More

    Web Exclusive| ಕೆಂಪಿರುವೆ-ಚಿಟ್ಟೆಹುಳು ಸಹಬಾಳ್ವೆ: ಉಡುಪಿಯಲ್ಲಿ ಪ್ರಕೃತಿ ವಿಸ್ಮಯ!

    ಉಡುಪಿ: ಇರುವೆಗಳು ಚಿಟ್ಟೆಹುಳಗಳನ್ನು ಭಕ್ಷಿಸುವುದು ಸಾಮಾನ್ಯ. ಆದರೆ ಇಲ್ಲಿ ಕೆಂಪಿರುವೆ ಮತ್ತು ಚಿಟ್ಟೆಹುಳುಗಳು ಸಹಬಾಳ್ವೆ ನಡೆಸುತ್ತಿವೆ!

    ಉಡುಪಿಯ ಬ್ರಹ್ಮಗಿರಿಯಲ್ಲಿರುವ ಹೊಳೆ ದಾಸವಾಳ ಗಿಡದಲ್ಲಿ ಚಿಟ್ಟೆಗಳ ಅಧ್ಯಯನಕಾರರಿಗೆ ಈ ಪ್ರಾಕೃತಿಕ ವಿಸ್ಮಯ ಗೋಚರಿಸಿದೆ. ಲೈಸೀನಿಡಿ ಬ್ಲೂಸ್ ಚಿಟ್ಟೆ ಕುಟುಂಬಕ್ಕೆ ಸೇರಿದ ವೆಸ್ಟರ್ನ್ ಸೆಂಟರ್ ಓಕ್​ಬ್ಲೂ, ಸೀಲಿಯೆಟ್ ಬ್ಲೂ ಚಿಟ್ಟೆಹುಳಗಳು ಹಾಗೂ ಮಲೆನಾಡಿನಲ್ಲಿ ಚಿಗುಳಿ, ತುಳುವಿನಲ್ಲಿ ತಬುರು/ಉರಿ ಎಂದು ಕರೆಯುವ ಕೆಂಪಿರುವೆ (ವೀವರ್ ಆಂಟ್)ಗಳ ನಡುವೆ ಈ ಬಾಂಧವ್ಯ ಇರುವುದನ್ನು ಚಿಟ್ಟೆ ಅಧ್ಯಯನಕಾರ ಸಮ್ಮಿಲನ್ ಶೆಟ್ಟಿ ಗುರುತಿಸಿದ್ದಾರೆ.

    ಚಿಟ್ಟೆಗಳು ಪರಾಗಸ್ಪರ್ಶ, ಸೂಚಕ ಜೀವಿಗಳಾಗಿ ಮತ್ತು ಇತರ ಜೀವಿಗಳಿಗೆ ಆಹಾರವಾಗಿ ಪ್ರಕೃತಿಯಲ್ಲೊಂದು ಮಹತ್ವದ ಪಾತ್ರ ವಹಿಸುತ್ತವೆ. ಈ ಚಿಟ್ಟೆಯ ಹುಳಗಳನ್ನು ಕೆಂಪಿರುವೆಗಳು ರಕ್ಷಣೆ ಮಾಡುತ್ತವೆ. ಹೊಳೆ ದಾಸವಾಳದ ಚಿಗುರೆಲೆಗಳಲ್ಲಿ ಜೂನ್​ನಿಂದ ಅಕ್ಟೋಬರ್​ವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಚಿಟ್ಟೆಗಳು ಮೊಟ್ಟೆ ಇಡುತ್ತವೆ.

    ರಕ್ಷಣೆಗೆ ಪ್ರತಿಯಾಗಿ ಸಿಹಿ: ಮೊಟ್ಟೆಗಳಿಂದ ಹೊರಬರುವ ಚಿಟ್ಟೆಯ ಹುಳಗಳು ಚಿಗುರೆಲೆಗಳನ್ನು ತಿನ್ನುತ್ತ, ಇದೇ ಮರಗಳಲ್ಲಿ ಹೇರಳವಾಗಿರುವ ಕೆಂಪಿರುವೆಗಳೊಂದಿಗೆ ಸ್ನೇಹ ಬೆಳೆಸುತ್ತವೆ. ಇದು ಈ ಹುಳಗಳು ವೈರಿಗಳ ದಾಳಿಯಿಂದ ರಕ್ಷಣೆ ಪಡೆಯಲು ಮಾಡುವ ತಂತ್ರ. ಈ ಹುಳಗಳ ಸುತ್ತ ಇರುವೆಗಳು ಇರುವುದರಿಂದ ವೈರಿಗಳು ದಾಳಿಗೆ ಹಿಂದೇಟು ಹಾಕುತ್ತವೆ. ಹೀಗೆ ಈ ಮರದ ಎಲೆಗಳಲ್ಲಿ ಎಲ್ಲಿ ಕೆಂಪಿರುವೆ ಕಾಣಸಿಗುತ್ತದೋ ಅಲ್ಲಿ ಈ ಹುಳಗಳು ಸಾಮಾನ್ಯವಾಗಿ ಕಂಡು ಬರುತ್ತಿವೆ.

    ರಕ್ಷಣೆ ನೀಡುವ ಕೆಂಪಿರುವೆಗೆ ಪ್ರತಿಯಾಗಿ ಈ ಹುಳಗಳು ಬೆನ್ನ ಹಿಂದೆ ಸಿಹಿ ದ್ರವ(ಹನಿ ಡೀವ್) ಹೊರಸೂಸುತ್ತವೆ. ಇದು ಕೆಂಪಿರುವೆಗಳ ನೆಚ್ಚಿನ ಆಹಾರ. ಈ ಹುಳಗಳು ಕೋಶ ರಚಿಸಿ, ಚಿಟ್ಟೆಯಾಗಿ ಹೊರ ಬರುವವರೆಗೂ ಇರುವೆಗಳು ರಕ್ಷಣೆ ಒದಗಿಸುತ್ತದೆ ಎಂಬುದು ವಿಶೇಷ.

    ಇರುವೆಗಳು ಚಿಟ್ಟೆಗಳ ಹುಳಗಳನ್ನು ಭಕ್ಷಿಸುವುದು ಸಾಮಾನ್ಯ. ಆದರೆ ಲೈಸೀನಿಡೀ ಕುಟುಂಬದ ಈ ಚಿಟ್ಟೆ ಹುಳಗಳನ್ನು ಇರುವೆಗಳು ರಕ್ಷಿಸುವ ಕೆಲಸ ಮಾಡುವುದು ವಿಶೇಷ. ಈ ಹುಳಗಳು ತಮ್ಮ ದೇಹದಲ್ಲಿ ಸಿಹಿಯಾದ ದ್ರವವನ್ನು ಉತ್ಪಾದಿಸಿ, ಇರುವೆಗಳಿಗೆ ಕೊಡುತ್ತವೆ. ಇರುವೆಗಳು ಪ್ರತಿಯಾಗಿ ಆ ಹುಳಗಳನ್ನು ರಕ್ಷಿಸುತ್ತವೆ.

    – ಸಮ್ಮಿಲನ್ ಶೆಟ್ಟಿ, ಸಂಸ್ಥಾಪಕ, ಚಿಟ್ಟೆ ಪಾರ್ಕ್, ಬೆಳುವಾಯಿ

    Web Exclusive| ರನ್ ವೇ ಮೇಲೆ ತೋಳ ಬಂತು ತೋಳ: ವಿಮಾನ ನಿಲ್ದಾಣಕ್ಕೆ ನಾಯಿ, ನರಿ ಕಾಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts