More

    ಕಗ್ಗಂಟಾದ ಲಕ್ಷ್ಮೀಕ್ಯಾಂಪ್ ವಿವಾದ, ಆಡಳಿತ-ವಿಪಕ್ಷ ಸದಸ್ಯರ ನಡುವೆ ಜಗಳ

    ಗಂಗಾವತಿ: ನಗರದ ಲಕ್ಷ್ಮೀ ಕ್ಯಾಂಪ್‌ನ ವಿವಾದಿತ ಜಾಗದ ವಿಚಾರವಾಗಿ ಗುರುವಾರ ಕರೆದಿದ್ದ ನಗರಸಭೆ ವಿಶೇಷ ಸಾಮಾನ್ಯಸಭೆಯಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರು ನಡುವೆ ಜಗಳವಾಗಿದ್ದು, ಒಮ್ಮತಕ್ಕೂ ಬಾರದೆ, ಮತಕ್ಕೂ ಒಪ್ಪದ ಕಾರಣ ಸಭೆ ಮೊಟಕುಗೊಳಿಸಲಾಯಿತು.

    ತಾಪಂ ಮಂಥನ ಸಭಾಂಗಣದಲ್ಲಿ ನಗರಸಭೆ ಆಯೋಜಿಸಿದ್ದ ಸಾಮಾನ್ಯಸಭೆಯಲ್ಲಿ 24ನೇ ವಾರ್ಡ್‌ನ ಲಕ್ಷ್ಮೀ ಕ್ಯಾಂಪ್ ಏರಿಯಾದಲ್ಲಿ ಮುಸ್ಲಿಮರು ನಗರಸಭೆ ಜಾಗ ಅತಿಕ್ರಮಿಸಿದ್ದು, ಎರಡು ಗುಂಪಿನ ನಡುವೆ ಜಗಳವಾಗಿದ್ದರಿಂದ ಆ ಪ್ರದೇಶದಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿತ್ತು. ಜಾಗವನ್ನು ಮುಸ್ಲಿಂ ಸಮುದಾಯಕ್ಕೆ ಬಿಟ್ಟುಕೊಡುವಂತೆ ಆಡಳಿತ ಪಕ್ಷ ವಾದಿಸಿದರೆ, ಪಾರ್ಕ್‌ಗೆ ಮೀಸಲು ಜಾಗವನ್ನು ಯಾವುದೇ ಸಮುದಾಯಕ್ಕೂ ನೀಡದಂತೆ ವಿಪಕ್ಷ ಸದಸ್ಯರು ಪಟ್ಟು ಹಿಡಿದರು.

    ವಿಷಯವನ್ನು ಮತಕ್ಕೆ ಹಾಕಿ ಒಪ್ಪಿಗೆ ಪಡೆಯೋಣ ಎಂದು ಆಡಳಿತ ಪಕ್ಷದ ಸದಸ್ಯ ಶಾಮೀದ್ ಮನಿಯಾರ್, ಜೆಡಿಎಸ್ ಎಂ.ಡಿ. ಉಸ್ಮಾನ್ ಮನವಿಗೆ ವಿಪಕ್ಷ ಸದಸ್ಯರಾದ ರಮೇಶ ಚೌಡ್ಕಿ, ಪರಶುರಾಮ್ ಮಡ್ಡೇರ್ ವಿರೋಧಿಸಿದರು. ಜಾಗವನ್ನು ನಗರಸಭೆ ಸುಪರ್ದಿಗೆ ಪಡೆದು ಸಾರ್ವಜನಿಕ ಉದ್ದೇಶಕ್ಕೆ ನೀಡುವಂತೆ ವಿಪಕ್ಷ ಸದಸ್ಯರು ಒತ್ತಾಯಿಸಿದ್ದರಿಂದ ಕೆಲಕಾಲ ಗದ್ದಲ ನಡೆಯಿತು. ಆಡಳಿತ ಪಕ್ಷದ ಸದಸ್ಯ ಶಾಮೀದ್ ಮನಿಯಾರ್, ಪೌರಾಯುಕ್ತರಿಗೆ ಸೆಕೆಂಡರಿ ಎಂಬ ಪದ ಬಳಸಿದ ಕಾರಣ ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ ಗರಂ ಆಗಿದ್ದು, ಏರು ಧ್ವನಿಯಲ್ಲಿ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು. ಘಟನೆಯಿಂದ ವಿಚಲಿತರಾದ ನಗರಸಭೆ ಸಿಬ್ಬಂದಿ ಪೌರಾಯುಕ್ತ ಪರ ನಿಂತಿದ್ದರಿಂದ ವಿವಾದ ತಣ್ಣಗಾಯಿತು.

    ಏನಾದರೂ ನಿರ್ಣಯಿಸಿ: ಉದ್ದೇಶಿತ ಜಾಗ ಮುಸ್ಲಿಂ ಸಮುದಾಯಕ್ಕೋ, ಪಾರ್ಕ್‌ಗೋ ಏನಾದರೂ ನಿರ್ಣಯಿಸಿ ಅದಕ್ಕೆ ಒಪ್ಪಿಗೆ ಇದೆ. ಮುಸ್ಲಿಂ ಸಮುದಾಯಕ್ಕೆ ನೀಡುವ ಬಗ್ಗೆ ಸಭೆ ನಿರ್ಣಯದ ವರದಿ ಜಿಲ್ಲಾಡಳಿತಕ್ಕೆ ಕಳುಹಿಸಿ. ಡಿಸಿ ನಿರ್ಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳೊಣ ಎಂದು ಆಡಳಿತ ಪಕ್ಷದ ಸದಸ್ಯರು ಒಮ್ಮತದ ಸಲಹೆ ನೀಡಿದರು. ಜಾಗ ಹಿಂದೆ ಏನಿತ್ತು, ಈಗ ಏನಾಗಿದೆ ಎಂಬುದರ ಬಗ್ಗೆ ವಾಸ್ತವ ಪರಿಶೀಲಿಸಿ. ಸಂಬಂಧಪಟ್ಟ ದಾಖಲೆ ಸಂಗ್ರಹಿಸಿ. ಪಾರ್ಕ್‌ಗೆ ಸಂಬಂಧಿಸಿದ ಕೋರ್ಟ್ ತೀರ್ಪಿನ ಬಗ್ಗೆ ಪರಮಾರ್ಶಿಸಿ ಎಂದು ವಿಪಕ್ಷ ನಾಯಕ ನವೀನ್ ಮಾಲಿ ಪಾಟೀಲ್ ಒತ್ತಾಯಿಸಿದರು. ಯಾವುದೇ ನಿರ್ಧಾರಕ್ಕೆ ಬರದಿದ್ದರಿಂದ ಚರ್ಚೆ ಕೈಬಿಡಲಾಯಿತು.

    ಗೌರವ ಕೊಡುವುದನ್ನು ಕಲಿಯಿರಿ: ಚುನಾಯಿತ ಸದಸ್ಯರ ಬಗ್ಗೆ ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ ಅನುಚಿತ ಮತ್ತು ಅತಿರೇಕದಿಂದ ವರ್ತಿಸುತ್ತಿದ್ದಾರೆ ಎಂದು ಆಡಳಿತ ಪಕ್ಷದ ಸದಸ್ಯ ಸೋಮನಾಥ ಭಂಡಾರಿ ಆರೋಪಿಸಿದರು. ಯಾರನ್ನೂ ದೂಷಿಸಿಲ್ಲ, ಅವಮಾನಿಸಿಲ್ಲ. ಪರಿಚಯವಿಲ್ಲದಿದ್ದರಿಂದ ಕೆಲವೊಮ್ಮೆ ತಪ್ಪುಗಳಾಗಬಹುದು. ಸದಸ್ಯರಿಗೆ ಗೌರವ ನೀಡುವುದನ್ನು ಕಲಿಯಿರಿ ಎಂದು ಸದಸ್ಯ ಮನೋಹರ ಸ್ವಾಮಿ ಹಿರೇಮಠ ಸಲಹೆ ನೀಡಿದರೂ, ಪೌರಾಯುಕ್ತರು ಯಾವುದೇ ಉತ್ತರ ನೀಡದೆ ಮೌನಕ್ಕೆ ಜಾರಿದರು. ನಗರಸಭೆ ಅನುದಾನದಿಂದ ಕೈಗೊಂಡ ಕಾಮಗಾರಿ ಉದ್ಘಾಟನೆಗೆ ಆಡಳಿತ ಪಕ್ಷದ ಸದಸದ್ಯರ ಗಮನಕ್ಕೆ ತರದ ಬಗ್ಗೆ ಅಧ್ಯಕ್ಷೆ ಮಾಲಾಶ್ರೀ ಸಂದೀಪ ಆಕ್ಷೇಪಿಸಿದರಲ್ಲದೇ, ಇನ್ನೂ ಮುಂದೆ ಯಾವುದೇ ಕಾಮಗಾರಿ ಉದ್ಘಾಟನೆಗೂ ಅಧ್ಯಕ್ಷರ ಅನುಮತಿ ಪಡೆಯುವಂತೆ ಸಿಬ್ಬಂದಿಗೆ ತಾಕೀತು ಮಾಡಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಜಬ್ಬಾರ್, ಎಇಇ ಕೆ.ಆರ್. ಅಭಿಷೇಕ್, ಕಂದಾಯ ಅಧಿಕಾರಿ ನಿಜಾಮುದ್ದೀನ್ ಖತೀಬ್, ಆರೋಗ್ಯ ನಿರೀಕ್ಷಕ ಎ.ನಾಗರಾಜ್ ಇತರರರಿದ್ದರು.

    ನಂಗೂ ಮಾತಾಡ್ಲಿಕ್ಕೆ ಕೊಡ್ರಿ….
    ಸಭೆಯ ಎಲ್ಲ ವಿಷಯಗಳನ್ನು ಆಡಳಿತ ಪಕ್ಷದ ಸದಸ್ಯರೇ ಚರ್ಚಿಸುತ್ತಿದ್ದು, ಅಧ್ಯಕ್ಷೆ ಮಾಲಾಶ್ರೀ ಸಂದೀಪಗೆ ಮಾತನಾಡಲು ಅವಕಾಶ ನೀಡಲಿಲ್ಲ. ಅಸಮಧಾನಗೊಂಡ ಅಧ್ಯಕ್ಷೆ, ನಂಗೂ ಮಾತಾಡ್ಲಿಕ್ಕೆ ಅವಕಾಶ ಕೊಡ್ರಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರಿಂದ, ವಿಪಕ್ಷ ಸದಸ್ಯರು ಅಧ್ಯಕ್ಷೆ ಪರ ನಿಂತಿದ್ದರಿಂದ ಆಡಳಿತ ಪಕ್ಷದ ಸದಸ್ಯರು ಕಕ್ಕಾಬಿಕ್ಕಿಯಾದರು. ಇತ್ತೀಚಿಗೆ ನಿಧನರಾದ ಅಧ್ಯಕ್ಷೆ ತಂದೆ ಆತ್ಮಶಾಂತಿಗಾಗಿ ಮೌನಾಚರಣೆ ನಡೆಸಿದ ಸಂದರ್ಭದಲ್ಲಿ ಅಧ್ಯಕ್ಷೆ ಭಾವೂಕರಾಗಿ ಕಣ್ಣೀರಿಟ್ಟರು.

    ಲಕ್ಷ್ಮೀ ಕ್ಯಾಂಪ್ ವಿವಾದಿತ ಜಾಗ ಪಾರ್ಕ್‌ಗೆ ಸಂಬಂಧಿಸಿದ್ದು, ಯಾವುದೇ ಕಟ್ಟಡ ಅಥವಾ ಶೆಡ್ ನಿರ್ಮಿಸಿಕೊಳ್ಳಲು ಅವಕಾಶವಿಲ್ಲ. ಪಾರ್ಕ್ ದಾಖಲೆಗಳನ್ನು ಡಿಸಿ ಗಮನಕ್ಕೆ ತರಲಾಗುವುದು.
    | ಆರ್. ವಿರೂಪಾಕ್ಷಮೂರ್ತಿ, ಪೌರಾಯುಕ್ತ

    ಸಭೆ ವಿಷಯವನ್ನು ಚರ್ಚೆಗೆ, ಮತಕ್ಕೆ ಹಾಕುವಂತೆ ಕೇಳಿದರೂ ಪೌರಾಯುಕ್ತ ಸೇರಿ ವಿಪಕ್ಷ ಸದಸ್ಯರು ಒಪ್ಪಿಗೆ ನೀಡಿಲ್ಲ. ಸಭೆ ನಡಾವಳಿಯನ್ನು ಜಿಲ್ಲಾಡಳಿತಕ್ಕೆ ಕಳುಹಿಸಲಾಗುವುದು.
    | ಮಾಲಾಶ್ರೀ ಸಂದೀಪ, ಅಧ್ಯಕ್ಷೆ

    ಕರೊನಾ ಸಂದರ್ಭದಲ್ಲಿ ಮಾನವೀಯತೆ ದೃಷ್ಟಿಯಿಂದ ಪ್ರಾರ್ಥನೆ ಸಲ್ಲಿಸಲು ವಿವಾದಿತ ಜಾಗದಲ್ಲಿ ಅವಕಾಶ ನೀಡಲಾಗಿತ್ತು. ಅದನ್ನೇ ನಮ್ಮದೆಂದು ಹೇಳಿಕೊಳ್ಳುತ್ತಿರುವುದು ಸರಿಯಲ್ಲ. ಪಾರ್ಕ್ ಜಾಗವನ್ನು ಯಾವುದೇ ಸಮುದಾಯಕ್ಕೂ ನೀಡಲು ಅವಕಾಶವಿಲ್ಲ.
    | ನವೀನ್ ಮಾಲಿ ಪಾಟೀಲ್, ವಿಪಕ್ಷ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts