More

    ಮಹತ್ವ ಕಳೆದುಕೊಳ್ಳುತ್ತಿರುವ ಹಿರಿಯರ ಆಚರಣೆಗಳು

    ಕುಶಾಲನಗರ: ಹಿರಿಯರ ಆಚರಣೆಗಳು ಕಾಲಕ್ರಮೇಣ ಮಹತ್ವ ಕಳೆದುಕೊಳ್ಳುತ್ತಿವೆ. ದಿನಬಳಕೆಯ ಪುರಾತನ ವಸ್ತು, ಕೃಷಿ ಪರಿಕರಗಳು ಮೂಲೆ ಸೇರುತ್ತಿವೆ. ಮತ್ತೆ ಕೆಲವು ಗುಜರಿ ಪಾಲಾಗುತ್ತಿವೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್‌ಗೌಡ ಅಭಿಪ್ರಾಯಪಟ್ಟರು.

    ಸುವರ್ಣ ಕರ್ನಾಟಕ 50ರ ಸಂಭ್ರಮ ಅಂಗವಾಗಿ ಕೊಡಗು ಜಿಲ್ಲಾ, ಕುಶಾಲನಗರ ತಾಲೂಕು ಹಾಗೂ ಹೆಬ್ಬಾಲೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ಹೆಬ್ಬಾಲೆ, ತೊರೆನೂರು ಮತ್ತು ಶಿರಂಗಾಲ ಗ್ರಾಮ ಪಂಚಾಯಿತಿಗಳ ಸಹಯೋಗದಲ್ಲಿ ಬುಧವಾರ ಹೆಬ್ಬಾಲೆ ಗ್ರಾಮದ ಸರ್ಕಾರಿ ಶಾಲಾ ಮೈದಾನದಲ್ಲಿ ಆಯೋಜಿಸಿರುವ ಜಾನಪದ ಗ್ರಾಮ ಸಿರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

    ನಮ್ಮ ಪೂರ್ವಿಕರ ಆಚಾರ- ವಿಚಾರ, ದಿನಚರಿಗಳ ಬಗ್ಗೆ ಮುಂದಿನ ಪೀಳಿಗೆಗೆ ಅರಿವು ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು. ಯಾವುದೇ ದೇಶದಲ್ಲಿದ್ದರೂ ಕನ್ನಡ ಪ್ರೇಮ ಮರೆಯಾಗಬಾರದು ಎಂದು ಕರೆ ನೀಡಿದರು.

    ಕೊಡಗು ಜಿಲ್ಲಾ ಕಸಾಪ ಅಧ್ಯಕ್ಷ ಕೇಶವ ಕಾಮತ್ ಮಾತನಾಡಿ, ಈ ಹಿಂದೆ ಜಾನಪದ ಉತ್ಸವ ಹಾಗೂ ಆಚರಣೆಗಳು ಗ್ರಾಮಸ್ಥರಲ್ಲಿ ಬಾಂಧವ್ಯ ವೃದ್ಧಿಸುವ ಉದ್ದೇಶದಿಂದ ಆಯೋಜನೆಯಾಗುತ್ತಿದ್ದವು. ಇತ್ತೀಚಿನ ದಿನಗಳಲ್ಲಿ ಇವು ಕಣ್ಮರೆಯಾಗುತ್ತಿರುವುದು ವಿಷಾದನೀಯ. ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಆಚರಣೆಯನ್ನು ಉಳಿಸಿ ಬೆಳೆಸಬೇಕಿದೆ ಎಂದರು.

    ಪ್ರಾಸ್ತಾವಿಕ ನುಡಿಗಳನ್ನಾಡಿದ ಕಸಾಪ ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್, ನಮ್ಮ ಪೂರ್ವಿಕರು ಬಳುವಳಿಯಾಗಿ ನೀಡಿರುವ ಆಚಾರ-ವಿಚಾರಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವುದು ಗ್ರಾಮಸಿರಿ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.

    ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಬೆಳಗ್ಗೆ ಮೆರವಣಿಗೆ ನಡೆಯಿತು. ಗ್ರಾಮದ ಬಸವೇಶ್ವರ ದೇವಸ್ಥಾನದಿಂದ ಕಳಸ ಹೊತ್ತ ಮಹಿಳೆಯರು, ವಿವಿಧ ಕಲಾತಂಡಗಳು, ಗ್ರಾಮಸ್ಥರು, ಶಾಲಾ ವಿದ್ಯಾರ್ಥಿಗಳು ಹಾಗೂ ಕಸಾಪ ಪದಾಧಿಕಾರಿಗಳು ಸಭಾಂಗಣದವರೆಗೆ ಮೆರವಣಿಗೆಯಲ್ಲಿ ತೆರಳಿದರು. ಕೆಪಿಟಿಸಿಎಲ್ ನಿವೃತ್ತ ಇಂಜಿನಿಯರ್ ಜಿ.ಎಲ್.ರಾಮಪ್ಪ ಮೆರವಣಿಗೆಗೆ ಚಾಲನೆ ನೀಡಿದರು. ಶಾಲಾ ಮೈದಾನದಲ್ಲಿ ಹೆಬ್ಬಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಚ್.ಪಿ.ಅರುಣಕುಮಾರಿ ರಾಷ್ಟ್ರಧ್ವಜ ಮತ್ತು ಹೆಬ್ಬಾಲೆ ಹೋಬಳಿ ಕಾಸಪ ಅಧ್ಯಕ್ಷ ಎಂ.ಎನ್. ಮೂರ್ತಿ ಕನ್ನಡ ಧ್ವಜಾರೋಹಣ ನೆರವೇರಿಸಿದರು. ಗ್ರಾಮೀಣ ವಸ್ತು ಪ್ರದರ್ಶನವನ್ನು ಹೆಬ್ಬಾಲೆ ದೇವಾಲಯ ಸಮಿತಿ ಅಧ್ಯಕ್ಷ ಯ.ಬಸವರಾಜು ಉದ್ಘಾಟಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts