More

    ಅರಣ್ಯ ಭೂಮಿಯಲ್ಲಿ ಸಾಗುವಳಿಗೆ ಅವಕಾಶ ನೀಡಿ: ಗಂಗಾವತಿ ಇಲಾಖೆ ಕಚೇರಿ ಮುಂದೆ ಬಸಾಪಟ್ಟಣ ರೈತರ ಪ್ರತಿಭಟನೆ

    ಗಂಗಾವತಿ: ಸಾಗುವಳಿ ಮಾಡಲು ಅವಕಾಶ ನೀಡುವಂತೆ ಒತ್ತಾಯಿಸಿ ಬಸಾಪಟ್ಟಣದ ಎಂಟು ರೈತ ಕುಟುಂಬಗಳು ನಗರದ ಅರಣ್ಯ ಇಲಾಖೆ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದವು.

    ಬಸಾಪಟ್ಟಣ ಸೀಮಾದ ಸರ್ವೇ ನಂ.92/2ರಲ್ಲಿ 340 ಎಕರೆ ಅರಣ್ಯ ಭೂಮಿಯಿದ್ದು, 8 ಕುಟುಂಬಗಳು 50 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದೇವೆ. ಈಗ ಅರಣ್ಯಾಧಿಕಾರಿಗಳು ಅಡ್ಡಿಪಡಿಸುತ್ತಿದ್ದು, ಕೃಷಿ ಚಟುವಟಿಕೆ ಕೈಗೊಳ್ಳದಂತೆ ತಾಕೀತು ಮಾಡಿದ್ದಾರೆ. ಸಾಗುವಳಿಗೆ ಅವಕಾಶ ನೀಡುವಂತೆ ಒತ್ತಾಯಿಸಿದರು. ಕಾಯ್ದೆಯ ಬಗ್ಗೆ ಮಾಹಿತಿ ನೀಡಲು ಬಂದ ಸಹಾಯಕ ಅರಣ್ಯಾಧಿಕಾರಿ ರಾಮಣ್ಣರೊಂದಿಗೆ ವಾಗ್ವಾದ ನಡೆಸಿದರು.

    ನಗರಸಭೆ ಸದಸ್ಯ ಶರಭೋಜಿ ಗಾಯಕ್ವಾಡ್ ಮಾತನಾಡಿ, ಹಲವು ವರ್ಷಗಳಿಂದ ಎಂಟು ಕುಟುಂಬಗಳು ಭೂಮಿ ಸಾಗುವಳಿ ಮಾಡಿಕೊಂಡು ಬಂದಿವೆ. ಇತ್ತೀಚೆಗೆ ಬಂದ ಅಧಿಕಾರಿಗಳು ಅರಣ್ಯ ಇಲಾಖೆಗೆ ಸೇರಿದ್ದೆಂದು ರೈತರನ್ನು ಒಕ್ಕಲೆಬ್ಬಿಸಿದ್ದಾರೆ. ಇದೇ ವ್ಯಾಪ್ತಿಯಲ್ಲಿರುವ ಕೆಲವರಿಗೆ ಅವಕಾಶ ಮಾಡಿಕೊಟ್ಟಿರುವ ಅಧಿಕಾರಿಗಳು ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.

    ಎಆರ್‌ಎ್ಒ ರಾಮಣ್ಣ ನಾಯಕ ಪ್ರತಿಕ್ರಿಯಿಸಿ, 1981ರ ಅರಣ್ಯ ಕಾಯ್ದೆಯನ್ವಯ ಉದ್ದೇಶಿತ ಭೂಮಿ ಅರಣ್ಯ ವ್ಯಾಪ್ತಿಗೆ ಬರಲಿದ್ದು, ಸರ್ಕಾರದ ಸೂಚನೆಯಂತೆ ಸಾಗುವಳಿಗೆ ಅವಕಾಶ ಕೊಟ್ಟಿಲ್ಲ. ಬೇಕಾದರೆ ನ್ಯಾಯಾಲಯಕ್ಕೆ ಮೊರೆ ಹೋಗಲು ಅವಕಾಶವಿದೆ ಎಂದರು. ರೈತರಾದ ದುರುಗಪ್ಪ ನಾಯಕ, ಪರಮೇಶಿ, ಯಂಕೋಬ, ಊರಮ್ಮ, ಹುಲಿಗೆಮ್ಮ, ಮರಿಯಮ್ಮ, ರೇಣಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts