More

    ಕೊರೊನಾ ವೈರಸ್ ಹಾವಳಿಯ ನಡುವೆ ಆವರಿಸಿತು ಹೋಳಿಯ ರಂಗು..

    ಗದಗ: ಗದಗ-ಬೆಟಗೇರಿ ಅವಳಿನಗರದ ವಿವಿಧೆಡೆ ಸೋಮವಾರ ರತಿ-ಕಾಮರ ಮೂರ್ತಿಗಳು ಪ್ರತಿಷ್ಠಾಪನೆಗೊಂಡಿವೆ. ಮಾ. 13ರಂದು ರಂಗಪಂಚಮಿ ಅಂಗವಾಗಿ ಬಣ್ಣದೋಕುಳಿ ಜರುಗಲಿದ್ದು, ಮಧ್ಯಾಹ್ನ 12 ಗಂಟೆಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಕಾಮಣ್ಣ-ರತಿ ಮೂರ್ತಿಗಳ ಭವ್ಯ ಮೆರವಣಿಗೆ ಜರುಗಲಿದೆ.

    ಕೊರೊನಾ ವೈರಸ್ ಹಾವಳಿಯ ನಡುವೆಯೂ ಹೋಳಿ ಹುಣ್ಣಿಮೆ ರಂಗು ಪಡೆಯುತ್ತಿದ್ದು, ನಗರದ ವಿವಿಧೆಡೆ ಪ್ರತಿಷ್ಠಾಪಿಸಲಾಗಿರುವ ಕಾಮಣ್ಣ-ರತಿ ಮೂರ್ತಿಗಳ ಎದುರು ಯುವಕರು ಸೇರಿ ಮಕ್ಕಳು ಹಲಗೆ ಬಾರಿಸುತ್ತ ಸಂಭ್ರಮಿಸುತ್ತಿ್ತ್ದಾರೆ. ಹುಣ್ಣಿಮೆಯ ದಿನದಿಂದ ನಿತ್ಯ ಕಾಮ-ರತಿ ಮೂರ್ತಿಗಳಿಗೆ ವಿಶೇಷ ಪೂಜೆ ನಡೆಯುತ್ತಿದೆ.

    ಹೋಳಿ ಹುಣ್ಣಿಮೆಯ ದಿನದಂದು ಅವಳಿನಗರದ ವಿವಿಧೆಡೆ ಮಣ್ಣಿನ ಹಾಗೂ ಕಟ್ಟಿಗೆಯ ಕಾಮ-ರತಿ ಮೂರ್ತಿಗಳನ್ನು ಹಲವು ದಶಕಗಳಿಂದ ಪ್ರತಿಷ್ಠಾಪಿಸಿಕೊಂಡು ಬರಲಾಗುತ್ತಿದೆ. ನಗರದ ಕಿಲ್ಲಾ ಓಣಿ, ವೀರನಾರಾಯಣ ದೇವಸ್ಥಾನದ ಹತ್ತಿರ, ಖಾನತೋಟ, ಮದ್ಲಿಓಣಿ, ಗಂಗಾಪುರ ಪೇಟೆ, ನರಿಬಾವಿ ಓಣಿ, ಹಾಳದಿಬ್ಬ ಓಣಿ, ಒಕ್ಕಲಗೇರಿ ಓಣಿ ಸೇರಿ ಅವಳಿನಗರದ 18 ಕಡೆ ಕಾಮ-ರತಿಯರ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ನಗರದ ಕಿಲ್ಲಾ ಚಂದ್ರಸಾಲಿ ಸರ್ಕಾರಿ ಕಾಮ-ರತಿ ಮೂರ್ತಿಗೆ 155 ವರ್ಷ, ಅಯ್ಯಪ್ಪಜ್ಜ ರಸ್ತೆ ಮೇರವಾಡೆ ಕಾಮ-ರತಿ ಮೂರ್ತಿಗೆ 80 ವರ್ಷ, ನಾಲ್ವಾಡಗಲ್ಲಿಯ ಟೆಂಗಿನಕಾಯಿ ಕಾಮ-ರತಿ ಉತ್ಸವಕ್ಕೆ 93 ವರ್ಷಗಳ ಇತಿಹಾಸವಿದೆ. ಖಾನತೋಟದಲ್ಲಿ 27 ಅಡಿ ಎತ್ತರದ ರತಿಕಾಮಣ್ಣ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.

    ರಂಗಪಂಚಮಿ ಭರ್ಜರಿ ಸಿದ್ಧತೆ: ಗದಗ-ಬೆಟಗೇರಿ ಅವಳಿನಗರದಲ್ಲಿ ಸೋಮವಾರ ರಂಗಪಂಚಮಿಯಿದ್ದು ಬಣ್ಣದೋಕುಳಿಗೆ ಯುವಜನರು ಸಜ್ಜಾಗಿದ್ದಾರೆ. ರಂಗಪಂಚಮಿ ನಿಮಿತ್ತ ಬಣ್ಣದಂಗಡಿಗಳಲ್ಲಿ ಬಣ್ಣಗಳನ್ನು ಇಡಲಾಗಿದೆ. ಬಣ್ಣ ಆಡಲು ಬಳಸುವ ಪಿಚಕಾರಿಗಳು, ಮುಖವಾಡಗಳು, ಬಣ್ಣದ ಪೊಟ್ಟಣಗಳು ಸೇರಿ ರಂಗಪಂಚಮಿಗೆ ಅಗತ್ಯ ಸಾಮಗ್ರಿ ಮಾರುಕಟ್ಟೆಯಲ್ಲಿ ಲಭ್ಯವಿವೆ. ಯುವಕರು, ಮಕ್ಕಳು ಸೇರಿ ಹಿರಿಯರು ಕೂಡ ಹಲಗೆ ಬಾರಿಸುತ್ತ ಓಣಿಯಲ್ಲಿ ಸಂಭ್ರಮ ಕಳೆಗಟ್ಟುವಂತೆ ಮಾಡುತ್ತಿದ್ದಾರೆ. ಬಾಯಿ ಬಡಿದುಕೊಳ್ಳುತ್ತ ಮನೆ, ಅಂಗಡಿಗಳಿಗೆ ತೆರಳಿ ಬಣ್ಣದಾಟಕ್ಕೆ ದೇಣಿಗೆ ಸಂಗ್ರಹಿಸುತ್ತಿದ್ದಾರೆ. ಇನ್ನು ಶಾಂತಿ, ಸುವ್ಯವಸ್ಥೆಗಾಗಿ ಜಿಲ್ಲಾ ಪೊಲೀಸ್ ಇಲಾಖೆ ಎಲ್ಲೆಡೆ ಕಟ್ಟೆಚ್ಚರ ವಹಿಸಿದೆ. ಮದ್ಯ ಮಾರಾಟ ನಿಷೇಧಿಸಲಾಗಿದೆ.

    ವ್ಯಾಪಾರದಲ್ಲಿ ಇಳಿಮುಖ: ಈ ವರ್ಷದ ಹೋಳಿ ಹಬ್ಬದ ಸಂಭ್ರಮಕ್ಕೆ ಕರೊನಾ ವೈರಸ್ ಹಾವಳಿ ಕಾಡುತ್ತಿದ್ದು, ಹೀಗಾಗಿ ಕೊಂಚ ವ್ಯಾಪಾರವೂ ನಿಧಾನಗತಿಯಲ್ಲಿದೆ. ಕಳೆದ ವರ್ಷ ರತಿ ಕಾಮಣ್ಣರನ್ನು ಪ್ರತಿಷ್ಠಾಪಿಸುವುದಕ್ಕೂ ಮುನ್ನ ಮಕ್ಕಳು ಪಿಚಕಾರಿ, ಮುಖವಾಡ ಸೇರಿ ಬಣ್ಣದಾಟಕ್ಕೆ ಸಂಬಂಧಿಸಿದ ಇತರೆ ವಸ್ತುಗಳನ್ನು ಖರೀದಿಸುತ್ತಿದ್ದರು. ಈ ಸಲ ಕರೊನಾ ವೈರಸ್ ಭಯ ಜನರಲ್ಲಿ ಆವರಿಸಿದ್ದರಿಂದ ವ್ಯಾಪಾರದಲ್ಲಿ ಇಳಿಕೆಯಾಗುವ ಲಕ್ಷಣಗಳಿವೆ ಎಂದು ವ್ಯಾಪಾರಸ್ಥರೊಬ್ಬರು ತಿಳಿಸಿದರು.

    ಹೋಳಿ ಸಂಭ್ರಮ ಕಸಿದ ಕರೊನಾ: ರೋಣ: ಕರೊನಾ ರೋಗ ಭೀತಿ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಈ ಬಾರಿ ಹೋಳಿ ಆಚರಣೆಯ ರಂಗು ಕಳೆದುಕೊಂಡಿದೆ. ಮಾ.10 ರಂದು ಬಣ್ಣದಾಟ ನಿಗದಿಯಾಗಿದೆ. ಆದರೆ, ಪ್ರಾಣಕ್ಕೆ ಮಾರಕವಾಗಬಲ್ಲ ಸೋಂಕಿನ ಭಯದ ಹಿನ್ನೆಲೆಯಲ್ಲಿ ಹಬ್ಬ ಆಚರಿಸಲು ಬಹಳ ಜನ ಮುಂದೆ ಬರುತ್ತಿಲ್ಲ. ಪ್ರವಾಸದ ನೆಪವೊಡ್ಡಿ ಬೇರೆ, ಬೇರೆ ಊರುಗಳಿಗೆ ತೆರಳುತ್ತಿದ್ದಾರೆ.

    ಮಾರುಕಟ್ಟೆಯಲ್ಲಿ ನಾನಾ ರೀತಿಯ ಪರಿಕರಗಳು, ಬಣ್ಣಗಳು, ಹಲಗೆಗಗಳು ಬಂದಿವೆ, ಆದರೆ, ಹಿಂದಿನ ವರ್ಷಕ್ಕೆ ಹೋಲಿಸಿದರೆ ಹೆಚ್ಚಿನ ಬೇಡಿಕೆ ಇಲ್ಲ, ಪರಿಣಾಮ ವ್ಯಾಪಾರಿಗಳು ಕಂಗಾಲಾಗಿದ್ದಾರೆ, ಮಕ್ಕಳು, ಯುವಕರು ಬಳಸುವ ಪಿಚಕಾರಿ, ಮುಖವಾಡ, ಬಣ್ಣದ ಪ್ಯಾಕೆಟ್ ಮಾರುಕಟ್ಟೆಯಲ್ಲಿ ಬಿಕರಿಯಾಗದೆ ಉಳಿದಿವೆ. ಪ್ರತಿ ವರ್ಷ ಹೋಳಿಯಾಟಕ್ಕೆಂದೇ ತರಿಸಲಾದ ಸಾಮಗ್ರಿಗಳ ಮಾರಾಟದಿಂದ ಲಕ್ಷಕ್ಕಿಂತ ಹೆಚ್ಚು ವ್ಯಾಪಾರವಾಗುತ್ತಿತ್ತು, ಈ ಬಾರಿ ಹೋಳಿಯಾಟಕ್ಕೆ ಬಹಳ ಜನ ಹಿಂಜರಿಯುತ್ತಿರುವುದರಿಂದ ವ್ಯಾಪಾರ ಸರಿಯಾಗಿ ನಡೆಯುತ್ತಿಲ್ಲ ಎಂದು ವ್ಯಾಪಾರಸ್ಥರು ಬೇಸರ ವ್ಯಕ್ತಪಡಿಸಿದರು.

    ಪರಿಸರಕ್ಕೆ ಹಾನಿಯಾಗದಿರಲಿ

    ನರಗುಂದ: ಅವೈಜ್ಞಾನಿಕ ಕಾಮ ದಹನ ಹಾಗೂ ಬಣ್ಣದಾಟದಿಂದ ಪರಿಸರಕ್ಕೆ ಸಾಕಷ್ಟು ಹಾನಿಯುಂಟಾಗುತ್ತದೆ. ಮನುಷ್ಯನ ಆರೋಗ್ಯವೂ ಹದಗೆಡುವುದರಿಂದ ಪ್ರತಿಯೊಬ್ಬರೂ ಪರಿಸರಕ್ಕೆ ಹಾನಿಯಾಗದಂತೆ ಹೋಳಿ ಹುಣ್ಣಿಮೆ ಆಚರಿಸಬೇಕು ಎಂದು ಪರಿಸರ ರಕ್ಷಣಾ ವೇದಿಕೆ ತಾಲೂಕಾಧ್ಯಕ್ಷ ಜಗದೀಶ ಗೊಂಡಬಾಳ ತಿಳಿಸಿದ್ದಾರೆ.

    ಈ ಕುರಿತು ಪ್ರಕಟಣೆ ನೀಡಿರುವ ಅವರು, ನರಗುಂದ ತಾಲೂಕಿನ ಬಹುತೇಕ ಪ್ರದೇಶಗಳಲ್ಲಿ ಕಾಮದಹನ ಮಾಡುವಾಗ ಟೈರ್, ಪ್ಲಾಸ್ಟಿಕ್ ಚೀಲ, ಪೈಪ್ ಮತ್ತು ಬಟ್ಟೆಗಳನ್ನು ಸುಡಲಾಗುತ್ತಿದೆ. ಮತ್ತೆ ಕೆಲವು ಪ್ರದೇಶಗಳಲ್ಲಿ ಮಾಡುವ ಕಾಮ ದಹನದಿಂದಾಗಿ ಆ ಪ್ರದೇಶಗಳಲ್ಲಿನ ಗೀಡ, ಮರಗಳ ಟೊಂಗೆ ಹಾಗೂ ವಿದ್ಯುತ್ ತಂತಿಗಳು ಸುಡುತ್ತವೆ. ಯುವಕರು ರಾಸಾಯನಿಕಯುಕ್ತ ಬಣ್ಣದ ಓಕುಳಿ ಆಡುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.

    ಮದ್ಯ ಸೇವನೆ ಮಾಡಿ ಸಾರ್ವಜನಿಕ ಪ್ರದೇಶಗಳಲ್ಲಿ ಅವಾಚ್ಯ ಪದಗಳನ್ನು ಹಾಡುವುದರಿಂದ ನಮ್ಮ ಭಾರತೀಯ ಸಂಸ್ಕೃತಿಗೆ ಧಕ್ಕೆ ಮಾಡಿದಂತಾಗುತ್ತದೆ. ಆದ್ದರಿಂದ ತಾಲೂಕಿನ ಎಲ್ಲ ಸಾರ್ವಜನಿಕರು ಸಾಧ್ಯವಾದಷ್ಟು ಮಟ್ಟಿಗೆ ನಮ್ಮ ಭಾರತಿಯ ಸಂಸ್ಕೃತಿ, ಆಚಾರ, ವಿಚಾರ ಮತ್ತು ಪರಿಸರಕ್ಕೆ ಹಾನಿಯಾಗದಂತೆ ಹೋಳಿ ಹುಣ್ಣಿಮೆಯನ್ನು ಆಚರಿಸಬೇಕೆಂದು ತಿಳಿಸಿದ್ದಾರೆ.

    ಓಕುಳಿಯಲ್ಲಿ ಮಿಂದೆದ್ದ ಜನ: ಲಕ್ಷ್ಮೇಶ್ವರ ತಾಲೂಕಿನ ಬಾಲೇಹೊಸೂರ, ಅಡರಕಟ್ಟಿ, ಗೋವನಾಳ, ರಾಮಗೇರಿ, ಆದರಳ್ಳಿ, ಉಳ್ಳಟ್ಟಿ ಗ್ರಾಮಗಳಲ್ಲಿ ಸೋಮವಾರ ರಂಗಿ ನೋಕಳಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಬೆಳಗ್ಗೆಯಿಂದಲೇ ಮಕ್ಕಳು ಹಲಗೆ ಬಾರಿಸುತ್ತಾ ಪರಸ್ಪರ ಬಣ್ಣ ಎರಚಿ ರಂಗಿನೋಕುಳಿಯಲ್ಲಿ ಮಿಂದೆದ್ದರು. ಉರಿಬಿಸಿಲು, ಕರೊನಾ ವೈರಸ್ ಭೀತಿ ಯಾವುದನ್ನೂ ಲೆಕ್ಕಿಸದೆ ಗಲ್ಲಿಗಲ್ಲಿ ತಿರುಗುತ್ತಾ ಮಕ್ಕಳು ಸಾಂಪ್ರದಾಯಿಕ ಹೋಳಿ ಹಬ್ಬ ಆಚರಿಸಿದರು.

    ಮಕ್ಕಳ ಆಹಾರದಲ್ಲೂ ಅಕ್ರಮ ವಾರ್ಷಿಕ 1,000 ಕೋಟಿ ರೂಪಾಯಿ ಸೋರಿಕೆ; ಮಹಿಳಾ-ಮಕ್ಕಳ ಕಲ್ಯಾಣ ಸಮಿತಿ ವರದಿ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts