More

    ನರಭಕ್ಷಕ ಚಿರತೆ ಸೆರೆಗೆ ಅರಣ್ಯ ಇಲಾಖೆ ಹರಸಾಹಸ

    ತುಮಕೂರು: ನರಭಕ್ಷಕ ಚಿರತೆ ಸೆರೆಹಿಡಿಯಲು ಅರಣ್ಯ ಇಲಾಖೆ ಹರಸಾಹಸ ಮುಂದುವರಿಸಿದೆ. ಚಿರತೆ ಪತ್ತೆಗೆ ಬನ್ನಿಕುಪ್ಪೆ, ದೊಡ್ಡಮಳಲವಾಡಿ ಭಾಗದಲ್ಲಿ ಇರಿಸಿರುವ ಸಿಸಿ ಕ್ಯಾಮರಾದಲ್ಲಿ 4 ಚಿರತೆಗಳು ಸೆರೆಯಾಗಿವೆ.

    ಚಿರತೆ ಸೆರೆಹಿಡಿಯಲು 20 ಬೋನು ಇಡಲಾಗಿದ್ದು, ಚಾಣಾಕ್ಯ ಚಿರತೆ ತಪ್ಪಿಸಿಕೊಂಡು ಓಡಾಡುತ್ತಿದೆ. ಕ್ಯಾಮರಾದಲ್ಲಿ ಸೆರೆಸಿಕ್ಕ ಚಿರತೆಗಳಲ್ಲಿ ನರಭಕ್ಷಕ ಯಾವುದು ಎಂಬುದರ ಬಗ್ಗೆ ತಿಳಿಯಲು ದಾಳಿ ಮಾದರಿಯನ್ನು ಡಿಎನ್‌ಎ ಪರೀಕ್ಷೆಗೆ ಕಳುಹಿಸಲಾಗಿದೆ.

    ಚಿರತೆ ಚಲನವಲನ ಪರೀಕ್ಷಿಸಲು ಇಟ್ಟಿರುವ ಕ್ಯಾಮರಾದಲ್ಲಿ ಭಾನುವಾರ ರಾತ್ರಿ ಸೆರೆಯಾಗಿರುವ ಛಾಯಚಿತ್ರಗಳನ್ನು ಸ್ಥಳೀಯರಿಗೆ ತೋರಿಸಿ ಜಾಗೃತಿ ಮೂಡಿಸಲಾಗುತ್ತಿದೆ. ಸಂಜೆ, ರಾತ್ರಿ ಸಮಯದಲ್ಲಿ ಮನೆಯಿಂದ ಹೊರಬರದಂತೆ ಅರಣ್ಯ ಇಲಾಖೆ ಸಿಬ್ಬಂದಿ ಸಲಹೆ ನೀಡುತ್ತಿದ್ದಾರೆ.

    ಗುಬ್ಬಿ ತಾಲೂಕಿನ ಮಣ್ಣಕುಪ್ಪೆ ಗ್ರಾಮದಲ್ಲಿ ಬಾಲಕನ ಮೇಲೆ ದಾಳಿ ನಡೆದು 5 ದಿನವಾದರೂ ಚಿರತೆ ಸೆರೆಹಿಡಿಯಲು ಸಾಧ್ಯವಾಗದ ಅರಣ್ಯ ಇಲಾಖೆ ಮೇಲೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಜನರ ಸಿಟ್ಟಿಗೆ ಶಾಸಕರಾದ ಡಿ.ಸಿ.ಗೌರಿಶಂಕರ್, ಮಸಾಲೆ ಜಯರಾಮ್ ಕೂಡ ಧ್ವನಿಯಾಗಿದ್ದು ಜಿಲ್ಲಾಡಳಿತದ ವಿರುದ್ಧ ಗರಂ ಆಗಿದ್ದಾರೆ.

    ಸಿ.ಎಸ್. ಪುರ, ಮಣ್ಣಿಕುಪ್ಪೆ ಸೇರಿ ಹಲವು ಅರಣ್ಯ ಪ್ರದೇಶಗಳಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗುತ್ತಿದೆ. ಬಂಡಿಪುರ, ಹಾಸನ ಹಾಗೂ ತುಮಕೂರು ಜಿಲ್ಲೆಯ ಅರಣ್ಯಾ ಇಲಾಖೆಯ ಎಲ್ಲ ಸಿಬ್ಬಂದಿ ಕಳೆದೆರಡು ದಿನದಿಂದ ಚಿರತೆ ಹಿಂದೆ ಬಿದ್ದಿದ್ದಾರೆ.

    ಸೆರೆಗೆ 60 ಸಿಬ್ಬಂದಿ: ಸಿ.ಎಸ್.ಪುರ ಹೋಬಳಿ ಸುತ್ತಮುತ್ತ 20 ಬೋನುಳಿಗೆ ಮೇಕೆ, ನಾಯಿ ಕಟ್ಟಿ ಚಿರತೆಗಾಗಿ ಕಾಯಲಾಗುತ್ತಿದೆ. ರಾತ್ರಿ ಮತ್ತು ಹಗಲಿನಲ್ಲಿಯೂ ಕೂಂಬಿಂಗ್ ಮಾಡುತ್ತಿದ್ದಾರೆ. ಸಿಸಿಎಫ್ ಶಂಕರ್, ಡಿಎಫ್‌ಒ ಗಿರೀಶ್ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳು, 60 ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದಾರೆ. ಸಿ.ಎಸ್.ಪುರ ಸುತ್ತಮುತ್ತ 4 ಚಿರತೆಗಳು ಇರುವುದು ದೃಢವಾಗಿದ್ದು ಒಂದು ಹೆಣ್ಣು, ಒಂದು ಗಂಡು ಹಾಗೂ 2 ಮಧ್ಯ ವಯಸ್ಕ ಚಿರತೆಗಳೆಂದು ಗುರುತಿಸಲಾಗಿದೆ. ರೈತರು ತೋಟಗಳಲ್ಲಿ ಕಾಣಿಸುತ್ತಿರುವ ಹೆಜ್ಜೆ ಗುರುತುಗಳನ್ನು ಕಂಡು ಭಯಭೀತರಾಗಿದ್ದು, ಅರಣ್ಯ ಸಿಬ್ಬಂದಿ ಜತೆ ಲಾಠಿ ಹಿಡಿದು ಕಾರ್ಯಾಚರಣೆಗೆ ಇಳಿದಿದ್ದಾರೆ.

    ಕ್ಯಾಮರಾ ಟ್ರಾಪ್‌ನಲ್ಲಿ 4 ಚಿರತೆ ಕಾಣಿಸಿವೆ. 20 ಬೋನುಗಳನಿಟ್ಟಿದ್ದರೂ, ಬರುತ್ತಿಲ್ಲ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಚಿರತೆ ಹಾವಳಿ ಕಂಡುಬಂದಿದ್ದು, ಮನುಷ್ಯರ ಮೇಲೆ ಹಲ್ಲೆ ನಡೆಸಿರುವ ಕಡೆ ಹೆಚ್ಚು ನಿಗಾವಹಿಸಲಾಗಿದೆ. ಮೃತ ಬಾಲಕನ ಕುಟುಂಬಕ್ಕೆ 7.50ಲಕ್ಷ ರೂ. ಪರಿಹಾರ ನೀಡಲಾಗಿದೆ.
    ಗಿರೀಶ್ ಡಿಎಫ್‌ಒ, ತುಮಕೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts