More

    ಗೈಲ್ ಪೈಪ್‌ಲೈನ್‌ಗೆ ಲಾಕ್‌ಡೌನ್ ಅಡ್ಡಿ

    ಭರತ್ ಶೆಟ್ಟಿಗಾರ್ ಮಂಗಳೂರು

    ಕೇರಳದ ಕೊಚ್ಚಿಯಿಂದ ಮಂಗಳೂರಿಗೆ ದ್ರವೀಕೃತ ನೈಸರ್ಗಿಕ ಅನಿಲ (ಎಲ್‌ಎನ್‌ಜಿ) ಪೂರೈಕೆ ಮಾಡುವ 444 ಕಿ.ಮೀ ಉದ್ದದ ಗೈಲ್ ಪೈಪ್‌ಲೈನ್ ಕಾಮಗಾರಿಗೆ ಕರೊನಾ ಲಾಕ್‌ಡೌನ್ ಅಡ್ಡಿಯಾಗಿದ್ದು, ಕಾಮಗಾರಿ ಮತ್ತೆ ವಿಳಂಬವಾಗಿದೆ.
    2009ರಲ್ಲಿ ಆರಂಭವಾದ ಕಾಮಗಾರಿ ಹಲವು ಕಾರಣಗಳಿಗಾಗಿ ವಿಳಂಬವಾಗಿ, ಕೆಲವರ್ಷಗಳ ಹಿಂದೆ ವೇಗ ಪಡೆದಿತ್ತು. ಭಾರತೀಯ ಅನಿಲ ಪ್ರಾಧಿಕಾರ(ಗೈಲ್ ಇಂಡಿಯಾ)ದ ಅಧಿಕಾರಿಗಳು ಈ ಹಿಂದೆ ನೀಡಿದ ಮಾಹಿತಿಯಂತೆ ಮೇ ಮೊದಲ ವಾರದಲ್ಲಿ ಮಂಗಳೂರಿನ ಎಂಸಿಎಫ್‌ಗೆ ಅನಿಲ ಪೂರೈಕೆ ಆರಂಭವಾಗಬೇಕಿತ್ತು. ಆದರೆ ಕಾಸರಗೋಡಿನ ಚಂದ್ರಗಿರಿಯ ನದಿಗಡ್ಡವಾಗಿ ಪೈಪ್‌ಲೈನ್ ದಾಟಿಸುವ ಕೆಲಸ ಇನ್ನೂ ಬಾಕಿಯಿದೆ. ಕರೊನಾ ಪ್ರಕರಣಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲಾಡಳಿತ ಕೆಲವು ಕಠಿಣ ನಿರ್ಧಾರಗಳನ್ನು ಕೈಗೊಂಡಿದ್ದು, ಇದರಿಂದ ಹಿಂದಿನಂತೆ ನಿರಂತರ ಕಾಮಗಾರಿ ನಡೆಸಲು ಸಾಧ್ಯವಾಗುತ್ತಿಲ್ಲ. ದಿನಕ್ಕೆ ಮೂರು ಶಿಫ್ಟ್‌ನ ಬದಲಾಗಿ ಈಗ ಒಂದೇ ಶಿಫ್ಟ್‌ನಲ್ಲಿ ಕೆಲಸ ನಡೆಯುತ್ತಿದೆ.

    ದ.ಕ. ಅನುಮತಿ: ದ.ಕ ಜಿಲ್ಲೆಯಲ್ಲಿ ಪೈಪ್ ಅಳವಡಿಕೆ ಕೆಲಸ ಪೂರ್ಣಗೊಂಡಿದ್ದು, ಬಂಟ್ವಾಳ ತಾಲೂಕಿನ ಪಜೀರು ಮತ್ತು ಮುಡಿಪು, ಮಂಗಳೂರು ತಾಲೂಕಿನ ಇನೋಳಿ, ಅರ್ಕುಳ, ಮಳವೂರು, ಬೈಕಂಪಾಡಿ ಗ್ರಾಮದಲ್ಲಿ ಕಂದಕ ಮುಚ್ಚುವುದು ಸೇರಿದಂತೆ ಕೆಲವು ಕೆಲಸಗಳು ಬಾಕಿ ಇವೆ. ಮುಂಗಾರಿಗೆ ಮುನ್ನ ಈ ಕಾಮಗಾರಿಗಳು ಮುಗಿಯಬೇಕಾಗಿರುವುದರಿಂದ ದ.ಕ. ಜಿಲ್ಲಾಡಳಿತ ಗೈಲ್ ಸಂಸ್ಥೆಗೆ ಷರತ್ತು ಬದ್ಧ ಅನುಮತಿ ನೀಡಿದೆ. ಕೆಲಸದ ಸ್ಥಳದಲ್ಲಿ 10 ಕಾರ್ಮಿಕರಿಗೆ ಮಾತ್ರ ಅವಕಾಶವಿದ್ದು, ಕಾರ್ಮಿಕರು ಆರೋಗ್ಯವಂತರಾಗಿರಬೇಕು. ಕಾಮಗಾರಿ ಸ್ಥಳದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಜಿಲ್ಲಾಡಳಿತ ಸೂಚಿಸಿದೆ.

    ಮೇ 15ಕ್ಕೆ ಪೂರ್ಣ: ದ.ಕ. ಜಿಲ್ಲೆಯಲ್ಲಿ 35 ಕಿ.ಮೀ. ಪೈಪ್‌ಲೈನ್ ಕಾಮಗಾರಿಯ ಪೈಕಿ ಅತೀ ಕಠಿಣವಾಗಿದ್ದ ಇನೋಳಿ ಹಾಗೂ ಅರ್ಕುಳ ಮಧ್ಯೆ ನೇತ್ರಾವತಿ ನದಿಯನ್ನು ದಾಟಿಸುವ ಕೆಲಸ ಈಗಾಗಲೇ ಪೂರ್ಣಗೊಂಡಿದೆ. ಜತೆಗೆ ಅರ್ಕುಳದಲ್ಲಿ ಪೈಪ್‌ಲೈನ್ ಗ್ಯಾಸ್‌ನ್ನು ಎಂಸಿಎಫ್ ಟರ್ಮಿನಲ್‌ಗೆ ಪಂಪ್ ಮಾಡುವುದಕ್ಕೆ ಬೇಕಾದ ಎಲ್‌ಎನ್‌ಜಿ ಟರ್ಮಿನಲ್ ಕಾಮಗಾರಿಯೂ ಕೊನೇ ಹಂತಕ್ಕೆ ಬಂದಿದೆ. ತಿಂಗಳ ಕಾಲ ಸ್ಥಗಿತಗೊಂಡಿದ್ದ ಕಾಮಗಾರಿ ಮತ್ತೆ ಆರಂಭವಾಗಿರುವುದರಿಂದ ಮೇ 15ರೊಳಗೆ ಮಂಗಳೂರು ಸೆಕ್ಷನ್‌ನ ಪೈಪ್‌ಲೈನ್ ಕೆಲಸ ಸಂಪೂರ್ಣವಾಗಿ ಪ್ರಿ ಕಮಿಷನಿಂಗ್ ಹಂತಕ್ಕೆ ಬರುವ ಸಾಧ್ಯತೆಯಿದೆ ಎಂದು ಗೈಲ್ ಅಧಿಕಾರಿಗಳು ತಿಳಿಸಿದ್ದಾರೆ.

    ಚಂದ್ರಗಿರಿಯಲ್ಲಿ 45 ದಿನದ ಕೆಲಸ ಬಾಕಿ: ನೇತ್ರಾವತಿ ನದಿ ದಾಟಿಸಿದ ಬಳಿಕ ಚಂದ್ರಗಿರಿಯಲ್ಲಿ ಪೈಪ್ ಕ್ರಾಸ್ ಮಾಡಿಸುವುದು ದೊಡ್ಡ ಸವಾಲು. ಎರಡೂ ಬದಿಯಲ್ಲೂ ಮನೆಗಳ ಸಂಖ್ಯೆ ಹೆಚ್ಚಿದೆ ಹಾಗೂ ಕಡಿದಾದ ಗುಡ್ಡಗಳಿವೆ. ಇಲ್ಲಿ ಡ್ರಿಲ್ಲಿಂಗ್ ಮೂಲಕ ಒಂದು ಗುಡ್ಡದಿಂದ ಇನ್ನೊಂದು ಗುಡ್ಡಕ್ಕೆ ಪೈಪ್ ಕ್ರಾಸ್ ಮಾಡಿಸುವ ಕೆಲಸ ಪ್ರಗತಿಯಲ್ಲಿದೆ. ಚಂದ್ರಗಿರಿಯಲ್ಲಿ ಇನ್ನೂ 45 ದಿನದ ಕೆಲಸ ಬಾಕಿಯಿದ್ದು, ಮೇ 15ಕ್ಕೆ ಲಾಕ್‌ಡೌನ್ ಸಂಪೂರ್ಣವಾಗಿ ತೆರವಾದರೆ ಅಲ್ಲಿಂದ ಒಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಅದರಂತೆ ಜೂನ್ ಅಂತ್ಯ ಅಥವಾ ಜುಲೈ ಮಧ್ಯಂತರದ ವೇಳೆಗೆ ಮಂಗಳೂರಿಗೆ ಅನಿಲ ಪೂರೈಕೆಯಾಗುವ ಸಾಧ್ಯತೆ ಇದೆ.

    ರಾಷ್ಟ್ರೀಯ ಪ್ರಾಮುಖ್ಯತೆಯುಳ್ಳ ಯೋಜನೆಯಾಗಿರುವುದರಿಂದ ಗೈಲ್ ಇಂಡಿಯಾ ಸಂಸ್ಥೆಯ ಮನವಿ ಮೇರೆಗೆ, ಕರ್ನಾಟಕ ಸಾಂಕ್ರಾಮಿಕ ರೋಗಗಳು/ಕೋವಿಡ್-19 ರೆಗ್ಯುಲೇಶನ್ ಅಧಿಸೂಚನೆಯ ಪರಿಷ್ಕೃತ ಆದೇಶದಂತೆ ಷರತ್ತುಬದ್ಧ ಅನುಮತಿ ನೀಡಲಾಗಿದೆ.
    – ಸಿಂಧೂ ಬಿ.ರೂಪೇಶ್, ದ.ಕ. ಜಿಲ್ಲಾಧಿಕಾರಿ

    ಚಂದ್ರಗಿರಿಯ ಕೆಲಸ ಮಾತ್ರವೇ ಬಾಕಿಯಾಗಿದ್ದು, ಕೊವಿಡ್-19 ಬಾಧಿಸದೆ ಇರುತ್ತಿದ್ದರೆ ಈ ವೇಳೆಗಾಗಲೇ ಅನಿಲ ಪೂರೈಕೆ ಆರಂಭವಾಗುತಿತ್ತು. ದ.ಕ ಜಿಲ್ಲೆಯಲ್ಲೂ ಪೈಪ್‌ಲೈನ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಮೇ 15ರ ವೇಳೆಗೆ ಪ್ರಿ-ಕಮಿಷನಿಂಗ್ ಹಂತಕ್ಕೆ ಬರಲಿದೆ.
    – ಟೋನಿ ಮ್ಯಾಥ್ಯೂ, ಜನರಲ್ ಮ್ಯಾನೇಜರ್, ಗೈಲ್ ಇಂಡಿಯಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts