More

    ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಕಡ್ಡಾಯ

    ಬೆಳಗಾವಿ: ನಗರದ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವವರು ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಗಣೇಶ ಮೂರ್ತಿ ತರುವಾಗ ಮತ್ತು ವಿಸರ್ಜಿಸುವ ವೇಳೆ ಯಾವುದೇ ಮೆರವಣಿಗೆಗೆ ಅವಕಾಶ ಇಲ್ಲ ಎಂದು ಎಸಿಪಿ ನಾರಾಯಣ ಭರಮನಿ ಸೂಚಿಸಿದ್ದಾರೆ.

    ನಗರದ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಬುಧವಾರ ಆಯೋಜಿಸಿದ್ದ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳ ಸಭೆಯಲ್ಲಿ ಅವರು ಮಾತನಾಡಿದರು.
    ಗಣೇಶ ಮಂಡಳಿಗಳ ಪದಾಧಿಕಾರಿಗಳು ಮಾತ ನಾಡಿ, ಸರ್ಕಾರ ನೀಡಿರುವ ಮಾರ್ಗಸೂಚಿಯನ್ನು ನಾವು ಪಾಲಿಸುತ್ತೇವೆ. ಬಹಳಷ್ಟು ಗಣೇಶ ಮಂಡಳಿಗಳು ಮಂದಿರಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಮುಂದಾಗಿವೆ. ಹೀಗಾಗಿ ಅವರಿಗೆ ಯಾವುದೇ ರೀತಿ ಅನುಮತಿ ಕೇಳಬೇಡಿ.

    ಇನ್ನು ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಮಂಡಳಿಗಳಿಗೆ ಮಂಟಪ ಹಾಕಲು 10/10 ಅಡಿ ಸ್ಥಳ ಸಾಕಾಗುವುದಿಲ್ಲ. ಹೀಗಾಗಿ 10/15 ಅಡಿ ಸ್ಥಳಕ್ಕೆ ಅನುಮತಿ ನೀಡಬೇಕು ಎಂದು ಕೋರಿದರು.

    ಇದಕ್ಕೆ ಪ್ರತಿಕ್ರಿಯಿಸಿದ ಎಸಿಪಿ ನಾರಾಯಣ ಭರಮನಿ, ರಾಜ್ಯ ಸರ್ಕಾರದ ಹೊಸ ಮಾರ್ಗಸೂಚಿ ಬಂದ ನಂತರ ಮಹಾನಗರ ಪಾಲಿಕೆ ಅಧಿಕಾರಿಗಳ ಜತೆಗೆ ಸಭೆ ನಡೆಸಿ ಚರ್ಚಿಸಲಾಗಿದೆ. ಜನರ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರ ಷರತ್ತು ವಿಧಿಸಿದೆ. ಹೀಗಾಗಿ ಗಣೇಶಮೂರ್ತಿ ತರುವ ಸಂದರ್ಭದಲ್ಲಿ ಮತ್ತು ವಿಸರ್ಜನೆ ಮಾಡುವ ವೇಳೆ ಯಾವುದೇ ರೀತಿಯಲ್ಲಿ ಮೆರವಣಿಗೆ ಮಾಡುವಂತಿಲ್ಲ. ಅದೇ ರೀತಿ ಸಾರ್ವಜನಿಕ ಸ್ಥಳಗಳಲ್ಲಿ ಮಂಟಪ ಹಾಕುವವರು ಕಡ್ಡಾಯವಾಗಿ ಸಂಬಂಧಿಸಿದ ಪೊಲೀಸ್ ಠಾಣೆಗಳಲ್ಲಿ ಅನುಮತಿ ಪಡೆಯಬೇಕು ಎಂದು ಸೂಚಿಸಿದರು.

    ಎಸಿಪಿ ಚಂದ್ರಪ್ಪ, ಎಸಿಪಿ ಮಹಾಂತೇಶ್ವರ ಜಿದ್ದಿ, ಗಣೇಶ ಮಂಡಳಿಯ ಪದಾಧಿಕಾರಿಗಳಾದ ನೇತಾಜಿ ಜಾಧವ, ರಂಜಿತ ಚೌವ್ಹಾಣ ಪಾಟೀಲ, ವಿಕಾಸ ಕಲಘಟಗಿ, ರಮೇಶ ಸೊಂಟಕ್ಕಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts