More

    ಮುಸ್ಲಿಂ ಲೀಗ್ ಜೊತೆಗಿನ ಒಪ್ಪಂದ ಮರೆತಿರಾ? ಬಿಜೆಪಿಗೆ ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ

    ವಿಜಯಪುರ: ಕಾಂಗ್ರೆಸ್ ಪ್ರಣಾಳಿಕೆಯನ್ನು ಮುಸ್ಲಿಂ ಲೀಗ್ ಪ್ರಣಾಳಿಕೆ ಎಂದು ಟೀಕಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮದೇ ಪಕ್ಷದ ಸಂಸ್ಥಾಪಕ ಶಾಮ್ ಪ್ರಕಾಶ ಮುಖರ್ಜಿ ಅವರೇ ಮುಸ್ಲಿಂ ಲೀಗ್ ಜೊತೆ ಮೈತ್ರಿ ಮಾಡಿಕೊಂಡಿದ್ದರೆಂಬುದನ್ನು ಮರೆತಂತಿದೆ ಎಂದು ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ ಲೇವಡಿ ಮಾಡಿದರು.

    ಕಾಂಗ್ರೆಸ್ ಪಕ್ಷ ಸರ್ವರನ್ನೂ ಸಮಾನ ಅವಕಾಶ ನೀಡುವ ನಿಟ್ಟಿನಲ್ಲಿ ಪ್ರಣಾಳಿಕೆ ಬಿಡುಗಡೆಗೊಳಿಸಿದೆ. ಅದರ ಬಗ್ಗೆ ಟೀಕಿ ಮಾಡುವ ಭರಾಟೆಯಲ್ಲಿ ಮೋದಿ ಅವರು ಮುಸ್ಲಿಂ ಲೀಗ್ ಕುರಿತು ಕೇವಲವಾಗಿ ಮಾತನಾಡಿದ್ದಾರೆ. ಮುಸ್ಲಿಂ ಲೀಗ್ ಸಹ ಸ್ವಾತಂತ್ರೃಕ್ಕಾಗಿ ಹೋರಾಡಿದೆ. ಸುಮಾರು 5000 ಕಾರ್ಯಕರ್ತರು ದೇಶದ ಸ್ವಾತಂತ್ರೃಕ್ಕಾಗಿ ಹುತಾತ್ಮರಾಗಿದ್ದಾರೆ. ಮೋದಿ ದೇಶದ ಇತಿಹಾಸ ಅರಿಯಬೇಕೆಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
    ಬಿಜೆಪಿಗೆ ಈ ದೇಶದ ಇತಿಹಾಸವಾಗಲಿ, ಸಂವಿಧಾನದ ಮೇಲಾಗಲಿ ಎಳ್ಳಷ್ಟು ನಂಬಿಕೆ ಇಲ್ಲ. ಸಂವಿಧಾನ ಬದಲಿಸುವ, ದಲಿತರ ಮೀಸಲಾತಿ ಕಿತ್ತೊಗೆಯುವ ಹುನ್ನಾರ ನಡೆಸಿದೆ. ಬಡವರು ಬಡವರಾಗಿಯೇ ಇರಬೇಕೆಂಬುದು ಬಿಜೆಪಿಯ ಹುನ್ನಾರ. ತನಿಖಾ ಸಂಸ್ಥೆ ದುರ್ಬಳಕೆ ಮಾಡಿಕೊಳ್ಳಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯೇ ಬುಡಮೇಲು ಮಾಡಲು ಹೊರಟಿದೆ ಎಂದರು.

    ಚುನಾವಣೆ ಬಾಂಡ್ ಹೆಸರಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿರುವ ಬಿಜೆಪಿ ಪಿಎಂ ಕೇರ್ ಹೆಸರಲ್ಲೂ ಹಣ ದುರ್ಬಳಕೆ ಮಾಡಿಕೊಂಡಿದೆ. ಇದ್ದಕ್ಕಿದ್ದಂತೆ ನೋಟ್ ಬ್ಯಾನ್ ಮಾಡಿ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದರಲ್ಲ ಅದರ ಫಲಿತಾಂಶ ಏನಾಯಿತು? ಕರೊನಾ ಸಂದರ್ಭದಲ್ಲಿ ಜನರಿಗೆ ನೆರವು ನೀಡಲಿಲ್ಲ, ಎಷ್ಟೋ ಸಾವು ಸಂಭವಿಸಿದವು, ಅದೇ ಸಂದರ್ಭ ಪಿಎಂ ಕೇರ್ ನಿಧಿ ಸಂಗ್ರಹಿಸಿದಿರಿ. ಅದರ ವಿವರವೂ ನೀಡಲಿಲ್ಲ, ಜನರಿಗೆ ನೆರವೂ ನೀಡಲಿಲ್ಲ ಎಂದು ಆಕ್ರೋಶ ಹೊರಹಾಕಿದರು.

    ಯತ್ನಾಳ ವಿರುದ್ಧ ವಾಗ್ದಾಳಿ

    ಶಾಸಕ ಬಸನಗೌಡ ಪಾಟೀಲ ಮಾತೆತ್ತಿದರೆ ಪಾಕಿಸ್ತಾನ್, ಮುಸ್ಲಿಂ ಎನ್ನುತ್ತಾರೆ. ಪಾಕಿಸ್ತಾನ ಇವರ ಉಸಿರಾಟವೇ ಆಗಿದೆ. ಹೇಳಿಕೊಳ್ಳಲು ಯಾವುದೇ ಅಭಿವೃದ್ಧಿ ಕಾರ್ಯಗಳಾಗದ ಹಿನ್ನೆಲೆ ದೇವರು, ಧರ್ಮ ಮುನ್ನೆಲೆಗೆ ತರುತ್ತಿದ್ದಾರೆ. ಗುಡಿ ಗುಂಡಾರ ಹಣವನ್ನು ಮುಸ್ಲಿಂ ಅಭಿವೃದ್ಧಿಗೆ ವಿನಿಯೋಗ ಮಾಡಲಾಗುತ್ತಿದೆ ಎಂದು ಯತ್ನಾಳ ಆರೋಪಿಸಿದ್ದಾರೆ. ತಿಳಿವಳಿಕೆ ಇದ್ದವರು ಹೀಗೆ ಮಾತನಾಡಲ್ಲ. ಹಾಗೊಂದು ವೇಳೆ ದೇವಸ್ಥಾನಗಳ ಹಣ ಮುಸ್ಲಿಂ ಅಭಿವೃದ್ಧಿಗೆ ಬಳಸಿದ್ದರೆ ದಾಖಲೆ ಬಿಡುಗಡೆಗೊಳಿಸಲಿ ಎಂದು ಸವಾಲು ಹಾಕಿದರು.

    ಬಹಿರಂಗ ಸವಾಲು

    ಹಿಂದುತ್ವ, ದೇಶದ ರಕ್ಷಣೆಗಾಗಿ ಬಿಜೆಪಿಗೆ ಮತ ನೀಡಿ ಎಂದು ಹೇಳುವ ಯತ್ನಾಳ ಕಳೆದ ಹತ್ತು ವರ್ಷ ಮಾಡಿದ್ದೇನು? ಭಾರತ ಇಂದು ಚೀನಾದ ಎದುರು ದುರ್ಬಲವಾಗಿದೆ. ಲಡಾಖ್‌ನಲ್ಲಿ ಅತಿಕ್ರಮಣ ಮುಂದುವರಿದಿದೆ. ಮಣಿಪುರ ಗಲಭೆ ಆಗಿದ್ದಾಗ ಇವರೆಲ್ಲ ಎಲ್ಲಿದ್ದರು? ಮಣಿಪುರದ ಸಹೋದರಿಯರು ಹಿಂದುಗಳಲ್ಲವಾ? ವಿಜಯಪುರ ನಗರದಲ್ಲಿ ಎರಡು ಕಡೆ, ಸಿಂದಗಿಯಲ್ಲಿ ಪಾಕಿಸ್ತಾನ ಧ್ವಜ ಹಾರಿಸಿದ್ದು ಯಾರು? ಆ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ಏಷ್ಯಾ ಖಂಡದಲ್ಲಿ ರೂಪಾಯಿ ಮೌಲ್ಯ ಕುಸಿದಿದೆ. ವಿಶ್ವ ಗುರು ಆಗಲು ಹೊರಟವರ ಆಡಳಿತದಲ್ಲಿಯೇ ಜಿಡಿಪಿ ಕುಸಿದಿದೆ. ಧೈರ್ಯವಿದ್ದರೆ, ಇತಿಹಾಸ ತಿಳಿದಿದ್ದರೆ ಬಹಿರಂಗ ಚರ್ಚೆಗೆ ಬನ್ನಿ ಎಂದು ಸವಾಲು ಎಸೆದರು.

    ಮುಖಂಡ ರವಿ ಬಿರಾದಾರ ಮಾತನಾಡಿ, ಮೋದಿ ಸರ್ಕಾರ ಧರ್ಮವನ್ನು ವ್ಯಾಪಾರೀಕರಣಕ್ಕೆ ಬಳಸಿಕೊಂಡಿದೆ. ಈ ದೇಶದ ರಕ್ಷಣಾ ಪಡೆಗಳನ್ನು ವ್ಯಾಪಾರೀಕರಣಕ್ಕೆ ಬಳಸಿಕೊಂಡಿದೆ. ಇಡೀ ದೇಶವನ್ನು ಆರ್ಥಿಕವಾಗಿ ಹಾಳು ಮಾಡಿರುವ ಬಿಜೆಪಿ ಅದರಿಂದ ತಪ್ಪಿಸಿಕೊಳ್ಳಲು ಧರ್ಮವನ್ನು ಮುನ್ನೆಲೆಗೆ ತರುತ್ತಿದೆ. ಧರ್ಮವನ್ನು ರಾಜಕೀಯಕ್ಕೆ ಬಳಸಿದ್ದು ನಾಚಿಕೆಗೇಡು ಎಂದರು.

    ಕಾಂಗ್ರೆಸ್ ಯಾರ ತುಷ್ಠೀಕರಣವೂ ಮಾಡಿಲ್ಲ. ಆದರೂ ಮುಸ್ಲಿಂ ಲೀಗ್ ಪ್ರಣಾಳಿಕೆ ಎಂದಿರುವುದು ಶೋಭೆ ತರುವಂಥದ್ದಲ್ಲ ಎಂದರು.
    ಸದೃಢವಾದ ಸೈನ್ಯ ಕಟ್ಟಿದ್ದು ಕಾಂಗ್ರೆಸ್. ಆದರೆ ಅಗ್ನಿವೀರರ ಹೆಸರಲ್ಲಿ ಗುತ್ತಿಗೆ ಆಧಾರದ ಮೇಲೆ ಸೈನ್ಯಕ್ಕೆ ನೇಮಕ ಮಾಡಿಕೊಂಡು ಸೈನಿಕರಿಗೆ ಅವಮಾನ ಮಾಡಿದ್ದು ಬಿಜೆಪಿ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts