More

    ವಸತಿ ರಹಿತರಿಗೆ ಇನ್ನು ಉಚಿತ ಆಶ್ರಯ

    ಹುಬ್ಬಳ್ಳಿ: ಕೆಲಸದ ನಿಮಿತ್ತ ವಾಣಿಜ್ಯ ನಗರಿ ಹುಬ್ಬಳ್ಳಿಗೆ ಆಗಮಿಸುವ ನೂರಾರು ಬಡ ಕೂಲಿ ಕಾರ್ವಿುಕರು ಬಸ್ ನಿಲ್ದಾಣ, ಖಾಲಿ ಇರುವ ಕಟ್ಟಡ, ಫುಟ್​ಪಾತ್ ಮೇಲೆ ರಾತ್ರಿ ಕಳೆಯುವ ದೃಶ್ಯ ನಿತ್ಯವೂ ಕಾಣಿಸುತ್ತದೆ. ಈ ವರ್ಗದ ಕಾರ್ವಿುಕರ ಅನುಕೂಲಕ್ಕಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು 40 ಲಕ್ಷ ರೂ. ವೆಚ್ಚದಲ್ಲಿ ‘ನಗರ ವಸತಿ ರಹಿತರ ಆಶ್ರಯ ಕೇಂದ್ರ’ ನಿರ್ಮಾಣ ಆರಂಭಿಸಿದೆ. ಇಲ್ಲಿ ವಸತಿ ಸಂಪೂರ್ಣ ಉಚಿತ ಎಂಬುದು ವಿಶೇಷ.

    ನಗರದ ಹೊಸೂರಿನ ಸಾರ್ವಜನಿಕ ಗಣೇಶ ಮೂರ್ತಿ ವಿಸರ್ಜನೆ ಬಾವಿ ಬಳಿಯಿರುವ ಪಾಲಿಕೆ ಒಡೆತನದ ಜಾಗದಲ್ಲಿ ಆಶ್ರಯ ಕೇಂದ್ರದ ನಿರ್ಮಾಣ ಈಗಾಗಲೇ ಸ್ಲ್ಯಾಬ್ ಹಂತ ಪೂರ್ಣಗೊಳಿಸಿದೆ. ಈ ವರ್ಷ ಮಾರ್ಚ್ ಅಂತ್ಯಕ್ಕೆ ಕಾಮಗಾರಿ ಮುಗಿದು ಆಶ್ರಯ ಕೇಂದ್ರ ಸಾರ್ವಜನಿಕರ ಬಳಕೆಗೆ ತೆರೆದುಕೊಳ್ಳಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಕೆಲಸದ ನಿಮಿತ್ತ ಹಾಗೂ ಕೆಲಸ ಅರಸಿ ನಿತ್ಯ ಹುಬ್ಬಳ್ಳಿಗೆ ಆಗಮಿಸುವವರಲ್ಲಿ ಬಹಳಷ್ಟು ಜನರಿಗೆ ನಗರದಲ್ಲಿ ನೆಲೆ ಇರುವುದಿಲ್ಲ. ನಿತ್ಯ ಲಾಜ್​ನಲ್ಲಿ ಉಳಿಯುವುದು ವೆಚ್ಚದಾಯಕ. ಹಾಗಾಗಿ ಎಷ್ಟೋ ಬಡ ಜನರು ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣ, ಸಿದ್ಧಾರೂಢ ಮಠದ ಆವರಣ, ಫುಟ್​ಪಾತ್ ಮೇಲೆ ರಾತ್ರಿ ಕಳೆಯುತ್ತಾರೆ. ಇಂಥವರಿಗೆ ಒಂದಿಷ್ಟು ದಿನ ನೆಲೆ ಒದಗಿಸಲಿದೆ ನಗರ ವಸತಿ ರಹಿತರ ಆಶ್ರಯ ಕೇಂದ್ರ. ಇಲ್ಲಿ ವಸತಿ ಉಚಿತ. ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ (ಎನ್​ಯುುಎಲ್​ಎಂ-ನಲ್ಮ್)ದಡಿ ಹಣ ಬಿಡುಗಡೆಯಾಗಿದೆ.

    ಧಾರವಾಡದಲ್ಲಿ 1 ತಾತ್ಕಾಲಿಕ ವಸತಿ ರಹಿತರ ಆಶ್ರಯ ಕೇಂದ್ರವಿದೆ. ಈ ಹಿಂದೆ ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ತಾತ್ಕಾಲಿಕ ಆಶ್ರಯ ಕೇಂದ್ರವಿತ್ತು. ಇದೀಗ ಅಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ನವೀಕರಣ ಕಾಮಗಾರಿ ಕೈಗೊಳ್ಳಲಾಗುತ್ತಿರುವುದರಿಂದ ತಾತ್ಕಾಲಿಕ ಕೇಂದ್ರ ಬಂದ್ ಇರುತ್ತದೆ.

    46 ಜನರಿಗೆ ಸವಲತ್ತು

    ಈ ಕೇಂದ್ರವು ಏಕಕಾಲಕ್ಕೆ 46 ಜನರಿಗೆ ಆಶ್ರಯ ನೀಡುವ ಸಾಮರ್ಥ್ಯ ಹೊಂದಿದೆ. 23 ಜನ ಪುರುಷರು ಹಾಗೂ 23 ಜನ ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ನಿರಂತರ ಕುಡಿಯುವ ನೀರಿನ ವ್ಯವಸ್ಥೆ, ಶೌಚಗೃಹ, ಸ್ನಾನಗೃಹ, ವಿದ್ಯುತ್ ದೀಪ ಇರಲಿದೆ. ತಲಾ ಒಂದರಂತೆ 46 ಮಂಚ, ಸೀಲಿಂಗ್ ಪ್ಯಾನ್, ಟಿವಿ, ಸೊಳ್ಳೆ ಪರದೆ, ಬ್ಲಾಂಕೆಟ್, ತಲೆದಿಂಬು, ಬೆಡ್, ಹೊದಿಕೆ, ಪ್ರಥಮ ಚಿಕಿತ್ಸೆ, ಸ್ನಾನಕ್ಕೆ ಬೇಕಾಗುವ ಬಕೆಟ್, ಮಗ್, ಇತ್ಯಾದಿ ಅಗತ್ಯ ಸಾಮಗ್ರಿಗಳ ವ್ಯವಸ್ಥೆ ಮಾಡಲಾಗುತ್ತಿದೆ.

    ಅಡುಗೆ ಮಾಡಿಕೊಳ್ಳಲು ವ್ಯವಸ್ಥೆ

    ಆಶ್ರಯ ಕೇಂದ್ರವು ಕಿಚನ್ ಹಾಗೂ ಡೈನಿಂಗ್ ಹಾಲ್ ಹೊಂದಿರಲಿದೆ. ಆದರೆ, ವಾಸ್ತವ್ಯ ಮಾಡುವವರು ಖುದ್ದು ಅಡುಗೆ ತಯಾರಿಸಿಕೊಳ್ಳಬೇಕು. ಕೇಂದ್ರದಿಂದ ಊಟ, ಉಪಾಹಾರ ಪೂರೈಕೆ ವ್ಯವಸ್ಥೆ ಇರುವುದಿಲ್ಲ. ಅಡುಗೆ ತಯಾರಿಸಲು ಬೇಕಾಗುವ ಪಾತ್ರೆ, ಗ್ಯಾಸ್ ಸ್ಟೋವ್, ಸಿಲಿಂಡರ್ ವ್ಯವಸ್ಥೆ ಮಾಡಲಾಗುತ್ತಿದೆ.

    ನಗರ ವಸತಿ ರಹಿತರ ಆಶ್ರಯ ಕೇಂದ್ರದಲ್ಲಿ ಉಳಿದುಕೊಳ್ಳಲು ಯಾವುದೇ ಶುಲ್ಕ ಇರುವುದಿಲ್ಲ. ಒಬ್ಬರು ಗರಿಷ್ಠ 6 ತಿಂಗಳವರೆಗೆ ಉಳಿದುಕೊಳ್ಳಲು ಅವಕಾಶವಿರುತ್ತದೆ. ಅಂಚೆ ವಿಳಾಸವಿರುವ ಗುರುತಿನ ಚೀಟಿ, ಬಿಪಿಎಲ್ ಕಾರ್ಡ್ ಹಾಜರುಪಡಿಸಬೇಕು.
    | ರಮೇಶ ನೂಲ್ವಿ, ಸಮುದಾಯ ವ್ಯವಹಾರಗಳ ಅಧಿಕಾರಿ, ನಲ್ಮ್, ಪಾಲಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts