More

    ಕರೊನಾದಿಂದ ಬಾಡಿದ ಹಿರೇಬಾಗೇವಾಡಿ

    ಹಿರೇಬಾಗೇವಾಡಿ: ಆರಂಭದಲ್ಲಿ ಕರೊನಾ ವೈರಸ್ ಪ್ರಕರಣಗಳಿಂದಾಗಿ ರಾಜ್ಯ-ದೇಶ ಮಟ್ಟದಲ್ಲಿ ಕುಖ್ಯಾತಿಗೊಳಗಾಗಿದ್ದ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮ ಇದೀಗ ಅಕ್ಷರಶಃ ನಲುಗಿಹೋಗಿದೆ. ಇಲ್ಲಿನ 49 ಸೋಂಕಿತರು ಗುಣಮುಖರಾಗಿ ಮನೆ ಸೇರಿದ್ದರೂ, ಗ್ರಾಮಸ್ಥರು ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಕಂಗೆಟ್ಟಿದ್ದಾರೆ.

    ಸುಮಾರು ಎರಡೂವರೆ ತಿಂಗಳಿಂದ ಲಾಕ್‌ಡೌನ್ ಶಿಕ್ಷೆ ಅನುಭವಿಸಿರುವ ಸ್ಥಳೀಯರು ಆರ್ಥಿಕವಾಗಿ ದಿವಾಳಿಯಾಗಿದ್ದಾರೆ. ಕೂಲಿಕಾರರು, ಬಡವರು, ದಿನನಿತ್ಯ ದುಡಿದೇ ಹಸಿವು ನೀಗಿಸಿಕೊಳ್ಳುವವರ ಬಳಿ ಇದೀಗ ಬಿಡಿಗಾಸೂ ಇಲ್ಲದಾಗಿದೆ.

    ಮರೆತ ಜನಪ್ರತಿನಿಧಿಗಳು: ಮಾಸಿಕ ಪಿಂಚಣಿ ಪಡೆಯುವ ವೃದ್ಧರು, ಅಂಗವಿಕಲರು, ವಿಧವೆಯರು ಮತ್ತು ಸಣ್ಣಪುಟ್ಟ ಹಣಕಾಸಿನ ವ್ಯವಹಾರ ಮಾಡುವ ಸಾಮಾನ್ಯ ಜನರೂ ಸಹ ಕಂಗಾಲಾಗಿದ್ದಾರೆ. ಸ್ಥಳೀಯ ಬ್ಯಾಂಕ್, ಪೋಸ್ಟ್ ಆಫೀಸ್ ಸಹ ಬಂದ್ ಆಗಿದ್ದರಿಂದ ಗ್ರಾಮಸ್ಥರು ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದಾರೆ. ಪ್ರಾರಂಭದಲ್ಲಿ ಅನುಕಂಪ ತೋರಿದ ಜನಪ್ರತಿನಿಧಿಗಳು ಆಹಾರ ಪೊಟ್ಟಣ ವಿತರಿಸಿ ಪ್ರಚಾರ ಪಡೆದುಕೊಂಡರು. ಆದರೆ, ಇದೀಗ ಯಾವ ಜನಪ್ರತಿನಿಧಿಗಳೂ ನೊಂದ ಜನರ ಸಹಾಯಕ್ಕೆ ಬರುತ್ತಿಲ್ಲ.

    ಮಾಸದ ಕಹಿ: ರಾಜ್ಯದಲ್ಲಿ ಕರೊನಾ ಪ್ರಕರಣ ಹೆಚ್ಚಳಗೊಂಡ ಸಂದರ್ಭದಲ್ಲಿ ಹಿರೇಬಾಗೇವಾಡಿಯಲ್ಲಿ ಸೋಂಕಿತರ ಸಂಖ್ಯೆ ಇತರೆಲ್ಲ ಜಿಲ್ಲೆಗಳಿಗಿಂತ ಅಧಿಕವಾಗಿತ್ತು. ಇದರಿಂದಾಗಿಯೇ ಈ ಗ್ರಾಮ ಕರೊನಾ ಫ್ಯಾಕ್ಟರಿ, ಮನೆಗೊಂದು ರೋಗಿ, ಕರೊನಾಗ್ರಸ್ತ ಹಿರೇಬಾಗೇವಾಡಿ ಎಂದು ಅಪಖ್ಯಾತಿಗೆ ಒಳಗಾಗಿತ್ತು. ಹೀಗಾಗಿ ಇಲ್ಲಿನವರು ಅಕ್ಕಪಕ್ಕದ ಊರುಗಳಿಗೆ ಬರಬಾರದೆಂದು ಗಡಿಯಲ್ಲಿ ನಿರ್ಬಂಧ ಹೇರಿ ಊರಿನ ರಸ್ತೆಗೇ ಬೇಲಿ ಹಾಕಿಕೊಂಡಿದ್ದರು. ಬೇಲಿ ದಾಟಿ ಬಂದವರನ್ನು ಅಮಾನವೀಯವಾಗಿ ಥಳಿಸಿದ ಘಟನೆಯ ದೃಶ್ಯ ಇನ್ನೂ ಕಣ್ಮುಂದೆ ಇದೆ.

    ಮುಕ್ತವಾಗಿಲ್ಲ ಭಯ: ಹಿರೇಬಾಗೇವಾಡಿ ಕರೊನಾ ವೈರಸ್‌ನಿಂದ ಸಂಪೂರ್ಣ ಮುಕ್ತವಾಗಿ ಸಂಚಾರ ಪ್ರಾರಂಭವಾಗಿದೆ. ಆದರೂ ಇಲ್ಲಿನ ಜನರೊಂದಿಗೆ ಬೇರೆ ಊರ ಜನ ಮುಕ್ತವಾಗಿ ವ್ಯವಹರಿಸುತ್ತಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಮಾಧ್ಯಮಗಳ ಮೂಲಕ ಅಥವಾ ಖುದ್ದು ಸಾರ್ವಜನಿಕರಿಗೆ ತಿಳಿವಳಿಕೆ ನೀಡಬೇಕಿದೆ. ಗ್ರಾಮದ ಬಗ್ಗೆ ಸುತ್ತಲಿನ ಜನರಲ್ಲಿರುವ ಭಯ ದೂರ ಮಾಡುವ ಮಹತ್ವದ ಕಾರ್ಯಕ್ಕೆ ಕ್ರಮ ಕೈಗೊಳ್ಳಬೇಕಿದೆ ಎನ್ನುತ್ತಾರೆ ಇಲ್ಲಿನ ಪ್ರಜ್ಞಾವಂತರು.

    ಇಲ್ಲಿನವರ ಜೀವಕ್ಕೂ ಇಲ್ಲ ಬೆಲೆ!: ಹಿರೇಬಾಗೇವಾಡಿ ಗ್ರಾಮ ಕರೊನಾ ಸೋಂಕು ಮುಕ್ತವಾಗಿದ್ದರೂ ಅಕ್ಕಪಕ್ಕದ ಊರಿನವರು ಇಲ್ಲಿನ ಜನರನ್ನು ನೋಡಿ ದೂರ ನಿಲ್ಲುತ್ತಿದ್ದಾರೆ. ಪಟ್ಟಣಗಳಿಗೆ ಹೋಗಿ ಎಲ್ಲಾದರೂ ಕೂಲಿ ಕೆಲಸ ಕೇಳಿದರೆ ಹಿರೇಬಾಗೇ ವಾಡಿಯವರೆಂಬ ಕಾರಣಕ್ಕೆ ಹತ್ತಿರಕ್ಕೆ ಸೇರಿಸಿಕೊಳ್ಳುತ್ತಿಲ್ಲ. ಬೆಳಗಾವಿಯ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ದಾಖಲಿಸಿಕೊಳ್ಳುತ್ತಿಲ್ಲ. ಬುಧವಾರ ರಾತ್ರಿ ಇಲ್ಲಿಯ ಯುವಕನೋರ್ವ ಹೃದಯಾಘಾತವಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ಹೋದರೆ ಹಿರೇಬಾಗೇವಾಡಿಯವನೆಂಬ ಕಾರಣಕ್ಕೆ ವೇಳೆಗೆ ಸರಿಯಾಗಿ ಚಿಕಿತ್ಸೆ ಕೊಡದ್ದರಿಂದ ಆತ ಪ್ರಾಣ ಕಳೆದುಕೊಂಡಿದ್ದಾನೆ. ಹಲವಾರು ವರ್ಷಗಳಿಂದ ಬೆಳಗಾವಿಯ ವಿವಿಧ ಅಂಗಡಿಗಳಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದವರನ್ನೂ ಹಿರೇಬಾಗೇವಾಡಿಯವರೆಂದು ಕೆಲಸದಿಂದ ಬಿಡಿಸಲಾಗಿದೆ.

    ಬೆಳಗಾವಿಯ ಅಂಗಡಿಗಳಲ್ಲಿ ಕೆಲಸ ಕೇಳಲು ಹೋದರೆ ನಾನು ಹಿರೇಬಾಗೇವಾಡಿಯವನೆಂಬ ಕಾರಣದಿಂದ ಕೆಲಸ ಕೊಡಲು ನಿರಾಕರಿಸಿದ್ದಾರೆ. ನಮ್ಮ ಗ್ರಾಮ ಕರೊನಾ ಮುಕ್ತವಾಗಿದ್ದರೂ ನಮ್ಮನ್ನು ಅಂಗಡಿಕಾರರು ಕೆಲಸಕ್ಕೆ ಕರೆದುಕೊಳ್ಳುತ್ತಿಲ್ಲ. ಹೀಗಾದರೆ ನಮ್ಮ ಕುಟುಂಬ ನಿರ್ವಹಣೆ ಹೇಗೆ?. ಪರಿಣಾಮ ನಿತ್ಯದ ಊಟಕ್ಕೂ ಪರದಾಡುವಂತಾಗಿದೆ. ಕುಟುಂಬ ನಿರ್ವಹಣೆ ಸಮಸ್ಯೆಯಾಗಿದೆ.
    |ಅಡಿವೆಪ್ಪ ಭೀಮಣ್ಣವರ ಕೂಲಿ ಕಾರ್ಮಿಕ, ಹಿರೇಬಾಗೇವಾಡಿ ಗ್ರಾಮಸ್ಥ.

    | ಮನೋಹರ ಕಮ್ಮಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts