More

    ಮಂದಿರ-ಮಸೀದಿ ಲೆಕ್ಕ ಹಾಕುತ್ತಿರುವ ರೆಡ್ಡಿ

    ಕೊಪ್ಪಳ: ಬಿಜೆಪಿಗೆ ಸೆಡ್ಡು ಹೊಡೆದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸಿರುವ ಗಾಲಿ ಜನಾರ್ದನ ರೆಡ್ಡಿ ಪಕ್ಷ ಸಂಘಟನೆ ತುರುಸುಗೊಳಿಸಿದ್ದಾರೆ. ಗಂಗಾವತಿ ಕ್ಷೇತ್ರಾದ್ಯಂತ ಮತ ಬೇಟೆ ಶುರುವಿಟ್ಟುಕೊಂಡಿದ್ದು, ಪ್ರತಿ ಗ್ರಾಮದ ದೇವಸ್ಥಾನ ಹಾಗೂ ಮಸೀದಿ ಸೇರಿ ಧಾರ್ಮಿಕ ಕೇಂದ್ರಗಳ ಮಾಹಿತಿ ಕಲೆ ಹಾಕುತ್ತಿದ್ದಾರೆ.

    ರಾಜಕೀಯ ಜೀವನದಲ್ಲಿ ಮೊದಲ ಬಾರಿಗೆ ನೇರ ಸ್ಪರ್ಧೆಗೆ ನಿರ್ಧರಿಸಿರುವ ರೆಡ್ಡಿ, ಗಂಗಾವತಿ ಕ್ಷೇತ್ರದಿಂದ ಕಣಕ್ಕಿಳಿಯುವುದು ಖಚಿತಗೊಂಡಿದೆ. ಆರಂಭದಿಂದಲೂ ಬಿಜೆಪಿಗರಿಗೆ ನೀಡಿದ ನೇರ ಹಾಗೂ ಪರೋಕ್ಷ ಎಚ್ಚರಿಕೆಗಳನ್ನು ಕಮಲ ನಾಯಕರು ಗಂಭೀರವಾಗಿ ಪರಿಗಣಿಸಿಲ್ಲ. ಹೊಸ ಪಕ್ಷ ಉದಯದ ನಂತರವಾದರೂ ಮನವೊಲಿಸುವ ಪ್ರಯತ್ನ ಮಾಡುತ್ತಾರೆಂಬ ನಿರೀಕ್ಷೆಯೂ ಹುಸಿಯಾದಂತಿದೆ. ಇದೇ ಕಾರಣಕ್ಕೆ ರೆಡ್ಡಿ ಸಾಮ್ರಾಜ್ಯ ವಿಸ್ತರಣೆ ಚುರುಕುಗೊಳಿಸಿದ್ದು, ಕೈ, ಕಮಲ ಅತೃಪ್ತರಿಗೆ ಗಾಳ ಹಾಕುತ್ತಿದ್ದಾರೆ. ಮತ್ತೊಂದೆಡೆ ಪಕ್ಷದಲ್ಲಿ ತಮಗೆ ಬೆಲೆ ಸಿಗುತ್ತಿಲ್ಲವೆಂದು ನೊಂದ ಅನ್ಯ ಪಕ್ಷದವರು ಕೆಆರ್‌ಪಿಪಿ ಸೇರುತ್ತಿದ್ದಾರೆ. ಹಲವರು ಪರಿಸ್ಥಿತಿ ನೋಡಿಕೊಂಡು ಪಕ್ಷ ಬದಲಾವಣೆಗೆ ಕಾಯುತ್ತಿದ್ದಾರೆ. ಈವರೆಗೂ ದೊಡ್ಡ ಮಟ್ಟದ ನಾಯಕರು ಕೆಆರ್‌ಪಿಪಿ ಸೇರಿಲ್ಲವಾದರೂ ಸೇರ್ಪಡೆ ವದಂತಿಗಳು ಗಾಳಿಯಷ್ಟೇ ವೇಗವಾಗಿ ಹರಡುತ್ತಿವೆ. ಜಿಲ್ಲೆಯ ಮಟ್ಟಿಗೆ ಐದೂ ಕ್ಷೇತ್ರಗಳಲ್ಲಿ ‘ರೆಡ್ಡಿ ಪಕ್ಷಕ್ಕೆ ನಾನೇ ಆಕಾಂಕ್ಷಿ’ ಎಂದು ಹೇಳಿಕೊಳ್ಳುವವರ ಸಂಖ್ಯೆ ದಿನ ಕಳೆದಂತೆ ಏರಿಕೆಯಾಗುತ್ತಿದೆ.

    ಗಂಗಾವತಿ ಕ್ಷೇತ್ರ ಕೊಪ್ಪಳ ತಾಲೂಕಿಗೂ ವಿಸ್ತರಿಸಿದ್ದು, ಲಿಂಗಾಯತ, ಮುಸ್ಲಿಮರ ಜತೆಗೆ ಹಿಂದುಳಿದ ವರ್ಗಗಳ ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಬಿಜೆಪಿ ಹಿಂದುತ್ವ ಆಧಾರದಲ್ಲಿ ಮತ ಬ್ಯಾಂಕ್ ಹೊಂದಿದ್ದರೆ, ಕಾಂಗ್ರೆಸ್ ಮುಸ್ಲಿಮರು ಹಾಗೂ ಅಹಿಂದ ವರ್ಗಗಳ ಮತಗಳ ಮೇಲೆ ಅವಲಂಬಿತವಾಗಿದೆ. ಆದರೆ, ಉಭಯ ಕ್ಷೇತ್ರಗಳ ಕಾಂಗ್ರೆಸ್ ಪಾಳಯದಲ್ಲಿ ಆಕಾಂಕ್ಷಿಗಳಲ್ಲೇ ಕೆಲ ಕಾರಣಗಳಿಗೆ ಶೀತಲ ಸಮರ ನಡೆಯುತ್ತಿದೆ. ಪ್ರಬಲ ಸಮುದಾಯಗಳ ನಾಯಕರಿಬ್ಬರು ಪರಸ್ಪರ ಸವಾಲೊಡ್ಡಿಕೊಂಡಿದ್ದು, ರಾಜಕೀಯ ಕೆಸರೆರಚಾಟದಲ್ಲಿ ತೊಡಗಿಕೊಂಡಿದ್ದಾರೆ. ಉಭಯ ನಾಯಕರು ಕೊಪ್ಪಳ, ಗಂಗಾವತಿ ಕ್ಷೇತ್ರದಲ್ಲಿನ ತಮ್ಮ ಬೆಂಬಲಿಗರನ್ನು ಜೆಡಿಎಸ್, ಕೆಆರ್‌ಪಿಪಿ ಕದ ತಟ್ಟುವಂತೆ ಮಾಡುವ ಮೂಲಕ ಚುನಾವಣೆ ಘೋಷಣೆ ಮುನ್ನವೇ ರಾಜಕೀಯ ಪಟ್ಟುಗಳ ಪ್ರದರ್ಶನಕ್ಕೆ ವೇದಿಕೆ ರಚಿಸಿಕೊಂಡಿದ್ದಾರೆ.

    ಇವರ ಪರಿಸ್ಥಿತಿ ಲಾಭ ಪಡೆಯಲು ರೆಡ್ಡಿಗಾರು ಯತ್ನಿಸುತ್ತಿದ್ದು, ಜಿಲ್ಲಾ ರಾಜಕೀಯ ರಂಗು ಹೆಚ್ಚುವಂತೆ ಮಾಡಿದೆ. ಬಿಜೆಪಿಯಿಂದ ರಾಜಕೀಯ ಶುರು ಮಾಡಿರುವ ಜನಾರ್ದನ ರೆಡ್ಡಿ, ಗಂಗಾವತಿಗೆ ಆಗಮಿಸುತ್ತಲೇ ಮುಸ್ಲಿಮರ ಜಪ ಶುರುವಿಟ್ಟುಕೊಂಡಿದ್ದಾರೆ. ಆರಂಭದಲ್ಲೇ ಮಸೀದಿಗೆ ಕೋಟ್ಯಂತರ ರೂ. ಅನುದಾನ ನೀಡುವ ಭರವಸೆ ನೀಡಿದ್ದು, ಮುಸ್ಲಿಮರ ಪವಿತ್ರ ಸ್ಥಳಗಳಿಗೆ ಕುಟುಂಬ ಸಮೇತ ಭೇಟಿ ನೀಡಿ ಮನವೊಲಿಕೆಗೆ ಮುಂದಾಗಿದ್ದಾರೆ. ಕೊಪ್ಪಳ ಭಾಗದಲ್ಲಿ ಹಿಂದುಳಿದ ವರ್ಗಗಳ ಮತದಾರರು ಪ್ರಬಲರಾಗಿದ್ದು, ಅವರ ಮನವೊಲಿಕೆಗೆ ತಂತ್ರ ರೂಪಿಸುತ್ತಿದ್ದಾರೆ. ಆರಂಭಿಕ ಲೆಕ್ಕಾಚಾರಗಳು ತಲೆ ಕೆಳಗಾದರೂ ಹೊಸ ಪ್ರಯತ್ನ ಮುಂದುವರೆಸಿದ್ದು, ಮಸೀದಿಗಳ ಜತೆಗೆ ದೇಗುಲಗಳ ಜಪ ಶುರುವಿಟ್ಟುಕೊಂಡಿದ್ದಾರೆ.

    ಗ್ರಾಮದ ಮುಖ್ಯಸ್ಥರಿಂದ ಮಾಹಿತಿ: ಚುನಾವಣೆ ಘೋಷಣೆಗೂ ಮುನ್ನವೇ ಅಬ್ಬರದ ಪ್ರಚಾರ ನಡೆಸಿರುವ ಜನಾರ್ದನ ರೆಡ್ಡಿ, ಪಕ್ಷ ಸಂಘಟನೆಗೆ ಬೇಕಾದ ಎಲ್ಲ ಪಟ್ಟುಗಳ ಪ್ರದರ್ಶನ ಮಾಡುತ್ತಿದ್ದಾರೆ. ಗಂಗಾವತಿ ಕ್ಷೇತ್ರದಲ್ಲಿ 235 ಮತಗಟ್ಟೆಗಳಿದ್ದು, ಪ್ರತಿ ಗ್ರಾಮಕ್ಕೂ ಭೇಟಿ ನೀಡುತ್ತಿರುವ ರೆಡ್ಡಿ ಬೆಂಬಲಿಗರು ಗ್ರಾಮದ ಕೀ ವೋಟರ್‌ಗಳನ್ನು ಸೆಳೆಯುತ್ತಿದ್ದಾರೆ. ಜತೆಗೆ ಯಾವ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ, ಸಮುದಾಯಕ್ಕೆ ಸಂಬಂಧಿಸಿದ ದೇವಾಲಯಗಳೆಷ್ಟು, ಮಸೀದಿಗಳೆಷ್ಟು, ಅರೆಬರೆಯಾಗಿರುವ ಧಾರ್ಮಿಕ ಕಟ್ಟಡಗಳ ವಿವರ, ಗ್ರಾಮದ ಪ್ರಮುಖ ಬೇಡಿಕೆಗಳು ಮುಂತಾದ ವಿವರಗಳನ್ನು ಕಲೆ ಹಾಕುತ್ತಿದ್ದಾರೆ. ಗ್ರಾಮದ ಮುಖ್ಯಸ್ಥರಿಂದ ಮಾಹಿತಿ ದೃಢೀಕರಿಸಿಕೊಂಡು ಪಟ್ಟಿ ಮಾಡುತ್ತಿದ್ದು, ಎದುರಾಳಿಗಳಿಗೆ ರಾಜಕೀಯ ಪೆಟ್ಟು ನೀಡಲು ತಂತ್ರ ರೂಪಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts