More

    ಅಮರ್ ರಹೇ: ಸಿಡಿಎಸ್ ಬಿಪಿನ್ ರಾವತ್ ದಂಪತಿಗೆ ಅಶ್ರುಪೂರಿತ ವಿದಾಯ..

    ನವದೆಹಲಿ: ತಮಿಳುನಾಡಿನ ಕೂನೂರು ಸಮೀಪ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ದೇಶದ ಮೊದಲ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಜನರಲ್ ಬಿಪಿನ್ ರಾವತ್ ದಂಪತಿಯ ಅಂತ್ಯಸಂಸ್ಕಾರ ಸಕಲ ಸೇನಾ ಗೌರವಗಳೊಂದಿಗೆ ಶುಕ್ರವಾರ ನೆರವೇರಿತು. ದೆಹಲಿಯ ಕಂಟೋನ್ಮೆಂಟ್ ಪ್ರದೇಶದಲ್ಲಿರುವ ಬ್ರಾರ್ ಸ್ಕೆ್ವೕರ್ ಚಿತಾಗಾರದಲ್ಲಿ ಪುತ್ರಿಯರಾದ ಕೃತಿಕಾ ಮತ್ತು ತಾರಿಣಿ ಅಂತ್ಯಸಂಸ್ಕಾರ ನೆರವೇರಿಸಿದರು. 800ರಷ್ಟು ಸೇನಾ ಸಿಬ್ಬಂದಿ ಸ್ಥಳದಲ್ಲಿದ್ದು ಗೌರವ ಸಲ್ಲಿಸಿದರು. ರಕ್ಷಣಾ ಸಚಿವ ರಾಜನಾಥ ಸಿಂಗ್, ಕಾನೂನು ಸಚಿವ ಕಿರಣ್ ರಿಜಿಜು ಮತ್ತು ಇತರೆ ರಾಜಕಾರಣಿಗಳು, ರಾಜತಾಂತ್ರಿಕ ಅಧಿಕಾರಿಗಳು, ಅನೇಕ ಗಣ್ಯರು ಅಂತಿಮ ನಮನ ಸಲ್ಲಿಸಿದರು.

    ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ಅವರ ಅಂತ್ಯಸಂಸ್ಕಾರದ ವಿಧಿ ವಿಧಾನಗಳು ಶುಕ್ರವಾರ ಅಪರಾಹ್ನ 2.20ರ ಸುಮಾರಿಗೆ ಶುರುವಾಗಿದ್ದವು. ಇದಕ್ಕೂ ಮುನ್ನ ರಾವತ್ ಅವರ ಮನೆಯಲ್ಲಿ ಧಾರ್ವಿುಕ ಕ್ರಿಯೆಗಳನ್ನು ನಡೆಸಲಾಗಿತ್ತು. ಮೃತರ ಪಾರ್ಥಿವ ಶರೀರವನ್ನು ಮೆರವಣಿಗೆಯ ಮೂಲಕ ಬ್ರಾರ್ ಸ್ಕೆ್ವೕರ್ ಸಿಮ್ಮೆಟ್ರಿಗೆ ತರಲಾಯಿತು. ಸೇನಾ ಸಿಬ್ಬಂದಿ 17 ಕುಶಾಲು ತೋಪು ಸಿಡಿಸಿ ಸೇನಾ ಗೌರವ ಸಲ್ಲಿಸಿದರು. ನಂತರ, ಪುತ್ರಿಯರಾದ ಕೃತಿಕಾ ಮತ್ತು ತಾರಿಣಿ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ರಾವತ್ ಅವರ ಕಿರಿಯ ಸಹೋದರ ವಿಜಯ್ ರಾವತ್ (60) ಕೂಡ ಸ್ಥಳದಲ್ಲಿದ್ದರು.

    ಕೋಟ್ಯಂತರ ಜನರಿಂದ ವೀಕ್ಷಣೆ: ಭಾರತದ ವೀರಪುತ್ರನ ಅಂತ್ಯಸಂಸ್ಕಾರವನ್ನು ಅವರ ಪುತ್ರಿಯರು ನೆರವೇರಿಸುತ್ತಿರುವ ಮನಕಲಕುವ ದೃಶ್ಯವನ್ನು ಜಗತ್ತಿನಾದ್ಯಂತ ಕೋಟ್ಯಂತರ ಜನ ವೀಕ್ಷಿಸಿದರು.

    ಡಿಎನ್​ಎ ಪರೀಕ್ಷೆ ಫಲಿತಾಂಶ ಬರಬೇಕಿದೆ: ಅಪಘಾತದಲ್ಲಿ ಮೃತಪಟ್ಟ 13 ಜನರ ಪೈಕಿ ಜನರಲ್ ರಾವತ್, ಮಧುಲಿಕಾ ರಾವತ್ ಮತ್ತು ಬ್ರಿಗೇಡಿಯರ್ ಎಲ್.ಎಸ್.ಲಿಡ್ಡರ್ ಅವರ ಗುರುತು ಮಾತ್ರ ಪತ್ತೆಯಾಗಿದೆ. ಉಳಿದವರ ಗುರುತು ಪತ್ತೆಗೆ ಡಿಎನ್​ಎ ಪರೀಕ್ಷೆ ನಡೆದಿದ್ದು ಫಲಿತಾಂಶಕ್ಕೆ ಕಾಯಲಾಗುತ್ತಿದೆ. ಹೀಗಾಗಿ ಅವರ ಅಂತ್ಯಸಂಸ್ಕಾರ ತಡವಾಗಿದೆ. ಇವರ ಪಾರ್ಥಿವ ಶರೀರಗಳು ಸೇನಾ ನೆಲೆಯ ಆಸ್ಪತ್ರೆಯಲ್ಲಿವೆ.

    ಭಾರತೀಯ ಸೇನಾ ಪಡೆಯ ಸಿಡಿಎಸ್ ಬಿಪಿನ್ ರಾವತ್ ಅವರ ನಿಧನಕ್ಕೆ ಸಂಬಂಧಿಸಿ ಕೆಲವು ವಿಕೃತ ಮನಸ್ಸುಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರ ಮಾಚರಣೆಯ ಟ್ವೀಟ್​ಗಳನ್ನು ಮಾಡಿದ್ದು, ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಪೊಲೀಸ್ ಇಲಾಖೆ ಮುಖ್ಯಸ್ಥರಿಗೆ ಸೂಚನೆ ನೀಡಿದ್ದೇನೆ.

    | ಬಸವರಾಜ ಬೊಮ್ಮಾಯಿ ಕರ್ನಾಟಕ ಮುಖ್ಯಮಂತ್ರಿ

    ಬ್ರಾರ್ ಸ್ಕ್ವೇರ್​ ಹೊರಗಡೆ ಮೌನ: ರಾವತ್ ದಂಪತಿ ಮತ್ತು ಬ್ರಿಗೇಡಿಯರ್ ಎಲ್.ಎಸ್.ಲಿಡ್ಡರ್ ಅವರ ಪಾರ್ಥಿವ ಶರೀರವನ್ನು ಬ್ರಾರ್ ಸ್ಕೆ್ವೕರ್​ಗೆ ತಂದಾಗ ವಂದೇಮಾತರಂ ಮತ್ತು ಜನರಲ್ ರಾವತ್ ಅಮರ್ ರಹೇ ಎಂಬ ಘೋಷಣೆ ಮೊಳಗಿತು. ದೊಡ್ಡ ಪ್ರಮಾಣದಲ್ಲಿ ಜನಜಂಗುಳಿ ಅಲ್ಲಿದ್ದರೂ ಗೊಂದಲಕ್ಕೆ ಅವಕಾಶವಾಗದಂತೆ ಜನರು ವರ್ತಿಸಿದರು. ತಿರಂಗ ಮುಚ್ಚಿದ ಪಾರ್ಥಿವ ಶರೀರಗಳ ಮೇಲೆ ಪುಷ್ಪವೃಷ್ಟಿಗೈದರು. ಸೇನಾನಾಯಕನಿಗೆ ವಿದಾಯ ಹೇಳಲು 10 ಕಿ.ಮೀ. ಮೆರವಣಿಗೆ ಮೂಲಕ ಜನ ಹಿಂಬಾಲಿಸಿದ್ದರು.

    ಸಿಡಿಎಸ್ ಕಾಪ್ಟರ್​ನಿಂದ ಅಪಾಯದ ಕರೆ ಬಂದಿರಲಿಲ್ಲ: ಸಿಡಿಎಸ್ ಇದ್ದ ಕಾಪ್ಟರ್​ನಿಂದ ಯಾವುದೇ ಅಪಾಯದ ಸಂದೇಶ ಅಥವಾ ಕರೆ ಬಂದಿರಲಿಲ್ಲ. ಏಳೆಂಟು ನಿಮಿಷದಲ್ಲಿ ಕಾಪ್ಟರ್ ವೆಲ್ಲಿಂಗ್ಟನ್​ನಲ್ಲಿ ಲ್ಯಾಂಡ್ ಆಗಬೇಕಾಗಿತ್ತು. ಅಷ್ಟರಲ್ಲಿ ಸಂಪರ್ಕ ಕಡಿತವಾಗಿದೆ. ಹವಾಮಾನ ಉತ್ತಮವಾಗಿರುವುದನ್ನು ಖಚಿತಪಡಿಸಿಕೊಂಡೇ ಸಿಡಿಎಸ್ ರಾವತ್ ಮತ್ತು ಇತರರು ಕಾಪ್ಟರ್ ಏರಿದ್ದರು. ಸುಲೂರು ವಾಯುನೆಲೆಯಲ್ಲಿ ತುರ್ತು ಪರಿಸ್ಥಿತಿ ನಿಭಾಯಿಸಲು ಅಗತ್ಯ ಕ್ರಮವನ್ನೂ ತೆಗೆದುಕೊಳ್ಳಲಾಗಿತ್ತು ಎಂದು ಸೇನಾ ಮೂಲಗಳು ಹೇಳಿವೆ.

    ಕಾಶಿ ಮತ್ತು ಶ್ರೀಶೈಲ ಜಗದ್ಗುರುಗಳ ಸಂತಾಪ: ಸಿಡಿಎಸ್ ಬಿಪಿನ್ ರಾವತ್ ದಂಪತಿ ಹಾಗೂ ಇತರ ಯೋಧರ ನಿಧನಕ್ಕೆ ಕಾಶಿ ಮತ್ತು ಶ್ರೀಶೈಲ ಜಗದ್ಗುರುಗಳು ಸಂತಾಪ ವ್ಯಕ್ತಪಡಿಸಿದ್ದಾರೆ. ಪುಣೆಯ ಕಾಶಿ ಜಂಗಮವಾಡಿ ಮಠದಲ್ಲಿ ಕಾಶಿ ಜಗದ್ಗುರುಗಳನ್ನು ಭೇಟಿಯಾದ ಶ್ರೀಶೈಲ ಜಗದ್ಗುರುಗಳು, ದೇಶದ ಬಹುದೊಡ್ಡ ದುರಂತದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. ದೇಶಕ್ಕೆ ಅನ್ನ ನೀಡುವ ರೈತ, ದೇಶವನ್ನು ಕಾಯುವ ಯೋಧ ದೇಶದ ಎರಡು ಕಣ್ಣುಗಳಿದ್ದಂತೆ. ಅಂತಹ ಯೋಧ ಪಡೆಯ ಮುಖ್ಯಸ್ಥರಾಗಿ ದೇಶದ ಭದ್ರತೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದ ಬಿಪಿನ್ ರಾವತ್ ಅವರಿಗೆ ಇಂತಹ ದುರಂತದ ಅಂತ್ಯ ಬಂದಿದ್ದು ದೇಶಕ್ಕೆ ಕರಾಳ ದಿನವೆಂದು ಉಭಯ ಜಗದ್ಗುರುಗಳು ಸಂತಾಪ ಸೂಚಿಸಿದರು.

    ಹರಿದ್ವಾರಕ್ಕೆ ಇಂದು ಚಿತಾಭಸ್ಮ: ‘ಜನರಲ್ ರಾವತ್ ಮತ್ತು ನನ್ನ ಸಹೋದರಿ ಮಧುಲಿಕಾ ಅವರ ಚಿತಾಭಸ್ಮವನ್ನು ಶನಿವಾರ ಬೆಳಗ್ಗೆ ಸಂಗ್ರಹಿಸಿ ಕಲಶದಲ್ಲಿ ತುಂಬಿ ಹರಿದ್ವಾರಕ್ಕೆ ಕೊಂಡೊಯ್ಯುತ್ತೇವೆ. ಅಲ್ಲಿ ಧಾರ್ವಿುಕ ವಿಧಿ ವಿಧಾನಗಳನ್ನು ನೆರವೇರಿಸಿ ಚಿತಾಭಸ್ಮವನ್ನು ಗಂಗಾನದಿಯಲ್ಲಿ ವಿಸರ್ಜಿಸುತ್ತೇವೆ’ ಎಂದು ಯಶವರ್ಧನ್ ಸಿಂಗ್ ಹೇಳಿದರು.

    ಬ್ರಿಗೇಡಿಯರ್ ಲಿಡ್ಡರ್ ಪಂಚಭೂತಗಳಲ್ಲಿ ಲೀನ: ಜನರಲ್ ರಾವತ್ ಅವರಿಗೆ ಸಹಾಯಕ ರಾಗಿದ್ದ ಬ್ರಿಗೇಡಿಯರ್ ಎಲ್.ಎಸ್.ಲಿಡ್ಡರ್ ಅವರ ಅಂತ್ಯಸಂಸ್ಕಾರವೂ ಬ್ರಾರ್ ಸ್ಕೆ್ವೕರ್ ಸಿಮ್ಮೆಟ್ರಿಯಲ್ಲಿ ನೆರವೇರಿತು. ಲಿಡ್ಡರ್ ಅವರ ಪಾರ್ಥಿವ ಶರೀರ ಇದ್ದ ಪೆಟ್ಟಿಗೆಗೆ ಮುತ್ತಿಕ್ಕಿದ ಪತ್ನಿ ಗೀತಿಕಾ ಲಿಡ್ಡರ್ (52) ಕಣ್ಣೀರಾಗಿ ಕುಸಿದು ಕುಳಿತರು. ಮಗಳು ಹದಿನೇಳು ವರ್ಷದ ಆಶ್ನಾ ಕಣ್ಣೀರು ಎಲ್ಲರ ಮನಕಲಕಿತು. ‘ಹೆಮ್ಮೆಗಿಂತ ಹೆಚ್ಚು ನೋವು ನನ್ನನ್ನು ಕಾಡುತ್ತಿದೆ. ಜೀವಿತಾವಧಿ ಸುದೀರ್ಘವಾಗಿದೆ. ಇದು ದೇವರ ನಿರ್ಧಾರವಾಗಿದ್ದರೆ, ಅದನ್ನು ಅಂಗೀಕರಿಸಬೇಕು. ನಾವು ಅವರನ್ನು ಈ ರೀತಿ ಹಿಂದಿರುಗುವುದನ್ನು ಬಯಸಿರಲಿಲ್ಲ. ಇದು ದೊಡ್ಡ ನಷ್ಟ’ ಎಂದು ಗೀತಿಕಾ ಹೇಳಿದರು. ‘ಇದು ದೇಶಕ್ಕಾದ ನಷ್ಟ. ನನ್ನ ತಂದೆ ಒಬ್ಬ ಹೀರೋ. ನನಗೆ ಉತ್ತಮ ಸ್ನೇಹಿತರಾಗಿದ್ದರು’ ಎಂದು ಆಶ್ನಾ ಹೇಳಿದರು.

    ಸೇನಾ ಕ್ಯಾಂಪ್​ನಲ್ಲೇ ಆತ್ಮಹತ್ಯೆ ಮಾಡಿಕೊಂಡ ಯೋಧ; ದೆಹಲಿಯ ಮೀರತ್​ ಬಳಿ ಇರುವ ಎಂಇಜಿ ಯೂನಿಟ್-9ರಲ್ಲಿ ಘಟನೆ

    ಏಳು ವರ್ಷಗಳಲ್ಲಿ ಕೇಂದ್ರ ಸರ್ಕಾರದಿಂದ ಸಂಸ್ಕೃತಕ್ಕೆ ಸಿಕ್ಕಿದ್ದು 640 ಕೋಟಿ ರೂಪಾಯಿ; ಆದರೆ ಕನ್ನಡಕ್ಕೆ..?!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts