ಬೆಳಗಾವಿ: ಯಡೂರಿನ ಶ್ರೀ ಕಾಡಸಿದ್ಧೇಶ್ವರ ಮಠದಲ್ಲಿ ಪಂಚಪೀಠಗಳಲ್ಲಿ ಒಂದಾದ ಕೇದಾರ ಪೀಠದ ಜಗದ್ಗುರು ಏಕೋರಾಮಾರಾಧ್ಯರ ಹಾಗೂ ಜಗಜ್ಯೋತಿ ಬಸವೇಶ್ವರ ಜಯಂತ್ಯುತ್ಸವ ನಿಮಿತ್ತ ಭಾನುವಾರ ಉಭಯ
ಮಹಾತ್ಮರ ಭಾವಚಿತ್ರ ಪೂಜಿಸಲಾಯಿತು.
ಇದೇ ಸಂದರ್ಭದಲ್ಲಿ ವೀರಶೈವ-ಲಿಂಗಾಯತ ಬಸವೇಶ್ವರ ಯುವಕ ಸಂಘ ಮತ್ತು ಕಾಡಸಿದ್ಧೇಶ್ವರ ಮಠದ ಸಂಯುಕ್ತ ಆಶ್ರಯದಲ್ಲಿ ಕಾಯಿಪಲ್ಯಗಳ 500 ಕಿಟ್ ವಿತರಿಸುವ ಕಾರ್ಯಕ್ರಮಕ್ಕೆ ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು.
ನಂತರ ಆಶೀರ್ವಚನ ನೀಡಿದ ಶ್ರೀಗಳು, ವೀರಶೈವ ಲಿಂಗಾಯತ ಧರ್ಮದ ಸಮಸ್ತ ಸದ್ಭಕ್ತರು ಪಂಚಪೀಠಗಳಲ್ಲಿ ಮತ್ತು ಬಸವಾದಿ ಶಿವಶರಣರಲ್ಲಿ ಭೇದ-ಭಾವ ಎಣಿಸದೆ ಸಮಾನ ಗೌರವ ನೀಡಬೇಕು. ಅಲ್ಲದೆ, ಅವರು ನೀಡಿದ ಸಂದೇಶವನ್ನು ಆಚರಣೆಗೆ ತರುವಂತಾಗಬೇಕು ಎಂದರು.ಕರೊನಾ ವೈರಸ್‌ನಿಂದಾಗಿ ಸಂಕಷ್ಟದಲ್ಲಿರುವ ದೇಶದ ಜನರ ಒಳಿತಿಗಾಗಿ ಸರ್ಕಾರ ನಿರ್ದೇಶಿಸಿರುವ ಮಾರ್ಗಗಳನ್ನು ಎಲ್ಲರೂ ಕಡ್ಡಾಯವಾಗಿ ಅನುಸರಿಸಬೇಕು.
ಲಾಕ್‌ಡೌನ್ ಸಂದರ್ಭದಲ್ಲಿ ತೊಂದರೆಯಲ್ಲಿರುವ ಜನರಿಗೆ ಸಂಘ-ಸಂಸ್ಥೆಗಳು ಸಹಾಯ ಮಾಡುತ್ತಿರುವುದು ಉತ್ತಮವಾದ ಕೆಲಸವಾಗಿದೆ. ಸಮಾಜಕ್ಕೆ ಸಹಾಯ ಮಾಡುವವರ ಸಂಖ್ಯೆ ಹೆಚ್ಚಾಗಲಿ ಎಂದು ಶ್ರೀಗಳು ಆಶಿಸಿದರು. ಈ ಸಂದರ್ಭದಲ್ಲಿ ನೂರಾರು ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಂಡು ಪಾಲ್ಗೊಂಡಿದ್ದರು.