More

    ಆನ್‌ಲೈನ್‌ನಲ್ಲಿ ಹಣ್ಣು, ತರಕಾರಿ ಮಾರಾಟ

    ಮೈಸೂರು: ಲಾಕ್‌ಡೌನ್ ವೇಳೆ ವಾಹನಗಳ ಮೂಲಕ ಮನೆ ಬಾಗಿಲಿಗೆ ಹಣ್ಣು-ತರಕಾರಿ ನೀಡುತ್ತಿದ್ದ ಜಿಲ್ಲಾ ಹಾಪ್‌ಕಾಮ್ಸ್ ಈಗ ಆನ್‌ಲೈನ್ ಮೂಲಕ ಜನರಿಗೆ ಮತ್ತಷ್ಟು ಹತ್ತಿರವಾಗಲು ಮುಂದಾಗಿದೆ.

    ಕೋವಿಡ್‌ನಿಂದ ಜನರು ಮನೆಯಿಂದ ಹೊರಬರಲು ಭಯಪಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಹಾಪ್‌ಕಾಮ್ಸ್‌ನಿಂದ ಹಣ್ಣು ಮತ್ತು ತರಕಾರಿಗಳನ್ನು ಕೈಗೆಟುಕುವ ದರದಲ್ಲಿ ಗ್ರಾಹಕರಿಗೆ ತಲುಪಿಸುವ ವಿಶಿಷ್ಟ ಸೇವೆ ಪ್ರಾರಂಭಿಸಲಾಗಿದೆ. ಸಾರ್ವಜನಿಕರು ಇನ್ನು ಮುಂದೆ ಮನೆಯಲ್ಲಿಯೇ ಕುಳಿತು ತಮಗೆ ಬೇಕಾದ ಹಣ್ಣು, ತರಕಾರಿಗಳನ್ನು ಹಾಪ್‌ಕಾಮ್ಸ್‌ನಿಂದ ತರಿಸಿಕೊಳ್ಳಬಹುದು. ಇದರಿಂದ ಬೆಳೆಗಾರರಿಂದ ಬಳಕೆದಾರರ ಮನೆಗೆ ತಾಜಾ ಹಣ್ಣು ಮತ್ತು ತರಕಾರಿ ನೇರವಾಗಿ ತಲುಪಲಿದೆ.

    ಇದಕ್ಕಾಗಿ ‘ಹಾಪ್‌ಕಾಮ್ಸ್ ಆನ್‌ಲೈನ್’ (ಏಟಟ್ಚಟಞ ಟ್ಞ್ಝಜ್ಞಿಛಿ) ಎನ್ನುವ ಮೊಬೈಲ್ ಆ್ಯಪ್‌ವೊಂದನ್ನು ಅಭಿವೃದ್ಧಿಪಡಿಸಿದೆ. ಇದನ್ನು ಸಾರ್ವಜನಿಕರು ಪ್ಲೇ ಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು ತಮಗೆ ಬೇಕಾದ ಹಣ್ಣು, ತರಕಾರಿಯನ್ನು ತರಿಸಿಕೊಳ್ಳಬಹುದು.

    ನಗರ ವ್ಯಾಪ್ತಿಯಲ್ಲಿ ಈ ನೂತನ ವ್ಯವಸ್ಥೆ ಜಾರಿಗೆ ಬಂದಿದ್ದು, ವಿವಿಧ ಬಡಾವಣೆಗಳ ಮನೆ ಮನೆಗೆ ತಲುಪಿಸಲು ಕ್ರಮಕೈಗೊಳ್ಳಲಾಗಿದೆ. ಕನಿಷ್ಠ 200 ರೂ. ಬೆಲೆಯ ಹಣ್ಣು ಅಥವಾ ತರಕಾರಿಯನ್ನು ತರಿಸಿಕೊಳ್ಳಬೇಕಿದೆ. 500 ರೂ. ಒಳಗೆ ಮಾಡುವ ಖರೀದಿಗೆ 30 ರೂ. ಸೇವಾ ಶುಲ್ಕ ಇರಲಿದ್ದು, ಅದಕ್ಕಿಂತ ಹೆಚ್ಚಿನ ಬೆಲೆಯ ಹಣ್ಣು, ತರಕಾರಿಗೆ ಸೇವಾ ಶುಲ್ಕ ಇರುವುದಿಲ್ಲ.

    ಖರೀದಿ ಹೇಗೆ: ಸಾರ್ವಜನಿಕರು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡಾಗ ಹಣ್ಣು ಹಾಗೂ ತರಕಾರಿಯ ಚಿತ್ರದ ಸಹಿತ ನಮೂದಾಗಿರುವ ಅದರ ಬೆಲೆಯೂ ಕಾಣಿಸುತ್ತದೆ. ನಿತ್ಯ ಈ ದರದಲ್ಲಿ ಏರಿಳಿತ ಇರುವುದರಿಂದ ದರವನ್ನು ಗಮನಿಸಿ ಖರೀದಿ ಮಾಡಲು ಜನರಿಗೆ ಅನುಕೂಲವಾಗಲಿದೆ.

    ಹಾಪ್‌ಕಾಮ್ಸ್ ನಗರ ವ್ಯಾಪ್ತಿಯ ಬಡಾವಣೆಗಳ ನಿವಾಸಿಗಳಿಗೆ ಮಾರುಕಟ್ಟೆಗಿಂತ ಕಡಿಮೆ ಬೆಲೆಯಲ್ಲಿ ತಾಜಾ ಹಣ್ಣು ಮತ್ತು ತರಕಾರಿಗಳನ್ನು ಬೇಡಿಕೆಗೆ ಅನುಗುಣವಾಗಿ ತಲುಪಿಸಲಾಗುತ್ತಿದ್ದು, ಈ ವಿನೂತನ ಸೇವೆಯನ್ನು ಪಡೆಯಲು ಸಾರ್ವಜನಿಕರು ಮುಂಗಡವಾಗಿ ಆ್ಯಪ್‌ನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು.

    ಆರಂಭದಲ್ಲಿ ತಲಾ ಒಂದು ಕೆಜಿ ಹಣ್ಣು, ತರಕಾರಿಯ ಪ್ಯಾಕ್‌ಗಳನ್ನು ಸೀಲ್ ಮಾಡಿ ಮಾರಾಟಕ್ಕೆ ಪರಿಚಯಿಸಲಾಗುತ್ತಿದೆ. ಸೀಲ್ ಮಾಡುವುದರಿಂದ ತೂಕದಲ್ಲಿ ಮಧ್ಯೆ ಯಾರೂ ವಂಚನೆ ಮಾಡಲು ಸಾಧ್ಯವಾಗುವುದಿಲ್ಲ. ರೈತರಿಂದಲೇ ನೇರ ಖರೀದಿಸಿ ನೀಡುವುದರಿಂದ ಜನರಿಗೆ ತಾಜಾ ಪದಾರ್ಥಗಳು ತಲುಪಿದಂತಾಗುತ್ತದೆ. ಜನರ ಪ್ರತಿಕ್ರಿಯೆ ನೋಡಿಕೊಂಡು ಮುಂದಿನ ದಿನಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಕಾಲು ಕೆಜಿ, ಅರ್ಥ, ಮುಕ್ಕಾಲು ಕೆಜಿಯ ಹಣ್ಣು, ತರಕಾರಿಯನ್ನು ಪ್ಯಾಕ್ ಮಾಡಿ ನೀಡಲು ಹಾಪ್‌ಕಾಮ್ಸ್ ಯೋಜನೆ ಹಾಕಿಕೊಂಡಿದೆ.

    24 ಗಂಟೆಯಲ್ಲಿ ಸೇವೆ: ಜನರು ತಮಗೆ ಬೇಕಾದ ಹಣ್ಣು, ತರಕಾರಿ ಬುಕ್ ಮಾಡಿದ 24 ಗಂಟೆಯೊಳಗೆ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲಾಗುವುದು. ಖರೀದಿಸಿದ ದರವನ್ನು ಆನ್‌ಲೈನ್‌ನಲ್ಲಿಯೂ ಪಾವತಿಸಲು ಅವಕಾಶವಿದೆ. ಗ್ರಾಹಕರು ಹಣ್ಣು, ತರಕಾರಿ ಪಡೆದ ಬಳಿಕ ಹಣ ನೀಡಲು ಅವಕಾಶ ಕಲ್ಪಿಸಲಾಗಿದೆ. ಈ ಸೇವೆಯ ಬಗ್ಗೆ ಇನ್ನಷ್ಟು ಮಾಹಿತಿ ಬೇಕಾದವರು ಮೊ:ಸಂ: 8277814143 ಸಂಪರ್ಕಿಸಬಹುದು.

    ವ್ಯಾಪಾರ ಹೆಚ್ಚಿಸಿಕೊಂಡಿದ್ದ ಹಾಪ್‌ಕಾಮ್ಸ್: ವಿಶ್ವವನ್ನೇ ಕಾಡುತ್ತಿರುವ ಕರೊನಾ ವೈರಸ್ ತಡೆಯಲು ಜಾರಿಗೊಳಿಸಿದ್ದ ಲಾಕ್‌ಡೌನ್ ಸಮಯದಲ್ಲಿ ಎಲ್ಲರೂ ನಷ್ಟ ಅನುಭವಿಸಿದ್ದರೆ ಜಿಲ್ಲಾ ಹಾಪ್‌ಕಾಮ್ಸ್ ವ್ಯಾಪಾರ ಹೆಚ್ಚಿಕೊಂಡು ಲಾಭದತ್ತ ಮುನ್ನಡೆದಿತ್ತು.

    ಸಾಮಾನ್ಯ ದಿನಗಳಲ್ಲಿ ಪ್ರತಿ ತಿಂಗಳು 1.2 ಕೋಟಿ ರೂ. ಅಸುಪಾಸಿನಲ್ಲಿ ವಹಿವಾಟು ನಡೆಯುತ್ತಿದ್ದ ಹಾಪ್‌ಕಾಮ್ಸ್ ಲಾಕ್‌ಡೌನ್ ಸಮಯದಲ್ಲಿ ಸರಾಸರಿ 20 ರಿಂದ 30 ಲಕ್ಷ ರೂ. ನಷ್ಟು ವ್ಯಾಪಾರ ವೃದ್ಧಿಸಿಕೊಂಡಿತ್ತು. ನಗರಪಾಲಿಕೆಯಿಂದ 5 ವಾಹನಗಳಲ್ಲಿ ನಿತ್ಯ 5ರಿಂದ 5.7 ಟನ್‌ನಷ್ಟು ಹಣ್ಣು, ತರಕಾರಿಯನ್ನು ನಗರ ವಿವಿಧ ಬಡಾವಣೆಗಳಲ್ಲಿ ನಿತ್ಯ ಮಾರಾಟ ಮಾಡಿತ್ತು. ಏಪ್ರಿಲ್‌ನಲ್ಲಿ 1.57 ಕೋಟಿ ರೂ., ಮೇನಲ್ಲಿ 1.31 ಕೋಟಿ ರೂ. ವಹಿವಾಟು ನಡೆಸಿತ್ತು.

    ಜನರಿಗೆ ತಾಜಾ ಹಣ್ಣು, ತರಕಾರಿ ನೀಡಬೇಕು ಎನ್ನುವ ಉದ್ದೇಶದಿಂದ ಈ ವ್ಯವಸ್ಥೆ ಮಾಡಲಾಗಿದೆ. ಖಾಸಗಿ ಕಂಪನಿಗಳು ಮಾರಾಟ ಮಾಡುವ ದರಕ್ಕಿಂತ ಹಾಪ್‌ಕಾಮ್ಸ್‌ನಲ್ಲಿ ಕಡಿಮೆ ದರಕ್ಕೆ ಪದಾರ್ಥಗಳನ್ನು ಜನರ ಮನೆ ಬಾಗಿಲಿಗೆ ನೀಡಲಾಗುವುದು.
    ಪ್ರಮೋದ್ ಪೌಲ್, ಆನ್‌ಲೈನ್ ಮಾರುಕಟ್ಟೆ ನಿರ್ವಾಹಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts