More

    ಬಬಲೇಶ್ವರ ಕ್ಷೇತ್ರದಲ್ಲಿ ಎಂಎಚ್ ತೇರಾ-ಬಾರಾ ವಾಹನ, ಚುನಾವಣೆಗೆ ಮುನ್ನವೇ ಭರಪೂರ ಆಮಿಷ; ಪ್ರಜಾಧ್ವನಿಯಲ್ಲಿ ಸೀರೆ-ಮೊಬೈಲ್ ಪ್ರತಿಧ್ವನಿ !

    ವಿಜಯಪುರ: ವಿಧಾನ ಸಭೆ ಚುನಾವಣೆ ಮುಂದಿಟ್ಟುಕೊಂಡು ಕಾಂಗ್ರೆಸ್ ನಡೆಸುತ್ತಿರುವ ಪ್ರಜಾಧ್ವನಿ ಯಾತ್ರೆಯಲ್ಲಿ ಸೀರೆ-ಮೊಬೈಲ್‌ಗಳ ಸದ್ದು ಪ್ರತಿಧ್ವನಿಸುತ್ತಿದೆ !

    ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ, ಶಾಸಕ ಎಂ.ಬಿ. ಪಾಟೀಲರ ಕ್ಷೇತ್ರ ಬಬಲೇಶ್ವರದಲ್ಲಿ ಇಂಥದ್ದೊಂದು ಪ್ರತಿಧ್ವನಿ ಕೇಳಿ ಬರುತ್ತಿದ್ದು, ಬಿಜೆಪಿಗರ ಆಕ್ರೋಶಕ್ಕೆ ಕಾರಣವಾಗಿದೆ. ಮಹಾರಾಷ್ಟ್ರದಿಂದ ನೋಂದಣಿಯಾಗಿರುವ ಎಂಎಚ್-ತೇರಾ, ಎಂಎಚ್-ಬಾರಾ ವಾಹನಗಳು ಬಬಲೇಶ್ವರದಲ್ಲಿ ಕಾರ್ಯಾಚರಿಸುತ್ತಿದ್ದು, ಸೀರೆ ಹಾಗೂ ಮೊಬೈಲ್‌ಗಳನ್ನು ಹಂಚಿ ಜನರನ್ನು ಕರೆತರುವ ಪ್ರಯತ್ನ ನಡೆದಿದೆ ಎಂದು ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ ಆಕ್ರೋಶ ಹೊರಹಾಕಿದ್ದಾರೆ.

    ಆಧುನಿಕ ಭಗೀರಥ ಎಂದೆಲ್ಲಾ ದೊಡ್ಡ ಹೆಸರು ಪಡೆದವರು ಸೀರೆ ಹಂಚುವಂಥ ಸಣ್ಣತನ ಪ್ರದರ್ಶಿಸುತ್ತಿದ್ದಾರೆ. ಇದು ಸೋಲಿನ ಭಯ ಕಾಂಗ್ರೆಸ್‌ಗೆ ಎಷ್ಟು ಕಾಡುತ್ತಿದೆ ಎಂಬುದು ತೋರಿಸುತ್ತದೆ. ಅಧಿಕಾರ ದುರುಪಯೋಗ ಮತ್ತು ವಾಮ ಮಾರ್ಗದಿಂದಲೇ 2013 ಹಾಗೂ 2018 ರ ಚುನಾವಣೆಯಲ್ಲಿ ನನ್ನ ಸೋಲಾಯಿತು. ಈ ಬಾರಿ ಮತ್ತದೇ ಪುನರಾವರ್ತನೆಯಾಗುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

    ಬಬಲೇಶ್ವರ ಕ್ಷೇತ್ರದಲ್ಲಿ ಎಂಎಚ್ ತೇರಾ-ಬಾರಾ ವಾಹನ, ಚುನಾವಣೆಗೆ ಮುನ್ನವೇ ಭರಪೂರ ಆಮಿಷ; ಪ್ರಜಾಧ್ವನಿಯಲ್ಲಿ ಸೀರೆ-ಮೊಬೈಲ್ ಪ್ರತಿಧ್ವನಿ !

    ಕಳೆದ 4.9 ವರ್ಷ ಬಬಲೇಶ್ವರ ಕ್ಷೇತ್ರದತ್ತ ಸುಳಿಯದವರು ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆ ಮತದಾರರಿಗೆ ಆಸೆ-ಆಮಿಷ ತೋರಿಸಲು ಬರುತ್ತಿದ್ದಾರೆ. ಕರೊನಾ ಸಂದರ್ಭದಲ್ಲಿ ಜನ ಸಾವು-ನೋವಿನ ನಡುವೆ ಹೋರಾಡುತ್ತಿರುವಾಗ ಬರದವರು ಇದೀಗ ಸೀರೆ, ಮೊಬೈಲ್ ಹಾಗೂ ಹಿಟ್ಟಿನ ಗಿರಣಿ ಹಿಡಿದುಕೊಂಡು ಬರುತ್ತಿದ್ದಾರೆ. ಇದಕ್ಕೂ ಮುಂಚೆ 21991 ಹಿಟ್ಟಿನ ಗಿರಣಿಗಳನ್ನು ಅಣ್ಣ-ತಮ್ಮರ ಫೋಟೊ ಸಮೇತ ಹಂಚಲಾಯಿತು. ರಿಯಾಯಿತಿ ದರ ಎಂದು ಹೇಳಿ ನಿಗದಿತ ಬೆಲೆಗಿಂತ ಹೆಚ್ಚಿನ ಹಣ ಪಡೆದು ಜನರನ್ನು ಮೋಸ ಮಾಡಿದರು. ಇದೀಗ ಸೀರೆ ಮತ್ತು ಮೊಬೈಲ್ ಹಂಚಲಾಗುತ್ತಿದೆ. ನಿಜಕ್ಕೂ ಬಬಲೇಶ್ವರ ಕ್ಷೇತ್ರದಲ್ಲಿ ಅಭಿವೃದ್ಧಿ ಯಾಗಿದ್ದರೆ ಇಂದು ಈ ಸೀರೆ-ಮೊಬೈಲ್ ಹಂಚುವ ಪ್ರಮೇಯ ಬರುತ್ತಿರಲಿಲ್ಲ ಎಂದರು.

    ಬಬಲೇಶ್ವರ ಕ್ಷೇತ್ರದಲ್ಲಿ ಎಂಎಚ್ ತೇರಾ-ಬಾರಾ ವಾಹನ, ಚುನಾವಣೆಗೆ ಮುನ್ನವೇ ಭರಪೂರ ಆಮಿಷ; ಪ್ರಜಾಧ್ವನಿಯಲ್ಲಿ ಸೀರೆ-ಮೊಬೈಲ್ ಪ್ರತಿಧ್ವನಿ !

    ತಿಪ್ಪರಲಾಗ ಹಾಕಿದರೂ ಜನ ನಂಬಲ್ಲ:
    ಬಬಲೇಶ್ವರ ಕ್ಷೇತ್ರದಲ್ಲಿ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಜನರಿಗೆ ಮೂಲ ಸೌಕರ್ಯ ಸಿಕ್ಕಿಲ್ಲ. ಹೀಗಾಗಿ ಏನೇ ತಿಪ್ಪರಲಾಗ ಹಾಕಿದರೂ ಕ್ಷೇತ್ರದ ಜನ ನಿಮಗೆ ಒಳಗಾಗಲ್ಲ ಎಂಬ ಆತ್ಮವಿಶ್ವಾಸ ಇದೆ. ಮೂರು ಬಾರಿ ಸೋತರೂ ನಾನು ಮನೆಯಲ್ಲಿ ಕುಳಿತಿಲ್ಲ. ಅಧಿಕಾರ ಇರಲಿ, ಬಿಡಲಿ ಜನರ ಸಂಪರ್ಕದಲ್ಲಿ ಇದ್ದೇನೆ. ಹೀಗಾಗಿ ಈ ಬಾರಿ ನೀವು ಏನೇ ಆಸೆ -ಆಮಿಷ ತೋರಿಸಿದರೂ ಜನ ನಿಮ್ಮನ್ನು ನಂಬಲ್ಲ ಎಂದರು.

    ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ಜಲಜೀವನ್ ಮಿಷನ್ ಮೂಲಕ ಮನೆ ಮನೆಗೆ ನೀರು ತಲುಪಿಸಿದೆ. ಇಂಥ ಅನೇಕ ಯೋಜನೆಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಚುನಾವಣೆ ಎದುರಿಸಲಿದೆ. ನಿಮಗೂ ನಿಮ್ಮ ಅಭಿವೃದ್ಧಿ ಬಗ್ಗೆ ವಿಶ್ವಾಸ ಇದ್ದರೆ ಸೀರೆ-ಮೊಬೈಲ್ ಹಂಚಿಕೆ ಬಿಟ್ಟು ಅಭಿವೃದ್ಧಿ ಮುಂದಿಟ್ಟುಕೊಂಡು ಚುನಾವಣೆ ಎದುರಿಸಿ ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದರಲ್ಲದೇ, ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿ ಬಿಜೆಪಿಗೆ ಅಭಿವೃದ್ಧಿಯೊಂದೇ ಮಾನದಂಡ ಎಂದು ಸಾರಿದರು.

    ಅಂತಿಮವಾಗಿ ಪೂಜ್ಯ ಸಿದ್ಧೇಶ್ವರ ಶ್ರೀಗಳ ಹೆಸರನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದನ್ನು ಖಂಡಿಸಿದ ವಿಜುಗೌಡ ಪಾಟೀಲ, ಸಿದ್ಧೇಶ್ವರ ಶ್ರೀಗಳು ನಡೆದಾಡುವ ದೇವರು ಎಂದು ಖ್ಯಾತಿ ಪಡೆದಿದ್ದರು. ಜಗತ್ತು ಅವರನ್ನು ಕೊಂಡಾಡುತ್ತದೆ. ಅಂಥ ಪುಣ್ಯ ಭೂಮಿಯಲ್ಲಿ ನಾವು ಜನಿಸಿದ್ದು ನಮ್ಮ ಪುಣ್ಯ. ಅವರ ಹೆಸರು ಬಳಸಿಕೊಂಡು ರಾಜಕಾರಣ ಮಾಡುವುದು ಸಲ್ಲದು ಎಂದರು.

    ಬಿಜೆಪಿ ಮಂಡಲ ಅಧ್ಯಕ್ಷ ವಿಠಲ ಕಿರಸೂರ ಹಾಗೂ ಯುವ ಮೋರ್ಚಾ ಅಧ್ಯಕ್ಷ ಶಂಕರಗೌಡ ಬಿರಾದಾರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts