More

    ಗಂಗಾಧರೇಶ್ವರ ರಥೋತ್ಸವ ವೈಭವ

    ಯಳಂದೂರು: ಜಿಲ್ಲೆಯ ಪುರಾತನ ಧಾರ್ಮಿಕ ಭಕ್ತಿ ಕೇಂದ್ರವಾಗಿರುವ ಯಳಂದೂರು ತಾಲೂಕಿನ ಪೌರಾಣಿಕ ಹಾಗೂ ಐತಿಹಾಸಿಕ ಪ್ರಸಿದ್ಧ ಬಿಳಿಗಿರಿರಂಗನ ಬೆಟ್ಟದಲ್ಲಿರುವ ಉದ್ಭವ ಗಂಗಾಧರೇಶ್ವರ ರಥೋತ್ಸವವು ಶನಿವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವಯುತವಾಗಿ ಜರುಗಿತು.

    ವೈಷ್ಣವ ಹಾಗೂ ಶೈವ ಸಂಪ್ರದಾಯವನ್ನು ಒಳಗೊಂಡ ಐತಿಹಾಸಿಕ ಪುಣ್ಯಕ್ಷೇತ್ರದಲ್ಲಿ ಶಿವರಾತ್ರಿಯಾದ ಮಾರನೇ ದಿನ ನಡೆಯುವ ಗಂಗಾಧರೇಶ್ವರ ರಥಕ್ಕೆ ಶಾಸಕ ಎ.ಆರ್.ಕೃಷ್ಣಮೂರ್ತಿ, ಆದಿವಾಸಿ ಸೋಲಿಗರೂ ಸೇರಿದಂತೆ ವಿವಿಧ ಜಿಲ್ಲೆ ಹಾಗೂ ತಾಲೂಕುಗಳಿಂದ ಬಂದಿದ್ದ ಭಕ್ತರು ಸಾಕ್ಷಿಯಾದರು.

    ದೇವರ ಉತ್ಸವ ಮೂರ್ತಿಯನ್ನು ರಥದ ಮೇಲೆ ಕುಳ್ಳಿರಿಸುವ ಮೂಲಕ ಚಾಲನೆ ನೀಡಲಾಯಿತು. ಇದರ ನಿಮಿತ್ತ ಉದ್ಭವ ಲಿಂಗಕ್ಕೆ ಮಹಾರಾಜರಾದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರು ಸ್ವಾಮಿಗೆ ಒಪ್ಪಿಸಿರುವ ಸ್ವರ್ಣ ಕೊಳಗವನ್ನು ಧಾರಣೆ ಮಾಡಲಾಯಿತು. ಮಧ್ಯಾಹ್ನ 12.26 ರಿಂದ 12.48 ಗಂಟೆಯೊಳಗೆ ಸಲ್ಲುವ ಶುಭ ಮಿಥುನ ಲಗ್ನದ ಶುಭ ಮುಹೂರ್ತದಲ್ಲಿ ನೆರೆದಿದ್ದ ಭಕ್ತರು ಹರಹರ ಮಹಾದೇವ ಎಂಬ ಉದ್ಘಾರದೊಂದಿಗೆ ತೇರನ್ನು ದೇಗುಲದ ಸುತ್ತ ಒಂದು ಸುತ್ತು ಪ್ರದಕ್ಷಿಣೆ ಹಾಕುವ ಮೂಲಕ ಸ್ವಸ್ಥಾನಕ್ಕೆ ತಂದರು. ದೇವರ ಉತ್ಸವ ಮೂರ್ತಿಯನ್ನು 400 ವರ್ಷಕ್ಕೂ ಹಳೆಯದಾದ ಹಿತ್ತಾಳೆಯ ಬಸವ ವಾಹನದ ಮೇಲೆ ಕುಳ್ಳಿರಿಸಿ ದೇಗುಲದ ಸುತ್ತ ಮೂರು ಸುತ್ತು ಪ್ರದಕ್ಷಿಣೆ ಮಾಡಲಾಯಿತು.

    ಈ ಬಾರಿ ರಥೋತ್ಸವವು ಶನಿವಾರ ಜರುಗಿದ ಹಿನ್ನೆಲೆಯಲ್ಲಿ ಬಿಳಿಗಿರಿರಂಗನಾಥಸ್ವಾಮಿ ವಾರದ ದಿನವೂ ಆಗಿದ್ದರಿಂದ ಭಕ್ತರ ಸಂಖ್ಯೆಯಲ್ಲಿ ಏರುಮುಖ ಕಂಡುಬಂದಿತು. ಸಾರಿಗೆ ಬಸ್, ಖಾಸಗಿ ಬಸ್‌ಗಳು ಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸಿದವು. ಹರಕೆ ಹೊತ್ತ ಭಕ್ತರು ಅಲ್ಲಲ್ಲಿ ಅರವಟ್ಟಿಗೆಗಳನ್ನು ಮಾಡಿಕೊಂಡು ಬಿಸಿಲ ಬೇಗೆಯಲ್ಲಿ ಬಳಲಿದ್ದ ಭಕ್ತರಿಗೆ ಮಜ್ಜಿಗೆ, ಪಾನಕ, ಕೋಸಂಬರಿ ವಿತರಿಸಿದರು. ದೇಗುಲದ ಮುಂಭಾಗದಲ್ಲಿರುವ ಆವರಣದಲ್ಲಿ ಪ್ರಸಾದ ವಿನಿಯೋಗ ಮಾಡಲಾಯಿತು.

    ಇದಕ್ಕೂ ಮುಂಚೆ ಪಟ್ಟಣದ ಉಪಖಜಾನೆ ಕಾರ್ಯಾಲಯದಿಂದ ಮೈಸೂರು ಮಹಾರಾಜರು ನೀಡಿರುವ ಸ್ವರ್ಣಕೊಳಗವನ್ನು ಮಂಗಳವಾದ್ಯಗಳ ಸಮೇತ ಮೆರವಣಿಗೆ ಮೂಲಕ ದೇಗುಲಕ್ಕೆ ಕೊಂಡೊಯ್ದು ಧಾರಣೆ ಮಾಡಲಾಯಿತು. ಹರಕೆ ಹೊತ್ತ ಭಕ್ತರು ದಂಡುಗೋಲು ಸೇವೆ ನೆರವೇರಿಸಿದರು.

    ಸಾವಿರಾರು ಭಕ್ತರು ಈ ಉತ್ಸವದಲ್ಲಿ ಭಾಗವಹಿಸಿ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಶಾಸಕ ಎ.ಆರ್. ಕೃಷ್ಣಮೂರ್ತಿ, ತಹಸೀಲ್ದಾರ್ ಜಯಪ್ರಕಾಶ್, ಬೆಟ್ಟದ ಕಾರ್ಯನಿರ್ವಾಹಕ ಅಧಿಕಾರಿ ಮೋಹನ್‌ಕುಮಾರ್ ಸೇರಿದಂತೆ ಅನೇಕರು ಹಾಜರಿದ್ದರು. ಬುಡಕಟ್ಟು ಸೋಲಿಗ ಜನಾಂಗದವರು ರಥವನ್ನು ಅಲಂಕರಿಸಿದರು. ಪೊಲೀಸ್ ಇಲಾಖೆಯ ವತಿಯಿಂದ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts