More

  ಜಾನಪದ ವಿವಿ ನೇಮಕಾತಿಯಲ್ಲಿ ಅಕ್ರಮ; ಟ್ರಸ್ಟ್‌ನ ಅಧ್ಯಕ್ಷ ಬಸವರಾಜ ಗೊಬ್ಬಿ ಆರೋಪ

  ಹಾವೇರಿ: ಶಿಗ್ಗಾಂವಿಯ ಕರ್ನಾಟಕ ಜಾನಪದ ವಿಶ್ವ ವಿದ್ಯಾಲಯದಲ್ಲಿ ಸರ್ಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿ ಬೋಧಕ ಹಾಗೂ ಬೋಧಕೇತರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗಿದೆ. ಆದ್ದರಿಂದ ರಾಜ್ಯಪಾಲರು ಈ ನೇಮಕಾತಿ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಾನಪದ ವಿಶ್ವವಿದ್ಯಾಲಯದ ಸರ್ವಾಂಗೀಣ ಹಿತರಕ್ಷಣಾ ಟ್ರಸ್ಟ್‌ನ ಅಧ್ಯಕ್ಷ ಬಸವರಾಜ ಗೊಬ್ಬಿ ಒತ್ತಾಯಿಸಿದರು.
  ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಅಕ್ರಮ ನೇಮಕಾತಿ ಕುರಿತು ಎಲ್ಲ ದಾಖಲೆಗಳೊಂದಿಗೆ ತನಿಖೆ ನಡೆಸುವಂತೆ ಲೋಕಾಯುಕ್ತರಿಗೆ ದೂರು ನೀಡಿದ್ದೇವೆ. ಅಲ್ಲದೇ ಈ ನೇಮಕಾತಿ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದೇವೆ. ಅವಕಾಶ ವಂಚಿತ ಅಭ್ಯರ್ಥಿಗಳು ಕೋರ್ಟ್ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಇದನ್ನು ಪ್ರಶ್ನಿಸಿದ ನಮ್ಮ ಮೇಲೆಯೇ ವಿದ್ಯಾಲಯದ ಕೆಲವರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ ಎಂದು ತಿಳಿಸಿದರು.
  ಜಾನಪದ ವಿಶ್ವವಿದ್ಯಾಲಯದಲ್ಲಿ ಈ ಹಿಂದೆ ಜಾಹೀರಾತುಗೊಳಿಸಿ ನೇಮಕಾತಿ ಅಧಿಸೂಚನೆ ಹೊರಡಿಸಿರುವ ಬೋಧಕ, ಬೋಧಕೇತರ ಹುದ್ದೆಗಳ ನೇರ ನೇಮಕಾತಿ ಅಧಿಸೂಚನೆ ಮುಂದುವರಿಸಲು ಸರ್ಕಾರ 2023 ಏಪ್ರೀಲ್ 27ರಂದು ಅನುಮತಿ ನೀಡಿತ್ತು. ನೇಮಕಾತಿ ಪ್ರತಿಕ್ರಿಯೆಗಳನ್ನು ಸಂಪೂರ್ಣವಾಗಿ ಯುಜಿಸಿ ನಿಯಮಾವಳಿ ಹಾಗೂ ಪ್ರಸ್ತುತ ಸರ್ಕಾರ ಕಾಲಕಾಲಕ್ಕೆ ಹೊರಡಿಸಿರುವ ಸುತ್ತೋಲೆಗಳನ್ನು ಪಾಲಿಸಿ ಅದರಂತೆ ಕ್ರಮವಹಿಸುವಂತೆ ಸೂಚಿಸಿತ್ತು. ಆದರೆ, ವಿಶ್ವವಿದ್ಯಾಲಯದ ಅಧಿಕಾರಿಗಳು 2023 ಏಪ್ರೀಲ್ 20ರಂದೇ ನೇಮಕಾತಿಯ ಪರೀಕ್ಷೆಯ ಪಠ್ಯಕ್ರಮ ಪ್ರಕಟಿಸಿದ್ದಾರೆ. ಸರ್ಕಾರ ನೇಮಕಾತಿಗೆ ಅನುಮತಿ ನೀಡುವ ಮೊದಲೇ ಪಠ್ಯಕ್ರಮ ಪ್ರಕಟಿಸಿರುವುದರ ಹಿಂದೆ ಬಹಳಷ್ಟು ಅನುಮಾನ ಹುಟ್ಟಿಕೊಂಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
  ನೇಮಕಾತಿ ಪ್ರಕ್ರಿಯೆಯಲ್ಲಿನ ಅಕ್ರಮದ ಕುರಿತು ನಾವು ಸರ್ಕಾರದ ಗಮನಕ್ಕೆ ತಂದಾಗ ನೇಮಕಾತಿ ಸಂಬಂಧ ನೀಡಿದ ನಿರ್ದೇಶನವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದ್ದು, ದೂರುಗಳ ಕುರಿತು ವಿಸ್ತ್ರತವಾದ ವರದಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಸರ್ಕಾರಕ್ಕೆ ಸಲ್ಲಿಸುವಂತೆ ಕಳೆದ ಮೇ 26ರಂದು ಸೂಚಿಸಿತ್ತು. ಆದರೆ, ಸರ್ಕಾರಕ್ಕೆ ಯಾವುದೇ ವರದಿ ಸಲ್ಲಿಸದೆ ಮೇ 29ರಂದು ಸಿಂಡಿಕೇಟ್‌ನ ಸಭೆ ನಡೆಸಲಾಗಿದೆ. ಈ ಸಭೆಗೆ ಸರ್ಕಾರದ ಸಂಬಂಧಿತ ಅಧಿಕಾರಿಗಳು ಪಾಲ್ಗೊಳ್ಳದಿದ್ದರೂ ಅವರ ಪರವಾಗಿ ಬೇರೆಯವರು ಸಹಿ ಮಾಡಿದ್ದಾರೆ. ಸಿಂಡಿಕೇಟ್ ಸಭೆಯ ದಿನವೇ ಅಭ್ಯರ್ಥಿಗಳ ಸಂದರ್ಶನ ನಡೆಸಿ ನೇಮಕಾತಿ ಆದೇಶ ಪತ್ರ ನೀಡಿದ್ದಾರೆ. ಹೀಗೆ ತರಾತುರಿಯಲ್ಲಿ ನೇಮಕಾತಿ ಪ್ರಕ್ರಿಯೆ ಮಾಡಿಕೊಂಡಿರುವುದರ ಹಿಂದೆ ಅಕ್ರಮದ ಶಂಕೆ ಇದೆ ಎಂದು ಆರೋಪಿಸಿದರು.
  ವಕೀಲ ಬಸವರಾಜ ಜೇಕ್ಕಿನಕಟ್ಟಿ ಮಾತನಾಡಿ, ವಿಶ್ವವಿದ್ಯಾಲಯದ ನೇಮಕಾತಿ ಸಂಪೂರ್ಣವಾಗಿ ಅಕ್ರಮದಿಂದ ಕೂಡಿದೆ. ಪರೀಕ್ಷಾ ಪ್ರವೇಶ ಪತ್ರಗಳನ್ನು ಸರಿಯಾಗಿ ಮುಟ್ಟಿಸಿಲ್ಲ, ಕೆಲ ಪ್ರವೇಶ ಪತ್ರಗಳ ಮೇಲೆ ಅಭ್ಯರ್ಥಿಗಳ ಭಾವಚಿತ್ರ ಇಲ್ಲ, ಕೆಲವರ ಭಾವಚಿತ್ರ ಇದ್ದರೂ ಅಧಿಕಾರಿಗಳ ಸಹಿ ಇಲ್ಲ, ಹಣಕಾಸಿನ ಒಪ್ಪಂದ ಮಾಡಿಕೊಂಡಿರುವ ಅಭ್ಯರ್ಥಿಗಳಿಗೆ ರಾತ್ರೋರಾತ್ರಿ ಪ್ರವೇಶ ಪತ್ರ ಮುಟ್ಟಿಸಲಾಗಿದೆ.
  ಒಂದೇ ಪಠ್ಯಕ್ರಮದಲ್ಲಿ 3 ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗಿದೆ. ವಿವಿಯ ಅಧಿಕಾರಿಗಳು ತಮ್ಮ ಸಂಬಂಧಿಕರಿಂದಲೇ ಲಕ್ಷಾಂತರ ರೂ., ಹಣ ಪಡೆದು ಅಕ್ರಮವಾಗಿ ನೇಮಕಾತಿ ಮಾಡಿಕೊಂಡಿದ್ದಾರೆ. ಹೀಗಾಗಿ ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಕೂಡಲೇ ರಾಜ್ಯಪಾಲರು ತನಿಖೆ ನಡೆಸಿ ನೇಮಕಾತಿಯನ್ನು ಅಸಿಂಧುಗೊಳಿಸಬೇಕು ಎಂದು ಒತ್ತಾಯಿಸಿದರು.
  ಪ್ರಮುಖರಾದ ರುದ್ರಗೌಡ ಪೊಲೀಸ್‌ಗೌಡ್ರ, ಶಿವಪ್ಪ ಅಳವಂಡಿ, ಮಂಜುನಾಥ ಹಾವೇರಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts