More

    ಚಿತ್ರ ವಿಮರ್ಶೆ – ‘ಗಂಧದ ಗುಡಿ’ ಒಂದು ಚಿತ್ರವಲ್ಲ, ಅದೊಂದು ಅನುಭವ

    ಚಿತ್ರ: ಗಂಧದ ಗುಡಿ
    ನಿರ್ಮಾಣ: ಅಶ್ವಿನಿ ಪುನೀತ್​ ರಾಜಕುಮಾರ್​
    ನಿರ್ದೇಶನ: ಅಮೋಘವರ್ಷ
    ತಾರಾಗಣ: ಪುನೀತ್​ ರಾಜಕುಮಾರ್​, ಅಮೋಘವರ್ಷ

    | ಚೇತನ್​ ನಾಡಿಗೇರ್​

    ಪುನೀತ್​ ರಾಜಕುಮಾರ್​, ‘ಗಂಧದ ಗುಡಿ’ ಎಂಬ ಚಿತ್ರ ಮಾಡುತ್ತಾರೆ ಎಂದು ಸುದ್ದಿಯಾದಾಗ ಹಲವು ಪ್ರಶ್ನೆಗಳು ಎದ್ದಿದ್ದವು. ಇದು ಕಮರ್ಷಿಯಲ್​ ಚಿತ್ರವೋ ಅಥವಾ ಸಾಕ್ಷ್ಯಚಿತ್ರವೋ? ಇದರಲ್ಲಿ ಪುನೀತ್​ ಏನಾಗಿರುತ್ತಾರೆ? ಈ ಚಿತ್ರವು ಪುನೀತ್​ ಅಭಿಮಾನಿಗಳಿಗೂ ಇಷ್ಟವಾಗುತ್ತದಾ? ಮುಂತಾದ ಹಲವು ಪ್ರಶ್ನೆಗಳು ಕೇಳಿ ಬಂದಿದ್ದವು.

    ಇದನ್ನೂ ಓದಿ: ಇದೊಂದು ಹೊಸ ಫಾರ್ಮಾಟ್​ನ ಸಿನಿಮಾ; ‘ಗಂಧದ ಗುಡಿ’ ಕುರಿತು ಅಮೋಘವರ್ಷ

    ‘ಗಂಧದ ಗುಡಿ’ ಕಮರ್ಷಿಯಲ್​ ಚಿತ್ರವಲ್ಲ. ಆದರೆ, ಪ್ರೇಕ್ಷಕರನ್ನು ಹಿಡಿದಿಡುವ, ನೋಡಿಸಿಕೊಂಡುವ ಎಲ್ಲ ಗುಣಗಳೂ ಇವೆ. ಇನ್ನು, ಇದನ್ನು ಸಾಕ್ಷ್ಯಚಿತ್ರ ಎನ್ನುವುದಕ್ಕಿಂತ ಸಾಕ್ಷ್ಯಕಥಾನಕ ಎಂದು ಹೇಳಬಹುದು. ಇಲ್ಲಿ ಪುನೀತ್​, ಪುನೀತ್​ ಆಗಿಯೇ ಕಾಣಿಸಿಕೊಂಡಿದ್ದಾರೆ. ಕರ್ನಾಟಕದ ಉದ್ದಗಲಕ್ಕೂ ಪ್ರಯಾಣ ಮಾಡಿದ್ದಾರೆ. ನಿಸರ್ಗ ರಮಣೀಯವಾದ ಸ್ಥಳಗಳನ್ನು ನೋಡಿ ತಾವು ಸವಿಯುವುದರ ಜತೆಗೆ, ಪ್ರೇಕ್ಷಕರಿಗೂ ನಮ್ಮ ನಿಸರ್ಗ ಸಂಪತ್ತನ್ನು ತೊರಿಸಿದ್ದಾರೆ. ಸಾಮಾನ್ಯವಾಗಿ, ಪುನೀತ್​ ಚಿತ್ರಗಳೆಂದರೆ ಅವರು ವಿಜೃಂಭಿಸುತ್ತಿದ್ದರು. ಇಲ್ಲಿ ‘ಗಂಧದ ಗುಡಿ’ಯನ್ನು ವಿಜೃಂಭಿಸಿದ್ದಾರೆ.

    ವೈಲ್ಡ್​ಲೈಪ್​ ಫೋಟೋಗ್ರಫಿಯಲ್ಲಿ ದೊಡ್ಡ ಹೆಸರು ಮಾಡಿರುವ ಕನ್ನಡಿಗ ಅಮೋಘವರ್ಷ ಮತ್ತು ಪುನೀತ್ ರಾಜಕುಮಾರ್​ ಇಬ್ಬರೂ ಒಂದು ಪ್ರಯಾಣ ಹೋಗುವ ಮೂಲಕ ಚಿತ್ರ ಶುರುವಾಗುತ್ತದೆ. ನಾಗರಹೊಳೆಯಿಂದ ಆರಂಭವಾಗಿ ಗಾಜನೂರು, ಬಿ.ಆರ್​. ಹಿಲ್ಸ್​, ನೇತ್ರಾಣಿ ದ್ವೀಪ, ವಿಜಯನಗರ, ಮಲೆನಾಡುಗಳನ್ನೆಲ್ಲ ಅಲೆದು ಕಾಳಿ ನದಿ ತಲುಪುತ್ತಾರೆ. ಕಾಳಿ ನದಿಯ ತೀರ್ಥೋದ್ಭವದ ಸಂದರ್ಭದಲ್ಲಿ ಚಿತ್ರ ಅಂತ್ಯವಾಗುತ್ತದೆ. ಈ ಮಧ್ಯೆ, ಕರುನಾಡಿನ ಅದ್ಭುತ ಕಾಡುಗಳನ್ನು, ಹಸುರಿನ ಬೀಡುಗಳನ್ನು ಪ್ರೇಕ್ಷಕರು ಕಣ್ತುಂಬಿಕೊಳ್ಳಲು ಈ ಚಿತ್ರ ನೋಡಲೇಬೇಕು.

    ಇಲ್ಲಿ ಬರೀ ಇಬ್ಬರೂ ಪ್ರಯಾಣ ಮಾಡುವುದಷ್ಟೇ ಅಲ್ಲ, ಹಲವು ಸ್ವಾರಸ್ಯಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ತನಗೆ ಹಾವೆಂದರೆ ಎಷ್ಟು ಭಯ ಎಂದು ಪುನೀತ್​ ಹೇಳಿಕೊಳ್ಳುವುದರ ಜತೆಗೆ, ಆನೆಗಳನ್ನು ಹೇಗೆ ಸೆರೆಹಿಡಿಯಲಾಗುತ್ತದೆ ಎಂದು ಅಮೋಘವರ್ಷ ನೆನಪಿಸಿಕೊಳ್ಳುತ್ತಾರೆ. ಪಕ್ಷಿಗಳು, ಕಪ್ಪೆಗಳು, ಚಿರತೆಗಳ ಬಗ್ಗೆ ಎಲ್ಲ ಮಾತನಾಡುತ್ತಾರೆ ಯಾವುದೋ ಕಾಡಲ್ಲಿ ಪ್ರಕೃತಿಯ ನಡುವೆ ನಿದ್ದೆ, ಫಾರೆಸ್ಟ್​ ಗಾರ್ಡ್​ಗಳ ಜತೆಗೆ ಊಟ, ಡಾ. ರಾಜಕುಮಾರ್​ ಕುಳಿತು ಧ್ಯಾನ ಮಾಡುತ್ತಿದ್ದ ಜಾಗ, ಕಾಳಿನದಿಯಲ್ಲೊಂದು ಈಜು … ಹೀಗೆ ಚಿತ್ರ ಮುಗಿಯುವುದೇ ಗೊತ್ತಾಗುವುದಿಲ್ಲ. ಇದೆಲ್ಲದರ ಜತೆಗೆ ಪುನೀತ್​ ನಡೆದು ಬಂದ ಹಾದಿ, ಡಾ. ರಾಜಕುಮಾರ್​ ಅವರ ಜೀವನ … ಹೀಗೆ ಹಲವು ವಿಷಯಗಳು ಈ ಚಿತ್ರದಲ್ಲಿ ಅಡಕವಾಗಿವೆ.

    ಪ್ರತೀಕ್​ ಶೆಟ್ಟಿ ಛಾಯಾಗ್ರಹಣ, ಅಜನೀಶ್​ ಲೋಕನಾಥ್​ ಅವರ ಸಂಗೀತ ಜತೆಗೆ ಪುನೀತ್​ ರಾಜಕುಮಾರ್​ ಅವರ ಸಹಜ ನಡೆ-ನುಡಿ ಚಿತ್ರದ ಪ್ಲಸ್​ಪಾಯಿಂಟ್​ಗಳು. ಅಲ್ಲಲ್ಲಿ ಒನ್​ಲೈನ್​ರ್​ಗಳನ್ನು ಹೇಳಿ ನಗಿಸುವ ಅವರು, ಹಾವನ್ನು ಕಂಡು ಭಯಪಡುತ್ತಾ, ‘ಸದ್ಯ ಹುಷಾರಾಗಿ ಊರು ತಲುಪಿದರೆ ಸಾಕು. ಮೂರು ಪಿಕ್ಚರ್ ಒಪ್ಪಿಕೊಂಡಿದ್ದೀನಿ. ಹೆಂಡತಿ,-ಮಕ್ಕಳು ಮನೆಯಲ್ಲಿದ್ದಾರೆ’ ಎಂದು ಹೇಳುವಾಗ ಎಲ್ಲರ ಕಣ್ಣಲ್ಲೂ ನೀರು ತರಿಸುತ್ತದೆ.

    ಇದನ್ನೂ ಓದಿ: ಗಂಧದ ಗುಡಿ ನನ್ನ ಹೆಮ್ಮೆ; ಅಪ್ಪು ಜತೆಗಿನ ಟ್ರೆಕಿಂಗ್ ನೆನಪಿಸಿಕೊಂಡ ಅಶ್ವಿನಿ

    ‘ಗಂಧದ ಗುಡಿ’ಯಂತಹ ಪ್ರಯೋಗ ಮಾಡುವುದಕ್ಕೆ ಎಲ್ಲರಿಂದಲೂ ಸಾಧ್ಯವಿಲ್ಲ. ಅದಕ್ಕೊಂಡು ಪ್ರೀತಿ, ಮುಗ್ಧತೆ, ಪ್ರಯೋಗಶೀಲತೆ, ಆಸಕ್ತಿ, ಸಾಹಸಪ್ರವೃತ್ತಿ ಎಲ್ಲವೂ ಬೇಕು. ಅದೆಲ್ಲವೂ ಪುನೀತ್ ಅವರಲ್ಲಿ ಇರುವುದರಿಂದಲೇ ಇಂಥದ್ದೊಂದು ಚಿತ್ರ ಸಾಧ್ಯವಾಗಿದೆ. ಇದೊಂದು ಬರೀ ಚಿತ್ರವಲ್ಲ, ಅನುಭವ. ಈ ಅನುಭವವನ್ನು ಸಕುಟುಂಬ ಸಮೇತರಾಗಿ ನಿಮ್ಮದಾಗಿಸಿಕೊಳ್ಳಿ.

    ವಿಜಯವಾಣಿ ಓದುಗರು ರೇಟಿಂಗ್ ಕೊಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

    https://feedback.pollmonk.co/feedback/?survey=Mzcw&type=1

    ರಾಜ್ಯಾದ್ಯಂತ ‘ಗಂಧದಗುಡಿ’ ಅದ್ಧೂರಿ ಬಿಡುಗಡೆ: ಬೆಳ್ಳಿಪರದೆಯಲ್ಲಿ ಅಪ್ಪು ನೋಡಿ ಭಾವುಕರಾದ ಅಭಿಮಾನಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts