More

    ಫುಟ್‌ಪಾತ್‌ಗೆ ಬಂದ ಅಂಗಡಿಗಳು: ಜನರ ಸಂಚಾರ ರಸ್ತೆಯಲ್ಲೇ

    ಭರತ್ ಶೆಟ್ಟಿಗಾರ್ ಮಂಗಳೂರು

    ಮಂಗಳೂರಿನ ವಿವಿಧೆಡೆ ಅಂಗಡಿ-ಮಳಿಗೆಗಳಿಗೆ ಅನುಮತಿ ಪಡೆದು ಫುಟ್‌ಪಾತ್‌ವರೆಗೆ ವಿಸ್ತರಿಸಿ ಅಲ್ಲಿ ವಸ್ತುಗಳನ್ನಿಟ್ಟು ಮಾರಾಟ ಮಾಡುತ್ತಿರುವುದು ಕಂಡುಬರುತ್ತಿದೆ. ಲಾಕ್‌ಡೌನ್ ಬಳಿಕ ಮಂಗಳೂರಿನಲ್ಲಿ ಇಂಥ ಅಂಗಡಿಗಳ ಸಂಖ್ಯೆ ಹೆಚ್ಚಾಗಿದೆ.

    ರಸ್ತೆ ಬದಿ ಸ್ವಲ್ಪ ಹೊತ್ತು ವಾಹನ ನಿಲ್ಲಿಸಿದರೆ ಟೈಗರ್ ಕಾರ್ಯಾಚರಣೆ ಹೆಸರಿನಲ್ಲಿ ಪೊಲೀಸರು ಹೊತ್ತೊಯ್ಯುತ್ತಾರೆ. ಬಡ ವ್ಯಾಪಾರಿಗಳು ಬೀದಿಬದಿಯಲ್ಲಿ ತಳ್ಳುಗಾಡಿಯಲ್ಲಿ ಹಣ್ಣು-ತರಕಾರಿ ವ್ಯಾಪಾರ ಮಾಡಿದರೆ ಅವರನ್ನೂ ಓಡಿಸುತ್ತಾರೆ. ಆದರೆ ಇಂಥ ಅಂಗಡಿಗಳ ಬಗ್ಗೆ ಏನೂ ಕ್ರಮ ಕೈಗೊಳ್ಳುವುದಿಲ್ಲ. ಈ ಅಂಗಡಿಗಳಿಂದ ಫುಟ್‌ಪಾತ್‌ನಲ್ಲಿ ನಡೆದುಕೊಂಡು ಹೋಗಬೇಕಾದ ಜನ ರಸ್ತೆಯಲ್ಲೇ ಸಂಚರಿಸುವಂತಾಗಿದೆ.

    ಮುಖ್ಯವಾಗಿ ತರಕಾರಿ, ಹಣ್ಣು ಮಾರಾಟ ಮಾಡುವ ಅಂಗಡಿಗಳವರು ಈ ರೀತಿ ಫುಟ್‌ಪಾತ್ ಬಳಕೆ ಮಾಡುವುದು ಹೆಚ್ಚು. ಅಂಗಡಿ ಇದ್ದರೂ ಮುಂಭಾಗಕ್ಕೆ ಶೀಟ್ ಅಥವಾ ಟಾರ್ಪಾಲು ಹಾಕಿ ತರಕಾರಿ-ಹಣ್ಣುಗಳ ಬಾಕ್ಸ್ ಇಡುತ್ತಾರೆ. ರಸ್ತೆವರೆಗೂ ವಿಸ್ತರಿಸಿರುವ ಅಂಗಡಿಗಳೂ ಇವೆ. ಕಿರಾಣಿ ಅಂಗಡಿಯವರೂ ಕೆಲವೆಡೆ ಇದೇ ರೀತಿ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಿಂದ ಖರೀದಿಗೆ ಬರುವ ಗ್ರಾಹಕರು ವಾಹನಗಳನ್ನು ರಸ್ತೆಯಲ್ಲೇ ನಿಲ್ಲಿಸಬೇಕಾಗುತ್ತದೆ.

    ಮಹಾನಗರ ಪಾಲಿಕೆ ಕಾರ್ಯಾಚರಣೆ: ಲಾಕ್‌ಡೌನ್‌ಗಿಂತ ಮೊದಲು ಮಹಾನಗರ ಪಾಲಿಕೆ ಕಂದಾಯ ವಿಭಾಗದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಹೀಗೆ ವಿಸ್ತರಣೆ ಹೊಂದಿರುವ ಅಂಗಡಿ, ಸೂಪರ್ ಮಾರ್ಕೆಟ್‌ಗಳ ಮಾಲೀಕರಿಗೆ ದಂಡ ವಿಧಿಸಿ, ತೆರವುಗೊಳಿಸಿದ್ದಾರೆ. ಮುಖ್ಯವಾಗಿ ನಗರದ ಚಿಲಿಂಬಿ, ಉರ್ವಸ್ಟೋರ್, ಪಾಂಡೇಶ್ವರ ಮೊದಲಾದೆಡೆ ಕಾರ್ಯಾಚರಣೆ ನಡೆದಿತ್ತು. ಆದರೆ ಲಾಕ್‌ಡೌನ್ ಅವಧಿಯಲ್ಲಿ ಅಗತ್ಯ ವಸ್ತುಗಳು ಎಂಬ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿರಲಿಲ್ಲ. ಪ್ರಸ್ತುತ ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತಿದ್ದು, ಮತ್ತೆ ಕಾರ್ಯಾಚರಣೆ ಮುಂದುವರಿಸಲಾಗುವುದು. ಅಂಗಡಿ ಕೊಠಡಿಯ ಜಾಗಕ್ಕೆ ಮಾತ್ರ ಅನುಮತಿ ಪಡೆದು ಅದನ್ನು ವಿಸ್ತರಿಸುವುದಕ್ಕೆ ಅನುಮತಿಯಿಲ್ಲ. ಅವುಗಳನ್ನು ತೆರವುಗೊಳಿಸದಿದ್ದರೆ ದಂಡ ವಿಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಅಂಗಡಿಗಳನ್ನು ವಿಸ್ತರಿಸಿ ಫುಟ್‌ಪಾತ್‌ಗಳಲ್ಲಿ ವಸ್ತುಗಳನ್ನಿಟ್ಟು ಮಾರಾಟ ಮಾಡುತ್ತ ಜನರಿಗೆ ಸಮಸ್ಯೆ ಉಂಟು ಮಾಡುತ್ತಿರುವ ಕುರಿತು ವಿವಿಧೆಡೆಯಿಂದ ದೂರುಗಳು ಬರುತ್ತಿವೆ. ಹಲವು ಕಡೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ವ್ಯಾಪಾರ ವಹಿವಾಟುಗಳು ಹಿಂದಿನಂತೆ ಆರಂಭವಾಗಿರುವುದರಿಂದ ಕಾರ್ಯಾಚರಣೆ ಮುಂದುವರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು.

    ಪ್ರೇಮಾನಂದ ಶೆಟ್ಟಿ ಮಂಗಳೂರು ಮೇಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts