More

    ತಾಪಂ ಮಾಜಿ ಅಧ್ಯಕ್ಷೆ ಈಗ ಆಶಾ ಕಾರ್ಯಕರ್ತೆ

    ಧಾರವಾಡ: ತಾಪಂ ಮಾಜಿ ಅಧ್ಯಕ್ಷೆಯೊಬ್ಬರು ಆಶಾ ಕಾರ್ಯಕರ್ತೆಯಾಗಿ ಜನಸೇವೆಗೈಯುತ್ತಿದ್ದಾರೆ. ಹೆಬ್ಬಳ್ಳಿ ಗ್ರಾಮದ ಸುಮಂಗಲಾ ಕೌದೆಣ್ಣವರ ರಾಜಕೀಯದಲ್ಲಿ ತಾಪಂ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿ, ಈಗ ಗ್ರಾಮೀಣ ಭಾಗದಲ್ಲಿ ಆರೋಗ್ಯ ಸೇವೆಯಲ್ಲಿ ನಿರತರಾಗಿದ್ದಾರೆ.
    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಪ್ರಥಮ ಬಾರಿಗೆ ಗ್ರಾಮ ಮಟ್ಟದಲ್ಲಿ ಆಶಾ ಕಾರ್ಯಕರ್ತೆಯರನ್ನು ನೇಮಕ ಮಾಡಿಕೊಂಡಿತ್ತು. ಮೊದಲ ಬ್ಯಾಚ್​ನಲ್ಲಿ ಸುಮಂಗಲಾ ಆಯ್ಕೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಮುಂದೆ 2012ರಲ್ಲಿ ತಾ.ಪಂ. ಚುನಾವಣೆ ಬಂದಾಗ ಸುಮಂಗಲಾ ಬಿಜೆಪಿ ಅಭ್ಯರ್ಥಿಯಾಗಿ ಹೆಬ್ಬಳ್ಳಿ ಕ್ಷೇತ್ರದಿಂದ ಸ್ಪರ್ಧಿಸಿ ಜಯ ಗಳಿಸಿದ್ದರು. ತಾಪಂ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದಾಗ ಯೋಗೀಶಗೌಡ ಪಾಟೀಲ ಅಧ್ಯಕ್ಷರಾಗಿದ್ದರು. ಮುಂದಿನ ಅಧ್ಯಕ್ಷ ಅವಧಿಗೆ ಅ ವರ್ಗ ಮಹಿಳಾ ಮೀಸಲಾತಿ ಬಂದಾಗ ಸುಮಂಗಲಾ ಅಧ್ಯಕ್ಷರಾದರು. 20 ತಿಂಗಳು ಕಾಲ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು.
    2015ರಲ್ಲಿ ನಡೆದ ತಾ.ಪಂ. ಚುನಾವಣೆಯಲ್ಲಿ ಹೆಬ್ಬಳ್ಳಿ ಕ್ಷೇತ್ರಕ್ಕೆ ಸಾಮಾನ್ಯ ಪುರುಷ ಮೀಸಲಾತಿ ಬಂದಿತ್ತು. ಅಷ್ಟೊತ್ತಿಗೆ ರಾಜಕೀಯ ಸಾಕು ಎಂದ ಸುಮಂಗಲಾ ಮೊದಲಿನ ಆಶಾ ಕಾರ್ಯಕರ್ತೆ ಹುದ್ದೆಯನ್ನು ಮುಂದುವರಿಸಲು ನಿರ್ಧರಿಸಿದರು. ಅಂದಿನಿಂದ ಈವರೆಗೂ ಹೆಬ್ಬಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧೀನದಲ್ಲಿ ಆಶಾ ಕಾರ್ಯಕರ್ತೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
    ಕೋವಿಡ್ ಮೊದಲ ಹಾಗೂ 2ನೇ ಅಲೆಯ ಸಂದರ್ಭದಲ್ಲಿ ಗ್ರಾಮದಲ್ಲಿ ಜನಜಾಗೃತಿ ಮೂಡಿಸುವುದು, ಜನರ ಆರೋಗ್ಯ ಸಂಬಂಧಿತ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
    ಈ ಕುರಿತು ವಿಜಯವಾಣಿಯೊಂದಿಗೆ ಮಾತನಾಡಿದ ಅವರು, ಜೀವನದಲ್ಲಿ ಅನಿರೀಕ್ಷಿತರಾಗಿ ರಾಜಕೀಯಕ್ಕೆ ಬಂದು ಜನಸೇವೆ ಮಾಡಿದ್ದೇನೆ. ನಂತರದ ಬದಲಾವಣೆಗಳಿಗೆ ಹೊಂದಿಕೊಂಡು ಆಶಾ ಕಾರ್ಯಕರ್ತೆ ಕಾರ್ಯವನ್ನು ನಿಭಾಯಿಸುತ್ತಿದ್ದೇನೆ. ಕೋವಿಡ್ ಆರಂಭವಾದಾಗಿನಿಂದ ಒಂದು ದಿನವೂ ಮನೆಯಲ್ಲಿರದೆ, ಜನಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇನೆ. ತಾ.ಪಂ. ಮಾಜಿ ಅಧ್ಯಕ್ಷೆಯ ಅಧ್ಯಾಯ ಮುಗಿದಿದ್ದು, ಈಗಿನ ಗ್ರಾ.ಪಂ. ಚುನಾಯಿತ ಪ್ರತಿನಿಧಿಗಳ ಅಧೀನದಲ್ಲಿ ಜನಸೇವೆ ಮಾಡುತ್ತಿದ್ದೇನೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts