More

    ಮಕರ ಸಂಕ್ರಾಂತಿ ಪರ್ವಕಾಲದಲ್ಲಿ ಪುಣ್ಯಸ್ನಾನ: ತುಂಗಭದ್ರಾ ನದಿಯಲ್ಲಿ ಮಿಂದೆದ್ದ ಜನಸಾಗರ

    ಗಂಗಾವತಿ/ಕೊಪ್ಪಳ: ಮಕರ ಸಂಕ್ರಾಂತಿ ಪರ್ವಕಾಲ ನಿಮಿತ್ತ ತುಂಗಭದ್ರಾ ನದಿಯಲ್ಲಿ ಜನರು ಸಂಪ್ರದಾಯದಂತೆ ಭಾನುವಾರ ಪುಣ್ಯಸ್ನಾನ ಮಾಡಿದರು.

    ಭೋಗಿ ನಂತರ ಬರುವ ಸಂಕ್ರಾಂತಿಗಾಗಿ ಮನೆಯಂಗಳದಲ್ಲಿ ಮಹಿಳೆಯರು ಆಕರ್ಷಕವಾದ ಬಗೆಬಗೆಯ ರಂಗೋಲಿ ಬಿಡಿಸಿ ಬಣ್ಣ ತುಂಬಿದ್ದರು. ಹುಲಿಗಿ, ಆನೆಗೊಂದಿಯ ಚಿಂತಾಮಣಿ, ಹನುಮನಹಳ್ಳಿಯ ಋಷ್ಯಮುಖ ಪರ್ವತ, ವಿರುಪಾಪುರ ಗಡ್ಡಿಯ ಬಳಿ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು. ಎಳ್ಳು ಮತ್ತು ಎಣ್ಣೆ ಹಚ್ಚಿಕೊಂಡು ನದಿಯಲ್ಲಿ ಮಿಂದೆದ್ದರು. ಬಳಿಕ ಪರಸ್ಪರ ಎಳ್ಳು-ಬೆಲ್ಲ ನೀಡುವ ಮೂಲಕ ಶುಭಾಶಯ ಕೋರಿದರು. ಸಂಪ್ರದಾಯದಂತೆ ಸಜ್ಜೆ ರೊಟ್ಟಿ, ಎಳ್ಳು ಹೋಳಿಗೆ, ಎಣ್ಣೆ ಬದನೆಕಾಯಿ, ಕಾಳು, ತರಕಾರಿ ಸೇರಿ ವಿವಿಧ ಖಾದ್ಯಗಳನ್ನು ಕಟ್ಟಿಕೊಂಡು ಬಂದು ನದಿ ದಂಡೆ ಮೇಲೆ ಕುಟುಂಬ ಸದಸ್ಯರೊಂದಿಗೆ ಕುಳಿತು ಸವಿದರು.

    ನದಿಯಲ್ಲಿ ನೀರಿನ ಹರಿವು ಕಡಿಮೆಯಿದ್ದರಿಂದ ಸ್ನಾನಕ್ಕಾಗಿ ಪರದಾಡಿದರು. ಮುನ್ನೆಚ್ಚರಿಕೆ ಕ್ರಮವಾಗಿ ನದಿ ತೀರದಲ್ಲಿ ಪೊಲೀಸ್ ಮತ್ತು ಗೃಹರಕ್ಷಕ ದಳ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಗಂಗಾವತಿ ತಾಲೂಕಿನ ಶ್ರೀರಾಮನಗರ, ಜಂಗಮರಕಲ್ಗುಡಿ, ವಿದ್ಯಾನಗರ ಸೇರಿ ಆಂಧ್ರ ವಲಸಿಗರ ಕ್ಯಾಂಪ್‌ಗಳಲ್ಲಿ ಸಂಕ್ರಾಂತಿ ವಿಶಿಷ್ಟ ರೀತಿಯಲ್ಲಿ ಆಚರಿಸಿದ್ದು, ಗಾಯನ ಮತ್ತು ನೃತ್ಯವಾಡಿ ಸಂಭ್ರಮಿಸಿದರು.

    ಟ್ರಾಫಿಕ್ ಜಾಮ್: ರಾಯಚೂರು, ಬಾಗಲಕೋಟೆ, ಬಳ್ಳಾರಿ, ವಿಜಯಪುರ, ಹುಬ್ಬಳ್ಳಿ, ಗದಗ, ವಿಜಯನಗರ, ಕಲಬುರಗಿ ಸೇರಿ ವಿವಿಧ ಜಿಲ್ಲೆಗಳಿಂದ ಪುಣ್ಯಸ್ನಾನಕ್ಕಾಗಿ ಜನ ಬಂದಿದ್ದರಿಂದ ಅಂಜನಾದ್ರಿ ಬೆಟ್ಟದ ಬಳಿ ಟ್ರಾಫಿಕ್ ಜಾಮ್ ಉಂಟಾಯಿತು. ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಅಂಜನಾದ್ರಿ ಬೆಟ್ಟ, ಪಂಪಾಸರೋವರ ಜಯಲಕ್ಷ್ಮಿ ದೇವಾಲಯ, ಋಷ್ಯಮುಖ ಪರ್ವತದ ಚಂದ್ರಮೌಳೇಶ್ವರ ದೇವಾಲಯದಲ್ಲಿ ಭಕ್ತರ ಮಧ್ಯೆ ನೂಕುನುಗ್ಗಲು ಉಂಟಾಯಿತು.

    ಮಕರ ಸಂಕ್ರಾಂತಿ ಪರ್ವಕಾಲದಲ್ಲಿ ಪುಣ್ಯಸ್ನಾನ: ತುಂಗಭದ್ರಾ ನದಿಯಲ್ಲಿ ಮಿಂದೆದ್ದ ಜನಸಾಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts