More

    ಅಜ್ಜಿಯ ಆಸ್ತಿ ಲಪಟಾಯಿಸಿ ಮೊಮ್ಮಗಳು ಎಸ್ಕೇಪ್!

    ಉಡುಪಿ: ಮೊಮ್ಮಗಳೊಬ್ಬಳು ಅಜ್ಜಿಯ ಆಸ್ತಿಯನ್ನು ತಂದೆಯ ಗಮನಕ್ಕೂ ಬಾರದಂತೆ ಲಪಟಾಯಿಸಿ ನಾಪತ್ತೆಯಾಗಿದ್ದಾಳೆ.
    ಕಾರ್ಕಳದ ಸಾಂತೂರು ಗ್ರಾಮದ 84 ವರ್ಷದ ಸೆಲೆಸ್ಟಿನ್ ಅಂದ್ರಾದೆ ವಂಚನೆಗೊಳಗಾಗಿ ಆಘಾತಗೊಂಡಿದ್ದಾರೆ. ಅವರ ಪುತ್ರ ರೊನಾಲ್ಡ್ ಅವರ ಮಗಳು ರೋಶನಿ ಆರೋಪಿ. ಸೆಲೆಸ್ಟಿನ್ ಅಂದ್ರಾದೆ ನ್ಯಾಯಕ್ಕಾಗಿ ಪ್ರತಿಷ್ಠಾನವನ್ನು ಆಶ್ರಯಿಸಿದ್ದಾಗಿ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಅಧ್ಯಕ್ಷ ಡಾ.ರವೀಂದ್ರನಾಥ್ ಶ್ಯಾನುಭಾಗ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

    ತಾನು ಸ್ವತಃ ದುಡಿದು ಗಳಿಸಿದ ಜಮೀನು ಹಾಗೂ ಮನೆಯನ್ನು ತಾನೇ ಎತ್ತಿ ಮುದ್ದಾಡಿದ ಮೊಮ್ಮಗಳು ಲಪಟಾಯಿಸಿದ್ದಾಳೆ ಎಂದು ತಿಳಿಯುತ್ತಲೇ ಸೆಲೆಸ್ಟಿನ್ ಪಾರ್ಶ್ವವಾಯು ಪೀಡಿತರಾಗಿದ್ದಾರೆ. ಇವರಿಗೆ ಪೂರ್ಣಪ್ರಮಾಣದ ಕಾನೂನು ನೆರವು ನೀಡಲು ಪ್ರತಿಷ್ಠಾನ ಬದ್ಧವಾಗಿದೆ. ಕೃಷಿ ಕೂಲಿ ಮಾಡಿ ಗಳಿಸಿದ ಹಣದಿಂದ ಎರಡು ಎಕರೆ ಜಾಗ ಪಡೆದು ಮನೆ ಕಟ್ಟಿದ್ದರು. ಕೃಷಿ ಆದಾಯದಿಂದ ನಾಲ್ವರು ಮಕ್ಕಳನ್ನು ಸಾಕಿ ಬೆಳೆಸಿದ್ದರು. ಆಸ್ತಿಯನ್ನು ನಾಲ್ಕು ಮಕ್ಕಳಿಗೂ ಸಮಪಾಲು ನೀಡಿ ವೀಲುನಾಮೆ ಬರೆಸಿ ನೋಂದಣಿ ಮಾಡಿಸಿದ್ದರು ಎಂದರು.

    ಕೃಷಿ ಸಮೀಕ್ಷೆಯಿಂದ ಮೋಸ ಬೆಳಕಿಗೆ: 20 ದಿನಗಳ ಹಿಂದೆ ಕೃಷಿ ಸಮೀಕ್ಷೆಗೆ ಬಂದಾಗ ಮನೆ ಹಾಗೂ ಜಮೀನು ಹಿರಿಯ ಮಗ ರೊನಾಲ್ಡ್ ಅವರ ಮಗಳು ರೋಶನಿಯ ಹೆಸರಿನಲ್ಲಿದೆ ಎಂದು ತಿಳಿದು ಬಂತು. 50 ವರ್ಷಗಳಿಂದಲೂ ಸೆಲೆಸ್ಟಿನ್ ಹೆಸರಿನಲ್ಲೇ ಇದ್ದ ಹಕ್ಕುಪತ್ರದಲ್ಲಿ ರೋಶನಿ ಹೆಸರು ಸೇರಿದ್ದು ಹೇಗೆ? ಯಾವಾಗ? ಈ ಹೆಸರು ಬದಲಾವಣೆಗೆ ಮುನ್ನ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಆಗಲೇಬೇಕು. ಅನಂತರ ಮ್ಯುಟೇಶನ್ ರಿಜಿಸ್ಟರ್‌ನಲ್ಲಿ ಹೆಸರು ದಾಖಲಿಸಬೇಕು. ಅದಕ್ಕಾಗಿ ರೆವಿನ್ಯೂ ಇನ್ಸಪೆಕ್ಟರ್ ವಿಚಾರಿಸಬೇಕು. ಸಂಬಂಧ ಪಟ್ಟವರಿಗೆಲ್ಲ ನೋಟಿಸ್ ನೀಡಿ ಆಕ್ಷೇಪಣೆ ಆಹ್ವಾನಿಸಬೇಕು. ಇದಕ್ಕೆಲ್ಲಾ ಅರ್ಜಿ ಸಲ್ಲಿಸದವರು ಯಾರು? ಇವೆಲ್ಲ ಪ್ರಶ್ನೆಗಳಿಗೆ ಉತ್ತರ ಗೊತ್ತಿರುವುದು ರೋಶನಿಗೆ ಮಾತ್ರ. ಆದರೆ ಆಕೆ ನಾಪತ್ತೆ. ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಡಾ.ರವೀಂದ್ರನಾಥ್ ತಿಳಿಸಿದರು.
    ಕುಟುಂಬದ ಹಿತೈಷಿ, ನಿವೃತ್ತ ಸೈನಿಕ ಲಾರೆನ್ಸ್ ಡಿಸೋಜ, ಸೆಲೆಸ್ಟಿನ್ ಅವರ ಮಕ್ಕಳಾದ ಫೆಲಿಕ್ಸ್ ಡಿಸೋಜ, ರೊನಾಲ್ಡ್ ಡಿಸೋಜ ಸುದ್ದಿಗೋಷ್ಠಿಯಲ್ಲಿದ್ದರು.

    ಸುಳ್ಳು ಹೇಳಿ ಹೆಬ್ಬೆಟ್ಟು ಪಡೆದಿದ್ದಳು!
    ಹತ್ತು ವರ್ಷಗಳ ಹಿಂದೆ ಮದುವೆಯಾಗಿದ್ದ ರೋಶನಿ, 2019 ಜನವರಿಯಲ್ಲಿ ಅಜ್ಜಿಯ ಮನೆಗೆ ಬಂದಿದ್ದು, ರೈತರಿಗೆ ಸಾಲ ನೀಡುವ ಯೋಜನೆ ಎಂದು ಸುಳ್ಳು ಹೇಳಿ ತಂದೆ ರೊನಾಲ್ಡ್ ಮತ್ತು ಅಜ್ಜಿಯ ಹೆಬ್ಬೆಟ್ಟು ಗುರುತು ಹಾಗೂ ಸಹಿ ಪಡೆದುಕೊಂಡಿದ್ದಳು. ಇಬ್ಬರೂ ಅನಕ್ಷರಸ್ಥರಾಗಿದ್ದರಿಂದ ಮೋಸ ತಿಳಿಯಲಿಲ್ಲ. ಆದರೆ ಪಂಚಾಯಿತಿ ಹಾಗೂ ಮೆಸ್ಕಾಂನಲ್ಲಿ ಹೆಸರು ಬದಲಾಯಿಸಲು ಆಕೆಗೆ ಸಾಧ್ಯವಾಗಿಲ್ಲ. ಮೂರೇ ತಿಂಗಳಲ್ಲಿ ಅಜ್ಜಿಯಿಂದ ಆಸ್ತಿಯನ್ನು ತಂದೆ ಹೆಸರಿಗೂ ಅಲ್ಲಿಂದ ಯಾರಿಗೂ ತಿಳಿಯದಂತೆ ತನ್ನ ಹೆಸರಿಗೆ ಮಾಡಿಕೊಂಡಿದ್ದಾಳೆ ಎಂದು ರವೀಂದ್ರನಾಥ್ ತಿಳಿಸಿದರು.

    ಹಿರಿಯ ನಾಗರಿಕರ ನ್ಯಾಯಾಲಯಕ್ಕೆ ದೂರು
    ಕುಟುಂಬದ ಹಿತೈಷಿ, ನಿವೃತ್ತ ಸೈನಿಕ ಲಾರೆನ್ಸ್ ಡಿಸೋಜ ಪ್ರಕರಣದ ಸಂಪೂರ್ಣ ಮಾಹಿತಿಯನ್ನು ಪ್ರತಿಷ್ಠಾನಕ್ಕೆ ನೀಡಿದ್ದಾರೆ. ನಮ್ಮ ಕಾನೂನು ಸಲಹೆಗಾರರು ಪಂಚಾಯಿತಿ ಹಾಗೂ ಮೆಸ್ಕಾಂ ಕಚೇರಿಗೆ ನೋಟಿಸ್ ನೀಡಿ ನ್ಯಾಯಾಲಯದಲ್ಲಿ ತೀರ್ಮಾನವಾಗುವವರೆಗೂ ಈ ಆಸ್ತಿಯ ದಾಖಲೆಗಳಿಂದ ಸೆಲೆಸ್ಟಿನ್ ಅವರ ಹೆಸರು ತೆಗೆಯದಂತೆ ಸೂಚಿಸಿದ್ದಾರೆ. ಹಿರಿಯ ನಾಗರಿಕರ ನ್ಯಾಯಾಲಯಕ್ಕೆ ದೂರು ನೀಡಲಾಗುವುದು ಎಂದು ರವೀಂದ್ರನಾಥ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts