More

    ಫುಟ್‌ಪಾತ್ ವ್ಯಾಪಾರಸ್ಥರ ಪಾಲು

    ಹರೀಶ್ ಮೋಟುಕಾನ ಮಂಗಳೂರು

    ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಕೋಟ್ಯಂತರ ರೂ. ಖರ್ಚು ಮಾಡಿ, ಸಾರ್ವಜನಿಕರ ಅನುಕೂಲಕ್ಕಾಗಿ ಮಾಡಿರುವ ಕೆಲವೊಂದು ಸೌಲಭ್ಯಗಳು ಉಪಯೋಗವಾಗುತ್ತಿಲ್ಲ. ಇದಕ್ಕೆ ಸ್ಪಷ್ಟ ಉದಾಹರಣೆ ಫುಟ್‌ಪಾತ್. ನಗರದ ಹೃದಯ ಭಾಗದಲ್ಲೇ ಫುಟ್‌ಪಾತ್‌ಗಳಲ್ಲಿ ಬೀದಿ ವ್ಯಾಪಾರಸ್ಥರು ತುಂಬಿದ್ದಾರೆ.

    ಸ್ಟೇಟ್‌ಬ್ಯಾಂಕ್, ಲೇಡಿಗೋಶನ್, ಹಂಪನಕಟ್ಟೆ, ಕಂಕನಾಡಿ ಮೊದಲಾದ ಕಡೆ ಫುಟ್‌ಪಾತ್‌ಗಳಲ್ಲಿ ತರಕಾರಿ, ಹಣ್ಣು, ಬಟ್ಟೆ ಮೊದಲಾದ ವಸ್ತುಗಳನ್ನು ಇಟ್ಟುಕೊಂಡು ಮಾರಾಟ ಮಾಡಲಾಗುತ್ತಿದೆ. ಅತಿ ಹೆಚ್ಚು ಜನದಟ್ಟಣೆ ಇರುವ ಈ ಪ್ರದೇಶಗಳಲ್ಲಿ ಸಾರ್ವಜನಿಕರು ದಿನವಿಡೀ ರಸ್ತೆಯಲ್ಲೇ ಓಡಾಡುವಂತಾಗಿದೆ. ಪರಿಣಾಮ ಆಗಾಗ ಅಪಘಾತಗಳು ನಡೆಯುತ್ತಿವೆ. ಮಕ್ಕಳು, ಮಹಿಳೆಯರು, ವೃದ್ಧರು ರಸ್ತೆಯಲ್ಲಿ ಓಡಾಡುವುದು ಅಪಾಯಕಾರಿಯಾಗಿದೆ.

    ಬೀದಿ ಬದಿ ವ್ಯಾಪಾರಸ್ಥರಿಗೆ ಸ್ಟೇಟ್‌ಬ್ಯಾಂಕ್ ಬಳಿ ಪ್ರತ್ಯೇಕ ಸ್ಥಳ ಮಾಡಿಕೊಡಲಾಗಿದೆ. ಆದರೆ ಯಾರೂ ಅಲ್ಲಿ ಹೋಗುತ್ತಿಲ್ಲ. ಫುಟ್‌ಪಾತ್‌ನಲ್ಲೇ ವ್ಯಾಪಾರ ಮಾಡಿಕೊಂಡು ಅಲ್ಲೇ ತ್ಯಾಜ್ಯ ಎಸೆದು ಹೋಗುತ್ತಿದ್ದಾರೆ. ದರ ವಿಚಾರಿಸಿದರೆ ಸಾಕು ಕೆಲವು ವ್ಯಾಪಾರಿಗಳು ಪಾದಚಾರಿಗಳ ಜತೆ ತರಕಾರಿ, ಹಣ್ಣು ಖರೀದಿಸುವಂತೆ ಒತ್ತಡ ಹಾಕುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

    ಟೈಗರ್ ಕಾರ್ಯಾಚರಣೆ ಸ್ಥಗಿತ: ಬೀದಿ ಬದಿ ವ್ಯಾಪಾರಸ್ಥರನ್ನು ತೆರವು ಮಾಡುವ ಕೆಲಸ ಮಹಾನಗರ ಪಾಲಿಕೆ ಮಾಡಬೇಕು. ಆದರೆ ಪಾಲಿಕೆಯು ವ್ಯಾಪಾರಿಗಳ ಬಗ್ಗೆ ಮೃದು ಧೋರಣೆ ತೋರಿ, ಸಾರ್ವಜನಿಕರು ಪಡುವ ಕಷ್ಟವನ್ನು ನೋಡಿ ಕಣ್ಣು ಮುಚ್ಚಿ ಕುಳಿತಿದೆ. ಹಲವು ಸಮಯದಿಂದ ಅನಧಿಕೃತ ಅಂಗಡಿಗಳು, ಬೀದಿ ವ್ಯಾಪಾರಸ್ಥರ ತೆರವು ಕಾರ್ಯಾಚರಣೆ ಸ್ಥಗಿತಗೊಂಡಿದೆ. ಕೆಲವೊಮ್ಮೆ ಕಾರ್ಯಾಚರಣೆ ನಡೆಯುವ ವಿಷಯ ಅವರಿಗೆ ಮೊದಲೇ ತಿಳಿದಿರುತ್ತದೆ. ಅಂದು ಅವರು ಅಲ್ಲಿ ವ್ಯಾಪಾರ ಮಾಡುವುದಿಲ್ಲ. ಇದರ ಹಿಂದೆ ಅಧಿಕಾರಿಗಳ ಅಥವಾ ಚುನಾಯಿತ ಪ್ರತಿನಿಧಿಗಳ ಷಡ್ಯಂತ್ರ ಅಡಗಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

    ನೋ ಪಾರ್ಕಿಂಗ್ ಬೋರ್ಡ್: ನಗರದ ಕೆ.ಎಸ್.ರಾವ್ ರಸ್ತೆ, ಎಂ.ಜಿ.ರಸ್ತೆ, ಹಂಪನಕಟ್ಟೆ, ಜಿಎಚ್‌ಎಸ್ ರಸ್ತೆ, ಕಾರ್‌ಸ್ಟ್ರೀಟ್ ಮೊದಲಾದ ಕಡೆ ಫುಟ್‌ಪಾತ್‌ನಲ್ಲೇ ನೋ ಪಾರ್ಕಿಂಗ್ ಬೋರ್ಡ್ ಹಾಕಿದ್ದಾರೆ. ಇದರಿಂದ ನಡೆದುಕೊಂಡು ಹೋಗುವವರಿಗೆ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಅಲ್ಲಿನ ಅಂಗಡಿ ಮಾಲೀಕರ ಜತೆ ವಿಚಾರಿಸಿದರೆ, ತಮ್ಮದೇ ಜಾಗ ಎಂಬಂತೆ ಮಾತನಾಡುತ್ತಾರೆ. ಪೊಲೀಸ್ ಇಲಾಖೆ ಈ ನಿಟ್ಟಿನಲ್ಲಿ ಪ್ರಕರಣ ದಾಖಲಿಸಲು ಅವಕಾಶವಿದೆ.

    ಸ್ಟೇಟ್‌ಬ್ಯಾಂಕ್, ಲೇಡಿಗೋಶನ್ ಪರಿಸರದಲ್ಲಿ ಫುಟ್‌ಪಾತ್‌ಗಳನ್ನು ಬೀದಿ ಬದಿ ವ್ಯಾಪಾರಸ್ಥರು ಆಕ್ರಮಿಸಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಪಾಲಿಕೆ ಗಮನ ವಹಿಸಿ ತೆರವು ಮಾಡಬೇಕು.
    – ಜಿ.ಕೆ.ಭಟ್, ಸಾಮಾಜಿಕ ಕಾರ್ಯಕರ್ತರು

    ಮಂಗಳೂರು ನಗರದ ಹಲವು ಕಡೆ ಫುಟ್‌ಪಾತ್‌ಗಳಲ್ಲಿ ಬೀದಿ ಬದಿ ವ್ಯಾಪಾರಸ್ಥರು ತಮ್ಮ ಸರಕುಗಳನ್ನು ಇಟ್ಟುಕೊಂಡು ಮಾರಾಟ ಮಾಡುವುದು ಗಮನಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಕಾರ್ಯಾಚರಣೆ ನಡೆಸಿ, ತೆರವು ಮಾಡಲಾಗುವುದು. ಬೀದಿ ಬದಿ ವ್ಯಾಪಾರಸ್ಥರಿಗೆ ಮೀಸಲಿಟ್ಟ ಸ್ಥಳದಲ್ಲೇ ವ್ಯಾಪಾರ ಮಾಡಬೇಕು.
    – ಜಯಾನಂದ ಅಂಚನ್, ಮೇಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts