More

    ಲಾಕ್‌ಡೌನ್‌ಗೆ ಸಂಪೂರ್ಣ ಸ್ತಬ್ಧ

    ಚಿಕ್ಕೋಡಿ : ಕರೊನಾ ವೈರಸ್ ಹರಡುವಿಕೆ ನಿಯಂತ್ರಿಸಲು ಸರ್ಕಾರ ಜಾರಿಗೊಳಿಸಿರುವ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಂಗಳವಾರ ಪಟ್ಟಣ ಸೇರಿ ತಾಲೂಕು ಸಂಪೂರ್ಣ ಸ್ತಬ್ಧವಾಗಿತ್ತು. ಎಲ್ಲೆಡೆಯೂ ಅಂಗಡಿಗಳನ್ನು ಮುಚ್ಚಿ ಬೆಂಬಲ ವ್ಯಕ್ತಪಡಿಸಲಾಯಿತು.

    ಜನತಾ ಕರ್ಫ್ಯೂ ಮುಗಿಯಿತೆಂದು ಅಂಗಡಿಗಳನ್ನು ತೆರೆದು ವ್ಯಾಪಾರ ಪ್ರಾರಂಭಿಸಿದ್ದವರಿಗೆ ಸರ್ಕಾರ ಮಾ. 31ರ ವರೆಗೆ ಸಂಪೂರ್ಣ ರಾಜ್ಯ ಲಾಕ್‌ಡೌನ್‌ಗೆ ಆದೇಶ ಹೊರಡಿಸಿದ್ದರಿಂದ ಅಧಿಕಾರಿಗಳು ಅಂಗಡಿಗಳನ್ನು ಮಚ್ಚಲು ಸೂಚಿಸಿದರು. ಪಟ್ಟಣದಲ್ಲಿ ಅಲ್ಲೊಂದು ಇಲ್ಲೊಂದು ಯುವಕರ ಗುಂಪುಗಳು ಮೋಟಾರ್ ಸೈಕಲ್ ಮೇಲೆ ತಿರುಗಾಡುವುದನ್ನು ಕಂಡ ಪೊಲೀಸರು ಅವರಿಗೆ ಲಾಠಿ ಏಟು ನೀಡಿದರು.

    ಹಬ್ಬದ ಖರೀದಿಗಾಗಿ ಬಂದ ಜನ: ಕರೊನಾ ವೈರಸ್‌ಗೆ ಕೆಲವರು ಹೆದರಿ ಮನೆಯಲ್ಲಿಯೇ ಕುಳಿತಿದ್ದರೆ, ಕೆಲವರು ತಲೆಕೆಡಿಸಿಕೊಳ್ಳದೇ ಯುಗಾದಿ ಹಬ್ಬಕ್ಕಾಗಿ ಹೂ ಮತ್ತು ತರಕಾರಿ, ಇತರ ಸಾಮಗ್ರಿ ಖರೀದಿಸಲು ಬಂದಿದ್ದರು. ಜನ ಜಂಗುಳಿ ಹೆಚ್ಚು ಕಂಡು ಬಂದಿದ್ದರಿಂದ ಪೊಲೀಸರು ಲಾಠಿ ಬೀಸಿ ಜನರನ್ನು ಚದುರಿಸಿದ ಘಟನೆ ನಡೆಯಿತು.

    ಕಿರಾಣಿ ಅಂಗಡಿ, ಹಾಲು ಮಾರಾಟ, ಔಷಧ ಅಂಗಡಿ, ಪೆಟ್ರೋಲ್ ಬಂಕ್ ಸೇರಿ ಅಗತ್ಯ ವಸ್ತುಗಳು ಜನರಿಗೆ ಸಿಗುವಂತೆ ವ್ಯವಸ್ಥೆ ಇದ್ದರೂ 3 ಜನರಿಗಿಂತ ಹೆಚ್ಚಿನ ಜನರು ಸೇರದಂತೆ ಅಂಗಡಿದಾರರಿಗೆ ಪೊಲೀಸರು ಖಡಕ್ ಸೂಚನೆ ನೀಡಿ ಕಟ್ಟು ನಿಟ್ಟಿನ ಕ್ರಮ ಜರುಗಿಸಿದ್ದಾರೆ. ಪಟ್ಟಣದಲ್ಲಿ ಡಿವೈಎಸ್‌ಪಿ ಮನೋಜಕುಮಾರ್ ನಾಯಕ್ ನೇತೃತ್ವದಲ್ಲಿ ಸಿಪಿಐ ಆರ್.ಆರ್. ಪಾಟೀಲ, ಪಿಎಸ್‌ಐ ರಾಕೇಶ ಬಗಲಿ, ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಬಂದೋಬಸ್ತ್ ಕೈಗೊಂಡಿದ್ದಾರೆ. ರಸ್ತೆಗಿಳಿದವರಿಗೆ ಲಾಠಿ ಬೀಸಿ ಪಾಠ ಕಲಿಸುತ್ತಿದ್ದಾರೆ.

    ಮಾಂಜರಿ ವರದಿ: ಲಾಕ್‌ಡೌನ್ ಆದೇಶ ಹಿನ್ನೆಲೆಯಲ್ಲಿ ಅಂಕಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಮಾಂಜರಿ, ಯಡೂರ, ಚಂದೂರ, ಇಂಗಳಿ, ಅಂಕಲಿ ಸಂಪೂರ್ಣವಾಗಿ ಬಂದ್ ಆಗಿವೆ. ವಾಹನಗಳು ಹಾಗೂ ಜನ ಜೀವನ ಸಂಚಾರ ಸ್ಥಗಿತಗೊಂಡಿದೆ. ಯುಗಾದಿ ಹಬ್ಬ ಬಂದರೂ ಮಾರುಕಟ್ಟೆಗಳು ಖಾಲಿ ಖಾಲಿಯಾಗಿವೆ. ಗ್ರಾಮದ ಮಾರುಕಟ್ಟೆಯ ಪ್ರಮುಖ ಬೀದಿಗಳು ಶಾಂತವಾಗಿವೆ. ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ವಾಹನಗಳನ್ನು ತಡೆಯುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts