More

    ಅರಣ್ಯ ರಕ್ಷಣೆ ಸವಾಲಿನ ಕೆಲಸ

    ಹಿರಿಕರ ರವಿ ಸೋಮವಾರಪೇಟೆ
    ತಾಲೂಕಿನಲ್ಲಿ ಬಿಸಿಲಿನ ದಗೆ ಹೆಚ್ಚಾಗುತ್ತಿದೆ. ಬೆಲೆ ಬಾಳುವ ಗಿಡ ಮರಗಳು, ಅಪರೂಪದ ಪ್ರಾಣಿ ಪ್ರಭೇದಗಳಿರುವ ಮೀಸಲು ಅರಣ್ಯವನ್ನು ಕಾಳ್ಗಿಚ್ಚಿನಿಂದ ಕಾಪಾಡಬೇಕಾದ ಜವಾಬ್ದಾರಿ ಅರಣ್ಯ ಇಲಾಖೆ ಹಾಗೂ ಸಾರ್ವಜನಿಕರ ಮೇಲಿದೆ.

    ಯಡವನಾಡು ಮೀಸಲು ಅರಣ್ಯದ ಸಜ್ಜಳ್ಳಿ, ಯಲಕನೂರು, ಕಾಜೂರು, ಕಾರೇಕೊಪ್ಪ, ನಿಡ್ತ ಮೀಸಲು ಅರಣ್ಯ ವ್ಯಾಪ್ತಿಯ ಬಾಣಾವಾರ, ಜೇನುಕಲ್ಲುಬೆಟ್ಟ ಸೇರಿದಂತೆ 6043 ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯ ಸಂಪೂರ್ಣ ಒಣಗಿದ್ದು, ಅವುಗಳ ರಕ್ಷಣೆ ಅರಣ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.
    ಸೋಮವಾರಪೇಟೆ ವಲಯದಲ್ಲಿ ನಿಡ್ತ ಮೀಸಲು ಅರಣ್ಯ 1843 ಹೆಕ್ಟೇರ್, ಯಡವನಾಡು ಮೀಸಲು ಅರಣ್ಯ 3300ಹೆ. ಜೇನುಕಲ್ಲು ಬೆಟ್ಟ 900 ಹೆ. ಅರಣ್ಯ ಪ್ರದೇಶವಿದೆ. ಇಲ್ಲಿ ಅಪರೂಪದ ಪ್ರಾಣಿ ಪ್ರಭೇದಗಳಿವೆ. ಕಡವೆ, ಮೊಲ, ಚಿರತೆ, ಕಾಡಾನೆ, ಮುಂಗುಸಿ, ಉಡ, ಉರಗಗಳು, ಮುಳ್ಳುಹಂದಿ, ಇನ್ನಿತರ ಪ್ರಾಣಿಗಳನ್ನು ಬೆಂಕಿನಿಂದ ರಕ್ಷಿಸಬೇಕಾದ ಹೆಚ್ಚಿನ ಜವಾಬ್ದಾರಿ ಅರಣ್ಯ ಇಲಾಖೆಗೆ ಇದೆ.

    ತೇಗ, ಹೊನ್ನೆ, ಬೀಟೆ, ಶ್ರೀಗಂಧ, ನಂದಿ, ಅರಿಸಿನ ತೇಗ, ಬಿಲ್ವರ್, ಬೂರುಗ, ತಡಸಲು, ಕಡಲ, ದಿಂಡಿಗ, ಮತ್ತಿ, ಹಸಿರುಗಣೆ ಇಂತಹ ಅನೇಕ ಜಾತಿಯ ಮರಗಳು ಮೀಸಲು ಅರಣ್ಯದಲ್ಲಿವೆ.

    ತಾಲೂಕಿನ ಮಟ್ಟಿಗೆ ನಿಡ್ತ ಮೀಸಲು ಹೆಚ್ಚಿನ ವಿಸ್ತೀರ್ಣಹೊಂದಿದ್ದು, ಕಳೆದ ವರ್ಷವೂ ಈ ಮೀಸಲು ಅರಣ್ಯಕ್ಕೆ ಬೆಂಕಿ ಬಿದ್ದು, ಹತ್ತಾರು ಎಕರೆಯಷ್ಟು ಅರಣ್ಯ ಬೆಂಕಿಗಾಹುತಿಯಾಗಿತ್ತು. ನಂತರ ಬೆಂಕಿ ನಂದಿಸಲಾಗಿತ್ತು. ಪ್ರಸಕ್ತ ವರ್ಷ ಅರಣ್ಯ ರಕ್ಷಣೆಗೆ ಒಬ್ಬ ಡಿಆರ್‌ಎಫ್‌ಒ ಸೇರಿದಂತೆ ರಸ್ತೆ ಬದಿಯಲ್ಲಿ 16 ಕಿ.ಮೀ. ಬೆಂಕಿ ರಸ್ತೆ ಮಾಡಲಾಗಿದೆ. ಒಂದು ಏರ್‌ಬ್ಲೋ ಯಂತ್ರವನ್ನಿಟ್ಟುಕೊಂಡು ಸಿದ್ಧವಾಗಿದ್ದಾರೆ.

    ಯಡವನಾಡು ಮೀಸಲು ಅರಣ್ಯದ ಬಸವನಕಲ್ಲು ವಾಚ್ ಟವರ್‌ನಲ್ಲಿ ಡಿಆರ್‌ಎಫ್‌ಒ ಸತೀಶ್ ಕುಮಾರ್ ನೇತೃತ್ವದಲ್ಲಿ 17 ಜನರ ತಂಡ ಕಾರ್ಯನಿರ್ವಹಿಸುತ್ತಿದೆ. ಬೈನಾಕ್ಯುಲರ್ ಉಪಯೋಗಿಸಿ, ಸುತ್ತಲ ಮೀಸಲು ಅರಣ್ಯವನ್ನು ವೀಕ್ಷಿಸುತ್ತಿರುತ್ತಾರೆ. ಬೆಂಕಿ ಕಾಣಿಸಿಕೊಂಡರೆ, ಅಗ್ನಿಶಾಮಕದಳ ಹಾಗು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಿದ್ದಾರೆ.

    ಕಳೆದ ವರ್ಷ ಯಡವನಾಡು ಮೀಸಲು ಅರಣ್ಯದ ಕಾಜೂರು ಸಮೀಪ ಸ್ವಲ್ಪ ಭಾಗ ಕಾಳ್ಗಿಚ್ಚು ಕಾಣಿಸಿಕೊಂಡಿತ್ತು. ಅಲ್ಪಸ್ವಲ್ಪ ಹಾನಿಯಾಗಿತ್ತು.

    ಅಮೂಲ್ಯ ಜೀವಸಂಕುಲ
    ನಿಡ್ತ, ಮಾಲಂಬಿ, ಯಡವನಾಡು, ಜೇನಕಲ್ಲು ಬೆಟ್ಟದಲ್ಲಿ ಅಮೂಲ್ಯವಾದ ಜೀವಸಂಕುಲಗಳಿವೆ. ಬಿದಿರು ಒಂದಕ್ಕೊಂದು ಉಜ್ಜುವುದರಿಂದ ಬೆಂಕಿ ಉತ್ಪತ್ತಿಯಾಗುತ್ತದೆ. ತೇಗದ ಎಲೆಗಳು ಒಣಗಿ, ಉಷ್ಣಾಂಶ ಹೆಚ್ಚಾದಾಗ ಬೆಂಕಿ ಹೊತ್ತಿಕೊಂಡು ಕಾಳ್ಗಿಚ್ಚು ಉಂಟಾಗಬಹುದು. ಅಲ್ಲದೆ ಕಿಡಿಗೇಡಿಗಳು ಬೆಂಕಿ ಹಚ್ಚುವುದರಿಂದ, ಬೀಡಿ, ಸಿಗರೇಟಿನ ಕಿಡಿಯಿಂದಲೂ ಬೆಂಕಿ ಜ್ವಾಲೆ ಹೊತ್ತಿ ಉರಿಯುತ್ತದೆ.

    ನೀರು ಸರಬರಾಜು ಅಗತ್ಯ
    ಅರಣ್ಯದೊಳಗಿರುವ ಅರಸಿಕೆರೆ, ಗಾರೇಕಟ್ಟೆಕೆರೆ, ಹೊನ್ನಕೆರೆ, ಸಜ್ಜಳ್ಳಿ ಕೆರೆಗಳಲ್ಲಿ ನೀರಿದ್ದು, ಅವುಗಳಲ್ಲಿ ಕಾಡುಪ್ರಾಣಿಗಳು ನೀರು ಕುಡಿಯುತ್ತಿವೆ. ಈ ಕಾರಣದಿಂದ ಕಾಡಾನೆಗಳು ಸೇರಿದಂತೆ ವನ್ಯಪ್ರಾಣಿಗಳು ವಲಸೆ ಹೋಗಿಲ್ಲ. ಕೆರೆಗಳಲ್ಲಿ ನೀರು ಬತ್ತಿ ಹೋದರೆ, ಕಾಡು ಪ್ರಾಣಿಗಳಿಗೂ ಕುಡಿಯುವ ನೀರನ್ನು ಸರಬರಾಜು ಮಾಡಬೇಕಾಗಬಹುದು. ಇದು ಸಾಧ್ಯವಾಗದಿದ್ದರೆ, ಕುಡಿಯುವ ನೀರು ಅರಸಿ, ಪ್ರಾಣಿಗಳು ಗ್ರಾಮಗಳ ಕಡೆ ವಲಸೆ ಬರಬಹುದು. ಒಂದೆರಡು ಇಂಚು ಮಳೆ ಸುರಿದರೆ, ಲಂಟಾನ, ಮರಗಿಡಗಳು ಚಿಗುರಿ, ಕಾಳ್ಗಿಚ್ಚು ಆತಂಕದಿಂದ ಬಚವಾಗಬಹುದು. ಅಪರೂಪದ ಪ್ರಾಣಿ ಪಕ್ಷಿಗಳು ಬದುಕುಳಿಯಲಿವೆ ಎಂಬುದು ಅರಣ್ಯ ಇಲಾಖೆಯ ಅಧಿಕಾರಿಗಳು ಅಭಿಪ್ರಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts