More

    ಗುರುವಾರದಿಂದ ಮತ್ತೆ ಜನಸ್ಪಂದನಾ ಕಾರ್ಯಕ್ರಮ

    ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ನಾಗರಿಕರ ಅಹವಾಲು/ಕುಂದು-ಕೊರತೆ ಆಲಿಸುವ ಸಲುವಾಗಿ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜನಸ್ಪಂದನಾ ಕಾರ್ಯಕ್ರಮ ‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಗುರುವಾರದಿಂದ (ಜ.11) ಮತ್ತೆ ಮೂರು ಸ್ಥಳಗಳಲ್ಲಿ ನಿಗದಿಯಾಗಿದೆ.

    ಬೊಮ್ಮನಹಳ್ಳಿ ವಲಯಕ್ಕೆ ಸಂಬಂಧಿಸಿದಂತೆ ಬೆಂಗಳೂರು ದಕ್ಷಿಣ, ಬೊಮ್ಮನಹಳ್ಳಿ ಹಾಗೂ ಆನೇಕಲ್ ಕ್ಷೇತ್ರಗಳ ಜನಸ್ಪಂದನಾ ಕಾರ್ಯಕ್ರಮ ಜ.11ರಂದು ನಡೆಯಲಿದೆ. ಜ.16ರಂದು ಪಶ್ಚಿಮ ವಲಯದ ಗಾಂಧಿನಗರ, ಚಾಮರಾಜಪೇಟೆ ಹಾಗೂ ಮಲ್ಲೇಶ್ವರ ಕ್ಷೇತ್ರಗಳಿಗೆ ಸೀಮಿತವಾಗಿ ಕಾರ್ಯಕ್ರಮ ಜರುಗಲಿದೆ.

    ಕಳೆದ ವಾರ ಮಹದೇವಪುರ, ಯಲಹಂಕ ಹಾಗೂ ಪೂರ್ವ ವಲಯದ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳ ಮಟ್ಟಿಗೆ ಜನಸ್ಪಂದನಾ ನಡೆದಿತ್ತು. ಈ ಮೂರೂ ಕಾರ್ಯಕ್ರಮದಲ್ಲಿ 10 ಸಾವಿರಕ್ಕೂ ಹೆಚ್ಚು ಅಹವಾಲು/ದೂರುಗಳು ಸಲ್ಲಿಕೆಯಾಗಿದ್ದವು. ಹೆಚ್ಚು ಕೌಂಟರ್‌ಗಳನ್ನು ತೆರೆದಿದ್ದರೂ, ತ್ವರಿತವಾಗಿ ಅರ್ಜಿ ಸ್ವೀಕಾರ ಹಾಗೂ ಹಿಂಬರಹ ನೀಡುವ ಹೆಲ್ಪ್ ಡೆಸ್ಕ್‌ನಲ್ಲಿ ನಿಧಾನ ಗತಿಯ ಸೇವೆ ನೀಡಲಾಗುತ್ತಿದೆ ಎಂಬ ಸಾರ್ವಜನಿಕರ ಆಕ್ಷೇಪ ಹಿನ್ನೆಲೆಯಲ್ಲಿ ಮುಂದಿನ ಬಾರಿ ನಡೆಯುವ ಕಾರ್ಯಕ್ರಮಗಳಲ್ಲಿ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲು ಡಿಸಿಎಂ ಕಚೇರಿಯಿಂದ ಪಾಲಿಕೆಗೆ ಸೂಚನೆ ನೀಡಲಾಗಿದೆ.

    ತಿಂಗಳಾಂತ್ಯಕ್ಕೆ 2ನೇ ಹಂತಕ್ಕೆ ಚಾಲನೆ:

    ಬೆಂಗಳೂರಿನ ಒಟ್ಟು 28 ವಿಧಾನಸಭಾ ಕ್ಷೇತ್ರಗಳ ಪೈಕಿ ಮೊದಲ ಹಂತದ ಪ್ರಥಮ ಚರಣದಲ್ಲಿ 8 ಕ್ಷೇತ್ರಗಳನ್ನು ಒಳಗೊಂಡಂತೆ ಕಾರ್ಯಕ್ರಮ ಪೂರ್ಣಗೊಂಡಿದ್ದು, 2ನೇ ಚರಣದಲ್ಲಿ 6 ಕ್ಷೇತ್ರಗಳಲ್ಲಿ ನಿಗದಿಯಾಗಿದೆ. ಎರಡನೇ ಹಂತದಲ್ಲಿ ಇನ್ನುಳಿದ ಉಳಿದ 14 ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಜನಸ್ಪಂದನಾ ಕಾರ್ಯಕ್ರಮ ಈ ತಿಂಗಳ ಮೂರನೇ ವಾರದಿಂದ ಆರಂಭವಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts