ಕೂಡ್ಲಿಗಿ: ಪ್ರತಿಯೊಬ್ಬರೂ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಬೇಕು ಎಂದು ತಾಪಂ ಇಒ ವೈ. ರವಿಕುಮಾರ್ ಹೇಳಿದರು.
ಪಟ್ಟಣದ ಮದಕರಿ ವೃತ್ತದಲ್ಲಿ ಶುಕ್ರವಾರ ತಾಲೂಕು ಆಡಳಿತ, ತಾಲೂಕು ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿ ಅಂಗವಾಗಿ ಅಂಗವಿಕಲರಿಂದ ತ್ರಿಚಕ್ರ ವಾಹನ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮತದಾನದ ಮೂಲಕ ಬದಲಾವಣೆ ಮಾಡಬಹುದು. ಮತದಾನ ಸಂವಿಧಾನ ನೀಡಿದ ಅಸ್ತ್ರವಾಗಿದ್ದು, ಅರ್ಹರನ್ನು ಆಯ್ಕೆ ಮಾಡಬಹುದು. ಆದ್ದರಿಂದ 18 ವರ್ಷ ತುಂಬಿದ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವಂತೆ ಕೋರಿದರು.
ಸಹಾಯಕ ಚುನಾವಣಾಧಿಕಾರಿ ಡಾ.ಎಚ್.ಎನ್.ರಘು ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಮತದಾನಕ್ಕೆ ತಾಲೂಕು ಆಡಳಿತ, ಸ್ವೀಪ್ ಸಮಿತಿ ಸಕಲ ರೀತಿಯಲ್ಲೂ ಸಜ್ಜಾಗಿದೆ. ವೃದ್ಧರು, ಅಂಗವಿಕಲರಿಗೆ ಮನೆಯಲ್ಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಚುನಾವಣೆಯಲ್ಲಿ ಎಲ್ಲರ ಪಾಲ್ಗೊಳ್ಳುವಿಕೆ ಅವಶ್ಯ. ಆ ನಿಟ್ಟಿನಲ್ಲಿ ಮತಕೇಂದ್ರಗಳಲ್ಲೂ ಅಗತ್ಯ ಸೌಕರ್ಯ ಕಲ್ಪಿಸಲಾಗಿದೆ. ಮತದಾನದ ದಿನ ವಯಸ್ಕ ಮತದಾರರು ಸೇರಿದಂತೆ ನೆರೆ ಹೊರೆಯವರನ್ನು ಸಹ ಮತದಾನ ಮಾಡಲು ಪ್ರೇರೇಪಿಸಿ ಮತದಾನ ಮಾಡಲು ಕರೆತರಬೇಕು ಎಂದರು.
ಅಂಗವಿಕಲರ ಜಿಲ್ಲಾ ಚುನಾವಣಾ ರಾಯಭಾರಿ ಲಕ್ಷ್ಮೀದೇವಿ, ಪಪಂ ಮುಖ್ಯಾಧಿಕಾರಿ ಫಿರೋಜ್ ಖಾನ್, ತಾಪಂ ಉದ್ಯೋಗಿ ವಿನಯ್ ಕುಮಾರ್ ಇದ್ದರು.