More

    ರೈತರಿಗೆ ವರ್ಷಕ್ಕೆ ಎರಡು ಬೆಳೆ ತೆಗೆಯುವಷ್ಟು ನೀರು

    ಬೆಳಗಾವಿ/ಸವದತ್ತಿ: ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ರೈತರಿಗೆ ವರ್ಷಕ್ಕೆ ಎರಡು ಬೆಳೆ ತೆಗೆಯುವಷ್ಟು ನೀರು ಕೊಡಲಾಗುವುದು. ಕಳಸಾ-ಬಂಡೂರಿ, ಭದ್ರಾ, ಕೃಷ್ಣಾ ಮೇಲ್ದಂಡೆ ಯೋಜನೆಗಳಿಗೆ ಬಿಜೆಪಿ ಸರ್ಕಾರ ಅನುಮೋದನೆ ನೀಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದರು.

    ಸವದತ್ತಿ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಶನಿವಾರ ಬಿಜೆಪಿ ಹಮ್ಮಿಕೊಂಡಿದ್ದ ಅಭ್ಯರ್ಥಿ ರತ್ನಾ ಮಾಮನಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯದಲ್ಲಿ ಆರು ದಶಕಗಳ ಕಾಲ ಆಡಳಿತ ನಡೆಸಿರುವ ಕಾಂಗ್ರೆಸ್ ಸರ್ಕಾರ ಮಹದಾಯಿ, ಕಳಸಾ-ಬಂಡೂರಿ ಯೋಜನೆ ಅನುಷ್ಠಾನಗೊಳಿಸದೆ ಉತ್ತರ ಕರ್ನಾಟಕ ಭಾಗದ ರೈತರಿಗೆ ಅನ್ಯಾಯ ಮಾಡಿದೆ. ಕಾಂಗ್ರೆಸ್‌ನ ಸೋನಿಯಾ ಗಾಂಧಿ ಅವರು ಕರ್ನಾಟಕಕ್ಕೆ ಒಂದು ಹನಿ ನೀರು ಕೊಡುವುದಿಲ್ಲ ಎಂದು ಗೋವಾದಲ್ಲಿ ನಿಂತು ಹೇಳಿದ್ದರು. ಇದೀಗ ಕಾಂಗ್ರೆಸ್‌ನವರು ಕಳಸಾ ಬಂಡೂರಿ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮಹದಾಯಿ, ಕಳಸಾ ಬಂಡೂರಿ ಸಮಸ್ಯೆ ಇತ್ಯರ್ಥಗೊಳಿಸಿದೆ. ಅಲ್ಲದೆ, ಡಬಲ್ ಇಂಜಿನ್ ಸರ್ಕಾರವು ಭದ್ರಾ, ಕೃಷ್ಣಾ ಮೇಲ್ದಂಡೆ, ಕಳಸಾ ಸೇರಿ ವಿವಿಧ ನೀರಾವರಿ ಯೋಜನೆಗಳಿಗೆ ಸಾವಿರಾರು ಕೋಟಿ ರೂ. ಅನುದಾನ ನೀಡಿ ಕಾರ್ಯರೂಪಕ್ಕೆ ತಂದಿದೆ ಎಂದರು.

    ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಟನ್ ಕಬ್ಬಿಗೆ ಎಫ್‌ಆರ್‌ಪಿ 2,100 ರೂ. ಇತ್ತು. ಬಿಜೆಪಿ ಸರ್ಕಾರ ಅಧಿಕಾರ ಅವಧಿಯಲ್ಲಿ ಎಫ್‌ಆರ್‌ಪಿ ದರ 3,100 ರೂ.ಗೆ ಏರಿಕೆ ಮಾಡಿತು. ಕಬ್ಬು ಬೆಳೆಗಾರರ ಅನುಕೂಲಕ್ಕಾಗಿ ಎಥೆನಾಲ್ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಇದು ರೈತರು ಆರ್ಥಿಕವಾಗಿ ಸೃದೃಢಗೊಳಿಸಲಿದೆ. ಕೃಷಿ ಸಮ್ಮಾನ್‌ಯೋಜನೆಯಿಂದ ರೈತರ ಬ್ಯಾಂಕ್ ಖಾತೆಗಳಿಗೆ ವಾರ್ಷಿಕ 10 ಸಾವಿರ ರೂ. ಜಮಾ ಆಗುತ್ತಿದೆ. ಅಲ್ಲದೆ, ಸರ್ಕಾರದ ಯೋಜನೆಗಳ ಸಹಾಯಧನ ನೇರವಾಗಿ ಫಲಾನುಭವಿಗಳಿಗೆ ಕೈ ಸೇರುತ್ತಿದೆ. ಇದು ಬಿಜೆಪಿ ಸರ್ಕಾರದ ಸಾಧನೆಯ ಕೈಗನ್ನಡಿ ಎಂದು ಹೇಳಿದರು.

    ದೇಶದಲ್ಲಿ ದಶಕಗಳ ಕಾಲ ಆಡಳಿತ ನಡೆಸಿದ್ದ ಕಾಂಗ್ರೆಸ್‌ನವರು ಮತ ಬ್ಯಾಂಕ್‌ಗಾಗಿ ಅಯೋಧ್ಯೆಯಲ್ಲಿ ಶ್ರೀರಾಮನನ್ನು ಬಂಧಿಸಿ ಇಟ್ಟಿದ್ದರು. ಆದರೆ, ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಆರಂಭಿಸಿದರು. 2024ರಲ್ಲಿ ಶ್ರೀರಾಮ ಮಂದಿರ ಉದ್ಘಾಟಣೆ ಆಗಲಿದೆ. ಇದೀಗ ಬಜರಂಗ ದಳ ನಿಷೇಧ ಮಾಡೋ ಮಾತನ್ನು ಕಾಂಗ್ರೆಸ್ ಆಡಿದೆ. ಹನುಮನ ಜಯಂತಿ ಆಚರಣೆಗೆ ಜನ್ಮದಿನದ ದಾಖಲೆ ಕೇಳುವ ಮೂಲಕ ಕಾಂಗ್ರೆಸ್ ನಾಯಕರು ಅವಮಾನ ಮಾಡಿದ್ದಾರೆ. ಇವರಿಗೆ ನಮ್ಮ ದೇಶದ ಸಂಸ್ಕೃತಿ, ಧರ್ಮ ಬಗ್ಗೆ ಗೌರವವಿಲ್ಲ. ಕಾಂಗ್ರೆಸ್‌ಗೆ ಅಧಿಕಾರ ಮುಖ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಮಹಾರಾಷ್ಟ್ರ ಸಚಿವ ಕಪೀಲ್ ಪಾಟೀಲ, ಸಂಸದೆ ಮಂಗಲ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಗಂಗಮ್ಮತಾಯಿ ಮಾಮನಿ, ವಿರೂಪಾಕ್ಷ ಮಾಮನಿ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ಮಾಜಿ ಜಿಪಂ ಸದಸ್ಯ ಅಜಿತಕುಮಾರ ದೇಸಾಯಿ, ರುದ್ರಣ್ಣ ಚಂದರಗಿ, ಜಗದೀಶ ಶಿಂತ್ರಿ, ಬಸವರಾಜ ಪಟ್ಟಣಶೆಟ್ಟಿ, ಅಜಿತಕುಮಾರ ದೇಸಾಯಿ ಇತರರಿದ್ದರು.

    ಕಣ್ಣೀರು ಸುರಿಸಿದ ಅಭ್ಯರ್ಥಿ

    ನನ್ನ ಪತಿ ಆನಂದ ಮಾಮನಿ ಬದುಕಿದ್ದಾಗ ಯಾರೊಬ್ಬರೂ ನೇರಾನೇರ ಯುದ್ಧ್ದಕ್ಕೆ ಬರಲಿಲ್ಲ. ಇದೀಗ ಅವರು ಇಲ್ಲದಿರುವುದಕ್ಕೆ ನಮಗೆ ತೊಂದರೆ ಕೊಡುತ್ತಿದ್ದಾರೆ. ನಾನು ಮಹಿಳೆ ಎಂಬ ಕಾರಣಕ್ಕೆ ನಾಮಪತ್ರ ವಿಷಯ ಸೇರಿ ಎಲ್ಲ ರೀತಿಯಲ್ಲಿ ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಪತಿಯ ಕಳೆದುಕೊಂಡು ನಾನು ಬಹಳ ಸಂಕಷ್ಟದ ದಿನಗಳನ್ನು ಎದುರಿಸುತ್ತಿದ್ದೇನೆ. ಬೇರೆ ತಾಲೂಕಿನಲ್ಲಿ ಕುಳಿತು ಆಡಳಿತ ನಡೆಸುವವರು ತಾಕತ್ತಿದ್ದರೆ ನೇರವಾಗಿ ಕ್ಷೇತ್ರಕ್ಕೆ ಬರಲಿ. ನನ್ನ ಕ್ಷೇತ್ರದ ಜನತೆ ನನ್ನ ಬೆನ್ನಿಗೆ ಇರುವವರೆಗೆ ನಾನು ಯಾವುದಕ್ಕೂ ಹೆದರುವುದಿಲ್ಲ. ನಿಮ್ಮಲ್ಲಿ ಕೈಮುಗಿದು ಸೆರಗು ಒಡ್ಡಿ ಬೇಡಿಕೊಳ್ಳುತ್ತೇನೆ, ನನ್ನನ್ನು ಕೈಬಿಡಬೇಡಿ ಎನ್ನುತ್ತ ಕಣ್ಣೀರು ಸುರಿಸಿದರು.

    ಕನ್ನಡ ಬರಲ್ಲ ಕ್ಷಮೆ ಇರಲಿ

    ಸವದತ್ತಿ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಬಿಜೆಪಿ ಪ್ರಚಾರ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ವಿಶ್ವಗುರು ಬಸವಣ್ಣ, ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ವೀರ ಸಾವರಕರ್‌ಗೆ ನಮನ ಸಲ್ಲಿಸಿದರು. ಬಳಿಕ ತಡವಾಗಿ ಬಂದಿದ್ದಕ್ಕೆ ಕೈಮುಗಿದು ಕ್ಷಮೆ ಕೇಳುತ್ತೇನೆ. ಕನ್ನಡ ಬರಲ್ಲ ಹಿಂದಿಯಲ್ಲಿ ಮಾತನಾಡುತ್ತೇನೆ. ನಿಮ್ಮಲ್ಲಿ ಕ್ಷಮೆ ಇರಲಿ ಎಂದು ವಿನಂತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts