More

    ಇಕ್ಕಟ್ಟಿನಲ್ಲಿ ಸಾರ್ವಜನಿಕ ಗಣೇಶೋತ್ಸವ

    ಮಂಗಳೂರು/ಉಡುಪಿ: ರಾಜ್ಯ ಸರ್ಕಾರ ಶುಕ್ರವಾರ ಹೊರಡಿಸಿರುವ ಹೊಸ ಮಾರ್ಗಸೂಚಿ ಸಾರ್ವಜನಿಕ ಗಣೇಶೋತ್ಸವ ಆಯೋಜಕರಲ್ಲಿ ಗೊಂದಲ ಸೃಷ್ಟಿಸಿದೆ.
    ಕಳೆದ ವರ್ಷ ದ.ಕ. ಜಿಲ್ಲೆಯಲ್ಲಿ 379, ಉಡುಪಿ ಜಿಲ್ಲೆಯಲ್ಲಿ 453 ಸಾರ್ವಜನಿಕ ಗಣೇಶೋತ್ಸವಗಳು ಜರುಗಿದ್ದವು. ಈ ಪೈಕಿ ಅರ್ಧಶತಮಾನಕ್ಕಿಂತಲೂ ಹೆಚ್ಚು ವರ್ಷಗಳಿಂದ ನಡೆಯುತ್ತಿರುವ ಆಚರಣೆಗಳೂ ಇವೆ. ಈ ವರ್ಷ ಕರೊನಾ ಹಿನ್ನೆಲೆಯಲ್ಲಿ ಹಬ್ಬಗಳನ್ನು ಸರಳವಾಗಿ ಆಚರಿಸಬೇಕೆಂದು ಸರ್ಕಾರದ ಸೂಚನೆ ಇದ್ದ ಹಿನ್ನೆಲೆಯಲ್ಲಿ ಗಣೇಶೋತ್ಸವವನ್ನೂ ಸರಳವಾಗಿ ನಡೆಸಲು ಸಂಘಸಂಸ್ಥೆಗಳು ಸಿದ್ಧತೆ ನಡೆಸಿದ್ದವು. ಆದರೆ ಈಗ ಹಬ್ಬಕ್ಕೆ ಒಂದು ವಾರ ಬಾಕಿ ಇರುವಾಗ ಸರ್ಕಾರ ಮಾರ್ಗಸೂಚಿಯಲ್ಲಿ ಮಾರ್ಪಾಡು ಮಾಡಿದೆ. ಇದರಿಂದಾಗಿ ಇದೇ ಮೊದಲ ಬಾರಿಗೆ ಈ ಎಲ್ಲ ಗಣೇಶೋತ್ಸವ ಆಚರಣೆ ನಡೆಯುವುದೋ ಇಲ್ಲವೋ ಎಂದು ಅನುಮಾನ ಉಂಟಾಗಿದೆ.

    ಮೂರ್ತಿಗಳನ್ನು ಏನು ಮಾಡಲಿ?: ಸಂಘ ಸಂಸ್ಥೆಗಳು ಗಣೇಶ ಮೂರ್ತಿ ರಚಿಸಲು ಪೀಠವನ್ನು ತಯಾರಕರಿಗೆ ನೀಡಿದ್ದು, ಮೂರ್ತಿಗಳೂ ಸಿದ್ಧವಾಗಿವೆ. ವಾರ ಬಾಕಿ ಇರುವಂತೆ ಆಚರಣೆಗೆ ತಡೆ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಕನಿಷ್ಠ ಒಂದು ದಿನದ ಸರಳ ಆಚರಣೆಗಾದರೂ ಅವಕಾಶ ನೀಡಬೇಕು ಎಂಬ ಆಗ್ರಹ ಕೇಳಿ ಬಂದಿದೆ.
    ‘ಕೇಂದ್ರ ಮೈದಾನದಲ್ಲಿ ಒಂದು ದಿನದ ಗಣೇಶೋತ್ಸವಕ್ಕೆ ಪಾಲಿಕೆಯಿಂದ ಅನುಮತಿ ಪಡೆದಿದ್ದೇವೆ. ಮೈದಾನದಲ್ಲಿ ಅವಕಾಶ ನೀಡದಿದ್ದರೆ, ಬಾಳಂಭಟ್ ಹಾಲ್‌ನಲ್ಲಿ ಒಂದು ದಿನದ ಸಾಂಕೇತಿಕ ಆಚರಣೆ ಮಾಡಿ ವಿಸರ್ಜನೆ ಮಾಡಲು ಅನುಮತಿ ಕೇಳುತ್ತೇವೆ. ಆದರೂ ಸರ್ಕಾರ ಏನು ಹೇಳುತ್ತದೋ ಅದನ್ನು ನಾವು ಪಾಲಿಸುತ್ತೇವೆ’ ಎಂದು ಕೇಂದ್ರ ಮೈದಾನ ಹಿಂದು ಯುವ ಸೇನೆ ಗಣೇಶೋತ್ಸವ ಸಮಿತಿ ಅಧ್ಯಕ್ಷ ಶಶಿಕಾಂತ್ ನಾಗ್ವೇಕರ್ ತಿಳಿಸಿದ್ದಾರೆ.
    ಈ ಬಾರಿ ಸರಳ ಆಚರಣೆ ಎಂದು ಸರ್ಕಾರ ಹೇಳಿದ್ದರಿಂದ ಮೂರ್ತಿ ಪ್ರತಿಷ್ಠಾಪಿಸಿ ಒಂದು ದಿನದ ಪೂಜೆ ನಡೆಸಿ ಸಾಯಂಕಾಲ ವಿಸರ್ಜಿಸಲು ನಿರ್ಧರಿಸಲಾಗಿತ್ತು. ಮೂರ್ತಿಯ ಎತ್ತರವನ್ನೂ ಕಡಿಮೆಗೊಳಿಸಲಾಗಿದೆ. ಮೆರವಣಿಗೆ, ಪ್ರಸಾದ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ರದ್ದುಗೊಳಿಸಲಾಗಿತ್ತು. ಸಮಿತಿ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಂಘನಿಕೇತನದ ಕೇಶವ ಸ್ಮತಿ ಸಂರ್ವಧನ ಸಮಿತಿ ಕಾರ್ಯದರ್ಶಿ ಸತೀಶ್ ಪ್ರಭು ತಿಳಿಸಿದ್ದಾರೆ.

    ಉಡುಪಿಯ ಕಡಿಯಾಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ರಾಘವೇಂದ್ರ ಕಿಣಿ ಮಾತನಾಡಿ, ನಾವು 7.9 ಅಡಿಯ ಗಣಪತಿಯನ್ನು ಕೂರಿಸುತ್ತಿದ್ದೆವು. ಈ ಬಾರಿ 2.5 ಅಡಿಯ ಗಣಪತಿ ಕೂರಿಸಲಿದ್ದು, ಚಪ್ಪರ ಹಾಕಿ ಉತ್ಸವ ಮಾಡುವುದಿಲ್ಲ. ದೇವಳದ ವಠಾರದಲ್ಲಿ ಆಚರಣೆ ಮಾಡುತ್ತೇವೆ. ಸಾರ್ವಜನಿಕ ಆಚರಣೆ ನಡೆಸದೆ ಕೆಲವರ ಉಪಸ್ಥಿತಿಯಲ್ಲಿ ಒಂದು ದಿನ ಮಾತ್ರ ಮಾಡುತ್ತೇವೆ. ಸಭೆಯಲ್ಲಿ ನಿರ್ಧರಿಸಲಾಗುವುದು ಎಂದು ತಿಳಿಸಿದ್ದಾರೆ.
    ಪರ್ಕಳ ಗಣೇಶೋತ್ಸವ ಸಮಿತಿಯ ಮಹೇಶ್ ಠಾಕೂರ್ ಮಾತನಾಡಿ, ಈ ವರ್ಷ ನಾವು ಸಾರ್ವಜನಿಕ ಗಣೇಶೋತ್ಸವ ಆಚರಣೆ ಮಾಡುವುದಿಲ್ಲ. ಏಳೆಂಟು ಮಂದಿ ಸೀಮಿತ ಸಂಖ್ಯೆಯ ಸಮಿತಿ ಸದಸ್ಯರ ಉಪಸ್ಥಿತಿಯಲ್ಲಿ ಸಣ್ಣ ವಿಗ್ರಹವಿಟ್ಟು ಒಂದು ದಿನ ಆಚರಣೆ ಮಾಡುತ್ತೇವೆ ಎಂದಿದ್ದಾರೆ.

    ಮಾರ್ಗಸೂಚಿಯಲ್ಲಿ ಏನಿದೆ?: ಗಣೇಶ ಚತುರ್ಥಿ ಹಬ್ಬವನ್ನು ಸರಳವಾಗಿ ಮನೆ ಅಥವಾ ದೇವಸ್ಥಾನಗಳಲ್ಲಿ ಆಚರಿಸಬಹುದು. ರಸ್ತೆ, ಗಲ್ಲಿ, ಓಣಿ, ಮೈದಾನಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವಂತಿಲ್ಲ. ಸಾರ್ವಜನಿಕ ನದಿ, ಕೆರೆ, ಕೊಳ, ಬಾವಿ ಮತ್ತು ಕಲ್ಯಾಣಿಗಳಲ್ಲಿ ವಿಸರ್ಜಿಸಬಾರದು. ಮನೆಯಲ್ಲಿ ಪೂಜಿಸಿದ ಮೂರ್ತಿಗಳನ್ನು ಮನೆಯಲ್ಲೇ ವಿಸರ್ಜಿಸಬೇಕು. ಮೆರವಣಿಯನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

    ನಿರ್ಧಾರ ಬದಲಾವಣೆ ಸಾಧ್ಯತೆ: ಹೆಚ್ಚಿನ ಗಣೇಶೋತ್ಸವ ಸಮಿತಿಗಳು ಸರ್ಕಾರದ ನಿರ್ಧಾರವನ್ನು ಆಕ್ಷೇಪಿಸಿದ್ದು, ಸರಳವಾಗಿ ಆಚರಿಸುವುದಾಗಿ ತಿಳಿಸಿವೆ. ಈಗಾಗಲೇ ಮೂರ್ತಿ ತಯಾರಿಸಿರುವುದರಿಂದ ಅದನ್ನು ಪೂಜಿಸಿ ವಿಸರ್ಜಿಸಲು ಅವಕಾಶ ನೀಡಬೇಕು ಎಂದು ಶಾಸಕರು, ಸಚಿವರ ಸಹಿತ ಎಲ್ಲ ಜನಪ್ರತಿನಿಧಿಗಳ ಮೇಲೆ ಒತ್ತಡ ಹೇರುತ್ತಿವೆ.

    ಸರ್ಕಾರ ಪ್ರಕಟಿಸಿರುವ ಮಾರ್ಗಸೂಚಿಯೇ ಅಂತಿಮ. ಜಿಲ್ಲೆಯಲ್ಲಿ ಪ್ರತ್ಯೇಕ ನಿಯಮಾಳಿ ರಚಿಸುವುದಿಲ್ಲ. ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ, ಸಾವು ಹೆಚ್ಚುತ್ತಿರುವ ಸಂದರ್ಭ ಸಾರ್ವಜನಿಕ ಆಚರಣೆಗೆ ಅವಕಾಶವಿಲ್ಲ. ಕೇಂದ್ರ ಸರ್ಕಾರ ಈ ಹಿಂದಿನ ಅನ್‌ಲಾಕ್ ಮಾರ್ಗಸೂಚಿಯಲ್ಲಿ ಸಾರ್ವಜನಿಕ ಸಭೆ, ಸಮಾರಂಭಗಳಿಗೆ ಅವಕಾಶವಿಲ್ಲ ಎಂದು ತಿಳಿಸಿತ್ತು. ಅದನ್ನು ಮೀರಿ, ಗಣಪತಿ ಮೂರ್ತಿಗಳನ್ನು ನಿರ್ಮಿಸಲು ಕೊಟ್ಟಿರುವುದು ಆಯೋಜಕರ ತಪ್ಪು.
    – ಡಾ.ರಾಜೇಂದ್ರ ಕೆ.ವಿ, ಜಿಲ್ಲಾಧಿಕಾರಿ, ದ.ಕ.

    ಕೋವಿಡ್-19 ಕಾರಣದಿಂದಾಗಿ ಗಣೇಶೋತ್ಸವ ಆಚರಣೆಗೆ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಈ ಬಗ್ಗೆ ಉಡುಪಿ ಜಿಲ್ಲಾಡಳಿತವು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಿದೆ.
    – ಜಿ.ಜಗದೀಶ್, ಜಿಲ್ಲಾಧಿಕಾರಿ, ಉಡುಪಿ

    ಗಣೇಶೋತ್ಸವಕ್ಕೆ ಒಂದು ವಾರ ಬಾಕಿ ಇರುವಂತೆ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿರುವುದು ಸರಿಯಲ್ಲ. ಬಾಲಗಂಗಾಧರ ತಿಲಕರ ಕಾಲದಿಂದಲೂ ಸಾರ್ವಜನಿಕರ ಆಚರಣೆಗಳು ನಡೆಯುತ್ತಿದ್ದು, ಏಕಾಏಕಿ ರದ್ದುಗೊಳಿಸಿರುವುದು ತಪ್ಪು. ಒಂದು ದಿನದ ಸರಳ ಆಚರಣೆಗಾದರೂ ಅವಕಾಶ ನೀಡಬೇಕು. ಈ ಕುರಿತು ಧರ್ಮಾದಾಯ ದತ್ತಿ ಇಲಾಖೆ ಸಚಿವರಿ ಕೋಟ ಶ್ರೀನಿವಾಸ ಪೂಜಾರಿ, ಮುಖ್ಯಮಂತ್ರಿ ಯಡಿಯೂರಪ್ಪನವರಿಗೂ ಮನವಿ ಮಾಡಲಾಗುವುದು.
    – ಪ್ರೊ.ಎಂ.ಬಿ.ಪುರಾಣಿಕ್, ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಾಧ್ಯಕ್ಷ, ವಿಹಿಂಪ

    ಈಗಾಗಲೇ ಸಾರ್ವಜನಿಕರ ಆಚರಣೆಯ ಎಲ್ಲ ಮೂರ್ತಿಗಳು ಸಿದ್ಧವಾಗಿವೆ. ಹೆಚ್ಚಿನವು ಹಿಂದಿನ ವರ್ಷಗಳಿಗಿಂತ ಕಡಿಮೆ ಎತ್ತರ ಹೊಂದಿವೆ. ತಯಾರಿಸಿದ ಗಣಪತಿಗಳು ಪೂಜಿಸಲ್ಪಡಲೇ ಬೇಕಿರುವುದರಿಂದ ಸಾಂಕೇತಿಕ ಆಚರಣೆಯಾದರೂ ನಡೆಸಬೇಕಾಗುತ್ತದೆ. ಎಂಸಿಎಫ್, ಎಂಆರ್‌ಪಿಎಲ್‌ನಂತಹ ಸಂಸ್ಥೆಗಳು ಆಚರಣೆಯಿಂದ ವಿಮುಖವಾಗಿವೆ.
    – ರಾಮಚಂದ್ರ ರಾವ್, ಮೂರ್ತಿ ತಯಾರಕರು, ಮಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts