More

    ನಾಲ್ವರು ಆರೋಪಿಗಳ ಬಂಧನ, ಬಿಜೆಪಿ ಕಾರ್ಯಕರ್ತ ದಿನೇಶ್ ಶೆಟ್ಟಿ ಕೊಟ್ಟಿಂಜ ಕೊಲೆ ಯತ್ನ ಪ್ರಕರಣ

    ಬಂಟ್ವಾಳ: ಪುದು ಬಿಜೆಪಿ ಶಕ್ತಿ ಕೇಂದ್ರದ ಸಾಮಾಜಿಕ ಜಾಲತಾಣ ಸಂಚಾಲಕ, ಫೋಟೊಗ್ರಾಫರ್ ದಿನೇಶ್ ಶೆಟ್ಟಿ ಕೊಟ್ಟಿಂಜ ಅವರ ಮೇಲೆ ಬುಧವಾರ ರಾತ್ರಿ ನಡೆದ ತಲವಾರು ದಾಳಿ ಪ್ರಕರಣಕ್ಕೆ ಸಂಬಂಧಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

    ಫರಂಗಿಪೇಟೆ ಬಳಿಯ ಅಮ್ಮೆಮ್ಮಾರು ನಿವಾಸಿಗಳಾದ ಮಹಮ್ಮದ್ ಅರ್ಷದ್(19), ಅಬ್ದುಲ್ ರೆಹಮಾನ್(22), ಮಹಮ್ಮದ್ ಸೈಫುದ್ದೀನ್(22) ಹಾಗೂ ಸವದ್(20) ಆರೋಪಿಗಳು.

    ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮೀಪ್ರಸಾದ್ ಹಾಗೂ ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ವೆಲೆಂಟೈನ್ ಡಿಸೋಜರ ಮಾರ್ಗದರ್ಶನದಲ್ಲಿ ಪಿ.ಎಸ್.ಐ. ಪ್ರಸನ್ನ ಹಾಗೂ ಸಿಬ್ಬಂದಿ ಪತ್ತೆ ಕಾರ್ಯಾಚರಣೆ ನಡೆಸಿದ್ದರು.

    ಘಟನೆ ಹಿನ್ನೆಲೆ: ಬುಧವಾರ ರಾತ್ರಿ ಫೋಟೊ ತೆಗೆಯುವಂತೆ 4 ಮಂದಿ ದಿನೇಶ್ ಶೆಟ್ಟಿಯವರ ಫರಂಗಿಪೇಟೆಯ ಸ್ಟುಡಿಯೊದೊಳಗೆ ನುಗ್ಗಿ ಮಾರಕಾಯುಧಗಳಿದ ದಾಳಿ ನಡೆಸಿದ್ದರು. ಈ ಸಂದರ್ಭ ಅಲ್ಲಿದ್ದ ಶೇಖರ ಪೂಜಾರಿ ಎಂಬುವರು ಹಲ್ಲೆಯಾಗುವುದನ್ನು ತಪ್ಪಿಸಲು ಚೇರ್‌ನಿಂದ ಇಬ್ಬರು ಆರೋಪಿಗಳಿಗೆ ಹೊಡೆದಿದ್ದು, ಅವರಿಗೂ ಗಾಯಗಳಾಗಿವೆ.

    ತೀವ್ರ ಗಾಯಗೊಂಡು ಸ್ಟುಡಿಯೋ ಒಳಗೆ ಬಿದ್ದಿದ್ದ ದಿನೇಶ್ ಶೆಟ್ಟಿ ಅವರನ್ನು ಅಬ್ದುಲ್ ರಶೀದ್ ಪಾವೂರು ಎಂಬವರು ತಕ್ಷಣ ತನ್ನ ಆಟೋ ರಿಕ್ಷಾದಲ್ಲಿ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದರು.

    ದಾಳಿ ಸುದ್ದಿ ತಿಳಿಯುತ್ತಿದ್ದಂತೆ ತಕ್ಷಣ ಮಂಗಳೂರು ನಗರ ಉತ್ತರ ಶಾಸಕ ಡಾ.ವೈ ಭರತ್ ಶೆಟ್ಟಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರು, ಪೊಲೀಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಗೃಹಸಚಿವ ಬಸವರಾಜ್ ಬೊಮ್ಮಾಯಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ದಕ್ಷಿಣ ಕನ್ನಡದಲ್ಲಿ ಶಾಂತಿ ಸುವ್ಯವಸ್ಥೆ ಕದಡಲು ಮತೀಯ ಶಕ್ತಿಗಳು ಪ್ರಯತ್ನಿಸುತ್ತಿವೆ. ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೋರಿದರು.

    ಸಂತ್ರಸ್ತ ಬಾಲಕಿಗೆ ಬೆಂಬಲ ಕಾರಣ?
    ಇತ್ತೀಚೆಗೆ ಕುಂಪಣಮಜಲು ಎಂಬಲ್ಲಿ ಶಾಲಾ ಬಾಲಕಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಓರ್ವನ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿತ್ತು. ಈ ಸಂದರ್ಭ ಬಾಲಕಿಯ ಕಡೆಯವರಿಗೆ ದಿನೇಶ್ ಶೆಟ್ಟಿ ಬೆಂಬಲ ನೀಡಿದ್ದಾರೆ ಎನ್ನುವ ದ್ವೇಷದಿಂದ ಆರೋಪಿಗೆ ಹತ್ತಿರದವರಾಗಿರುವ ಇವರು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ.

    ಗಾಂಜಾದಿಂದ ಅಹಿತಕರ ಘಟನೆ: ಹಲ್ಲೆ ಘಟನೆಯ ಸುದ್ದಿ ಹರಡುತ್ತಿದ್ದಂತೆ ಪರಿಸರದಲ್ಲಿ ಗೊಂದಲ ವಾತಾವರಣ ಸೃಷ್ಟಿಯಾಯಿತು. ಒಂದೇ ವಾರದಲ್ಲಿ ನಡೆದ ಎರಡು ಕೊಲೆ ಘಟನೆಗಳಿಂದ ಆತಂಕಕ್ಕೆ ಒಳಗಾಗಿರುವ ಬಂಟ್ವಾಳ ತಾಲೂಕಿನ ಜನತೆಯನ್ನು ಫರಂಗಿಪೇಟೆಯಲ್ಲಿ ನಡೆದ ಕೊಲೆಯತ್ನ ಪ್ರಕರಣ ಮತ್ತಷ್ಟು ಆತಂಕಕ್ಕೆ ದೂಡಿದೆ. ಇದರ ಹಿಂದೆ ಗಾಂಜಾ ಮಾಫಿಯಾ ಇದೆ ಎಂಬ ಆರೋಪ ಕೇಳಿ ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts