More

    ಜಿಲ್ಲೆಯಿಂದ 59 ವಿದೇಶಿಯರು ನಿರ್ಗಮನ

    ಗೋಪಾಲಕೃಷ್ಣ ಪಾದೂರು
    ಕರೊನಾ ಲಾಕ್‌ಡೌನ್ ಘೋಷಣೆಯಾದ ಬಳಿಕ ಉಡುಪಿ ಜಿಲ್ಲೆಯಲ್ಲಿ ವಾಸ್ತವ್ಯವಿದ್ದ 59 ವಿದೇಶಿಗರಿಗೆ ಅವರ ದೇಶಕ್ಕೆ ಹಿಂತಿರುಗಲು ಜಿಲ್ಲಾಡಳಿತ ವ್ಯವಸ್ಥೆ ಕಲ್ಪಿಸಿದೆ.
    ಮಾರ್ಚ್ ಕೊನೆ ವಾರದಲ್ಲಿ ಜಿಲ್ಲೆಗೆ 90ಕ್ಕೂ ಅಧಿಕ ವಿದೇಶಿಗರು ಅಗಮಿಸಿದ್ದರು. ಆದರೆ ರಾಜ್ಯಾದ್ಯಂತ ಸಾರಿಗೆ ಸಂಚಾರ ಸಂಪೂರ್ಣ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಎಲ್ಲೂ ಹೋಗಲು ಸಾಧ್ಯವಾಗದೆ ಸಂಕಷ್ಟಕ್ಕೆ ಒಳಗಾದ ಈ ವಿದೇಶಿ ಪ್ರವಾಸಿಗರನ್ನು ಈಗ ಅಯಾ ದೇಶಗಳ ರಾಯಭಾರಿ ಕಚೇರಿಗಳ ಕೋರಿಕೆ ಮೇರೆಗೆ ಸ್ವದೇಶಕ್ಕೆ ಮರಳಲು ಅವಕಾಶ ಮಾಡಿಕೊಡಲಾಗಿದೆ.

    ಮಾ.26ರಿಂದ ಏ.4ರವರೆಗೆ ಸುಮಾರು 59 ವಿದೇಶಿಗರು ಹೀಗೆ ತಮ್ಮ ದೇಶಕ್ಕೆ ಮರಳಿದ್ದಾರೆ. ಫ್ರಾನ್ಸ್ ದೇಶದ 14 ಮಂದಿ, ಮಲೇಷ್ಯಾದ 39 ಮಂದಿ, ಪೋಲ್ಯಾಂಡ್, ಜರ್ಮನಿ, ಓಮನ್, ಸ್ವಿಝರ್ಲ್ಯಾಂಡ್, ಸ್ಪೇನ್ ದೇಶದ ತಲಾ ಒಬ್ಬರನ್ನು ಅರೋಗ್ಯ ತಪಾಸಣೆ ನಡೆಸಿ, ವೈದ್ಯಕೀಯ ಸಿಬ್ಬಂದಿ ಜತೆಗೆ ಸಂಬಂಧಪಟ್ಟ ರಾಯಭಾರ ಕಚೇರಿಗೆ ಬಿಟ್ಟು ಬರಲಾಗಿದೆ. ಮಲೇಷ್ಯಾ ಪ್ರಜೆಗಳನ್ನು ಚೆನ್ನೈ ಹಾಗೂ ಪೊಲ್ಯಾಂಡ್, ಸ್ಪೇನ್ ಪ್ರಜೆಯನ್ನು ಗೋವಾ, ಉಳಿದವರನ್ನು ಬೆಂಗಳೂರು ರಾಯಭಾರಿ ಕಚೇರಿ ವಶಕ್ಕೆ ಒಪ್ಪಿಸಲಾಗಿದೆ.

    ವಿಶೇಷ ವಿಮಾನ ವ್ಯವಸ್ಥೆ
    ಅಂತಾರಾಷ್ಟ್ರೀಯ ವಿಮಾನ ಸೇವೆ ಸ್ಥಗಿತವಾಗಿರುವ ಹಿನ್ನೆಲೆಯಲ್ಲಿ ಪ್ರತೀ ರಾಯಭಾರಿ ಕಚೇರಿಗಳೂ ತಮ ಪ್ರಜೆಗಳನ್ನು ಸ್ವದೇಶಕ್ಕೆ ಕಳುಹಿಸಲು ವಿಶೇಷ ವಿಮಾನದ ವ್ಯವಸ್ಥೆ ಮಾಡುತ್ತಿವೆ.

    170 ವಿದ್ಯಾರ್ಥಿಗಳು
    ಮಣಿಪಾಲ ಮೊದಲಾದ ಕಡೆ ವಿದ್ಯಾಭ್ಯಾಸಕ್ಕೆ ಆಗಮಿಸಿದ 170ಕ್ಕೂ ಅಧಿಕ ವಿದೇಶಿ ವಿದ್ಯಾರ್ಥಿಗಳಿದ್ದಾರೆ. ಪ್ರಸ್ತುತ ಕಾಲೇಜು ತರಗತಿಗಳು ತಾತ್ಕಾಲಿಕವಾಗಿ ಸ್ಥಗಿತವಾಗಿದ್ದರೂ ಸ್ವದೇಶಕ್ಕೆ ತೆರಳಿದರೆ ಮತ್ತೆ ಭಾರತಕ್ಕೆ ಬರುವುದು ಕಷ್ಟವಾಗಬಹುದು ಎಂಬ ಹಿನ್ನೆಲೆಯಲ್ಲಿ ಇವರು ಹಾಸ್ಟೆಲ್‌ಗಳಲ್ಲಿಯೇ ಉಳಿದುಕೊಂಡಿದ್ದಾರೆ. ಇವರಿಗೆ ಕಾಲೇಜಿನವರೇ ಊಟೋಪಾಚಾರ ವ್ಯವಸ್ಥೆ ಕಲ್ಪಿಸಿದ್ದಾರೆ.

    ವಿದೇಶಿ ರಾಯಭಾರಿ ಕಚೇರಿಗಳು ಸರ್ಕಾರವನ್ನು ಸಂಪರ್ಕಿಸಿ ತಮ್ಮ ಪ್ರಜೆಗಳನ್ನು ಕಳುಹಿಸಿಕೊಡುವಂತೆ ಕೋರಿಕೊಳ್ಳುತ್ತಿವೆ. ಜಿಲ್ಲಾಡಳಿತ ಮೂಲಕ ಅವರ ನಿರ್ಗಮನಕ್ಕೆ ವ್ಯವಸ್ಥೆ ಕಲ್ಪಿಸುತ್ತಿದೆ. ಆಯುರ್ವೇದ ಚಿಕಿತ್ಸೆ, ಧಾರ್ಮಿಕ ಪ್ರವಾಸಕ್ಕೆ ಅಗಮಿಸಿ ವಾಸ್ತವ್ಯಕ್ಕೆ ಅನುಕೂಲ ಇರುವವರು ಉಳಿದುಕೊಂಡಿದ್ದಾರೆ. ಉಳಿದವರು ತಮ್ಮ ದೇಶದ ಹೈಕಮಿಷನ್ ಸಂಪರ್ಕಿಸಿ ವಾಪಸಾಗುತ್ತಿದ್ದಾರೆ. ಕಳೆದ ವಾರ 59 ಮಂದಿ ಸ್ವದೇಶಕ್ಕೆ ತೆರಳಿದ್ದಾರೆ.
    ಸದಾಶಿವ ಪ್ರಭು
    ಅಪರ ಜಿಲ್ಲಾಧಿಕಾರಿ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts