More

    ಬಸವಾಪಟ್ಟಣ ಈಗ ಗಾಂಧಿ ಗ್ರಾಮ

    ಅರಕಲಗೂಡು : ತಾಲೂಕಿನ 36 ಗ್ರಾಮ ಪಂಚಾಯಿತಿಗಳ ಪೈಕಿ ಬಸವಾಪಟ್ಟಣ ಗ್ರಾಮ ಪಂಚಾಯಿತಿ 2022-2023ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
    ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂಲಸೌಕರ್ಯ ಕಲ್ಪಿಸಲು ಒತ್ತು ನೀಡಿದ್ದು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಿಡಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವ ಪರಿಣಾಮ ರಾಜ್ಯ ಸರ್ಕಾರದಿಂದ ಕೊಡಮಾಡುವ ಗಾಂಧಿ ಗ್ರಾಮ ಪುರಸ್ಕಾರದ ಗರಿ ಮೂಡಿರುವುದು ಪ್ರಶಂಸೆಗೆ ಪಾತ್ರವಾಗಿದೆ.
    ಪಟ್ಟಣ ಪ್ರದೇಶದ ನಾಗರಿಕತೆಗೆ ಹೆಸರಾದ ಗ್ರಾಮದಲ್ಲಿ ಹಲವು ಐತಿಹಾಸಿಕ ದೇವಾಲಯಗಳು, ಬಡಾವಣೆಗಳಿವೆ. ಕೋಟೆಯಲ್ಲಿ ಶ್ರೀ ರಾಮಂದಿರ ಹಾಗೂ ಐತಿಹಾಸಿಕ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನವಿದೆ. ಪ್ರತಿವರ್ಷ ರಥಸಪ್ತಮಿಯಂದ ರಥೋತ್ಸವ, ಜಾತ್ರೆ ಮಹೋತ್ಸವ ಇಲ್ಲಿ ನಡೆಯುತ್ತದೆ. ಬಸವಾಪಟ್ಟಣದ ನಾಲ್ಕು ವಾರ್ಡ್ ಸೇರಿದಂತೆ ಪಂಚಾಯಿತಿ ವ್ಯಾಪ್ತಿ ಏಳು ವಾರ್ಡ್‌ಗಳಿವೆ. ಏಳು ಸಾವಿರ ಜನಸಂಖ್ಯೆ ಹೊಂದಿದೆ. ಗಾಪಂ ಒಟ್ಟು 15 ಸದಸ್ಯರಿದ್ದು ಬಸವಾಪಟ್ಟಣ, ಬೆಟ್ಟಸೋಗೆ, ಕಾನನಕೊಪ್ಪಲು, ಬೇಡರಕೊಪ್ಪಲು, ಮೂಲೇಹೊಸಳ್ಳಿ, ಆಂಜನೇಯ ಹೊಸಳ್ಳಿ ಗ್ರಾಮಗಳು ಸೇರಿವೆ. ಪಂಚಾಯಿತಿ ಕೇಂದ್ರ ಸ್ಥಾನ ಬಸವಾಪಟ್ಟಣದಲ್ಲಿ ಸರ್ಕಾರಿ ಪಿಯು ಕಾಲೇಜು, ಪ್ರಾಥಮಿಕ ಆರೋಗ್ಯ ಕೇಂದ್ರ, ಪ್ರೌಢಶಾಲೆ, ಪ್ರಾಥಮಿಕ ಶಾಲೆಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು, ಬ್ಯಾಂಕ್, ಸರ್ಕಾರಿ ಕಚೇರಿಗಳನ್ನು ಹೊಂದಿದೆ. ಗ್ರಾಮ ಒಂದು ಕಾಲಕ್ಕೆ ಶಿಕ್ಷಣ ಕ್ಷೇತ್ರದಲ್ಲೂ ಅಪಾರ ಹೆಸರು ಸಂಪಾದಿಸಿತ್ತು.
    ಗ್ರಾಪಂ ವ್ಯಾಪ್ತಿ ಸಂಪರ್ಕ ರಸ್ತೆಗಳ ಅಭಿವೃದ್ಧಿ, ಸಮರ್ಪಕ ಕುಡಿಯುವ ನೀರು ಪೂರೈಕೆ, ಚರಂಡಿ ವ್ಯವಸ್ಥೆ ಸೇರಿದಂತೆ ಊರಿನ ಜನರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ಕೆಲಸ ಮಾಡಲಾಗಿದೆ. ಕೆರೆಗಳ ಹೂಳೆತ್ತುವುದು, ಸಣ್ಣ ಕೆರೆ-ಕಟ್ಟೆಗಳ ಪುನಶ್ವೇತನಕ್ಕೆ ವಿಶೇಷ ಒತ್ತು ನೀಡಿದೆ. ನರೇಗಾ ಯೋಜನೆಯಲ್ಲಿ ಶೇ.100 ಸಾಧನೆ, ಪರಿಶಿಷ್ಟ ಜಾತಿ, ಪಂಗಡದ ಶೇ.25 ಅನುದಾನ ಸಂಪೂರ್ಣ ಬಳಕೆ ಅಲ್ಲದೇ, ಅಂಗವಿಕಲರ ಅನುದಾನ ಬಳಕೆಯಲ್ಲಿ ಶೇ.100 ಪ್ರಗತಿ, ಗ್ರಾಪಂ ವ್ಯಾಪ್ತಿಯ ಪ್ರತಿ ಗ್ರಾಮದಲ್ಲೂ ಕುಡಿಯುವ ನೀರು, ಸ್ವಚ್ಛತೆ, ಬೀದಿದೀಪ ನಿರ್ವಹಣೆ, ಪ್ರತಿ ವಾರ್ಡ್‌ಗಳಲ್ಲಿ ವಾರ್ಡ್ ಸಭೆಗಳನ್ನು ನಡೆಸಿ ಅಲ್ಲಿಯ ಸಾರ್ವಜನಿಕರ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದಿಸಿ ಪರಿಹಾರ ಒದಗಿಸಲು ಕ್ರಮ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗಿದೆ.
    ಶಾಲೆಗಳಲ್ಲಿ ಮಕ್ಕಳಸಂತೆ ಆಯೋಜನೆ, ಮಕ್ಕಳ ಹಾಜರಾತಿಗೆ ಜಾಥಾ, ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆರೋಗ್ಯ ತಪಾಸಣೆ, ರಾಷ್ಟ್ರೀಯ ಕಾರ್ಯಕ್ರಮಗಳು, ರಾಷ್ಟ್ರೀಯ ಹಬ್ಬಗಳ ಅಚರಣೆ ಜ್ಞಾನಾಭಿವೃದ್ದಿಗಾಗಿ ಡಿಜಿಟಲ್ ಗ್ರಂಥಾಲಯ ಸ್ಥಾಪನೆ ಹಾಗೂ ಹಲವು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ, ಅಕ್ಷರ ಜ್ಞಾನಭಿವೃದ್ಧಿಗಾಗಿ ಶಿಕ್ಷಣ ಇಲಾಖೆಯೊಂದಿಗೆ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಂಡು ಯಶಸ್ವಿಗೊಳಿಸಲಾಗಿದೆ. ಇವೆಲ್ಲವೂ ಗಾಂಧಿ ಗ್ರಾಮ ಪುರಸ್ಕಾರ ದೊರೆಯಲು ನೆರವಾಗಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts