More

    ತರಕಾರಿ ಮಾರುತ್ತಿದ್ದಾಕೆ ಗ್ರಾಪಂ ಅಧ್ಯಕ್ಷೆ!

    ಲಕ್ಷ್ಮೇಶ್ವರ: ಊರೂರು ಸುತ್ತಿ ತರಕಾರಿ ಮಾರುವ ಬಡ ಕುಟುಂಬದ ಮಹಿಳೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಟ್ಟ ಒಲಿದು ಬಂದಿದೆ.

    ಚುನಾವಣೆಯಲ್ಲಿ ಗೆಲ್ಲಲು ಹಣ, ಜಾತಿ ಸೇರಿದಂತೆ ಅನೇಕ ಬಲಾಬಲಗಳು ಬೇಕು ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಆದರೆ, ತಾಲೂಕಿನ ಯಳವತ್ತಿ ಗ್ರಾಮದ ಹುಲಿಗೆವ್ವ ಲಕ್ಷ್ಮಣ ಭಜಂತ್ರಿ ಅವರಿಗೆ ಇದಾವುದರ ಬಲ ಇಲ್ಲದಿದ್ದರೂ ಜನಬಲ ಮತ್ತು ಅದೃಷ್ಟ ಬಲದಿಂದ ಅಧ್ಯಕ್ಷ ಪಟ್ಟ ಲಭಿಸಿದೆ.

    ಯಳವತ್ತಿ ಗ್ರಾಪಂಗೆ ನಡೆದ ಚುನಾವಣೆಯಲ್ಲಿ ಹುಲಿಗೆವ್ವ ಜನಬಲದಿಂದ ಜಯಶಾಲಿಯಾಗಿದ್ದರು. ಗ್ರಾಪಂ ಅಧ್ಯಕ್ಷ ಸ್ಥಾನ ಎಸ್​ಸಿ ಮಹಿಳೆಗೆ ಮೀಸಲಾಗಿದ್ದರಿಂದ ಇರುವ ಏಕೈಕ ಸದಸ್ಯೆಗೆ ನಿರಾಯಾಸವಾಗಿ ಅಧ್ಯಕ್ಷ ಪಟ್ಟ ಒಲಿದು ಬಂದಿದೆ. ಹುಲೆಗೆವ್ವನ ಕುಟುಂಬಕ್ಕೆ ತೀರಾ ಹಳೆಯದಾದ ಜೋಪಡಿ ಮನೆ ಬಿಟ್ಟರೆ ಬೇರೆ ಆಸ್ತಿ ಇಲ್ಲ. ಗ್ರಾಮೀಣ ಸಂತೆಗಳಲ್ಲಿ ತರಕಾರಿ ಮಾರಾಟ ಮಾಡಿ ಬದುಕು ಸಾಗಿಸುತ್ತಾ ಬಂದಿದ್ದಾರೆ. ಇದರೊಟ್ಟಿಗೆ ಗ್ರಾಮದಲ್ಲಿ ಗೂಡಂಗಡಿಯಲ್ಲಿ ನಿತ್ಯ ತರಕಾರಿ ವ್ಯಾಪಾರ ಮಾಡುತ್ತಾರೆ. ಪತಿ ಪಾರಂಪರಿಕವಾಗಿ ಬಂದ ಶಹನಾಯಿ ಬಾರಿಸುವ ಕಾಯಕ ಮಾಡುತ್ತಾರೆ. ಹಿರಿ ಮಗ ಪಿಯುಸಿ, ಮತ್ತೊಬ್ಬ ಎಸ್​ಎಸ್​ಎಲ್​ಸಿ ಓದುತ್ತಿದ್ದಾನೆ. ಮಗಳನ್ನು ಮದುವೆ ಮಾಡಿಕೊಡಲಾಗಿದೆ.

    ತಾನಿರುವ ಜೋಪಡಿ ತೆರವುಗೊಳಿಸಿ ವಸತಿ ಯೋಜನೆಯಡಿ ಮನೆ ಕಟ್ಟಿಕೊಳ್ಳಬೇಕೆಂಬ ಆಸೆಯಿಂದ ಗ್ರಾಪಂಗೆ ಅರ್ಜಿ ಸಲ್ಲಿಸಿ ಎಡತಾಕಿದ್ದರೂ ಪ್ರಯೋಜನವಾಗಿರಲಿಲ್ಲ. ಆದರೆ, ಈಗ ಅತ್ತೆಗೊಂದು ಕಾಲ ಸೊಸೆಗಗೊಂದು ಕಾಲ ಎಂಬಂತೆ ಗ್ರಾಮದ ಜನರಿಗೆ ಮೂಲಸೌಲಭ್ಯ ಕಲ್ಪಿಸುವ ಅರ್ಜಿಗೆ ಸಹಿ ಮಾಡುವ ಅದೃಷ್ಟ ಹುಲಿಗೆವ್ವಳಿಗೆ ಒಲಿದು ಬಂದಿದೆ.

    ಓದಿಲ್ಲದಿದ್ದರೂ ಬಡತನದಲ್ಲಿಯೆ ಹುಟ್ಟಿಬೆಳೆದು ಬಡವರ ಕಷ್ಟ, ಬೇಕು, ಬೇಡಿಕೆಗಳ ಬಗ್ಗೆ ಅರಿವಿದೆ. ಗ್ರಾಮದಲ್ಲಿ ಮುಖ್ಯವಾಗಿ ಕುಡಿಯುವ ನೀರು, ರಸ್ತೆ, ಚರಂಡಿ, ಆಶ್ರಯ ಮನೆ, ಶಿಕ್ಷಣ ಸೇರಿದಂತೆ ಅಗತ್ಯ ಮೂಲಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಸೇವೆ ಮಾಡುತ್ತೇನೆ. ಅದಕ್ಕಾಗಿ ವಿದ್ಯಾವಂತ ಸದಸ್ಯರ, ಹಿರಿಯರ, ಅಧಿಕಾರಿಗಳಿಂದ ಮಾಹಿತಿ, ಸಹಕಾರ ಪಡೆಯುತ್ತೇನೆ. ಜನರ ನಂಬಿಕೆ, ವಿಶ್ವಾಸಕ್ಕೆ ಧಕ್ಕೆ ಬರದಂತೆ ನಡೆದುಕೊಳ್ಳುತ್ತೇನೆ.
    ಹುಲಿಗೆವ್ವ ಭಜಂತ್ರಿ, ಗ್ರಾಪಂ ಅಧ್ಯಕ್ಷೆ ಯಳವತ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts