More

    ಬೋಂಗಾ ದುರಸ್ತಿಗೆ ಕಾರ್ಯೋನ್ಮುಖ: 22ನೇ ವಿತರಣೆ ಕಾಲುವೆಯಲ್ಲಿ ಬೃಹತ್ ಯಂತ್ರಗಳಿಂದ ಕಾಮಗಾರಿ

    ಗಂಗಾವತಿ: ತಾಲೂಕಿನ ಕೇಸಕ್ಕಿ ಹಂಚಿನಾಳ ಬಳಿ ತುಂಗಭದ್ರಾ ಎಡದಂಡೆ ನಾಲೆ 22ನೇ ವಿತರಣೆ ಕಾಲುವೆಯಲ್ಲಿ ಕಾಣಿಸಿಕೊಂಡ ಬೋಂಗಾ ದುರಸ್ತಿಗೆ ಜಲಸಂಪನ್ಮೂಲ ಇಲಾಖೆ ಕಾರ್ಯೋನ್ಮುಖವಾಗಿದ್ದು, ಶನಿವಾರ ಬೃಹತ್ ಯಂತ್ರಗಳ ಮೂಲಕ ಕಾಮಗಾರಿ ಭರದಿಂದ ಸಾಗಿದೆ.

    ಎಡದಂಡೆ ಕಾಲುವೆಯ ಚೈನ್ ಸಂ.1646, ಮೈಲ್ 31ರಲ್ಲಿ ಬರುವ ವಿತರಣೆ ಕಾಲುವೆಯ ಕೊಳವೆ ಅಳವಡಿಸಿರುವ ಎರಡು ಭಾಗದಲ್ಲಿ ಬೋಂಗಾ ಕಾಣಿಸಿಕೊಂಡಿದ್ದು, ಅಪಾರ ಪ್ರಮಾಣದ ನೀರು ಪೋಲಾಗಿತ್ತು. ಕಾಲುವೆಗೆ ಜಲಾಶಯದಿಂದ 3,500ಕ್ಯೂಸೆಕ್ ನೀರು ಹರಿಸಿದ್ದರಿಂದ, ನೀರು ನಿಯಂತ್ರಣಕ್ಕಾಗಿ ಅಧಿಕಾರಿಗಳು ರಾತ್ರಿಯಿಡೀ ಕಾದಿದ್ದರು. ದುರ್ಗಮ್ಮನಹಳ್ಳ ಮತ್ತು ಚಿಕ್ಕಡಂಕನಕಲ್ ಬಳಿ ಎಸ್ಕೇಪ್ ಗೇಟ್ ತೆರೆದು ನೀರಿನ ಪ್ರಮಾಣ ಕಡಿಮೆ ಮಾಡಲಾಗಿದೆ. ಕಾಲುವೆಯಲ್ಲಿ ನೀರು ಹರಿವು ನಿಂತಿದ್ದು, ಇಟಾಚಿ ಯಂತ್ರ, ಟ್ರ್ಯಾಕ್ಟರ್, ಟಿಪ್ಪರ್‌ಗಳ ಮೂಲಕ ಕಾಮಗಾರಿ ಕೈಗೊಳ್ಳಲಾಗಿದೆ.

    ತುರ್ತು ಕಾಮಗಾರಿ: ಈಗಾಗಲೇ ಎರಡನೇ ಬೆಳೆಯ ನಾಟಿ ಮಾಡಿದ್ದರಿಂದ ರೈತರಿಗೆ ನೀರಿನ ಅಗತ್ಯವಿದೆ. ಹೀಗಾಗಿ ಇಲಾಖೆಯಿಂದಲೇ ತುರ್ತು ಕಾಮಗಾರಿ ಆರಂಭಿಸಿದ್ದು, 13 ಅಡಿ ಆಳ, 30 ಅಡಿ ಉದ್ದದ ಕಾಮಗಾರಿಗಾಗಿ ಗುಂಡಿ ಅಗೆಯಲಾಗುತ್ತಿದೆ. ಎರೆ ಮಣ್ಣು ಮತ್ತು ಮರಮ್ ಸೇರಿ ಅಂದಾಜು 7 ಪದರಿನ ಕಾಮಗಾರಿ ನಡೆಸಬೇಕಿದ್ದು, ಜಲಸಂಪನ್ಮೂಲ ಇಲಾಖೆ ವಡ್ಡರಹಟ್ಟಿ ನಂ.2 ವಿಭಾಗದ ಇಂಜಿನಿಯರ್‌ಗಳ ತಂಡ ಸ್ಥಳದಲ್ಲಿ ಬೀಡು ಬಿಟ್ಟಿದೆ. ಜನಜಂಗುಳಿ ನಿಯಂತ್ರಣಕ್ಕೆ ಹೆಚ್ಚುವರಿ ಪೊಲೀಸ್ ಪಡೆ ನಿಯೋಜಿಸಲಾಗಿದೆ. ಕಾಮಗಾರಿ ಪೂರ್ಣಗೊಳ್ಳಲು ಎರಡು ದಿನ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

    ಶಾಸಕರ ಭೇಟಿ: ಕಾಮಗಾರಿ ಸ್ಥಳಕ್ಕೆ ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ ದಢೇಸೂಗೂರು ಭೇಟಿ ನೀಡಿ ಕಾಮಗಾರಿ ಸ್ಥಿತಿಗತಿ ವೀಕ್ಷಿಸಿದರು. ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಶಾಶ್ವತ ಕಾಮಗಾರಿ ನಿರ್ವಹಿಸುವಂತೆ ಸೂಚನೆ ನೀಡಿದರು. ಅಗತ್ಯಬಿದ್ದರೆ ಇಲಾಖೆ ಗುತ್ತಿಗೆದಾರರ ನೆರವು ಪಡೆಯುವಂತೆ ಸಲಹೆ ನೀಡಿದ್ದು, 24ಗಂಟೆ ಕಾಮಗಾರಿ ನಿರ್ವಹಿಸುವಂತೆ ತಿಳಿಸಿದರು. ಬೋಂಗಾ ಬಿದ್ದ ಸ್ಥಳದಲ್ಲಿ 3 ವರ್ಷದ ಹಿಂದೆ ಕಾಮಗಾರಿ ನಿರ್ವಹಿಸಿದ್ದು, ಕಳಪೆ ಕಾಮಗಾರಿ ಬಗ್ಗೆಯೂ ರೈತರು ಶಾಸಕರ ಎದುರು ದೂರಿದರು.

    ಬೋಂಗಾ ದುರಸ್ತಿಗೆ ಕಾರ್ಯೋನ್ಮುಖ: 22ನೇ ವಿತರಣೆ ಕಾಲುವೆಯಲ್ಲಿ ಬೃಹತ್ ಯಂತ್ರಗಳಿಂದ ಕಾಮಗಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts