More

    ರಾಮೋತ್ಸವಕ್ಕೆ ಸಜ್ಜಾದ ಬೆಳಗಾವಿ!

    ಬೆಳಗಾವಿ: ದೇಶದೆಲ್ಲೆಡೆ ಶ್ರೀರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಪರ-ವಿರೋಧ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಬೆಳಗಾವಿಯಲ್ಲಿ ಅಯೋಧ್ಯೆ ವೈಭವಕ್ಕೆ ಭರ್ಜರಿ ಸಿದ್ಧತೆ ಆರಂಭಗೊಂಡಿದೆ. ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ನೇರ ವೀಕ್ಷಣೆಗೆ ಎಲ್‌ಇಡಿ ಸ್ಕ್ರೀನ್ ವ್ಯವಸ್ಥೆಗೆ ಹಿಂದುಪರ ಸಂಘಟನೆಗಳು ವ್ಯವಸ್ಥೆ ಮಾಡಿಕೊಂಡಿವೆ.

    ಅಯೋಧ್ಯೆಯಲ್ಲಿ ಜ.22ರಂದು ನಡೆಯಲಿರುವ ರಾಮಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಬೆಳಗಾವಿಯಲ್ಲಿ ಭರ್ಜರಿ ಸಿದ್ಧತೆ ಕೈಗೊಂಡಿರುವ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ನಗರ, ಗ್ರಾಮೀಣ ಭಾಗಗಳಲ್ಲಿ ಸುಮಾರು 150 ಕಡೆ ಕಾರ್ಯಕ್ರಮ ನೇರ ವೀಕ್ಷಣೆಗಾಗಿ ಎಲ್‌ಇಡಿ ಸ್ಕ್ರೀನ್ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ, ಒಂದೊಂದು ಸ್ಕ್ರೀನ್ ಮುಂದೆ ಕನಿಷ್ಠ 150 ರಿಂದ 200 ಜನರನ್ನು ಸೇರಿಸಲು ಯೋಜನೆ ರೂಪಿಸುತ್ತಿದ್ದಾರೆ.

    ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಸುಮಾರು 345 ಹಳ್ಳಿಗಳಲ್ಲಿ ಚಕ್ಕಡಿ, ಟ್ರಾೃಕ್ಟರ್‌ಗಳಲ್ಲಿ ರಾಮ ಮೂರ್ತಿ ಮೆರವಣಿಗೆ ನಡೆಯಲಿದೆ. ಸುಮಾರು 150ಕ್ಕೂ ಅಧಿಕ ವಿವಿಧ ದೇವಸ್ಥಾನಗಳಲ್ಲಿ ಜ.22ರಂದು ಬೆಳಗ್ಗೆ ಐದು ಗಂಟೆಯಿಂದ ವಿಶೇಷ ಪೂಜೆ ನಡೆಯಲಿದೆ. ಬಳಿಕ ಮಧ್ಯಾಹ್ನ 12.30ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಜಿಲ್ಲೆಯ 50 ರಿಂದ 60 ಕಡೆ ಅನ್ನದಾಸೋಹ ವ್ಯವಸ್ಥೆ ಇರಲಿದೆ. ಸುಮಾರು 2 ಲಕ್ಷಕ್ಕೂ ಅಧಿಕ ಜನರು ಪ್ರಸಾದ ಸ್ವೀಕರಿಸಲಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಸಿಹಿ ಪದಾರ್ಥ, ತಂಪು ಪಾನೀಯಗಳನ್ನು ಹಿಂದುಪರ ಸಂಘಟನೆಗಳು ವಿತರಣೆ ಮಾಡಲಿವೆ. ಅದಕ್ಕಾಗಿ ಜಿಲ್ಲೆಯ ವಿವಿಧ ಕಡೆ ಸುಮಾರು 500ಕ್ಕೂ ಅಧಿಕ ಕರಸೇವಕರು ಸ್ವಯಂ ಪ್ರೇರಿತವಾಗಿ ಸಜ್ಜಾಗಿರುವುದು ವಿಶೇಷ.

    ಅಯೋಧ್ಯೆಯಲ್ಲಿ ರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಬೆಳಗಾವಿಯಿಂದ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚರ್ಯ ಸ್ವಾಮೀಜಿ, ರಾಮಕೃಷ್ಣ ಆಶ್ರಮದಿಂದ ಓರ್ವ ಸ್ವಾಮೀಜಿ ಹೋಗುತ್ತಿದ್ದಾರೆ. ಈಗಾಗಲೇ ರಾಮಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಮಾಂತ್ರಾಕ್ಷತೆಯನ್ನು ಸುಮಾರು 10 ಸಾವಿರ ಕಾರ್ಯಕರ್ತರು ಬೆಳಗಾವಿ ಮಹಾನಗರ ಸೇರಿ 18 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸುಮಾರು 6 ಲಕ್ಷಕ್ಕೂ ಅಧಿಕ ಮನೆಗಳಿಗೆ ಮುಟ್ಟಿಸಿದ್ದಾರೆ. ಇನ್ನೂ ಬಾಕಿ ಉಳಿದಿರುವ ಮನೆಗಳಿಗೆ ಜ.20ರ ಒಳಗಾಗಿ ಮುಟ್ಟಿಸಲಾಗುವುದು ಎಂದು ವಿಶ್ವ ಹಿಂದು ಪರಿಷತ್ ಮುಖಂಡರು ತಿಳಿಸಿದ್ದಾರೆ.

    ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚು ನಿಗಾ

    ಬೆಳಗಾವಿ ಮಹಾನಗರ ಸೇರಿ ಜಿಲ್ಲೆಯ ವಿವಿಧ ಕಡೆ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಭದ್ರತೆ ನಿಯೋಜಿಸಲಾಗುತ್ತಿದೆ. ಭದ್ರತೆಗಾಗಿ ಸುಮಾರು 3 ರಿಂದ 4 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತಿದೆ. ಬೆಳಗಾವಿ, ರಾಮದುರ್ಗ, ಅಥಣಿ, ಚಿಕ್ಕೋಡಿ, ಕುಡಚಿ, ಸವದತ್ತಿ, ಬೈಲಹೊಂಗಲ, ಕಿತ್ತೂರು ಸೇರಿ ವಿವಿಧ ಭಾಗಗಳಲ್ಲಿ ಜ.22ರಂದು ರಾಮಭಕ್ತರಿಗೆ ಸಾರ್ವಜನಿಕ ಕಾರ್ಯಕ್ರಮ ಆಯೋಜಿಸಲು ಅನುಮತಿ ನೀಡಿಲ್ಲ. ಅಲ್ಲದೆ, ಕೆಲ ಸಾರ್ವಜನಿಕ ಸ್ಥಳಗಳಲ್ಲಿ ರಾಮಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಲೈವ್ ಪ್ರದರ್ಶನಕ್ಕೆ ಅವಕಾಶ ನೀಡುವುದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    20 ಸಾವಿರ ಜನರು ಭಾಗಿ !

    ಅಯೋಧ್ಯೆಯಲ್ಲಿ ಜ.22ರಂದು ನಡೆಯುವ ರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ಇಬ್ಬರು ಸ್ವಾಮೀಜಿಗಳು ಮಾತ್ರ ಹೋಗುತ್ತಿದ್ದಾರೆ. ಯಾವುದೇ ಹಿಂದುಪರ ಸಂಘಟನೆಯ ಮುಖಂಡರು, ಕಾರ್ಯಕರ್ತರು ಹೋಗುತ್ತಿಲ್ಲ. ಅವತ್ತು ಸ್ಥಳೀಯ ದೇವಸ್ಥಾನದಲ್ಲಿಯೇ ಪೂಜೆ ಸಲ್ಲಿಸಲಾಗುತ್ತಿದೆ. ಕಾರ್ಯಕ್ರಮ ವೀಕ್ಷಿಸಲು ಲೈವ್ ಎಲ್‌ಇಡಿ ಸ್ಕ್ರೀನ್ ವ್ಯವಸ್ಥೆ ಮಾಡುತ್ತಿದ್ದಾರೆ. ಜ.20ರಂದು ಬೆಳಗಾವಿ ನಗರದ ವ್ಯಾಕ್ಸಿನ್ ಡಿಪೋ, ಸರ್ದಾರ್ ಮೈದಾನದಲ್ಲಿ ಪ್ರತ್ಯೇಕವಾಗಿ ಹನುಮಾನ ಚಾಳಿಸಾ ಪಠಣ ಕಾರ್ಯಕ್ರಮದಲ್ಲಿ ಸುಮಾರು 15 ರಿಂದ 20 ಸಾವಿರ ಜನರು ಭಾಗವಹಿಸಲಿದ್ದಾರೆ ಎಂದು ವಿಶ್ವ ಹಿಂದು ಪರಿಷತ್ ಮುಖಂಡ ಕೃಷ್ಣ ಭಟ್ ತಿಳಿಸಿದ್ದಾರೆ.

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts