More

    ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಮೃತ

    ಕೊಳ್ಳೇಗಾಲ : ಕಬ್ಬು ಕಟಾವು ಮಾಡುವ ಯಂತ್ರದ ವಾಹನ, ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಮತ್ತು ಮಕ್ಕಳ ಸಮೇತ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ.

    ತಾಲೂಕಿನ ಪಾಳ್ಯ ಗ್ರಾಮದ ಸಂತೋಷ್(32), ಪತ್ನಿ ಸೌಮ್ಯಾ(27), ಪುತ್ರ ಅಭಿ (9) ಹಾಗೂ ಪುತ್ರಿ ನಿತ್ಯಾಸಾಕ್ಷಿ (4) ಮೃತರು. ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಸಂತೋಷ್ ತನ್ನ ಮಡದಿ, ಮಕ್ಕಳನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಹೊಸ ಬಟ್ಟೆ ತರಲೆಂದು ಪಾಳ್ಯ ಗ್ರಾಮದ ಮುಖ್ಯ ರಸ್ತೆಯಿಂದ ಕೊಳ್ಳೇಗಾಲದ ಕಡೆಗೆ ಹೋಗುತ್ತಿದ್ದರು. ಈ ವೇಳೆ ಜಿನಕನಹಳ್ಳಿ ಗ್ರಾಮದ ಬಳಿ ಎದುರಿನಿಂದ ಬಂದ ಭತ್ತ ಕಟಾವು ಯಂತ್ರದ ವಾಹನ ಮುಖಾಮುಖಿ ಡಿಕ್ಕಿ ಹೊಡೆದಿದೆ. ಪರಿಣಾಮ, ನಾಲ್ವರೂ ಯಂತ್ರದ ಕೆಳಗೆ ಸಿಕ್ಕಿಕೊಂಡಿದ್ದರು.

    ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಮೃತ
    ಅಪಘಾತದಲ್ಲಿ ಮೃತಪಟ್ಟಅಭಿ, ನಿತ್ಯಾಸಾಕ್ಷಿ.

    ಅಪಘಾತದ ಬಿರುಸಿನಲ್ಲಿ ನಾಲ್ವರನ್ನೂ ಸುಮಾರು 30 ಮೀ. ದೂರಕ್ಕೆ ಯಂತ್ರದ ವಾಹನ ಎಳೆದೊಯ್ದಿತ್ತು. ಇದನ್ನು ನೋಡಿದ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾದಾಗ ಸ್ಥಳದಲ್ಲೇ ಸಂತೋಷ್, ಸೌಮ್ಯಾ ಹಾಗೂ ನಿತ್ಯಾಸಾಕ್ಷಿ ಮೃತ ಪಟ್ಟಿದ್ದರು. ಆದರೆ, ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಬಾಲಕ ಅಭಿಯನ್ನು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಿದರೂ ದುರದುಷ್ಟವಶಾತ್ ಮಾರ್ಗಮಧ್ಯೆ ಮೃತಪಟ್ಟನು.

    ವಿಷಯ ತಿಳಿದ ಗ್ರಾಮಾಂತರ ಠಾಣೆ ಪೊಲೀಸರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿದರು. ನಂತರ ಎಸ್ಪಿ ಪದ್ಮಿನಿ ಸಾಹು, ಡಿವೈಎಸ್ಪಿ ಜಿ.ಯು. ಸೋಮೇಗೌಡ, ವೃತ್ತ ನಿರೀಕ್ಷಕ ಕೃಷ್ಣಪ್ಪ ಅಪಘಾತ ನಡೆದ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯ ಶವಾಗಾರದಲ್ಲಿ ಮೃತದೇಹಗಳನ್ನು ಇರಿಸಲಾಗಿತ್ತು. ಶವಾಗಾರದ ಮುಂದೆ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮರಣೋತ್ತರ ಪರೀಕ್ಷೆಯ ಬಳಿಕ ವಾರಸುದಾರರಿಗೆ ಮೃತದೇಹಗಳನ್ನು ಒಪ್ಪಿಸಲಾಯಿತು.

    ದುರ್ಘಟನೆಯಿಂದಾಗಿ ಪಾಳ್ಯ ಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು. ಭತ್ತ ಕಟಾವು ಯಂತ್ರದ ವಾಹನ ಚಾಲಕ ತಮಿಳುನಾಡು ಮೂಲದ ಅಶೋಕ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts