More

    ದಿನ ಮೊದಲೇ ತಲಪಿದ ಗೈಲ್ ಗ್ಯಾಸ್!

    ಮಂಗಳೂರು: ಬಹುನಿರೀಕ್ಷಿತ ಗೈಲ್ ನೈಸರ್ಗಿಕ ಅನಿಲ ಕೊನೆಗೂ ಮಂಗಳೂರಿಗೆ ಒಂದು ದಿನ ಮೊದಲೇ ತಲಪಿದೆ!
    ಸೋಮವಾರ(ನ.23)ರಂದು ಎಂಸಿಎಫ್‌ನಲ್ಲಿರುವ ಸ್ವೀಕರಣಾ ಸ್ಟೇಷನ್‌ಗೆ ಗೈಲ್ ಗ್ಯಾಸ್ ಬರಬಹುದು ಎಂದು ‘ವಿಜಯವಾಣಿ’ ಭಾನುವಾರ ವರದಿ ಮಾಡಿತ್ತು. ಅನಿಲದ ಪಂಪಿಂಗ್ ಇತ್ಯಾದಿ ಸಿದ್ಧತಾ ಪ್ರಕ್ರಿಯೆ ಸಕಾಲದಲ್ಲಿ ಆಗಿರುವುದರಿಂದ ಒಂದು ದಿನ ಮುಂಚಿತವಾಗಿಯೇ ಸುಮಾರು 2 ಕೋಟಿ ರೂ.ನಷ್ಟು ಮೌಲ್ಯದ ಗ್ಯಾಸನ್ನು ಮೊದಲ ದಿನವೇ ಕೊಚ್ಚಿನ್‌ನ ಪೆಟ್ರೋನೆಟ್ ಸಂಸ್ಥೆ ಪಂಪಿಂಗ್ ಮಾಡಿದೆ.

    ಮೊದಲು ನೈಟ್ರಜನ್ ಅನಿಲವನ್ನು ಟೆಸ್ಟಿಂಗ್ ಆಗಿ ಕಳುಹಿಸಿ, ಅದರ ಹಿಂದೆಯೇ ಅನಿಲೀಕೃತ ನೈಸರ್ಗಿಕ ಅನಿಲವನ್ನೂ ಕಳುಹಿಸಲಾಗಿದೆ. ಕೊಚ್ಚಿನ್‌ನಿಂದ 35 ಕೆ.ಜಿ ಒತ್ತಡದಲ್ಲಿ ಗ್ಯಾಸ್ ಪಂಪಿಂಗ್ ಮಾಡಿದ್ದು 5.30ಕ್ಕೆ ಸ್ಥಗಿತಗೊಳಿಸಲಾಗಿದೆ. ಸೋಮವಾರ ಮತ್ತೆ ಪಂಪಿಂಗ್ ಶುರುವಾಗಲಿದೆ.

    ಪ್ರಸ್ತುತ ಗೈಲ್ ಅಧಿಕಾರಿಗಳು ಮಂಗಳೂರಿನ ವ್ಯಾಪ್ತಿಯಲ್ಲಿ ಪೈಪ್‌ಲೈನ್‌ನ ವೆಂಟ್, ಜಾಯಿಂಟ್ ಇತ್ಯಾದಿ ಸಮಗ್ರ ಪರಿಶೀಲಿಸಿದ್ದು ಲೈನ್ ಪೂರ್ತಿ ಚಾರ್ಜ್ ಎಂದು ಪ್ರಕಟಿಸಿದ್ದಾರೆ. ಪ್ರಸ್ತುತ ಮಂಗಳೂರಿನ, ಅದರ ಹಿಂದೆ ಗ್ಯಾಸ್ ಬಂದಿದೆ. ಎಲ್ಲಾ ವೆಂಟ್‌ಗಳೂ ಓಪನ್ ಇದ್ದು, ಎಲ್ಲವನ್ನೂ ಬಂದ್ ಮಾಡಿದ್ದು ಲೈನ್ ಚಾರ್ಜ್ ಆಗಿದೆ. 5 ಕಿಲೋ ಗ್ರಾಂ ಒತ್ತಡದಲ್ಲಿ ಸದ್ಯ ಗ್ಯಾಸ್ ಇದೆ. ಕೊಚ್ಚಿನ್‌ನಿಂದ ಪಂಪ್ ಮಾಡಲಾದ ಗ್ಯಾಸ್ ಬರುತ್ತಲೇ ಇದ್ದು ಸೋಮವಾರ ಬೆಳಗ್ಗೆ 8-10 ಕೆ.ಜಿ ಒತ್ತಡ ತಲಪಲಿದೆ.

    ಎಂಸಿಎಫ್‌ಗೆ ಮೊದಲು
    ಎಂಸಿಎಫ್ ಕಂಪನಿಯಲ್ಲಿ ಸೋಮವಾರ ಮಧ್ಯಾಹ್ನ ಪೂಜೆ ನಡೆಸಿ, ಗ್ಯಾಸ್ ಸ್ವೀಕರಿಸುವ ಕಾರ್ಯಕ್ರಮ ನಡೆಯಲಿದೆ. ಅದರ ಬಳಿಕ ಅಲ್ಲಿನ ಅನಿಲ ಆಧಾರಿತ ಮಷಿನ್‌ಗಳನ್ನು ಪ್ರಾಯೋಗಿಕವಾಗಿ ಚಲಾಯಿಸಿ ನೋಡಲಾಗುವುದು. ಸದ್ಯಕ್ಕೆ 10 ದಿನಕಾಲ ಅವುಗಳನ್ನು ಪರಿಶೀಲಿಸಿ, ಡಿ.1ರಿಂದ ಅಮೋನಿಯಾ ಉತ್ಪಾದನೆ ನಾಫ್ತಾದ ಬದಲು ಗ್ಯಾಸ್‌ನಿಂದಲೇ ಶುರುವಾಗಲಿದೆ.

    ಡಿಸೆಂಬರ್ ಅಂತ್ಯಕ್ಕೆ ಒಎಂಪಿಎಲ್, 2021ರ ಜನವರಿ ಮೊದಲ ವಾರ ಎಂಆರ್‌ಪಿಎಲ್, ಉಡುಪಿಯ ಅದಾನಿ ಗ್ಯಾಸ್‌ಗೆ 2021ರ ಫೆಬ್ರವರಿ ಅಂತ್ಯ ಹಾಗೂ ಕೆಐಒಸಿಎಲ್‌ಗೆ(ಇನ್ನೂ ಒಪ್ಪಂದ ಮಾಡಿಲ್ಲ) ಮಾರ್ಚ್ ವೇಳೆಗೆ ಅನಿಲ ಪೂರೈಕೆಯಾಗುವ ನಿರೀಕ್ಷೆ ಇದೆ.

    ದ್ರವೀಕೃತ ಅನಿಲ ಗ್ಯಾಸ್ ಆಗಿ ಪರಿವರ್ತನೆ
    ವಿದೇಶಗಳಿಂದ ಕೊಚ್ಚಿನ್‌ಗೆ ಹಡಗುಗಳಲ್ಲಿ ಮೈನಸ್ 162 ಡಿಗ್ರಿಯಷ್ಟು ತಂಪಿನಲ್ಲಿ ದ್ರವೀಕೃತ ನೈಸರ್ಗಿಕ ಅನಿಲ ಬರುತ್ತದೆ, ಅದನ್ನು ಬಿಸಿಗೊಳಿಸಿದಾಗ ಇದು 600 ಪಟ್ಟು ಹಿಗ್ಗುತ್ತದೆ. ಹಾಗೆ ಹಿಗ್ಗುವ ಅನಿಲವನ್ನು ಪೈಪ್ ಲೈನ್ ಮೂಲಕ ಕಳುಹಿಸಲಾಗುತ್ತದೆ.

    ಸಾಮಾನ್ಯವಾಗಿ ಎಂಆರ್‌ಪಿಎಲ್, ಎಂಸಿಎಫ್‌ನಂತಹ ಕೈಗಾರಿಕೆಗಳಿಗೆ 40 ಕೆ.ಜಿ ಒತ್ತಡದಲ್ಲಿ ಅನಿಲ ಸಾಕಾಗುತ್ತದೆ. ಸಿಟಿ ಗ್ಯಾಸ್ ಪೂರೈಕೆಗೆ 25 ಕೆಜಿ ಒತ್ತಡ ಸಾಕು. ಮಂಗಳೂರು-ಕೊಚ್ಚಿನ್ ಪೈಪ್‌ಲೈನ್ 140 ಕೆ.ಜಿ ಒತ್ತಡದ ಸಾಮರ್ಥ್ಯ ಹೊಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts