More

    ಯೋಧ ಹನುಮಂತರಾವ್ ಪಂಚಭೂತಗಳಲ್ಲಿ ಲೀನ; ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

    ಬೆಳಗಾವಿ: ಮಧ್ಯಪ್ರದೇಶದ ಗ್ವಾಲಿಯರ್ ಸಮೀಪ ವಾಯುಪಡೆಯ ಯುದ್ಧ ವಿಮಾನಗಳ ಪತನ ವೇಳೆ ಹುತಾತ್ಮರಾದ ಪೈಲಟ್, ವಿಂಗ್ ಕಮಾಂಡರ್ ಬೆಳಗಾವಿ ಗಣೇಶಪುರದ ಹನುಮಂತರಾವ್ ರೇವಣಸಿದ್ದಪ್ಪ ಸಾರಥಿ (34) ಅವರ ಅಂತ್ಯಕ್ರಿಯೆ ಭಾನುವಾರ ತಾಲೂಕಿನ ಬೆನಕನಹಳ್ಳಿಯಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿತು. ಹನುಮಂತರಾವ್ ಸಾರಥಿ ಪಂಚಭೂತಗಳಲ್ಲಿ ಲೀನರಾದರು. ವಾಯುಸೇನೆಯ ಅಧಿಕಾರಿಗಳು, ಗಣ್ಯರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

    ದೆಹಲಿಯಿಂದ ಯೋಧನ ಪಾರ್ಥೀವ ಶರೀರವನ್ನು ಸೇನೆಯ ವಿಶೇಷ ವಿಮಾನದ ಮೂಲಕ ಭಾನುವಾರ ಮಧ್ಯಾಹ್ನ 12.30 ಗಂಟೆಗೆ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ತರಲಾಯಿತು. ಅಲ್ಲಿ ಪಾರ್ಥಿವ ಶರೀರಕ್ಕೆ ವಾಯುಸೇನೆ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿ ಗೌರವ ಸಲ್ಲಿಸಿದರು. ಬಳಿಕ ಅವರ ನಿವಾಸವಾದ ಗಣೇಶಪುರಕ್ಕೆ ತಂದು, ಕೆಲ ಹೊತ್ತು ಸಾರ್ವಜನಿಕರ ದರ್ಶನಕ್ಕೆ ಇಡಲಾಯಿತು. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಂಸದೆ ಮಂಗಲ ಅಂಗಡಿ, ಸಚಿವೆ ಶಶಿಕಲಾ ಜೊಲ್ಲೆ, ಮಾಜಿ ಶಾಸಕ ಸಂಜಯ ಪಾಟೀಲ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅಂತಿಮ ದರ್ಶನ ಪಡೆದು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

    ಮನೆಯಲ್ಲಿ ಧಾರ್ಮಿಕ ವಿಧಿ-ವಿಧಾನ ಸಲ್ಲಿಸಿದ ಬಳಿಕ ಗಣೇಶಪುರ ಬೆನಕನಹಳ್ಳಿಯ ಸ್ಮಶಾನದವರೆಗೆ ಹುತಾತ್ಮ ಯೋಧನ ಅಂತಿಮಯಾತ್ರೆ ನಡೆಯಿತು. ಬೆನಕನಳ್ಳಿಯಲ್ಲಿ ವಾಯುಪಡೆ ಸೇನಾಧಿಕಾರಿ ಅವರಿಂದ ಮೂರು ಸುತ್ತಿನ ಗುಂಡು ಹಾರಿಸುವ ಮೂಲಕ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಿತು. ಈ ವೇಳೆ ವಾಯುಸೇನೆ ಅಧಿಕಾರಿಗಳು ರಾಷ್ಟ್ರಧ್ವಜವನ್ನು ಕುಟುಂಬಕ್ಕೆ ಸಮರ್ಪಿಸಿದರು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಅಂತಿಮಯಾತ್ರೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು.

    ಸಾಂಬ್ರಾ ವಿಮಾನ ನಿಲ್ದಾಣದಿಂದ ಯೋಧನ ಪಾರ್ಥಿವ ಶರೀರ ತರುವ ವೇಳೆ ಹಿಂಡಲಗಾದ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಿಂದ ಗಣೇಶಪುರದ ವರೆಗೆ ಸ್ಥಳೀಯರು ರಸ್ತೆ ಶುಚಿಗೊಳಿಸಿ, ರಂಗೋಲಿ ಬಿಡಿಸಿ ಅಗಲಿದ ಯೋಧನಿಗೆ ಗೌರವ ಸಲ್ಲಿಸಿದರು. ರಸ್ತೆಯುದ್ದಕ್ಕೂ ರಾಷ್ಟ್ರಭಕ್ತಿ ಗೀತೆಗಳು ಅನುರಣಿಸಿದವು. ವೀರ್ ಜವಾನ್ ಹನುಮಂತರಾವ್ ಅಮರ ರಹೇ ಘೋಷಣೆ ಕೂಗಿದರು. ಅದಕ್ಕೂ ಮೊದಲು ಸಾಂಭ್ರಾ ವಿಮಾನ ನಿಲ್ದಾಣದಲ್ಲಿ ಶಾಸಕ ಅನಿಲ ಬೆನಕೆ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಪೊಲೀಸ್ ಆಯುಕ್ತ ಡಾ. ಎಂ.ಬಿ.ಬೋರಲಿಂಗಯ್ಯ, ಜಿಪಂ ಸಿಇಒ ಎಚ್.ವಿ. ದರ್ಶನ, ಮತ್ತಿತರ ಗಣ್ಯರು ಪುಷ್ಪಗುಚ್ಛ ಸಮರ್ಪಿಸಿ ಅಂತಿಮ ನಮನ ಸಲ್ಲಿಸಿದರು.

    ಗಣ್ಯರಿಂದ ಶ್ರದ್ಧಾಂಜಲಿ: ವಿಂಗ್ ಕಮಾಂಡರ್ ಹನುಮಂತರಾವ್ ಸಾರಥಿ ಅವರ ನಿಧನಕ್ಕೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಸಚಿವ ಗೋವಿಂದ ಕಾರಜೋಳ ಸಂತಾಪ ಸೂಚಿಸಿದರು. ಚಿಕ್ಕ ವಯಸ್ಸಿನಲ್ಲೇ ಹುತಾತ್ಮರಾಗಿದ್ದು, ದುಃಖ ತಂದಿದೆ. ಅವರ ಕುಟುಂಬವೇ ದೇಶಸೇವೆಗೆ ಮುಡಿಪಾಗಿದೆ. ಅವರ ದುಃಖದಲ್ಲಿ ನಾವೂ ಭಾಗಿಯಾಗಿದ್ದೇವೆ. ಕುಟುಂಬಸ್ಥರಿಗೆ ದುಃಖ ತಡೆದುಕೊಳ್ಳುವ ಶಕ್ತಿ ದೇವರು ನೀಡಲಿ ಎಂದರು. ಜಿಲ್ಲಾಧಿಕಾರಿ ನಿತೇಶ ಪಾಟೀಲ ಸಂತಾಪ ಸೂಚಿಸಿದ್ದಾರೆ. ಹನುಮಂತರಾವ್ ಸಾರಥಿ ಅವರ ನಿಧನದ ಸುದ್ದಿ ತಿಳಿದು ತುಂಬ ದುಃಖವಾಯಿತು. ಹೆಮ್ಮೆಯ ಯೋಧ ಹನುಮಂತರಾವನನ್ನು ಕಳೆದುಕೊಂಡಿದ್ದು ದೇಶಕ್ಕೆ ತುಂಬಲಾರದ ನಷ್ಟ. ಅವರ ಕುಟುಂಬದ ದುಃಖದಲ್ಲಿ ನಾನು ಕೂಡ ಭಾಗಿಯಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

    ಇಡೀ ಕುಟುಂಬವೇ ದೇಶಸೇವೆಗೆ ಸಮರ್ಪಣೆ: ಹುತಾತ್ಮರಾದ ವೀರ ಯೋಧ ಹನುಮಂತರಾವ್ ಇಡೀ ಕುಟುಂಬವೇ ದೇಶ ಸೇವೆಗೆ ಸಮರ್ಪಣೆಯಾಗಿದೆ. ಪಾಕಿಸ್ತಾನ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ವೇಳೆ ಹನುಮಂತರಾವ್ ಅವರು ರಿಸರ್ವ್ ಟೀಮ್​ನಲ್ಲಿದ್ದರು. ಯೋಧನ ತಂದೆ ರೇವಣಸಿದ್ದಪ್ಪ 32 ವರ್ಷ ಕಾಲ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಹಿರಿಯ ಸಹೋದರ ಪ್ರವೀಣ ಗ್ರೂಪ್ ಕ್ಯಾಪ್ಟನ್ ಆಗಿ ಭಾರತೀಯ ವಾಯುಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರವೀಣ ಅವರ ಪತ್ನಿ ಏರ್‌ಫೋರ್ಸ್‌ನಲ್ಲಿ ಪೈಲೆಟ್ ಆಫೀಸರ್ ಆಗಿದ್ದಾರೆ. ಹುತಾತ್ಮ ಹನುಮಂತರಾವ್ ಪತ್ನಿ ಏರ್‌ಪೋರ್ಸ್‌ನಲ್ಲಿ ಅಕೌಂಟ್ ಆಫೀಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

    ಫೇಸ್​ಬುಕ್​ ಫ್ರೆಂಡ್​ನ ಮದುವೆಯಾಗಲು ಭಾರತಕ್ಕೆ ಬಂದ ವಿದೇಶಿ ಬೆಡಗಿ!

    ನಮ್ಮಲ್ಲೇ ಮೊದಲು: ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆ-ತಂತ್ರಜ್ಞಾನ ಬಳಸಿ ಬರೆದ ಸುದ್ದಿ; ಇದು ಸಮಸ್ತ ಹಿರಿಯ ನಾಗರಿಕರಿಗೆ ಅರ್ಪಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts