೆ ನಿರ್ಮಿಸಿಕೊಂಡಿದ್ದರಿಂದ ಎಲ್ಲಿಂದ ಸಮೀಕ್ಷೆ ಶುರುಮಾಡಬೇಕೆಂಬುದು ತಿಳಿಯಲಿಲ್ಲ. 2 ಎಕರೆ ಬದಲಾಗಿ ಸ.ನಂ.194ರಲ್ಲಿ ಬರುವ ಎಲ್ಲ ಭೂಮಿಯನ್ನು ಸರ್ವೇ ಮಾಡುವಂತೆ ಸ್ಥಳೀಯರು ತಿಳಿಸಿದ್ದರಿಂದ ಕೈಗೊಂಡ ಸಮೀಕ್ಷೆ ಕಾರ್ಯ ಕೈಬಿಟ್ಟು ಸೆ.16ರಂದು ನಡೆಸಲು ನಿರ್ಧರಿಸಲಾಯಿತು.

    ಸ್ಥಳ ಸೂಚಿಸಲು ಮನವಿ

    ನಂತರ ಗ್ರಾಪಂ ಕಚೇರಿಯಲ್ಲಿ ಸದಸ್ಯರು ಮತ್ತು ಸ್ಥಳೀಯರೊಂದಿಗೆ ಸಭೆ ನಡೆಸಿದ ಅಧಿಕಾರಿಗಳ ತಂಡ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಭಿಪ್ರಾಯ ಸಂಗ್ರಹಿಸಿತು. ಗ್ರಾಮಕ್ಕೆ ಗಾಂವಠಾಣಾ ನಿಗದಿ, ಚಿಕ್ಕರಾಂಪುರದಲ್ಲಿ ರುದ್ರಭೂಮಿ ಅಭಿವೃದ್ಧಿ, ಆನೆಗೊಂದಿಯಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಿರುವ ಇಕೋ ಪಾರ್ಕ್ ಗ್ರಾಪಂಗೆ ವಹಿಸುವ ಕುರಿತು ಚರ್ಚೆ ನಡೆಯಿತು.

    ರುದ್ರಭೂಮಿಗಾಗಿ ಖಾಸಗಿ ಜಮೀನು ಖರೀದಿಸಲು ಅವಕಾಶವಿದ್ದು, ಗ್ರಾಮಸ್ಥರೇ ಭೂಮಿ ಸೂಚಿಸುವಂತೆ ತಹಸೀಲ್ದಾರ್ ಯು.ನಾಗರಾಜ್ ಹೇಳಿದರು. ಆಶ್ರಯ ಯೋಜನೆಯ ಹಕ್ಕು ಪತ್ರಗಳ ವಿತರಣೆಗೆ ಸದಸ್ಯರು ಒತ್ತಾಯಿಸಿದರು. ರಾಜವಂಶಸ್ಥ ರಾಜಾಶ್ರೀಕೃಷ್ಣದೇವರಾಯಲು, ಗ್ರಾಪಂ ಅಧ್ಯಕ್ಷ ಕೆ.ತಿಮ್ಮಪ್ಪ ಬಾಳಿಕಾಯಿ, ಸದಸ್ಯರಾದ ಕೆ.ವಿ.ಬಾಬು, ಮಲ್ಲಿಕಾರ್ಜುನಸ್ವಾಮಿ, ಪಿಡಿಒ ಕೃಷ್ಣಪ್ಪ, ಆರ್‌ಐ ಮಂಜುನಾಥ ಹಿರೇಮಠ, ವಿಎ ಪಿ.ಮಹಾಲಕ್ಷ್ಮೀ, ಗ್ರಾಮಸ್ಥರಾದ ಚಂದ್ರಶೇಖರ್, ಯುವರಾಜ್ ಇತರರಿದ್ದರು.

    ಸ್ಮಶಾನಕ್ಕಾಗಿ 2 ಎಕರೆ ಭೂಮಿಯಿದ್ದು, ಅದರ ಹದ್ದುಬಸ್ತು ನಿಗದಿಗಾಗಿ ಸರ್ವೇ ಕೈಗೊಳ್ಳಲಾಗುವುದು. ಒತ್ತುವರಿ ಕುರಿತಂತೆ ಮಾಹಿತಿಯಿದ್ದು, ಸ.ನಂ. 194ರಲ್ಲಿ ಬರುವ ಎಲ್ಲ ಭೂಮಿ ಸಮೀಕ್ಷೆ ಮಾಡಲಾಗುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts