More

    ಕರೊನಾ ತಡೆಗೆ ಅಧಿಕಾರಿಗಳ ಕಟ್ಟೆಚ್ಚರ

    ತುಂಗಭದ್ರಾ ನದಿ ತೀರದ ಗ್ರಾಮಗಳಲ್ಲಿನ ರೆಸಾರ್ಟ್‌ಗಳ ಪರಿಶೀಲನೆ

    ಗಂಗಾವತಿ: ಮಾರಕ ಕರೊನಾ ರೋಗದ ಬಗ್ಗೆ ತಾಲೂಕು ಆಡಳಿತ ಕಟ್ಟೆಚ್ಚರವಹಿಸಿದ್ದು, ತಾಲೂಕಿನಾದ್ಯಂತ ಸಂಚರಿಸಿ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ.

    ಈಗಾಗಲೇ ಜಿಲ್ಲಾಡಳಿತ ರಜೆ ಘೋಷಿಸಿದ್ದು, ಸಾರ್ವಜನಿಕ ಕಾರ್ಯಕ್ರಮ, ಸಂತೆ, ಜಾತ್ರೆ ಮೊದಲಾದವುಗಳನ್ನು ನಿಷೇಧಿಸಿದ್ದು, ಶಾಲೆ, ಕಾಲೇಜುಗಳನ್ನು ಬಂದ್ ಮಾಡಿಸಿ, ಪರೀಕ್ಷೆಗಳನ್ನು ಮುಂದೂಡಿಸಿದೆ. ರೆಸ್ಟೋರೆಂಟ್, ರೆಸಾರ್ಟ್, ಮಾಲ್‌ಗಳಲ್ಲಿನ ವಹಿವಾಟು ನಿಷೇಧಿಸುವುದರ ಜತೆಗೆ ಜನರ ಗುಂಪು ಹೆಚ್ಚಿರುವ ಪ್ರದೇಶಗಳಲ್ಲಿ ಕಟ್ಟೆಚ್ಚರವಹಿಸಲಾಗಿದೆ.

    ತಹಸೀಲ್ದಾರ್ ಎಲ್.ಡಿ.ಚಂದ್ರಕಾಂತ ನೇತೃತ್ವದಲ್ಲಿ ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ, ಸಣಾಪುರ ಗ್ರಾಪಂ ಪಿಡಿಒ ಬಸವರಾಜ ಇತರರು ಇರುವ ತಂಡ ತಾಲೂಕಿನ ಆನೆಗೊಂದಿ, ಸಣಾಪುರ, ರಂಗಾಪುರ, ಹನುಮನಹಳ್ಳಿಯಲ್ಲಿ ಸಂಚರಿಸಿ ರೆಸಾರ್ಟ್‌ಗಳಲ್ಲಿ ರೋಗದ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ವಿದೇಶಿಗರ ಆರೋಗ್ಯದ ಬಗ್ಗೆ ನಿಗಾವಹಿಸುವಂತೆ ರೆಸಾರ್ಟ್ ಮಾಲೀಕರಿಗೆ ಸೂಚನೆ ನೀಡಿದ್ದು, ಮುಂಜಾಗ್ರತೆ ಕ್ರಮಗಳ ಬಗ್ಗೆ ಬ್ಯಾನರ್ ಹಾಕಲು ಸೂಚಿಸಿದೆ. ರೆಸ್ಟೋರೆಂಟ್‌ಗಳಲ್ಲಿನ ಸ್ವಚ್ಛತೆ ಪರಿಶೀಲಿಸಿದ ತಂಡ, ಮಾಸ್ಕ್ ಸೇರಿ ಸುರಕ್ಷತಾ ಕ್ರಮ ಕಡ್ಡಾಯ ಪಾಲಿಸುವಂತೆ ತಿಳಿಹೇಳಿದೆ.

    ಎರಡೂ ಈಜುಕೊಳ ಬಂದ್: ಗಂಗಾವತಿ ತಾಲೂಕಾ ಕ್ರೀಡಾಂಗಣ ಮತ್ತು ಸಂಗಾಪುರದ ಈಜುಕೊಳ ಬಳಕೆ ಬಂದ್ ಮಾಡಲಾಗಿದೆ. ಜಿಲ್ಲಾಡಳಿತದ ಸೂಚನೆ ಬರುವರೆಗೂ ಪ್ರವೇಶ ಸ್ಥಗಿತಗೊಳಿಸುವಂತೆ ನಿರ್ವಹಣೆಗಾರರಿಗೆ ಸೂಚನೆ ನೀಡಲಾಗಿದೆ. ನಗರದ ಬಸ್ ನಿಲ್ದಾಣದಲ್ಲಿ ಸಿಬ್ಬಂದಿಗೆ ಸ್ವಚ್ಛತೆಯ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಅನ್ಯ ದೇಶದಿಂದ ತಾಲೂಕಿಗೆ ಬರುವರ ಬಗ್ಗೆ ನಿಗಾವಹಿಸಿದ್ದು, ನಗರದ ಉಪವಿಭಾಗ ಆಸ್ಪತ್ರೆಯಲ್ಲಿ ಪ್ರತ್ಯೇಕ ಚಿಕಿತ್ಸೆ ಕೊಠಡಿ ರೂಪಿಸಲಾಗಿದೆ.

    ಗಂಗಾವತಿ ತಾಲೂಕಾದ್ಯಂತ ಸಂಚರಿಸಿ ರೆಸಾರ್ಟ್ ಮತ್ತು ರೆಸ್ಟೋರೆಂಟ್‌ಗಳನ್ನು ಪರಿಶೀಲಿಸಲಾಗಿದೆ. ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ಮಾಲೀಕರಿಗೆ ಸೂಚಿಸಲಾಗಿದೆ. ನಿರ್ಲಕ್ಷಿಸಿದರೆ ಕ್ರಮಕ್ಕೆ ಶಿಾರಸು ಮಾಡಲಾಗುವುದು.
    | ಎಲ್.ಡಿ.ಚಂದ್ರಕಾಂತ ಗಂಗಾವತಿ ತಹಸೀಲ್ದಾರ್

    ಕೊಪ್ಪಳ ಜಿಲ್ಲೆಯಲ್ಲಿ ಕರೊನಾ ಪ್ರಕರಣ ಕಂಡುಬಂದಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಚಿಕಿತ್ಸೆ ವಾರ್ಡ್ ಸಿದ್ಧಪಡಿಸಲಾಗಿದೆ. ಅನಗತ್ಯ ಕಾರಣಗಳಿಗೆ ಆಸ್ಪತ್ರೆಗೆ ಭೇಟಿ ನೀಡುವ ರೋಗಿಗಳ ಸಂಬಂಧಿಕರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ.
    | ಡಾ.ಈಶ್ವರ ಸವಡಿ ಉಪವಿಭಾಗ ಆಸ್ಪತ್ರೆ ಆಡಳಿತಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts