More

    ಕನ್ನಡ ನಾಮಫಲಕ ಅಳವಡಿಸಲು ಒತ್ತಾಯ

    ಅರಸೀಕೆರೆ: ಕನ್ನಡ ನಾಮಫಲಕ ಅಳವಡಿಕೆ ಕಡ್ಡಾಯಗೊಳಿಸುವಂತೆ ಒತ್ತಾಯಿಸಿ ಕರವೇ ಮುಖಂಡರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

    ನಗರದ ಪ್ರವಾಸಿ ಮಂದಿರದ ಆವರಣದಿಂದ ಮೆರವಣಿಗೆ ಹೊರಟ ಕಾರ್ಯಕರ್ತರು ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಂಘಟನೆಯ ನಗರಾಧ್ಯಕ್ಷ ಕಿರಣ್‌ಕುಮಾರ್ ಮಾತನಾಡಿ, ಕರ್ನಾಟಕದಲ್ಲಿ ಶೇ.60ರಷ್ಟು ಕನ್ನಡ ನಾಮಫಲಕ ಅಳವಡಿಕೆಗೆ ಬೀದಿಗಿಳಿಯುವ ಸನ್ನಿವೇಶ ಎದುರಾಗಿರುವುದು ದುರ್ದೈವದ ಸಂಗತಿಯಾಗಿದೆ.ದುಡಿಮೆಗಾಗಿ ನೆಲ, ಜಲ, ಮಾನವ, ನೈಸರ್ಗಿಕ ಸಂಪತ್ತಿನ ಬಳಕೆ ಮಾಡಿಕೊಳ್ಳುತ್ತಿರುವ ವ್ಯಕ್ತಿಗಳು ತಮ್ಮ ಅಂಗಡಿ ಮುಂಗಟ್ಟುಗಳ ಮೇಲೆ ಕನ್ನಡ ಭಾಷೆಯಲ್ಲಿ ಹೆಸರು ಬರೆಯಿಸಲು ಹಿಂದೇಟು ಹಾಕುತ್ತಿರುವುದು ಸರಿಯಲ್ಲ. ಸರ್ಕಾರದ ಆದೇಶದ ನಡುವೆಯೂ ನಿರ್ಲಕ್ಷ್ಯ ಧೋರಣೆ ಮುಂದುವರಿದಿದ್ದರಿಂದ ಹೋರಾಟದ ಹಾದಿ ಹಿಡಿಯುವುದು ಅನಿವಾರ್ಯವಾಗಿದೆ ಎಂದರು.
    ಅನ್ಯ ಭಾಷಾ ಬೋರ್ಡ್ ಹಾಕಿರುವವರು ಲೋಪ ಸರಿಪಡಿಸಿಕೊಳ್ಳದಿದ್ದರೆ ಪ್ರತಿಭಟನೆಯ ಸ್ವರೂಪ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು. ಬಳಿಕ ನಗರಸಭೆ ಕಚೇರಿಗೆ ತೆರಳಿ ಪೌರಾಯುಕ್ತ ಬಸವರಾಜ್ ಅವರಿಗೆ ಮನವಿ ಸಲ್ಲಿಸಿದರು.

    ಮುಖಂಡರಾದ ರಘು, ದಿಲೀಪ್, ಪ್ರಸನ್ನ, ಅರುಣ್, ಮಂಜು, ಸೂರ್ಯ, ನವೀನ್, ಸುಬ್ರಮಣ್ಯ, ರಮೇಶ್, ಲೋಕೇಶ್, ಸಿದ್ದು ರಾಜಣ್ಣ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಕರವೇ ಮತ್ತೊಂದು ಗುಂಪಿನ ಮುಖಂಡರು ತಾಲೂಕು ಕಚೇರಿಗೆ ತೆರಳಿ ಗ್ರೇಡ್-2 ತಹಸೀಲ್ದಾರ್ ಪಾಲಾಕ್ಷ ಅವರಿಗೆ ಮನವಿ ಸಲ್ಲಿಸಿದರು.

    ಕನ್ನಡ ನಾಮಫಲಕ ಅಳವಡಿಕೆ ಕಡ್ಡಾಯಕ್ಕೆ ಒತ್ತಾಯಿಸಿ ಕರವೇ ನಗರಾಧ್ಯಕ್ಷ ಕಿರಣ್‌ಕುಮಾರ್ ನೇತೃತ್ವದಲ್ಲಿ ಅರಸೀಕೆರೆ ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ರಘು, ದಿಲೀಪ್, ಪ್ರಸನ್ನ, ಅರುಣ್, ಮಂಜು, ಸುಬ್ರಮಣ್ಯ, ಸಿದ್ದು, ರಾಜಣ್ಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts