More

    ಜಗದಗಲ: ಕಣ್ಣುಕುಕ್ಕುವ ಅಣ್ವಸ್ತ್ರದಿಂದ ಕಣ್ಣಿಗೆ ಕಾಣದ ಕರೊನಾವರೆಗೆ

    ಜಗದಗಲ: ಕಣ್ಣುಕುಕ್ಕುವ ಅಣ್ವಸ್ತ್ರದಿಂದ ಕಣ್ಣಿಗೆ ಕಾಣದ ಕರೊನಾವರೆಗೆ

    ಈವರೆಗೆ ಮೂರೂಕಾಲು ಲಕ್ಷದಷ್ಟು ಜೀವಗಳನ್ನು ಬಲಿ ತೆಗೆದುಕೊಂಡು ಇನ್ನೂ ಮರಣಮೃದಂಗವನ್ನು ಬಾರಿಸುತ್ತಲೇ ಇರುವ ನಾವೆಲ್ ಕರೊನಾ ವೈರಸ್ ಒಂದು ಜೈವಿಕ ಅಸ್ತ್ರ ಎಂಬ ಅನುಮಾನಕ್ಕೆ ದಿನೇದಿನೇ ಪುಷ್ಟಿ ದೊರೆಯುತ್ತಿದೆ. ಸದ್ಯಕ್ಕೆ ಪರಿಹಾರ ಕಾಣದ, ದಿನೇದಿನೇ ರಕ್ತಬೀಜಾಸುರನಂತೆ ಬೆಳೆಯುತ್ತಿರುವ ಈ ‘ಅಸ್ತ್ರ’ ಮಾನವಜನಾಂಗವನ್ನು ಎಲ್ಲಿಗೆ ಕೊಂಡೊಯ್ಯಬಹುದೆಂಬ ಬಗ್ಗೆ ನಿಶ್ಚಿತ ಚಿತ್ರಣ ದೊರೆಯುತ್ತಿಲ್ಲ. ಆದಾಗ್ಯೂ, ಈ ಅಸ್ತ್ರ ಹಿಂದಿನ ಯಾವ ಅಸ್ತ್ರವೂ ಎಸಗದಿದ್ದಷ್ಟು ಹಾನಿಯನ್ನು ಮನುಕುಲಕ್ಕೆ ಎಸಗಲಿದೆ ಎಂಬ ಆತಂಕವಂತೂ ಎಲ್ಲೆಡೆ ವ್ಯಕ್ತವಾಗುತ್ತಿರುವ ಈ ಸನ್ನಿವೇಶದಲ್ಲಿ ಮನುಷ್ಯ ಕಾಲಕಾಲಕ್ಕೆ ಶೋಧಿಸುತ್ತ ಬಂದಿರುವ ಅಸ್ತ್ರಗಳ ಪರಿಚಯ ಮಾಡಿಕೊಡುವುದು ಈ ಲೇಖನದ ವಸ್ತುವಿಷಯ.

    ಸಮೂಹನಾಶಕವಾದ ಅಣ್ವಸ್ತ್ರ ನಮಗೆ ಪರಿಚಯವಾಗಿ ಎಪ್ಪತೆôದು ವರ್ಷಗಳಷ್ಟೇ ಆಗುತ್ತಿದ್ದರೂ ಈ ಭಯಾನಕ ಅಸ್ತ್ರ ಪುರಾತನ ಕಾಲದಿಂದಲೂ ಬಳಕೆಯಾಗುತ್ತಿದ್ದಿರಬೇಕೆಂಬ ಅನುಮಾನ ಮೂಡಿಸುವ ಹಲವಾರು ‘ಪುರಾವೆಗಳು’ ಪ್ರಾಚೀನ ಗ್ರಂಥಗಳಲ್ಲಿ ದೊರೆಯುತ್ತವೆ. ಮಹಾಭಾರತದ ದ್ರೋಣಪರ್ವದಲ್ಲಿ ಒಂದು ಭಯಾನಕ ಅಸ್ತ್ರದ ವಿವರಣೆಗಳಿವೆ. ವರುಷ್ಣಿ ಮತ್ತು ಅಂಡಕ ಎಂಬೆರಡು ಜನಾಂಗಗಳನ್ನು ಸಂಪೂರ್ಣವಾಗಿ ನಾಶಮಾಡಿದ ಆ ಅಸ್ತ್ರದ ಚಿತ್ರಣ ಹೀಗಿದೆ: ‘…ಸಾವಿರ ಸೂರ್ಯರಷ್ಟು ಪ್ರಕಾಶಮಾನವಾದ, ಹೊಗೆ ಮತ್ತು ಜ್ವಾಲೆಗಳ ಸುಡುವ ಕಂಬವೊಂದು ತನ್ನೆಲ್ಲ ವೈಭವದೊಂದಿಗೆ ಮೇಲೆದ್ದಿತು… ಮೊದಲ ಸ್ಪೋಟದ ನಂತರ ಎದ್ದ ಹೊಗೆಯ ಮೋಡವು ಬೃಹದಾಕಾರದ ಛತ್ರಿಯೊಂದು ಬಿಚ್ಚಿಕೊಳ್ಳುವಂತೆ ವಿಸ್ತಾರವಾಗುತ್ತ ಸಾಗಿದ ವೃತ್ತಗಳನ್ನು ಸೃಷ್ಟಿಸಿತು. ಶವಗಳು ಗುರುತಿಗೆ ಸಿಗಲಾರದಂತೆ ಸುಟ್ಟುಹೋದವು… ಕೂದಲು ಮತ್ತು ಉಗುರುಗಳು ಉದುರಿಹೋದವು…ಹಕ್ಕಿಗಳು ಬೆಳ್ಳಗಾಗಿಹೋದವು. ಕೆಲ ತಾಸುಗಳ ಬಳಿಕ ಎಲ್ಲ ಆಹಾರಪದಾರ್ಥಗಳು ವಿಷಪೂರಿತವಾದವು. ಈ ಬೆಂಕಿಯಿಂದ ತಪ್ಪಿಸಿಕೊಳ್ಳಲು ಸೈನಿಕರು ನದಿಗಳಿಗೆ ಹಾರಿ ತಮ್ಮನ್ನೂ, ತಮ್ಮ ಆಯುಧಗಳನ್ನೂ ತೊಳೆದುಕೊಂಡರು..’

    ಈ ವಿವರಗಳೆಲ್ಲವೂ ಅಣ್ವಸ್ತ್ರ ದಾಳಿಗೆ ಸ್ಪಷ್ಟವಾಗಿ ಹೊಂದಿಕೊಳ್ಳುತ್ತವೆ ಎಂದು ದೇಶವಿದೇಶಗಳ ಹಲವರು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಮಹಾಭಾರತದಂತೆ ಬೈಬಲ್​ನಲ್ಲೂ ಅಣ್ವಸ್ತ್ರದ ಪ್ರಸ್ತಾಪ ಕಾಣಸಿಗುತ್ತದೆ. ಸೊಡೋಂ ಮತ್ತು ಗೊಮೋರಾ ಪಟ್ಟಣಗಳ ಜನ ತಾನು ವಿಧಿಸಿದ್ದ ಕಟ್ಟಳೆಗಳನ್ನೆಲ್ಲ ಕಡೆಗಣಿಸಿ, ಸಲಿಂಗರತಿಯಂತಹ ಅನಾಚಾರಗಳಲ್ಲಿ ಮೈಮರೆತಿದ್ದಾಗ ಯೆಹೋವ ದೇವರು ಆ ನಗರಗಳನ್ನು ನಾಶಮಾಡಿದ ವಿವರಗಳು ಆದಿಕಾಂಡದ ಹದಿನೆಂಟು ಮತ್ತು ಹತ್ತೊಂಬತ್ತನೆಯ ಅಧ್ಯಾಯಗಳಲ್ಲಿವೆ. (ಸಲಿಂಗರತಿಯನ್ನು ಸೂಚಿಸುವ ಸೊಡೋಮಿ ಎಂಬ ಆಂಗ್ಲ ಪದ ಹುಟ್ಟಿಕೊಂಡದ್ದೇ ಸೊಡೋಂ ಪಟ್ಟಣದ ಹೆಸರಿನಿಂದ) ಆ ನಗರಗಳನ್ನು ನಾಶಮಾಡುವ ಮೊದಲು ಯೆಹೋವ ದೇವರು ಅಬ್ರಹಾಂನ ಸಂಬಂಧಿಕನಾದ ಲಾಟ್ ಎನ್ನುವ ಧರ್ಮಭೀರು, ಸಂಭಾವಿತ ಮತ್ತವನ ಕುಟುಂಬವನ್ನ ಕಾಪಾಡಲು ನಿರ್ಧರಿಸುತ್ತಾನೆ. ಅದಕ್ಕಾಗಿ ತನ್ನ ಇಬ್ಬರು ದೂತರನ್ನು ಲಾಟ್​ನ ಮನೆಗೆ ಕಳಿಸುತ್ತಾನೆ. ಲಾಟ್​ನಿಗೆ ದೇವದೂತರು ಹೇಳುವುದು- ‘ನಾಳೆ ಬೆಳಗ್ಗೆ ಈ ಪಟ್ಟಣ ನಾಶ ಆಗುತ್ತದೆ. ಅಷ್ಟರೊಳಗೆ ನೀವೆಲ್ಲರೂ ಈ ಊರನ್ನು ತೊರೆದು ಓಡಿಹೋಗಿ ಪರ್ವತಗಳನ್ನು ತಲುಪಬೇಕು. ಇಲ್ಲವಾದರೆ ನಿಮ್ಮನ್ನು ನಾವು ಕಾಪಾಡಲಾಗುವುದಿಲ್ಲ’ ಎಂದು. ಅಲ್ಲದೆ, ಹಾಗೆ ಓಡುವಾಗ ಹಿಂದೆ ತಿರುಗಿ ಪಟ್ಟಣದೆಡೆಗೆ ನೋಡಬಾರದೆಂದೂ ಹೇಳುತ್ತಾರೆ. ಹಾಗೆಯೇ ಮರುದಿನ ಬೆಳಗ್ಗೆ ದೇವದೂತರು ಲಾಟ್ ಮತ್ತವನ ಕುಟುಂಬದವರನ್ನು ಕರೆದುಕೊಂಡು ಬೆಟ್ಟಗಳೆಡೆಗೆ ಓಡುವಾಗ ಲಾಟ್​ನ ಹೆಂಡತಿ ಕುತೂಹಲಕ್ಕೆ ಸೋತು, ಎಚ್ಚರಿಕೆಯನ್ನು ಮರೆತು ಹಿಂದಕ್ಕೆ ತಿರುಗಿ ನೋಡುತ್ತಾಳೆ. ಆಕೆ ಕಂಡ ನೋಟ ಸೊಡೋಂ ನಗರ ಅಣ್ವಸ್ತ್ರ ದಾಳಿಗೆ ಸಿಲುಕಿದ್ದುದ್ದರ ಸ್ಪಷ್ಟ ಚಿತ್ರಣವನ್ನು ನೀಡುತ್ತದೆ ಎಂದು ಅಸಾಂಪ್ರದಾಯಿಕ ವಿದ್ವಾಂಸ ಎರಿಕ್ ವಾನ್ ಡ್ಯಾನಿಕೆನ್ ವಾದಿಸುತ್ತಾರೆ.

    ಸರಿ, ಇವೆರಡೂ ಪುರಾಣಗಳ ಕಥೆಯಾಯಿತು. ಇವುಗಳಿಗೆ ಪೂರಕ ಎನಿಸುವ ಭೌತಿಕ ಕುರುಹುಗಳೇನಾದರೂ ಇವೆಯೇ, ನೋಡೋಣ. ರಾಜಸ್ಥಾನದ ಥಾರ್ ಮರುಭೂಮಿಯ ನಟ್ಟನಡುವಿನ ಜೋಧ್​ಪುರ ಪಟ್ಟಣದ ಪಶ್ಚಿಮಕ್ಕೆ ಹತ್ತು ಕಿಲೋಮೀಟರ್ ದೂರದಲ್ಲೊಂದು ಕುತೂಹಲಕರ ಸ್ಥಳವಿದೆ. ವಿರಳ ಜನವಸತಿಯ ಆ ಪ್ರದೇಶದಲ್ಲಿ ತುಂಬ ಹಿಂದಿನಿಂದಲೂ ಹುಟ್ಟುವ ಮಕ್ಕಳು ಅಂಗವೈಕಲ್ಯ ಹೊಂದಿರುವ ಬಗ್ಗೆ ವರದಿಗಳಿವೆ. ಆ ಪ್ರದೇಶದ ನಡುವಿನಲ್ಲಿ ಮೂರು ಕಿಲೋಮೀಟರ್ ವ್ಯಾಸದ ನೆಲದಲ್ಲಿ ಅತ್ಯಧಿಕ ಪ್ರಮಾಣದ ಅಣುವಿಕಿರಣ ಪತ್ತೆಯಾಗಿದೆ. ಪರಿಣಾಮವಾಗಿ ಆ ಕಲುಷಿತ ಸ್ಥಳಕ್ಕೆ ಜನಸಾಮಾನ್ಯರು ಪ್ರವೇಶಿಸುವುದನ್ನು ಸರ್ಕಾರ ಪ್ರತಿಬಂಧಿಸಿದೆ. ಅದೇ ಜೋಧ್​ಪುರದಿಂದ ನೇರ ಪಶ್ಚಿಮಕ್ಕೆ ಸಾಗಿ ಸಿಂಧ್​ನ ಮೊಹೆಂಜೋದಾರೋ ತಲುಪಿದರೆ ಅಲ್ಲಿನ ಉತ್ಖನನ ಸ್ಥಳಗಳಲ್ಲೊಂದೆಡೆ ಮತ್ತಷ್ಟು ಅಚ್ಚರಿ ನಮಗೆದುರಾಗುತ್ತದೆ. ಆ ಪ್ರಾಚೀನ ನಗರದ ರಸ್ತೆಯೊಂದರಲ್ಲಿ ನಲವತ್ತನಾಲ್ಕು ಮಾನವ ದೇಹಗಳು ಅನಿರೀಕ್ಷಿತ ಅವಗಢಕ್ಕೆ ಸಿಲುಕಿದಂತೆ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ತಂದೆ-ತಾಯಿ-ಮಗುವಿನ ದೇಹಗಳಂತೂ ಕೈಕೈ ಹಿಡಿದೇ ಸತ್ತು ಮಲಗಿವೆ. ಆ ಎಲ್ಲ ದೇಹಗಳು ಮತ್ತು ಸುತ್ತಲ ಕಲ್ಲು ಮಣ್ಣು ಇಟ್ಟಿಗೆಗಳಲ್ಲಿ ಕಂಡುಬರುವ ಅಣುವಿಕಿರಣದ ಪ್ರಮಾಣ ಅಣ್ವಸ್ತ್ರ ದಾಳಿಗೆ ತುತ್ತಾದ ಹಿರೋಷಿಮಾ ಮತ್ತು ನಾಗಸಾಕಿಯಲ್ಲಿರುವಷ್ಟೇ ಇದೆ. ಅತ್ತ ಇರಾಕ್​ನಲ್ಲಿ ಉತ್ಖನನ ನಡೆದ ಪ್ರದೇಶವೊಂದರಲ್ಲಿ ಅಣ್ವಸ್ತ್ರ ಸ್ಪೋಟದ ಭೌತಿಕ ಕುರುಹುಗಳು ದೊರೆತಿರುವುದಾಗಿ ಅಸಾಂಪ್ರದಾಯಿಕ ಪುರಾತತ್ತ್ವ ವಿದ್ವಾಂಸ ಚಾರ್ಲ್್ಸ ಬರ್ಲಿಟ್ಜ್ ಬರೆಯುತ್ತಾರೆ.

    ರಾಜಸ್ಥಾನ, ಮೊಹೆಂಜೋದಾರೋ ಮತ್ತು ಇರಾಕ್​ನಲ್ಲಿ ಕಂಡುಬರುತ್ತವೆಂದು ಹೇಳಲಾಗುವ ಅಣ್ವಸ್ತ್ರ ಸ್ಪೋಟಗಳ ಬಗ್ಗೆ ವಿದ್ವಾಂಸರಲ್ಲಿ ಪರ-ವಿರೋಧ ವಾದವಿವಾದಗಳು ನಡೆಯುತ್ತಲೇ ಇವೆ. ಈ ಬಗ್ಗೆ ಮತ್ತಷ್ಟು ಶಿಸ್ತುಬದ್ಧ ಸಂಶೋಧನೆಗಳು ಆಗಬೇಕಾಗಿದೆ. ಅಲ್ಲಿಯವರೆಗೆ ಇವನ್ನೆಲ್ಲ ಬದಿಗಿರಿಸಿ, ಮನುಷ್ಯನ ಶಸ್ತ್ರಾಸ್ತ್ರ ಆವಿಷ್ಕಾರಗಳ ಬಗ್ಗೆ ಇತಿಹಾಸದಲ್ಲಿ ದೊರೆಯುವ ವಿವರಗಳತ್ತ ಗಮನ ಹರಿಸೋಣ. ಅವಂತೂ ಭಯಾನಕ, ಅಷ್ಟೇ ಸ್ವಾರಸ್ಯಕರ. ಯುದ್ಧೋಪಕರಣಗಳ ಸಂಶೋಧನೆಯಲ್ಲಿ, ತಂತ್ರಕ್ಕೆ ತಕ್ಕ ಪ್ರತಿತಂತ್ರ ಹೂಡುವುದರಲ್ಲಿ ಇಂದು ನಮಗೆ ಕಾಣಸಿಗುವ ಮನುಷ್ಯನ ಪೈಪೋಟಿ ಮನೋಭಾವವನ್ನು ಐದಾರು ಸಾವಿರ ವರ್ಷಗಳ ಹಿಂದೆ ಸುಮೇರಿಯನ್ನರು ಮತ್ತು ಈಜಿಪ್ಷಿಯನ್ನರ ನಡುವೆ ನಡೆದ ಯುದ್ಧಗಳಲ್ಲೇ ಕಾಣಬಹುದಾಗಿದೆ.

    ಇದನ್ನೂ ಓದಿ: ಕ್ವಾರಂಟೈನ್ ಕೇಂದ್ರದ ಕಾಪೌಂಡ್ ಜಿಗಿದ; ಪ್ರಶ್ನಿಸಲು ಬಂದವರನ್ನೇ ಕಚ್ಚಿದ!

    ಈಜಿಪ್ಷಿಯನ್ನರು ಮತ್ತು ಸುಮೇರಿಯನ್ನರ ನಡುವೆ ಸಿನಾಯ್ ಪರ್ಯಾಯದ್ವೀಪದ ಹತೋಟಿಗಾಗಿನ ಕಾದಾಟ ಸಾಮಾನ್ಯವಾಗಿತ್ತು. ಆದರೆ ಎರಡೂ ಸೇನೆಗಳ ಗಾತ್ರ ಮತ್ತು ಸಮರತಂತ್ರಗಳ ನಡುವಿನ ಸಮಾನತೆಯಿಂದಾಗಿ ಪ್ರತೀ ಯುದ್ಧವೂ ಜಯಾಪಜಯಗಳ ನಿರ್ಣಯವಾಗದೆ ಕೊನೆಗೊಳ್ಳುವುದೂ ಸಾಮಾನ್ಯವಾಗಿತ್ತು. ಯುದ್ಧದಲ್ಲಿ ನಿಶ್ಚಿತ ಜಯ ಗಳಿಸಲೇಬೇಕೆಂಬ ಉದ್ದೇಶದಿಂದ ಸುಮೇರಿಯನ್ನರು ಹೊಸದೊಂದು ಯುದ್ಧೋಪಕರಣವನ್ನು ಅವಿಷ್ಕರಿಸಿದರು. ನಮ್ಮ ಕಾಲದ ಯುದ್ಧ ಟ್ಯಾಂಕ್​ಗಳಿಗೆ ‘ಆದಿಪುರುಷ’ನೆಂದು ಕರೆಯಬಹುದಾದ ಈ ಉಪಕರಣ ಕುದುರೆಗಳನ್ನು ಹೂಡಿದ ರಥದ ಮೇಲೆ ಕೂರಿಸಿದ ಒಂದು ಮರದ ಪೆಟ್ಟಿಗೆಯಾಗಿತ್ತು. ಆ ಪೆಟ್ಟಿಗೆಯ ಗೋಡೆಗಳಲ್ಲಿ ಹಲವಾರು ರಂಧ್ರಗಳಿರುತ್ತಿದ್ದವು. ಸುಮೇರಿಯನ್ ಸೈನಿಕರು ಈ ಪೆಟ್ಟಿಗೆಗಳ ಒಳಗೆ ಸುರಕ್ಷಿತವಾಗಿ ಕುಳಿತು ರಂಧ್ರಗಳ ಮೂಲಕ ಬಾಣಗಳ ಮಳೆಗರೆಯಬಹುದಾಗಿತ್ತು. ರಥಕ್ಕೆ ಕುದುರೆಗಳನ್ನು ಹೂಡಿದ ಕಾರಣ ಸುಮೇರಿಯನ್ನರಿಗೆ ಸ್ವಾಭಾವಿಕವಾಗಿಯೇ, ಬರೀ ಕಾಲಾಳುಗಳೇ ತುಂಬಿದ್ದ ಈಜಿಪ್ಷಿಯನ್ ಸೇನೆಗಿಂತ ಹೆಚ್ಚಿನ ಚಲನಾಸಾಮರ್ಥ್ಯತ್ತು. ಇದರ ಪರಿಣಾಮವಾಗಿ ಸುಮೇರಿಯನ್ನರು ಪ್ರಪ್ರಥಮ ಬಾರಿಗೆ ನಿರ್ಣಾಯಕ ಜಯ ಗಳಿಸಿದರು. ಅಷ್ಟೇ ಅಲ್ಲ, ಮರುವರ್ಷ ಇಂತಹ ಮತ್ತಷ್ಟು ‘ಟ್ಯಾಂಕ್’ಗಳನ್ನು ನಿರ್ವಿುಸಿ ಈಜಿಪ್ಟ್​ನ ಮೇಲೆ ಮತ್ತೊಮ್ಮೆ ಏರಿಹೋದರು. ಅತ್ತ ಈಜಿಪ್ಷಿಯನ್ ಪಾಳಯದಲ್ಲಿ ಗೊಂದಲ. ಅವರಲ್ಲಿ ಈ ‘ಟ್ಯಾಂಕ್’ಗಳ ನಿರ್ವಣಕ್ಕೆ ಅಗತ್ಯವಾದ ತಂತ್ರಜ್ಞಾನ ಹಾಗೂ ಸಂಪನ್ಮೂಲಗಳ ಕೊರತೆ ಆರಂಭದಲ್ಲಿ ಇದ್ದಿರಬಹುದು. ಆದರೆ ಸುಮೇರಿಯನ್ ‘ಟ್ಯಾಂಕ್’ಗಳನ್ನು ನಿರುಪಯುಕ್ತಗೊಳಿಸುವ ತಂತ್ರವೊಂದನ್ನು ಹರಿತ ತಲೆಯ ಈಜಿಪ್ಷಿಯನ್ ಸೇನಾಧಿಕಾರಿಯೊಬ್ಬ ರೂಪಿಸಿ ತನ್ನ ಸೇನೆಗೆ ವಿಜಯದ ಮಾಲೆ ತೊಡಿಸಿದ. ಆತ ಮಾಡಿದ್ದಿಷ್ಟೇ- ದಷ್ಟಪುಷ್ಟವಾಗಿ ಬೆಳೆದ ಒಂದಷ್ಟು ಹೆಣ್ಣುಕುದುರೆಗಳನ್ನು ತಂದು ರಣರಂಗದಲ್ಲಿ ಬಿಟ್ಟ. ಸುಮೇರಿಯನ್ ‘ಟ್ಯಾಂಕ್’ಗಳನ್ನು ಎಳೆಯುತ್ತಿದ್ದುವೆಲ್ಲ ಗಂಡುಕುದುರೆಗಳು ಎನ್ನುವುದನ್ನು ಪತ್ತೆ ಮಾಡಿಕೊಂಡಿದ್ದ ಅವನ ಈ ಉಪಾಯ ಯಶಸ್ವಿಯಾಯಿತು. ಈಜಿಪ್ಷಿಯನ್ ಹೆಣ್ಣುಕುದುರೆಗಳ ಹಿಂದೆ ಬಿದ್ದ ಸುಮೇರಿಯನ್ ಗಂಡುಕುದುರೆಗಳು ಸಾರಥಿಗಳ ಯಾವುದೇ ಮಾತಿಗೂ ಸೊಪು್ಪ ಹಾಕದೇ ‘ಟ್ಯಾಂಕ್’ಗಳನ್ನೂ ಎಳೆದುಕೊಂಡು ದಿಕ್ಕುದಿಕ್ಕಿಗೆ ಓಡತೊಡಗಿದವು. ಸುಮೇರಿಯನ್ ಪಾಳಯದಲ್ಲಿ ಗೊಂದಲವೋ ಗೊಂದಲ! ಪರಿಣಾಮವಾಗಿ ವಿಜಯಲಕ್ಷಿ್ಮೕ ಈಜಿಪ್ಷಿಯನ್ನರ ಪರ.

    ನಂತರದ ಇತಿಹಾಸದಲ್ಲಿ ಪ್ರಾಯಶಃ ಅತಿಮುಖ್ಯ ಮಾರಕಾಸ್ತ್ರದ ಸಂಶೋಧನೆಯೆಂದರೆ ಸಿಡಿಮದ್ದಿನದು. ಅದನ್ನು ಮಾಡಿದವರು ಚೀನೀಯರೇ. ಅವರಿಂದ ಸಿಡಿಮದ್ದಿನ ಬಗ್ಗೆ ಅರಿತ ತುರ್ಕರು ಅದರ ಉಪಯೋಗದಿಂದ 1453ರಲ್ಲಿ ಕಾನ್​ಸ್ಟಾಂಟಿನೋಪಲ್ ಕೋಟೆಯನ್ನು ಭೇದಿಸಿ ನಗರವನ್ನು ಆಕ್ರಮಿಸಿಕೊಂಡು ತಮ್ಮ ಮೂರು ಶತಮಾನಗಳ ಕನಸನ್ನು ನನಸಾಗಿಸಿಕೊಂಡರು. ಆಗ ಭಾರತ ಮತ್ತು ಚೀನಾಗೆ ನೆಲಮಾರ್ಗವನ್ನು ಕಳೆದುಕೊಂಡ ಯುರೋಪಿಯನ್ನರು ಜಲಮಾರ್ಗದ ಶೋಧನೆಗಿಳಿದರು, ಅದರಲ್ಲಿ ಯಶಸ್ವಿಯೂ ಆದರು. ಆ ಹಾದಿಯಲ್ಲಿ ಅಮೆರಿಕವನ್ನೂ ಶೋಧಿಸಿದರು. ಎಲ್ಲೆಡೆ ವಸಾಹತುಶಾಹಿ ಆರಂಭವಾಯಿತು. ಇದರಲ್ಲಿ ಯುರೋಪಿಯನ್ನರ ಕೈಗಳನ್ನು ಮೇಲಾಗಿಸಿದ್ದು ಅವರು ತುರ್ಕರಿಂದ ಪಡೆದುಕೊಂಡಿದ್ದ ಸಿಡಿಮದ್ದು ಮತ್ತು ಫಿರಂಗಿಯ ಜ್ಞಾನ. ಹೀಗೆ ಸಿಡಿಮದ್ದು ಜಗತ್ತಿನ ಇತಿಹಾಸವನ್ನು ಸಂಪೂರ್ಣವಾಗಿ ಬದಲಿಸಿಬಿಟ್ಟಿತು. ‘ಫಿರಂಗಿಗಳು ಸಾಮ್ರಾಜ್ಯವೊಂದರ ಕೀಲಿಕೈ ಮತ್ತು ಬೀಗ’ ಎಂದು ಮೊಘಲ್ ಚಕ್ರವರ್ತಿ ಅಕ್ಬರ್ ವರ್ಣಿಸಿದ್ದ.

    ಸಿಡಿಮದ್ದಿನ ನಂತರ ಮಾನವ ಆವಿಷ್ಕರಿಸಿದ ಬಹುಮುಖ್ಯ ಯುದ್ಧೋಪಕರಣವೆಂದರೆ ಟ್ಯಾಂಕ್, ಇಪ್ಪತ್ತನೆಯ ಶತಮಾನದ ಆದಿಯಲ್ಲಿ. ಪ್ರಥಮ ಮಹಾಯುದ್ಧದಲ್ಲಿ ಅಡೆತಡೆಯಿಲ್ಲದೆ ಮುಂದೊತ್ತಿಬರುತ್ತಿದ್ದ ಜರ್ಮನ್ ಸೇನೆಯನ್ನು ಬೆಲ್ಜಿಯಂನ ಸೊಮ್ ರಣಾಂಗಣದಲ್ಲಿ ತಡೆದು ನಿಲ್ಲಿಸಿದ್ದು ಬ್ರಿಟಿಷ್ ಟ್ಯಾಂಕ್​ಗಳು. ಅತ್ಯಂತ ರಹಸ್ಯವಾಗಿ ನಿರ್ವಣಗೊಂಡು, ಅಷ್ಟೇ ರಹಸ್ಯವಾಗಿ ಉತ್ತರ ಸಮುದ್ರವನ್ನು ದಾಟಿ ಸೊಮ್ ರಣಾಂಗಣದಲ್ಲಿ 1917ರ ಒಂದು ಮುಂಜಾನೆ ಏಕಾಏಕಿ ಕಾಣಿಸಿಕೊಂಡ ಟ್ಯಾಂಕ್​ಗಳು ಜರ್ಮನರನ್ನು ಅದೆಷ್ಟರ ಮಟ್ಟಿಗೆ ದಿಕ್ಕೆಡಿಸಿಬಿಟ್ಟವೆಂದರೆ, ಏನು ಮಾಡಿದರೂ ನಿಲ್ಲದೇ ತಮ್ಮತ್ತ ನುಗ್ಗಿಬರುತ್ತಿದ್ದ ಈ ಅಪರಿಚಿತ ‘ಯಂತ್ರ’ಗಳಿಗೆ ಹೆದರಿ ಜರ್ಮನ್ ಸೈನಿಕರು ರಣಾಂಗಣದಿಂದಲೇ ಓಡಿಹೋದರು. ಅದು ಪ್ರಥಮ ಮಹಾಯುದ್ಧದ ನಿರ್ಣಾಯಕ ತಿರುವು. ಅಲ್ಲಿಂದಾಚೆಗೆ ಯುದ್ಧದ ಗತಿಯೇ ಬದಲಾಗಿಹೋಯಿತು.

    ನಂತರ ಎರಡನೆಯ ಮಹಾಯುದ್ಧದ ತರುವಾಯ ಅಮೆರಿಕ ಮತ್ತು ಸೋವಿಯೆತ್ ಯೂನಿಯನ್​ಗಳ ನಡುವೆ ನಡೆದ ಶಸ್ತ್ರಾಸ್ತ್ರ ಪೈಪೋಟಿಯ ತೀವ್ರತೆ ಯುದ್ಧ ಇತಿಹಾಸದಲ್ಲಿ ಅದ್ವಿತೀಯ. 1945ರಲ್ಲಿ ಅಮೆರಿಕ ಅಣ್ವಸ್ತ್ರವನ್ನು ಗಳಿಸಿಕೊಂಡರೆ ನಾಲ್ಕು ವರ್ಷಗಳ ನಂತರ 1949ರಲ್ಲಿ ಸೋವಿಯೆತ್ ಯೂನಿಯನ್ ಸಹ ಅಣ್ವಸ್ತ್ರ ರಾಷ್ಟ್ರವಾಯಿತು. ಆಮೇಲೆ ಜಲಜನಕ ಬಾಂಬ್​ಗಳ ಸಂಶೋಧನೆಯಲ್ಲೂ ಅಮೆರಿಕ ಮೊದಲು, ಸೋವಿಯೆತ್ ಯೂನಿಯನ್ ನಂತರ. ಮುಂದಿನ ಅರ್ಧ ದಶಕದಲ್ಲಿ ಅಣ್ವಸ್ತ್ರಗಳನ್ನು ಒಯ್ಯಬಲ್ಲ ಕ್ಷಿಪಣಿಗಳನ್ನು ನಿರ್ವಿುಸುವುದರ ಮೂಲಕ ಸೋವಿಯೆತ್ ಯೂನಿಯನ್ ಶಸ್ತ್ರಾಸ್ತ್ರ ಪೈಪೋಟಿಯಲ್ಲಿ ಅಮೆರಿಕವನ್ನು ಹಿಂದಿಕ್ಕಿತು. ಆದರೆ, 1977ರಲ್ಲಿ ನ್ಯೂಟ್ರಾನ್ ಬಾಂಬ್ ಅನ್ನು ಯಶಸ್ವಿಯಾಗಿ ಪರೀಕ್ಷಿಸುವುದರ ಮೂಲಕ ಹಾಗೂ ಎಂಬತ್ತರ ದಶಕದ ಆರಂಭದಲ್ಲಿ ‘ಸ್ಟಾರ್ ವಾರ್’ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಅಮೆರಿಕ ಶಸ್ತ್ರಾಸ್ತ್ರ ಪೈಪೋಟಿಯಲ್ಲಿ ಸೋವಿಯೆತ್ ಯೂನಿಯನ್ ವಿರುದ್ಧ ಅಂತಿಮ ವಿಜಯ ಸಾಧಿಸಿತು. ಅದಾದ ಮೇಲೆ ಇಂದು ಜಗತ್ತು ವೈರಸ್ ಅಸ್ತ್ರವನ್ನು ಕಾಣುತ್ತಿದೆ.

    ಕರೊನಾ ವೈರಸ್ ಅನ್ನು ಚೀನಾ ಸೃಷ್ಟಿಸಿದ್ದು ಜಾಗತಿಕ ಸೂಪರ್ ಪವರ್ ಆಗುವ ಇರಾದೆಯಿಂದ ಎಂದು ಹೇಳಬಹುದಾಗಿದೆ. ಈ ಇರಾದೆಯಲ್ಲಿ ತಪ್ಪೇನಿಲ್ಲ. ಸೂಪರ್ ಪವರ್ ಸ್ಥಾನ ಯಾವುದೇ ದೇಶದ ಶಾಶ್ವತ ಸ್ವತ್ತೇನಲ್ಲ. ಕಳೆದ ಎರಡೂವರೆ ಸಹಸ್ರಮಾನದಲ್ಲಿ ಅದು ಒಂದು ದೇಶದ ಕೈತಪ್ಪಿ ಮತ್ತೊಂದು ದೇಶಕ್ಕೆ ವರ್ಗಾವಣೆಯಾದದ್ದನ್ನು ಜಗತ್ತು ಮತ್ತೆಮತ್ತೆ ಕಂಡಿದೆ. ಆದರೆ, ಜಗದ್​ನಾಯಕನ ಸ್ಥಾನ ಕೇವಲ ಅನುಕೂಲ, ಅಧಿಕಾರ, ಪ್ರತಿಷ್ಠೆಗಳನ್ನಷ್ಟೇ ತರುವುದಿಲ್ಲ, ಅಪರಿಮಿತ ಜವಾಬ್ದಾರಿಯನ್ನೂ ತರುತ್ತದೆ ಎನ್ನುವುದನ್ನು ಅರಿಯುವುದರಲ್ಲಿ ಚೀನಾ ಸೋತಿದೆ. ಹಾಗೆ ನೋಡಿದರೆ ಪ್ರಾಚೀನ ಸ್ಪಾರ್ಟಾದಿಂದ ಹಿಡಿದು ಇಂದಿನ ಅಮೆರಿಕವರೆಗೆ ಯಾವೊಂದು ಸೂಪರ್ ಪವರ್ ಸಹ ಪೂರ್ಣ ಜವಾಬ್ದಾರಿತನ ಪ್ರದರ್ಶಿಸಿದ್ದಿಲ್ಲ. ಆದರೆ ಚೀನಾದ ಬೇಜವಾಬ್ದಾರಿತನ ಮಾತ್ರ ಉಳಿದೆಲ್ಲದರನ್ನೂ ಮೀರಿಸುತ್ತದೆ. ಚೀನಾ ನಿಜವಾಗಿಯೂ ನಂ. 1 ಆಗಿಬಿಟ್ಟರೆ ಇತರ ಯಾವ ದೇಶಕ್ಕೂ ಉಳಿಗಾಲವಿಲ್ಲ, ಅಷ್ಟೇಕೆ ಬಹುಶಃ ಚೀನೀ ಕಮ್ಯೂನಿಸ್ಟರ ಹೊರತಾಗಿ ಮಾನವಜನಾಂಗಕ್ಕೇ ಉಳಿವಿಲ್ಲ.

    (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts