More

    ಇಂದಿನ ಯುವಕರಿಗೆ ಹೆಂಡತಿ ಎಂದರೆ ‘ಎಂದೆಂದಿಗೂ ಆಹ್ವಾನಿಸಲಾದ ಚಿಂತೆ’!; ಹೈಕೋರ್ಟ್​

    ಕೇರಳ: ಹೊಸ ಪೀಳಿಗೆಯು ಮದುವೆಯನ್ನು ಕೆಟ್ಟದಾಗಿ ನೋಡುತ್ತಿದ್ದು, ದಾಂಪತ್ಯ ಬಂಧ ಎಂಬುದು ಬಳಸಿ ಎಸೆಯುವಂತಾಗಿದೆ ಎಂಬುದಾಗಿ ನ್ಯಾಯಾಲಯವೇ ಬೇಸರ ವ್ಯಕ್ತಪಡಿಸಿದೆ. ವ್ಯಕ್ತಿಯೊಬ್ಬರ ವಿಚ್ಛೇದನದ ಅರ್ಜಿಯನ್ನು ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್​, ವಿವಾಹಬಂಧ ಹದಗೆಡುತ್ತಿರುವುದರ ಕುರಿತು ಅಸಮಾಧಾನ ವ್ಯಕ್ತಪಡಿಸಿದೆ.

    51 ವರ್ಷದ ವ್ಯಕ್ತಿಯೊಬ್ಬರು ದಾಂಪತ್ಯವನ್ನು ಕ್ರೌರ್ಯವೆಂದು ಹೇಳಿ ವಿಚ್ಛೇದನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್​ನ ವಿಭಾಗೀಯ ಪೀಠದ ನ್ಯಾಯಾಧೀಶರಾದ ಎ. ಮುಹಮ್ಮದ್ ಮುಸ್ತಾಖ್, ಸೋಫಿ ಥಾಮಸ್ ಅರ್ಜಿಯನ್ನು ತಳ್ಳಿಹಾಕಿದ್ದಾರೆ.

    ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ವ್ಯಕ್ತಿ 2017ರಿಂದ ವಿವಾಹೇತರ ಸಂಬಂಧ ಹೊಂದಿದ್ದಾರೆ. ಅದಾಗ್ಯೂ ಆತನ 38 ವರ್ಷದ ಪತ್ನಿ ದಾಂಪತ್ಯ ಮುಂದುವರಿಸಲು ಒಪ್ಪಿರುವುದರಿಂದ ಸೌಹಾರ್ದಯುತ ಪುನರ್ಮಿಲನದ ಅವಕಾಶಗಳು ಶಾಶ್ವತವಾಗಿ ಮುಚ್ಚಿಹೋಗಿವೆ ಎಂದು ತೋರಿಸಲು ಏನೂ ಇಲ್ಲ. ಮತ್ತೊಂದೆಡೆ ಈ ದಂಪತಿ ಮೂವರು ಪುತ್ರಿಯರನ್ನು ಹೊಂದಿದ್ದಾರೆ ಎಂಬುದಾಗಿ ಅರ್ಜಿಯ ಕುರಿತು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.

    ಯೂಸ್ ಆ್ಯಂಡ್ ಥ್ರೋ ಗ್ರಾಹಕ ಸಂಸ್ಕೃತಿಯು ವೈವಾಹಿಕ ಜೀವನದ ಮೇಲೂ ಪ್ರಭಾವ ಬೀರಿದೆ. ಲಿವ್ ಇನ್​ ರಿಲೇಷನ್​​ಶಿಪ್​ಗಳು ಹೆಚ್ಚಾಗುತ್ತಿದ್ದು, ಬೇಡ ಎನಿಸಿದಾಗ ಜಸ್ಟ್ ಗುಡ್​ ಬೈ ಹೇಳಿ ಬೇರೆ ಆಗುವಂತಾಗಿದೆ ಎಂದು ತೀರ್ಪಿನಲ್ಲಿ ಅಭಿಪ್ರಾಯ ಪಡಲಾಗಿದೆ.

    ಯಾವುದೇ ಹೊಣೆಗಾರಿಕೆ ಅಥವಾ ಕಟ್ಟುಪಾಡುಗಳಿಲ್ಲದೆ ಮುಕ್ತ ಜೀವನವನ್ನು ಆನಂದಿಸಲು ಮದುವೆ ಅಡ್ಡಿ ಎಂಬಂತೆ ಎಂದು ಯುವ ಪೀಳಿಗೆ ಭಾವಿಸುತ್ತಿದೆ. ಹೆಂಡತಿ (WIFE) ಎಂದರೆ ‘ಎಂದೆಂದಿಗೂ ಜಾಣ ಹೂಡಿಕೆ’ (Wise Investment For Ever) ಎಂಬ ಹಳೆಯ ಪರಿಕಲ್ಪನೆಗೆ ಬದಲಾಗಿ ವೈಫ್ ಎಂದರೆ ‘ಎಂದೆಂದಿಗೂ ಆಹ್ವಾನಿಸಲಾದ ಚಿಂತೆ’ (Worry Invited For Ever) ಎಂಬುದಾಗಿ ಯುವಪೀಳಿಗೆ ಹೇಳುತ್ತಾರೆ ಎಂದು ತೀರ್ಪಿನಲ್ಲಿ ಪ್ರಸ್ತಾಪಿಸಲಾಗಿದೆ.

    ಅಲಪ್ಪುಝ ಜಿಲ್ಲೆಯ ಇವರಿಬ್ಬರು 2009ರಲ್ಲಿ ಮದುವೆಯಾಗಿದ್ದು, ಸುಮಾರು ಎಂಟು ವರ್ಷಗಳ ಕಾಲ ಸೌದಿ ಅರೇಬಿಯಾದಲ್ಲಿ ನೆಲೆಸಿದ್ದು, 2018ರಲ್ಲಿ ಪತಿ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಹೋಗಿದ್ದ. ಆದರೆ ಈತನ ತಾಯಿ ಸೊಸೆಯ ಪರವಾಗಿ ನಿಂತಿದ್ದು, ಮಗ ಮೊಮ್ಮಕ್ಕಳು ಸೊಸೆಯೊಂದಿಗೆ ಚೆನ್ನಾಗಿರಬೇಕು ಎಂದು ಬಯಸಿದ್ದಾರೆ.

    ತನ್ನ ಪತಿ ಇನ್ನೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಪರ್ಕ ಹೊಂದಿದ್ದಾನೆ ಎಂದು ತಿಳಿದ ಮೇಲೆ ಹೆಂಡತಿಯಿಂದ ವ್ಯಕ್ತವಾಗುವ ಸಾಮಾನ್ಯ ಪ್ರತಿಕ್ರಿಯೆಗಳನ್ನು ಹೆಂಡತಿಯ ವರ್ತನೆಯ ಅಸಹಜತೆ ಅಥವಾ ಕ್ರೌರ್ಯ ಎಂದು ಕರೆದು ಮದುವೆಯನ್ನು ವಿಸರ್ಜಿಸಲು ಸಾಧ್ಯವಿಲ್ಲ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.

    ಮೋದಿ, ಅದಾನಿ, ಸಿಎಂ ಜಗನ್ ವಿರುದ್ಧ ಕೇಸು ದಾಖಲು; ಭಾರತೀಯ ವೈದ್ಯನಿಂದ ಅಮೆರಿಕದಲ್ಲಿ ದೂರು..

    ಚೌತಿ ಮೆರವಣಿಗೆ ವೇಳೆ ಮಸೀದಿ ಆವರಣಕ್ಕೆ ಬಣ್ಣ ಎರಚಿದ ಯೋಧ; ಸೈನಿಕನ ಬಂಧನ, ಪ್ರಕರಣ ದಾಖಲು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts