More

    ಭದ್ರತೆ ದೃಷ್ಟಿಯಿಂದ ಕಾಂಪೌಂಡ್ ನಿರ್ಮಾಣ, ಯಾವುದೇ ರಸ್ತೆ ಜಾಗ ಒತ್ತುವರಿ ನಡೆದಿಲ್ಲ : ರೈತಸಂಘದ ನಾರಾಯಣಸ್ವಾಮಿ ಸ್ಪಷ್ಟನೆ

    ಶಿಡ್ಲಘಟ್ಟ : ಹಿರಿಯರಿಂದ ಬಂದಿರುವ ನಮ್ಮ ಸ್ವಂತ ಜಮೀನುಗಳನ್ನು ಭದ್ರಪಡಿಸಿಕೊಳ್ಳಲು ಕಾಂಪೌಂಡ್ ನಿರ್ಮಿಸಲು ಮುಂದಾಗಿದ್ದೇವೆಯೇ ಹೊರತು ಯಾವುದೇ ರಸ್ತೆಯನ್ನು ರೈತರು ಒತ್ತುವರಿ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿರುವ ನಗರ ರೈತಸಂಘ, ಹಸಿರುಸೇನೆ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ಅಂಗನವಾಡಿ, ಸರ್ಕಾರಿ ಶಾಲೆ ನಿರ್ಮಿಸಲು ರೈತರ ಜಮೀನೇ ಬೇಕೇ ಎಂದು ಪ್ರಶ್ನಿಸಿದ್ದಾರೆ.

    ತಾಲೂಕಿನ ಕಸಬಾ ಹೋಬಳಿ ಸರ್ವೇ ನಂ.29 ರಿಂದ 37 ಮತ್ತು 77ರಿಂದ 85ರವರೆಗೆ, ಇದ್ಲೂಡು ಗ್ರಾಮದ ಸರ್ವೇ ನಂ.26 ರಿಂದ 28 ಮತ್ತು 36ರಿಂದ 38ರವರೆಗೆ, 41 ರಿಂದ 45 ರವರೆಗೆ ಹಾಗೂ ಪಟ್ರೇನಹಳ್ಳಿಯ ಸರ್ವೇ ನಂ.5ರ ಜಮೀನುಗಳು ನಮ್ಮ ಪೂರ್ವಜರಿಂದ ನಮಗೆ ವರ್ಗಾವಣೆಯಾಗಿವೆ. ರಸ್ತೆ ಜಾಗವನ್ನು ರೈತರು ಒತ್ತುವರಿ ಮಾಡಿಕೊಂಡು ನಿವೇಶನಗಳನ್ನಾಗಿ ಮಾಡಿ ಮಾರಾಟ ಮಾಡುತ್ತಿಲ್ಲ ಎನ್ನುವ ಮೂಲಕ ನಗರಸಭೆ ಮಾಜಿ ಅಧ್ಯಕ್ಷ ಬಿ.ಅಪ್ಸರ್‌ಪಾಷ ಹಾಗೂ ಸದಸ್ಯ ಸಿ.ಮೌಲಾ ಅವರ ಆರೋಪಕ್ಕೆ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದರು.

    ಈ ಸರ್ವೇ ನಂಬರ್‌ಗಳ ಪಕ್ಕದಲ್ಲಿದ್ದ ಓಣಿಗಳಲ್ಲಿ ಕೊಳಚೆ ನಿರ್ಮೂಲನೆ ಮಂಡಳಿ ಮನೆಗಳನ್ನು ನಿರ್ಮಿಸಿ ಬಡವರಿಗೆ ಅನುಕೂಲ ಮಾಡಿತ್ತು, ಆದರೆ ಮನೆಗಳಾದಂತೆ ರಸ್ತೆಯನ್ನೂ ಬಿಡದೆ ಮನೆ, ಶೌಚಗೃಹ ನಿರ್ಮಿಸಿಕೊಂಡಿರುವ ಅಲ್ಲಿನ ನಿವಾಸಿಗಳು, ಈಗ ಜಮೀನುಗಳಲ್ಲಿ ರಸ್ತೆಗೆ ಜಾಗ ಬಿಡುವಂತೆ ರೈತರಿಗೆ ಕಿರುಕುಳ ನೀಡುತ್ತಿದ್ದಾರೆ. ಸಾಲದೆಂಬಂತೆ ಇವರಿಗೆ ಕೆಲ ಜನಪ್ರತಿನಿಧಿಗಳು ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದರು.

    ನಗರದ ವಾರ್ಡ್ 12ರಲ್ಲಿನ ಕಾರ್ಮಿಕನಗರ, ಗಾಂಧಿನಗರ ಮತ್ತು ರಹಮತ್ ನಗರ ತೀರಾ ಹಿಂದುಳಿದೆ, ಇಲ್ಲಿನ ಸರ್ಕಾರಿ ಶಾಲೆ, ಅಂಗನವಾಡಿಗೆ ಸ್ವಂತ ಕಟ್ಟಡವಿಲ್ಲ ಎಂದಿರುವ ನಗರಸಭೆ ಸದಸ್ಯ ಮೌಲಾ, ತಾಲೂಕು ಆಡಳಿತ ಅಥವಾ ನಗರಸಭೆಯಿಂದ ಜಾಗ ಮಂಜೂರು ಮಾಡಿಸಿ ಶಾಲೆ, ಹಾಗೂ ಅಂಗನವಾಡಿ ಕಟ್ಟಡ ನಿರ್ಮಿಸಲಿ, ಅದುಬಿಟ್ಟು ರೈತರಿಗೆ ಸೇರಿದ ಜಮೀನಿನಲ್ಲಿ ಶಾಲೆ, ಅಂಗನವಾಡಿ ನಿರ್ಮಿಸಬೇಕು ಎನ್ನುವುದು ಸರಿಯಲ್ಲ ಟಾಂಗ್ ನೀಡಿದರು.
    ಬಯಲುಸೀಮೆ ಭಾಗದಲ್ಲಿ 1500 ಅಡಿ ಕೊಳವೆಬಾವಿ ಕೊರೆದರೂ ನೀರು ಸಿಗುತ್ತಿಲ್ಲ, ಹೀಗಿರುವಾಗ ವ್ಯರ್ಥವಾಗಿ ಹೋಗುತ್ತಿರುವ ಚರಂಡಿ ನೀರನ್ನು ಜಮೀನಿಗೆ ಬಳಸುವುದನ್ನು ಪ್ರಶ್ನಿಸುತ್ತಿದ್ದಾರೆ, ವಾರ್ಡ್‌ನ ಬಹುತೇಕ ಮನೆಗಳು ಶೌಚಗೃಹದ ನೀರುನ್ನು ನೇರವಾಗಿ ಚರಂಡಿಗಳಿಗೆ ಹರಿಸುತ್ತಿದ್ದರೂ ಮೌನವಾಗಿರುವ ಸದಸ್ಯರು, ಜಮೀನಿಗೆ ಬಳಸುವ ಚರಂಡಿ ನೀರಿನಿಂದ ದುರ್ವಾಸನೆ ಬರುತ್ತದೆ ಎನ್ನುವುದು ಹಾಸ್ಯಾಸ್ಪದ ಎಂದು ವ್ಯಂಗ್ಯವಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts