More

    ಪ್ರಾಣಿಗಳ ಆರೋಗ್ಯದ ಮೇಲೂ ನಿಗಾ!

    ಅವಿನ್ ಶೆಟ್ಟಿ ಉಡುಪಿ
    ವಿದೇಶಗಳಲ್ಲಿ ಬೆಕ್ಕು ಮತ್ತು ಹುಲಿಯಲ್ಲಿ ಕರೊನಾ ಸೋಂಕು ಕಾಣಿಸಿದ ಬಳಿಕ ಇಲ್ಲೂ ಬೀದಿ, ಸಾಕುಪ್ರಾಣಿಗಳ ನಿಗಾ ಆರಂಭವಾಗಿದೆ. ಪ್ರಾಣಿಗಳ ಆರೋಗ್ಯ ರಕ್ಷಣೆಗೆ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಅರಣ್ಯ ಇಲಾಖೆ ಮತ್ತು ಪಶು ಸಂಗೋಪನೆ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

    ಸಾಕುಪ್ರಾಣಿಗಳಾದ ಹಸು, ಕೋಳಿ, ಕುರಿ, ನಾಯಿ, ಬೆಕ್ಕುಗಳಲ್ಲಿ ಆನಾರೋಗ್ಯ ಲಕ್ಷಣ ಕಾಣಿಸಿಕೊಂಡಲ್ಲಿ ಸಮೀಪದ ಪಶು ವೈದ್ಯಾಧಿಕಾರಿಗಳನ್ನು ಸಂಪರ್ಕಿಸಲು ಇಲಾಖೆ ಅಧಿಕಾರಿಗಳು ಕೋರಿದ್ದಾರೆ. ಸಾಮಾನ್ಯವಾಗಿ ಏಪ್ರಿಲ್-ಮೇ ತಿಂಗಳಲ್ಲಿ ಉಷ್ಣಾಂಶ ಜಾಸ್ತಿ ಇರುವುದರಿಂದ ದನಗಳ ದೇಹದ ಉಷ್ಣತೆ ಹೆಚ್ಚಿರುತ್ತದೆ. ದನಕರುಗಳಿಗೆ ಸಾಕಷ್ಟು ಶುದ್ಧ ನೀರು ಕುಡಿಸಿ, ತಂಪಾದ ವ್ಯವಸ್ಥೆ ಮಾಡಬೇಕು. ವಿದೇಶಿ ತಳಿಯ ನಾಯಿಗಳಲ್ಲಿ ಈ ಸಮಯದಲ್ಲಿ ಡಿಸ್ಟೆಂಪರ್ ಎಂಬ ರೋಗ ಲಕ್ಷಣ ಕಾಣಿಸುತ್ತದೆ. ಜ್ವರ, ಕೆಮ್ಮಿದ ಹಾಗೆ ಮಾಡುತ್ತದೆ ಆದರೆ ಕೆಮ್ಮುವುದಿಲ್ಲ. ಲಸಿಕೆ ಲಭ್ಯವಿದ್ದು, ಪಶು ವೈದ್ಯರನ್ನು ಸಂಪರ್ಕಿಸಬೇಕು ಎನ್ನುತ್ತಾರೆ ವೈದ್ಯರು.

    ವಿದೇಶದಿಂದ ಆಗಮಿಸಿ ಹೋಂ ಕ್ವಾರಂಟೈನ್‌ನಲ್ಲಿರುವರು ಮತ್ತು ಸೋಂಕಿತರೊಂದಿಗೆ ಸಂಪರ್ಕಗೊಂಡು ಹೋಂ ಕ್ವಾರಂಟೈನ್‌ನಲ್ಲಿರುವರು ಸಾಕುಪ್ರಾಣಿಗಳಾದ ಬೆಕ್ಕು, ನಾಯಿ, ದನಕರುಗಳಿಂದ ದೂರ ಇರಲು ಸೂಚನೆ ನೀಡಲಾಗಿದೆ.

    ಕರಾವಳಿಯಲ್ಲಿ ಇದುವರೆಗೆ ಯಾವುದೇ ಪ್ರಾಣಿಗಳು ಮತ್ತು ಸಾಕು ಪ್ರಾಣಿಗಳಿಗೆ ಕರೊನಾ ಪರೀಕ್ಷೆ ನಡೆಸಿಲ್ಲ ಎಂದು ಪಶು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

    ಲಾಕ್‌ಡೌನ್ ಹಿನ್ನೆಲೆಯಲ್ಲಿ ಬೀಡಾಡಿ ದನಗಳು, ಬೀದಿನಾಯಿಗಳು, ಪ್ರಾಣಿ -ಪಕ್ಷಿಗಳಿಗೆ ಜಿಲ್ಲಾಡಳಿತದ ನಿರ್ದೇಶನದಲ್ಲಿ ಸ್ಥಳೀಯಾಡಳಿತ ಹಾಗೂ ಗ್ರಾಪಂಗಳು ಕನಿಷ್ಠ ಆಹಾರ ಮತ್ತು ನೀರು ಸಹಿತ ಆರೋಗ್ಯ ರಕ್ಷಣೆ ಒದಗಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಪ್ರಾಣಿ -ಪಕ್ಷಿಗಳಿಗೆ ಪ್ರತಿದಿನ ಆಹಾರ ಒದಗಿಸಲು ಜಿಲ್ಲಾಡಳಿತ ಆಯಾ ಸ್ಥಳೀಯಾಡಳಿತ ಸಂಸ್ಥೆಗಳು ಹಾಗೂ ಗ್ರಾಪಂಗಳಿಗೆ ದೈನಂದಿನ ಸರಾಸರಿ ವೆಚ್ಚ ನಿಗದಿ ಪಡಿಸಿವೆ. ಈ ವೆಚ್ಚವನ್ನು ಆಯಾ ಸ್ಥಳೀಯಾಡಳಿತ ಹಾಗೂ ಗ್ರಾಪಂಗಳೇ ಭರಿಸಲಿವೆ.

    ಪಿಲಿಕುಳ ಜೈವಿಕ ಉದ್ಯಾನವನದಲ್ಲೂ ಕಟ್ಟೆಚ್ಚರ
    ಕೇಂದ್ರ ಮೃಗಾಲಯ ಪ್ರಾಧಿಕಾರದಿಂದ ಪಿಲಿಕುಳ ಮೃಗಾಲಯಕ್ಕೂ ಸುತ್ತೋಲೆ ಬಂದಿದ್ದು, ನಿರ್ಲಕ್ಷೃ ವಹಿಸದಂತೆ ಎಚ್ಚರಿಕೆ ನೀಡಿದೆ. ಪಿಲಿಕುಳದಲ್ಲಿ ಸ್ವಚ್ಛತೆ, ನೈರ್ಮಲ್ಯಕ್ಕೆ ವಿಶೇಷ ಗಮನ ನೀಡಲಾಗಿದೆ. ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಅಗತ್ಯ ಕ್ರಿಮಿನಾಶಕಗಳನ್ನೂ ಸಿಂಪಡಿಸಲಾಗುತ್ತಿದೆ.
    ಪ್ರಾಣಿಗಳ ಆರೋಗ್ಯ ನಿರಂತರ ಪರಿಶೀಲಿಸಲಾಗುತ್ತಿದ್ದು, ವಿಟಮಿನ್ ಅಂಶ ಹೆಚ್ಚಿರುವ ಆಹಾರ ನೀಡಲಾಗುತ್ತಿದೆ. ಎಲ್ಲ ಆಹಾರಗಳನ್ನು ಪರೀಕ್ಷಿಸಿಯೇ ಪ್ರಾಣಿಗಳಿಗೆ ನೀಡಲಾಗುತ್ತದೆ. ಸ್ಥಳೀಯ ಪೌಲ್ಟ್ರಿ ಫಾರ್ಮ್‌ಗಳಿಂದ ಕೋಳಿ ಮಾಂಸ, ಕೆಲವು ಪ್ರಾಣಿಗಳಿಗೆ ಮೀನು, ಉಳಿದಂತೆ ಸಸ್ಯಾಹಾರಿಗಳಿಗೆ ಹಣ್ಣು ಹಂಪಲು, ತರಕಾರಿ ನೀಡಲಾಗುತ್ತಿದೆ. ತರಕಾರಿ-ಹಣ್ಣುಗಳನ್ನು ಸೋಡಾ ಪೌಡರ್ ಮಿಶ್ರಿತ ನೀರಿನಲ್ಲಿ ತೊಳೆದು, ಬಳಿಕ ಶುದ್ಧ ನೀರಿನಲ್ಲಿ ತೊಳೆದು ಒದಗಿಸಲಾಗುತ್ತಿದೆ. ಅಗತ್ಯ ಸಿಬ್ಬಂದಿಗಳಾದ ವೈದ್ಯರು, ವೈಜ್ಞಾನಿಕ ಅಧಿಕಾರಿ, ಇಂಜಿನಿಯರ್, ಪ್ರಾಣಿಗಳನ್ನು ನೋಡಿಕೊಳ್ಳುವ 14 ಮಂದಿ, ಆಹಾರ, ಹುಲ್ಲು ಹಾಕುವವರು, ಸ್ವಚ್ಛತಾ ಸಿಬ್ಬಂದಿ ಮಾತ್ರ ಕೆಲಸಕ್ಕೆ ಹಾಜರಾಗುತ್ತಿದ್ದಾರೆ.

    ಪ್ರಾಣಿಗಳಿಗೆ ಆಹಾರ ನೀಡುವ ಜತೆಗೆ ಆರೋಗ್ಯದ ಬಗ್ಗೆಯೂ ನಿಗಾ ವಹಿಸಲಾಗುತ್ತಿದೆ. ಕೋಳಿ ಫಾರ್ಮ್‌ನಲ್ಲಿ ಪ್ರತಿನಿತ್ಯ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸುತ್ತಿದ್ದೇವೆ. ನಮ್ಮಲ್ಲಿ ಹಕ್ಕಿಜ್ವರ ಇಲ್ಲ. ಇನ್ನಿತರೆ ಸಾಕುಪ್ರಾಣಿಗಳಿಂದ ಸಾಧ್ಯವಾದಷ್ಟು ಅಂತರ ಕಾಪಾಡಿಕೊಳ್ಳಬೇಕು. ಅನಾರೋಗ್ಯ ಲಕ್ಷಣ ಇದ್ದಲ್ಲಿ ಕೂಡಲೆ ಪಶು ವೈದ್ಯರನ್ನು ಸಂಪರ್ಕಿಸಬಹುದು.
    ಡಾ.ಹರೀಶ್ ತಾಮನ್‌ಕರ್
    ಉಪ ನಿರ್ದೇಶಕ, ಪಶುಪಾಲನಾ ಇಲಾಖೆ, ಉಡುಪಿ ಜಿಲ್ಲೆ

    ಬೀದಿನಾಯಿ, ಬೀಡಾಡಿ ದನಗಳ ಆಹಾರ ವ್ಯವಸ್ಥೆಗೆ ಜಿಲ್ಲಾಡಳಿತ ಎಲ್ಲ ರೀತಿಯ ಕ್ರಮವಹಿಸಿದ್ದು, ಪಶುಪಾಲನಾ ಇಲಾಖೆ ಇದನ್ನು ನಿರ್ವಹಿಸುತ್ತಿದೆ. ಈ ಸಮಯದಲ್ಲಿ ಸಾಕುಪ್ರಾಣಿಗಳ ಆರೋಗ್ಯದ ಬಗ್ಗೆಯೂ ಸಾರ್ವಜನಿಕರು ಗಮನ ಕೊಡಬೇಕು. ಸಮಸ್ಯೆಗಳಿದ್ದಲ್ಲಿ ಪಶು ವೈದ್ಯರನ್ನು ಸಂಪರ್ಕಿಸಬೇಕು.
    ಜಿ.ಜಗದೀಶ್
    ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ

    ಕೇಂದ್ರ ಪ್ರಾಧಿಕಾರದ ಆದೇಶ ಬರುವುದಕ್ಕಿಂತ ಮೊದಲೇ ಹಕ್ಕಿಜ್ವರದ ಆತಂಕದ ಹಿನ್ನೆಲೆಯಲ್ಲಿ ಪಿಲಿಕುಳದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿತ್ತು. ಪ್ರಸ್ತುತ ಎಲ್ಲ ಪ್ರಾಣಿ, ಪಕ್ಷಿಗಳು ಆರೋಗ್ಯದಿಂದಿವೆ.
    ಜಯಪ್ರಕಾಶ್ ಭಂಡಾರಿ
    ಪಿಲಿಕುಳ ಜೈವಿಕ ಉದ್ಯಾನವನ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts