| ಬೇಲೂರು ಹರೀಶ ಬೆಂಗಳೂರು
ಸಮಗ್ರ ಮೂಲಸೌಕರ್ಯಗಳುಳ್ಳ, ಸ್ವಚ್ಛ ಮತ್ತು ಸುಸ್ಥಿರ ನಗರಗಳನ್ನು ಅಭಿವೃದ್ಧಿಪಡಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸ್ಮಾರ್ಟ್ ಸಿಟಿ ಯೋಜನೆಗೆ ಸೇರಿರುವ 7 ಜಿಲ್ಲೆಗಳ ಜತೆಗೆ ಮತ್ತೆ ನಾಲ್ಕು ಜಿಲ್ಲೆಗಳು ಹೊಸದಾಗಿ ಸೇರ್ಪಡೆಯಾಗಲಿವೆ. ಕಲಬುರಗಿ, ಮೈಸೂರು, ವಿಜಯಪುರ ಹಾಗೂ ಬಳ್ಳಾರಿ ಜಿಲ್ಲೆಗಳನ್ನು ಸ್ಮಾರ್ಟ್ ನಗರ ಅಭಿಯಾನದಡಿ ಪರಿಗಣಿಸಲು ಕಳೆದ ಜೂನ್ನಲ್ಲಿ ರಾಜ್ಯ ಸರ್ಕಾರ, ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಕರೊನಾ ಲಾಕ್ಡೌನ್ನಿಂದಾಗಿ ಮುಂದಿನ ಹಂತದ ಪ್ರಕ್ರಿಯೆಗಳು ನಡೆದಿರಲಿಲ್ಲ. ಹಾಗಾಗಿ, ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಲು ನಗರಾಭಿವೃದ್ಧಿ ಇಲಾಖೆ ನಿರ್ಧರಿಸಿದೆ.

ಈ ಯೋಜನೆಯಡಿ ಬೆಳಗಾವಿ, ದಾವಣಗೆರೆ ನಗರಗಳು 2016ರ ಜನವರಿಯಲ್ಲಿ, ಹುಬ್ಬಳ್ಳಿ- ಧಾರವಾಡ, ಮಂಗಳೂರು, ಶಿವಮೊಗ್ಗ ಮತ್ತು ತುಮಕೂರು ನಗರಗಳನ್ನು 2016ರ ಅಕ್ಟೋಬರ್ನಲ್ಲಿ ಎರಡನೇ ಹಂತದಲ್ಲಿ ಆಯ್ಕೆ ಮಾಡಲಾಗಿತ್ತು. 2017ರ ಜೂನ್ನಲ್ಲಿ ಬೆಂಗಳೂರು ನಗರವೂ ಆಯ್ಕೆಯಾಗಿತ್ತು. ಯೋಜನೆಯಡಿ ಈ 7 ನಗರಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ.
ಏನಿದು ಯೋಜನೆ?
ಅಭಿವೃದ್ಧಿಯಿಂದ ವಂಚಿತರಾಗಿರುವ ನಗರಗಳು ಯೋಜನೆಯಡಿ ಶುದ್ಧ ನೀರು, ಸ್ವಚ್ಛತೆ, ಇ-ಆಡಳಿತ, ತ್ಯಾಜ್ಯಗಳ ಪರಿಣಾಮಕಾರಿ ನಿರ್ವಹಣೆ, ನೀರಿನ ಸೌಕರ್ಯ, ಇಂಧನ ವ್ಯವಸ್ಥೆ, ಪರಿಸರ ಸ್ನೇಹಿ ಸಾರಿಗೆ, ಟೆಲಿ ಮೆಡಿಷನ್ ಮತ್ತು ಕೌಶಲಾಭಿವೃದ್ಧಿ ಸೇರಿ ಇನ್ನಿತರ ಮೂಲ ಸೌಕರ್ಯಗಳನ್ನು ಕಲ್ಪಿಸುವ ಮೂಲಕ ಸರ್ವತೋಮುಖ ಅಭಿವೃದ್ಧಿ ಮಾಡಲಾಗುತ್ತದೆ. ನಗರಗಳ ಮೂಲಸೌಕರ್ಯವನ್ನು ಮೇಲ್ದರ್ಜೆಗೇರಿಸಿ ಬಳಕೆದಾರರ ಸ್ನೇಹಿ ಮಾಡಲಾಗುತ್ತದೆ. ಕೇಂದ್ರ ನೀಡುವ ನೂರಾರು ಕೋಟಿ ರೂ. ಅನುದಾನದಿಂದ ಅಭಿವೃದ್ಧಿ ಕಾಮಗಾರಿಗಳು ನಡೆಯಲಿವೆ. ಜತೆಗೆ, ಸುಸ್ಥಿರ ಮೂಲಸೌಲಭ್ಯಗಳ ವಿಸ್ತರಣೆಗಾಗಿ ಸರಳ ತಂತ್ರಜ್ಞಾನದ ಬಳಕೆ ಮಾಡಿಕೊಳ್ಳುವುದು ಸಹ ಯೋಜನೆಯ ಉದ್ದೇಶವಾಗಿದೆ.
5 ವರ್ಷವಾದರೂ ಕಾಮಗಾರಿ ಮುಗಿದಿಲ್ಲ
ಯೋಜನೆಯಡಿ ಆಯ್ಕೆಯಾಗಿರುವ ರಾಜ್ಯದ ಎಳು ನಗರಗಳಲ್ಲಿ 5 ವರ್ಷ ಕಳೆದರೂ ಅರ್ಧದಷ್ಟೂ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಅತಿಯಾದ ಭ್ರಷ್ಟಾಚಾರ, ರಾಜಕೀಯ ಮುಖಂಡರ ಹಸ್ತಕ್ಷೇಪ, ಅಧಿಕಾರಿಗಳು ನಿರ್ಲಕ್ಷ್ಯ, ಪಾಲಿಕೆಗಳು ಹಾಗೂ ಸ್ಮಾರ್ಟ್ ಸಿಟಿ ಕಂಪನಿಗಳ ನಡುವಿನ ತಿಕ್ಕಾಟ, ಯೋಜನೆ ನಿರ್ವಹಣಾ ಘಟಕಗಳ ಅಸಮರ್ಥತೆಯಿಂದ ಯೋಜನೆ ಕುಂಟುತ್ತಾ ಸಾಗುತ್ತಿದೆ. ಯೋಜನೆ ಜಾರಿಯಲ್ಲಿರುವ ಎಲ್ಲ ನಗರಗಳಲ್ಲಿ ಕಾಮಗಾರಿಗಾಗಿ ರಸ್ತೆ ಅಗೆದೆ ವರ್ಷ ಕಳೆದರೂ ಕೆಲಸ ಮುಗಿದಿಲ್ಲ. ಅಭಿವೃದ್ಧಿ ವಿಸ್ತರಿಸುವ ಉದ್ದೇಶದಿಂದ ಜಾರಿಗೆ ಬಂದಿರುವ ಯೋಜನೆಯಲ್ಲಿ ಲೂಟಿ ಹೊಡೆಯುವುದರ ಬಗ್ಗೆ ರಾಜಕೀಯ ನಾಯಕರ ಸೇರಿ ಅಧಿಕಾರಿಗಳಿಗೆ ಆಸಕ್ತಿ ಹೆಚ್ಚಿದೆ.
ಟೆಂಡರ್ನಲ್ಲೇ ವಿಳಂಬ
ಸ್ಮಾರ್ಟ್ ಸಿಟಿ ಕಾಮಗಾರಿಗಳ ಟೆಂಡರ್ ಹಂತದಲ್ಲಿ ವಿಳಂಬವಾಗುತ್ತಿದೆ. ಬಹುತೇಕ ಕಾಮಗಾರಿಗಳಿಗೆ ಒಂದಕ್ಕಿಂತ ಹೆಚ್ಚು ಬಾರಿ ಟೆಂಡರ್ ನಡೆಸಲಾಗಿದೆ. ಕೆಲ ಗುತ್ತಿಗೆದಾರರಿಗೆ ಕಾಮಗಾರಿಗೆ ನಡೆಸಲು ಒಪ್ಪಿಗೆ ಪತ್ರ ಸಿಕ್ಕಿದ್ದರೂ ಮತ್ತೊಮ್ಮೆ ಟೆಂಡರ್ ನಡೆಸಿರುವ ನಿರ್ದೇಶನಗಳಿವೆ. ಕೆಲ ಕಡೆ ಮಹಾನಗರ ಪಾಲಿಕೆಗಳೇ ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೆ ನೇರವಾಗಿ ಅಡ್ಡಿಪಡಿಸುತ್ತಿರುವ ಬಗ್ಗೆ ಗಂಭೀರ ಆರೋಪ ಕೇಳಿಬಂದಿದೆ.
ಕ್ರಮ ಕೈಗೊಳ್ಳಿ
ಯೋಜನೆಯನ್ನು ತ್ವರಿತಗತಿಯಲ್ಲಿ ಮುಗಿಸುವಂತೆ ಸರ್ಕಾರ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕು. ಭ್ರಷ್ಟಚಾರ ನಡೆಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ರಾಜಕೀಯ ಮುಖಂಡರ ಹಸ್ತಕ್ಷೇಪವಾಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ನಿಗದಿತ ಸಮಯದಲ್ಲಿ ಕಾಮಗಾರಿಗಳನ್ನು ಮುಗಿಸದ ಗುತ್ತಿಗೆದಾರರಿಗೆ ವಿರುದ್ಧ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಪ್ರತ್ಯೇಕ ತಂಡ ರಚಿಸಬೇಕು. ಇಲ್ಲದಿದ್ದರೆ ಮುಂದಿನ ಐದು ವರ್ಷ ಕಳೆದರೂ ಅಭಿವೃದ್ಧಿ ಕಾಮಗಾರಿಗಳು ಕುಂಟುತ್ತ ಸಾಗಲಿವೆ.